ಸಾರಾಂಶ
ರೈಲ್ವೆ ಪ್ರಯಾಣಿಕರ ಸುರಕ್ಷತೆ ಹಾಗೂ ಭದ್ರತೆಗಿರುವ ಆರ್‌ಪಿಎಫ್ ಸಿಬ್ಬಂದಿ ಕೊರತೆ ನೀಗಿಸುವ ಉದ್ದೇಶದಿಂದ ಇದೀಗ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಬಳಕೆ ಮಾಡಲು ನೈಋತ್ಯ ರೈಲ್ವೆ ವಲಯವೂ ಮುಂದಾಗಿದ್ದು, ಒಟ್ಟು 388 ಹೋಂಗಾರ್ಡ್‌ಗಳನ್ನು ನಿಯೋಜಿಸಲು ಪ್ರಕ್ರಿಯೆ ಆರಂಭಿಸಿದೆ.
ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿರೈಲ್ವೆ ಪ್ರಯಾಣಿಕರ ಸುರಕ್ಷತೆ ಹಾಗೂ ಭದ್ರತೆಗಿರುವ ಆರ್‌ಪಿಎಫ್ ಸಿಬ್ಬಂದಿ ಕೊರತೆ ನೀಗಿಸುವ ಉದ್ದೇಶದಿಂದ ಇದೀಗ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಬಳಕೆ ಮಾಡಲು ನೈಋತ್ಯ ರೈಲ್ವೆ ವಲಯವೂ ಮುಂದಾಗಿದ್ದು, ಒಟ್ಟು 388 ಹೋಂಗಾರ್ಡ್‌ಗಳನ್ನು ನಿಯೋಜಿಸಲು ಪ್ರಕ್ರಿಯೆ ಆರಂಭಿಸಿದೆ.
ಬೆಂಗಳೂರು, ಹುಬ್ಬಳ್ಳಿ, ಮೈಸೂರು ಹೀಗೆ ಮೂರು ವಿಭಾಗಗಳನ್ನು ಒಳಗೊಂಡಿರುವ ನೈಋತ್ಯ ರೈಲ್ವೆ ವಲಯದಲ್ಲಿ ನಿತ್ಯ ನೂರಾರು ರೈಲು ಸಂಚರಿಸುತ್ತಿದ್ದು, ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಈ ಎಲ್ಲ ರೈಲು ನಿಲ್ದಾಣಗಳಲ್ಲಿ ಅಕ್ರಮ ಚಟುವಟಿಕೆ ನಡೆಯದಂತೆ ತಡೆಯಲು ಅಗತ್ಯವಿರುವಷ್ಟು ಸಿಬ್ಬಂದಿ ಇಲ್ಲ. ಹಾಗಾಗಿ ಆರ್‌ಪಿಎಫ್ ಸಿಬ್ಬಂದಿ ನೇಮಕವಾಗುವವರೆಗೂ ಹೋಂಗಾರ್ಡ್ ಬಳಕೆ ಮಾಡಲು ವಲಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ವಲಯಕ್ಕೆ 1577 ಆರ್‌ಪಿಎಫ್ ಸಿಬ್ಬಂದಿ ಹುದ್ದೆ ಮಂಜೂರಾಗಿದ್ದು, 1100 ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರತೆ ಇರುವ ಶೇ.30ರಷ್ಟು ಹುದ್ದೆ ಭರ್ತಿ ಕಾರ್ಯ ನಡೆಯುತ್ತಿದ್ದು, ನೇಮಕಾತಿ ಆಗುವವರೆಗೂ ಹೋಂಗಾರ್ಡ್‌ಗಳನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ.ಹೋಂಗಾರ್ಡ್ ಎಲ್ಲಿ ನಿಯೋಜನೆ?:
ಹೋಂಗಾರ್ಡ್‌ಗಳನ್ನು ರೈಲುಗಳಲ್ಲಿ ನಿಯೋಜಿಸಲ್ಲ. ಬದಲಾಗಿ ನಿಲ್ದಾಣ ಸೇರಿದಂತೆ ಒಂದೇ ಕಡೆ ನಿಂತುಕೊಂಡು ಭದ್ರತೆ ಒದಗಿಸುವಂತಹ ಸ್ಥಳಗಳಲ್ಲಿ ನಿಯೋಜಿಸಲಾಗುವುದು. ಆ ಸ್ಥಳದಲ್ಲಿರುವ ಆರ್‌ಪಿಎಫ್ ಸಿಬ್ಬಂದಿಯನ್ನು ರೈಲುಗಳಲ್ಲಿ ಪ್ರಯಾಣಿಕರ ರಕ್ಷಣೆಗೆ ಬಳಸಿಕೊಳ್ಳಲಾಗುವುದು. ಈ ಮೂಲಕ ನೈಋತ್ಯ ರೈಲ್ವೆ ವಲಯದಲ್ಲಿ ಪ್ರಯಾಣಿಕರ ರಕ್ಷಣೆಯ ಜತೆಗೆ ರೈಲು ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸುವ ಉದ್ದೇಶವಿದೆ.ಎಲ್ಲಿ ಎಷ್ಟು ಬಳಕೆ:
ಹುಬ್ಬಳ್ಳಿ ವಿಭಾಗದಲ್ಲಿ 110 ಹೋಂಗಾರ್ಡ್, ಮೈಸೂರು ವಿಭಾಗದಲ್ಲಿ 108 ಹಾಗೂ ಬೆಂಗಳೂರು ವಿಭಾಗದಲ್ಲಿ 160 ಹೋಂಗಾರ್ಡ್‌ಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಇವರ ನಿಯೋಜನೆಗೆ ಬೇಕಾದ ಪ್ರಕ್ರಿಯೆ ಇನ್ನೇರೆಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಗೃಹ ರಕ್ಷಕ ದಳದ ಸಿಬ್ಬಂದಿ ಕೆಲಸಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ.