ಸಾರಾಂಶ
ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿ ಸ್ವಂತ ಕಂಪನಿಯ ಸಂಕಲ್ಪ ಮಾಡಿದ ಶಮಂತ್ । ಆರಂಭದಲ್ಲಿ ಮೈ ಉಜ್ಜುವ ನೈಸರ್ಗಿಕ ಬ್ರಶ್ । ಜೊತೆಗೆ ಚಿಕ್ಕಿ ಮಿಠಾಯಿ ಮಾಡಿ ₹1 ಕೋಟಿ ವ್ಯವಹಾರ
ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿ ಸ್ವಂತ ಕಂಪನಿಯ ಸಂಕಲ್ಪ ಮಾಡಿದ ಶಮಂತ್ । ಆರಂಭದಲ್ಲಿ ಮೈ ಉಜ್ಜುವ ನೈಸರ್ಗಿಕ ಬ್ರಶ್ । ಜೊತೆಗೆ ಚಿಕ್ಕಿ ಮಿಠಾಯಿ ಮಾಡಿ ₹1 ಕೋಟಿ ವ್ಯವಹಾರ
ಬೇರೆ ಬೇರೆ ಕಂಪನಿಗಳ ಉತ್ಪನ್ನಗಳನ್ನು ಮಾರುವಾಗ ಸ್ವಉದ್ಯೋಗದ ಆಸೆ ಹುಟ್ಟಿಕೊಂಡಿತು. ಆ ಕೆಲಸಕ್ಕೆ ಹತ್ತು ವರ್ಷ ತುಂಬಿದಾಗ, ನಾನೇ ಕೆಲವರಿಗೆ ಉದ್ಯೋಗ ನೀಡಬೇಕು ಎಂಬ ಸಂಕಲ್ಪ ಮಾಡಿ ಆನೇಗುಡ್ಡ ಎಂಟರ್ಪ್ರೈಸಸ್ ಕಂಪನಿ ಸ್ಥಾಪಿಸಿದರು ಬೆಂಗಳೂರಿನ ಶಮಂತ್ ಕುಮಾರ್ ಎನ್.ಆರ್.
ಸಂಪಾದನೆ ಬೇಕು, ಉದ್ಯೋಗ ನೀಡಬೇಕು. ಜೊತೆಗೆ ಅದು ಆರೋಗ್ಯಪೂರ್ಣವೂ ಆಗಿರಬೇಕು ಎಂದು ಯೋಚಿಸುವಾಗ ಮೊದಲು ಹೊಳೆದದ್ದು ತರಕಾರಿ ನಾರಿನಿಂದ ಮೈ ಉಜ್ಜುವ ಬ್ರಶ್. ಅದಕ್ಕೆ ₹2 ಲಕ್ಷ ಬಂಡವಾಳ ಸಾಕಿತ್ತು. ತಮ್ಮಲ್ಲೇ ಇದ್ದ ಉಳಿತಾಯದ ಹಣ ಹಾಕಿ ಶುರು ಮಾಡಿದರು. ಪ್ಲಾಸ್ಟಿಕ್ ಬ್ರಶ್ಶಿನಿಂದ ಮೈ ಉಜ್ಜುವುದು ಆರೋಗ್ಯಕರ ಅಲ್ಲ. ಅದಕ್ಕಾಗಿ ಹೀರೆಕಾಯಿ ನಾರಿನಿಂದ ಬ್ರಶ್ ಮಾಡಲು ಆರಂಭಿಸಿದೇವು. ಗದಗ ಸಮೀಪದ ರೈತರೊಬ್ಬರೊಂದಿಗೆ ಒಪ್ಪಂದ ಮಾಡಿಕೊಂಡು ಬಲಿತು ಒಣಗಿದ ಹೀರೆಕಾಯಿ ಖರೀದಿಸಿ, ಕಮಿಕಲ್ ಬಳಸದೇ ಸಾವಯವವಾಗಿಯೇ ನಾರು ತೆಗೆದು ಬ್ರಶ್ ಮಾಡುತ್ತಿದ್ದೇವೆ. ಪ್ರತಿ ತಿಂಗಳು ಒಂದೂವರೆ ಸಾವಿರ ಪೀಸ್ ಮಾರಾಟ ಆಗುತ್ತಿವೆ.
