ಸಾರಾಂಶ
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ‘ಜಾತಿ ಗಣತಿ’ ವರದಿಗೆ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಜಾತಿಗಳು ಖುಷಿಗೊಂಡಿದ್ದರೆ ಮುಂದುವರೆದ ಜಾತಿಗಳು ಅದರಲ್ಲೂ ವಿಶೇಷವಾಗಿ ಲಿಂಗಾಯತ, ಒಕ್ಕಲಿಗ ಹಾಗೂ ಬ್ರಾಹ್ಮಣ ಸಮುದಾಯಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ಶಂಕರ್ ಬಿದರಿ, ಅಧ್ಯಕ್ಷರು, ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದ ರಾಜ್ಯ ಘಟಕ
- ಲಿಂಗರಾಜು ಕೋರ
ರಾಜ್ಯದಲ್ಲೀಗ ಜಾತಿ ಗಣತಿ ಗದ್ದಲ ಜೋರಾಗಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ‘ಜಾತಿ ಗಣತಿ’ ವರದಿಗೆ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಜಾತಿಗಳು ಖುಷಿಗೊಂಡಿದ್ದರೆ ಮುಂದುವರೆದ ಜಾತಿಗಳು ಅದರಲ್ಲೂ ವಿಶೇಷವಾಗಿ ಲಿಂಗಾಯತ, ಒಕ್ಕಲಿಗ ಹಾಗೂ ಬ್ರಾಹ್ಮಣ ಸಮುದಾಯಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಜಾತಿಗಣತಿಯನ್ನು ವೀರಶೈವ ಲಿಂಗಾಯತ ಮುಖಂಡರು ಮೊದಲಿನಿಂದಲೂ ವಿರೋಧಿಸಿಕೊಂಡೇ ಬಂದಿದ್ದಾರೆ. ಈ ವಿರೋಧಕ್ಕೆ ಮುಖ್ಯ ಕಾರಣ ಲಿಂಗಾಯತ ಸಮುದಾಯವನ್ನು ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಎಂದು ಛಿದ್ರಗೊಳಿಸಲಾಗಿದೆ ಎಂಬುದು ಒಂದು ಕಾರಣವಾದರೆ, ಲಿಂಗಾಯತ ಎಂಬ ಹೆಸರು ಇರುವ ಕಾರಣ ಎಲ್ಲರನ್ನೂ 3ಬಿಗೆ ಸೇರಿಸಲಾಗಿದೆ ಎಂಬುದು ಮತ್ತೊಂದು ಪ್ರಮುಖ ಕಾರಣ. ಜತೆಗೆ ಮನೆ ಮನೆ ಸಮೀಕ್ಷೆ ಸರಿಯಾಗಿ ನಡೆದಿಲ್ಲ, ಹೀಗಾಗಿ ವೈಜ್ಞಾನಿಕ ಸಮೀಕ್ಷೆ ಆಗಬೇಕೆಂಬ ಕೂಗು ಆರಂಭದಿಂದಲೂ ಇದೆ. ಈ ಕೂಗನ್ನು ಮೊದಲು ಹುಟ್ಟುಹಾಕಿದ್ದು ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ. ಇದರ ರಾಜ್ಯ ಘಟಕದ ಅಧ್ಯಕ್ಷರಾದ ಶಂಕರ್ ಬಿದರಿ ಅವರು ಜಾತಿ ಗಣತಿಯನ್ನು ಲಿಂಗಾಯತ ಸಮುದಾಯ ವಿರೋಧಿಸುತ್ತಿರುವುದು ಏಕೆ? ಈ ಗಣತಿಯಲ್ಲಿ ಏನೇನು ಲೋಪಗಳಿವೆ? ಏನನ್ನು ಸರಿಪಡಿಸಬೇಕು? ಒಂದು ವೇಳೆ ಸರ್ಕಾರ ಈ ವರದಿ ಜಾರಿಗೆ ಮುಂದಾದರೆ ಮಹಾಸಭಾ ಏನು ಮಾಡಲಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ.
ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷೆ ವರದಿ ಕೊನೆಗೂ ಹೊರಬಿದ್ದಿದೆ. ನೀವ್ಯಾಕೆ ಇದಕ್ಕೆ ಈ ಪರಿ ಆಕ್ಷೇಪ ಎತ್ತುತ್ತಿದ್ದೀರಿ\B\B?\B
ಜಾತಿಗಣತಿ ಹೊರಬಿದ್ದಿದೆ ನಿಜ. ಆದರೆ, ಮೊದಲನೆಯದಾಗಿ ಇದು 10 ವರ್ಷ ಹಳೆಯ ಸಮೀಕ್ಷೆ. ಎರಡನೆಯದಾಗಿ ಇದು ಧರ್ಮ, ಜಾತಿಯ ಜನಗಣತಿ ಅಲ್ಲ. ಮೂಲಭೂತವಾಗಿ ವೃತ್ತಿ ಆಧಾರಿತ ಸಮೀಕ್ಷೆ ಆಗಬೇಕಿತ್ತು. ಅನೇಕ ಅತೀ ಹಿಂದುಳಿದ, ಹಿಂದುಳಿದ ಉಪ ಜಾತಿಗಳಿಗೆ ಅವರ ವೃತ್ತಿ ಆಧಾರಿತವಾಗಿ, ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸ್ಥಿತಿಗತಿ ಆಧರಿಸಿ ನ್ಯಾಯಯುತ ಪ್ರವರ್ಗದಲ್ಲಿ ಸೇರಿಸುವ ಅಥವಾ ವರ್ಗೀಕರಣ ಮಾಡುವ ಕೆಲಸ ಆಗಬೇಕಿತ್ತು. ಅದರ ಆಧಾರದ ಮೇಲೆ ಅವರು ಮುಂದುವರೆದಿದ್ದಾರಾ ಅಥವಾ ಹಿಂದುಳಿದಿದ್ದಾರಾ ಎಂಬ ನಿರ್ಧಾರ ಮಾಡಿ ಪ್ರವರ್ಗಗಳಲ್ಲಿ ಸೇರಿಸುವ ಕೆಲಸ ಆಗಬೇಕಿತ್ತು. ಅದು ಆಗಿಲ್ಲ, ಹಾಗಾಗಿ ಇದು ಒಪ್ಪುವಂಥದ್ದಲ್ಲ, ಸಂಪೂರ್ಣ ಅವೈಜ್ಞಾನಿಕ. ಜೊತೆಗೆ ನಮ್ಮ ಮನೆಗೆ ಇಂಥ ಸಮೀಕ್ಷೆಗಾಗಿ ಯಾರೂ ಬಂದಿಲ್ಲ ಎಂದು ಸಾಕಷ್ಟು ಜನರಿಂದ ದೂರುಗಳು ಬರುತ್ತಿವೆ.
ಅಂದರೆ ಮಹಾಸಭಾ ಈ ಸಮೀಕ್ಷೆಯನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲವೇ?\B
ವೀರಶೈವ ಲಿಂಗಾಯತ ಮಹಾಸಭಾ 2024 ಅಕ್ಟೋಬರ್ 22ರಂದೇ ಈ ಸಮೀಕ್ಷೆ ಒಪ್ಪುವುದಿಲ್ಲ ಎಂದು ತೀರ್ಮಾನಿಸಿದೆ. ಈಗಲೂ ಅದೇ ನಮ್ಮ ನಿಲುವು. ಲಿಂಗಾಯತ ಸಮುದಾಯದಲ್ಲಿ ಸನಾತನ ಧರ್ಮದಲ್ಲಿದ್ದ ಎಲ್ಲಾ 99 ಜಾತಿ, 4 ವರ್ಣದವರೂ ಇದ್ದಾರೆ. ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಲಿಂಗಾಯತರಾಗಿದ್ದಾರೆ. ಅಂದು ಬ್ರಾಹ್ಮಣರಿಂದ ಹಿಡಿದು ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡದ ವರೆಗೆ ಬಹುತೇಕ ಸಮುದಾಯಗಳಿಂದ ಲಿಂಗಾಯತ ಸಮುದಾಯಕ್ಕೆ ಬಂದವರಿದ್ದಾರೆ. ಜೈನರೂ ಲಿಂಗಾಯತರಾಗಿದ್ದಾರೆ. ಅವರೆಲ್ಲ ಲಿಂಗಾಯತ ಸಮುದಾಯದ ಒಂದೊಂದು ಉಪ ಪಂಗಡಗಳಾಗಿದ್ದಾರೆ. ಇದರಲ್ಲಿ ಅತಿ ಹಿಂದುಳಿದ ಲಿಂಗಾಯತ, ಹಿಂದುಳಿದ ಲಿಂಗಾಯತ, ಪರಿಶಿಷ್ಟ ಜಾತಿ, ಪಂಗಡದ ಲಿಂಗಾಯತರೂ ಇದ್ದಾರೆ. ಲಿಂಗಾಯತ ಎನ್ನುವ ಹೆಸರಿರುವ ಕಾರಣಕ್ಕೆ ಅವರೆಲ್ಲರನ್ನೂ ‘3ಬಿ’ ಪ್ರವರ್ಗದಡಿ ತಂದಿರುವುದು ಯಾವ ರೀತಿಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಆಗುತ್ತದೆ.