ಆರೋಗ್ಯಕರ ಚಿಕ್ಕಿ ಮಿಠಾಯಿಕೇವಲ ಇದೊಂದರಿಂದ ಜೀವನ ಕಷ್ಟ ಎಂದಾಗ ಹೊಳೆದದ್ದೇ ಚಿಕ್ಕಿ ಮಿಠಾಯಿ. ಚಿಕ್ಕಿಮಿಠಾಯಿ ಆರೋಗ್ಯ ಪೂರ್ಣ ತಿನಿಸಾದರೂ ಶುಚಿಯ ಕಾರಣಕ್ಕೆ, ಅದಕ್ಕೆ ಸರಿಯಾದ ಪ್ಯಾಕಿಂಗ್ ಇಲ್ಲದ ಕಾರಣಕ್ಕೆ ಕೆಲವರು ತಿನ್ನುವುದಿಲ್ಲ. ಅದನ್ನು ಸರಿಯಾಗಿ ಪ್ಯಾಕ್ ಮಾಡಿ, ಬ್ರ್ಯಾಂಡ್ ಮಾಡಿದರೆ ಜನ ಹೆಚ್ಚು ಬಳಸುತ್ತಾರೆ ಎನಿಸಿ ಚಿಕ್ಕಿಮಠಾಯಿ ಪ್ರಾರಂಭಿಸಿದೆವು. ಇದಕ್ಕೆ ಸಾವಯವ ಬೆಲ್ಲವನ್ನು ನೇರವಾಗಿ ಮಂಡ್ಯದಿಂದಲೇ ಖರೀದಿಸುತ್ತಿದ್ದೇವೆ. ಶೇಂಗಾ ನೇರ ರೈತರಿಂದ ಖರೀದಿ ಮಾಡುತ್ತಿದ್ದೇವೆ. ಈಗ ಪ್ರತಿ ನಿತ್ಯ 1 ಟನ್ ಚಿಕ್ಕಿ ಮಿಠಾಯಿ ಮಾರುಕಟ್ಟೆಗೆ ಕಳುಹಿಸುತ್ತಿದ್ದೇವೆ. ಕೆಲವೊಮ್ಮೆ ಇದು 2 ಟನ್ ತಲುಪುವುದು ಉಂಟು ಎಂದು ಶಮಂತ್ ಕುಮಾರ್ ಕನ್ನಡಪ್ರಭಕ್ಕೆ ವಿವರಿಸಿದರು.
ತರಕಾರಿ ನಾರಿನ ಬ್ರಶ್ ಮತ್ತು ಚಿಕ್ಕಿಮಿಠಾಯಿ ಎರಡರ ಉತ್ಪನ್ನ ಘಟಕವನ್ನು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಸ್ಥಾಪಿಸಿರುವ ಶಮಂತ್, ಎರಡೂ ಉತ್ಪನ್ನಗಳಿಗೂ ಸಂಕಲ್ಪ ಎಂಬ ಬ್ರ್ಯಾಂಡ್ ನೇಮ್‌ನಿಂದ ಮಾರಾಟ ಮಾಡುತ್ತಿದ್ದಾರೆ. ಹುಣಸೆ ಹಣ್ಣಿನ ಸಿಹಿ ಲಾಲಿಪಾಪ್ ಕೂಡ ಉತ್ಪಾದಿಸುತ್ತಿದೆ ಸಂಕಲ್ಪ. ಯಾವುದೇ ಆನ್ಲೈನ್ ಮಾರುಕಟ್ಟೆಯಲ್ಲಿ ಇವರಿಲ್ಲ. ನೇರ ಅಂಗಡಿಗಳಿಗೆ ಸರಬರಾಜು ಮಾಡುವ ಮೂಲಕ ವಾರ್ಷಿಕ ₹1 ಕೋಟಿ ವಹಿವಾಟು ದಾಟಿದೆ ಆನೇಗುಡ್ಡ ಎಂಟರ್ಪ್ರೈಸಸ್.
ಕಪೆಕ್ ನೆರವಿನಿಂದ ರೀಲಾಂಚ್
ಇದಕ್ಕಾಗಿ ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಮೂಲಕ ಪಿಎಂಎಫ್ಎಂಇ ಲೋನ್ ಪಡೆದೆವು. ₹16 ಲಕ್ಷ ಲೋನ್ ಪಡೆಯಲು ಕಪೆಕ್ ಸಹಾಯ ಮಾಡಿತು. ಇದರಲ್ಲಿ ₹8 ಲಕ್ಷ ಸಬ್ಸಿಡಿಯೂ ದೊರೆಯಿತು. ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್ ಎಂಬ ಮೋದಿ ಸರ್ಕಾರದ ಯೋಜನೆಗಳು ನಮ್ಮ ಬದುಕು ಕಟ್ಟಿಕೊಳ್ಳಲು ಕಾರಣವಾಗಿದೆ. ಕಪೆಕ್ ಅಧಿಕಾರಿಗಳ ಸಹಕಾರವೂ ಇದೆ. ಅವರಿಂದ ಈವರೆಗೆ ಮಾರ್ಕೆಟಿಂಗ್‌ಗಾಗಿ ಯಾವುದೇ ಸಹಕಾರ ಪಡೆದಿಲ್ಲ. ಇನ್ನೊಂದೆರಡು ತಿಂಗಳಲ್ಲಿ, ಚಿಗಳಿ, ಕಮ್ಮರ್ಕಟ್, ಬಟರ್ ಚಿಕ್ಕಿ ಸೇರಿದಂತೆ 5 ರಿಂದ 6 ಹೊಸ ತಿನಿಸುಗಳನ್ನು ಸಂಕಲ್ಪ ಬ್ರ್ಯಾಂಡ್‌ನಲ್ಲಿ ಉತ್ಪಾದಿಸಿ ಮಾರಾಟ ಮಾಡುವ ಯೋಜನೆ ಹಾಕಿಕೊಂಡಿದ್ದೇನೆ. ಕಪೆಕ್ ನೆರವಿನಿಂದ ರೀಲಾಂಚ್ ಮಾಡಿ ಹೊಸ ವಸ್ತುಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದೇನೆ ಎಂದು ಶಮಂತ್ ಅವರು ತಮ್ಮ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡರು.
2022ರಲ್ಲಿ ಓರ್ವ ಸಹಾಯಕರೊಂದಿಗೆ ಉತ್ಪಾದನೆ ಶುರು ಮಾಡಿದೆ. ಈಗ 8 ಮಹಿಳೆಯರು ನಮ್ಮ ಉತ್ಪನ್ನ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊಸ ಉತ್ಪನ್ನಗಳನ್ನು ಶುರು ಮಾಡಿದ ಮೇಲೆ ಇನ್ನಷ್ಟು ಜನರಿಗೆ ಉದ್ಯೋಗ ಸಿಗಲಿದೆ. ಆರೋಗ್ಯಕರ ಸ್ನಾಕ್ಸ್‌ಗೆ ಮತ್ತೊಂದು ಹೆಸರು ಸಂಕಲ್ಪ ಎಂದಾಗಬೇಕು ಎನ್ನೋದು ನಮ್ಮ ಗುರಿ. 10 ವರ್ಷದ ಮಾರ್ಕೆಟಿಂಗ್ ಅನುಭವದಿಂದ ವ್ಯಾಪಾರ ಬಹುಬೇಗನೆ ಕೈ ಹಿಡಿಯಿತು. ಜೊತೆಗೆ ಚಿಕ್ಕಿ ಮಿಠಾಯಿಗೆ ಆಕರ್ಷಕ ಮತ್ತು ಆರೋಗ್ಯಕರ ರೀತಿಯಲ್ಲಿ ಮಾಡಿದ ಪ್ಯಾಕಿಂಗ್ ಅನ್ನು ಜನ ಮೆಚ್ಚಿಕೊಂಡಿದ್ದಾರೆ. ದೊಡ್ಡ ದೊಡ್ಡ ಅಂಗಡಿಗಳಲ್ಲಿ ಜನ ಸಂಕಲ್ಪ ಹೆಸರು ನೋಡಿಕೊಳ್ಳುವಂತಾಗಿದೆ ಎಂದು ಖುಷಿಯಿಂದ ತಮ್ಮ ಉದ್ಯಮದ ಜರ್ನಿ ವಿವರಿಸಿದರು ಶಮಂತ್.
ಜೊತೆಗೆ ಐದು ವೈವಿಧ್ಯದ ಚಿಕ್ಕಿಮಿಠಾಯಿಯನ್ನು ಸದ್ಯದಲ್ಲೇ ಮಾರುಕಟ್ಟೆಗೆ ಪರಿಚಯಿಸಲಿದ್ದೇವೆ. ಇಲ್ಲಿವರೆಗೂ ಮಾರ್ಕೆಟಿಂಗ್‌ಗೆ ಕಪೆಕ್‌ನ ನೆರವು ಬಯಸಿರಲಿಲ್ಲ. ಈಗ ವ್ಯವಹಾರ ವಿಸ್ತರಣೆಗೆ ಕಪೆಕ್ ಸಹಕಾರ ಮತ್ತು ಮಾರ್ಗದರ್ಶನ ಪಡೆಯುವುದಾಗಿ ತಿಳಿಸಿದ ಶಮಂತ್, ಆರೋಗ್ಯಕರ ತಿನಿಸು ನೀಡುವ ನನ್ನ ಉದ್ದೇಶಕ್ಕೆ ಜನ ಸಹಕರಿಸಿದ್ದಾರೆ. ಈಗ ಬರೀ ಬೆಂಗಳೂರಲ್ಲಿ ಮಾತ್ರ ಸರಬರಾಜು ಮಾಡುತ್ತಿದ್ದೇವೆ. ಮುಂದಿನ ಒಂದು ವರ್ಷದಲ್ಲಿ ಇಡೀ ಕರ್ನಾಟಕಕ್ಕೆ ಸರಬರಾಜು ಮಾಡಬೇಕು ಎಂದು ಗುರಿ ಹಾಕಿಕೊಂಡಿರುವೆ ಎಂದರು ಶಮಂತ್.
ಸಂಕಲ್ಪ ಚಿಕ್ಕಿ ಮತ್ತಿತರ ಉತ್ಪನ್ನಗಳಿಗೆ ಸಂಪರ್ಕಿಸಿ – ಶಮಂತ್‌ಕುಮಾರ್ -70198 97485.
15 ಲಕ್ಷ ರೂ. ಸಬ್ಸಿಡಿ ಪಡೆಯಿರಿ
ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.