ನಿಮ್ಮ ಪ್ರಕಾರ ಸಮೀಕ್ಷೆ ಯಾವ ರೀತಿ ಆಗಬೇಕಿತ್ತು?\B
ನೋಡಿ, ಲಿಂಗಾಯತರಲ್ಲಿ ಮಡಿವಾಳ ಲಿಂಗಾಯತರಿದ್ದಾರೆ, ಉಪ್ಪಾರ ಲಿಂಗಾಯತರಿದ್ದಾರೆ. ಹಾಗೆ ಭಜಂತ್ರಿ, ಅಂಬಿಕ, ಕಮ್ಮಾರ, ಕುಂಬಾರ, ಕುರುಬ, ಹಡಪದ, ಸಿಂಪಿ, ಜೇಡ, ಹೂಗಾರ ಹೀಗೆ ನೂರಾರು ಉಪಜಾತಿಗಳಿಗೆ. ‘ಲಿಂಗಾಯತ’ ಎನ್ನುವ ಪದ ಇರುವವರನ್ನೆಲ್ಲಾ ‘3ಬಿ’ಗೆ ಸೇರಿಸಿಬಿಟ್ಟಿದ್ದಾರೆ. ಲಿಂಗಕಟ್ಟಿಕೊಂಡು, ಲಿಂಗಾಯತ ಆಚಾರ ವಿಚಾರ ಅನುಸರಿಸಿದ ಕೂಡಲೇ ಆ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥತಿಗತಿಗಳೇನೂ ಬದಲಾಗಿಲ್ಲ. ವೃತ್ತಿಗಳು ಬದಲಾಗಿಲ್ಲ. ಹಿಂದೆ ಲಿಂಗಾಯತನಾದ ಕ್ಷೌರಿಕರು ಇಂದಿಗೂ ಕ್ಷೌರವೃತ್ತಿಯನ್ನೇ ಮಾಡುತ್ತಿದ್ದಾರೆ. ಅವ ಕ್ಷೌರಿಕ ಲಿಂಗಾಯತ ಅಂತ 10 ರು. ಹೆಚ್ಚು ಹಣ ಯಾರೂ ಕೊಡುವುದಿಲ್ಲ. ಹಾಗಾಗಿ ಮುಂದುವರೆದ ಲಿಂಗಾಯತರನ್ನು 3ಬಿಯಲ್ಲಿ ಸೇರಿಸಲಿ. ಹಿಂದುಳಿದ, ಅತಿ ಹಿಂದುಳಿದ ಲಿಂಗಾಯತರನ್ನು ಪ್ರವರ್ಗ 1, 1ಬಿ, 2ಎ ಹೀಗೆ ಅವರ ಸ್ಥಿತಿಗತಿಗೆ ಅನುಗುಣವಾಗಿ ಸೂಕ್ತ ಪ್ರವರ್ಗಕ್ಕೆ ಸೇರಿಸಬೇಕಿತ್ತು. ಆಗ ಅವರಿಗೆ ಸೂಕ್ತ ಮೀಸಲಾತಿ, ಇತರೆ ಸೌಲಭ್ಯಗಳಿಗೆ ದಾರಿಯಾಗುತ್ತಿತ್ತು. ನಾನು ಇದನ್ನು ಲಿಂಗಾಯತ ಸಮುದಾಯಕ್ಕೆ ಮಾತ್ರ ಹೇಳುತ್ತಿಲ್ಲ, ಇತರೆ ಎಲ್ಲ ಸಮುದಾಯಗಳಲ್ಲೂ ಈ ರೀತಿ ಅತಿ ಹಿಂದುಳಿದ, ಹಿಂದುಳಿದವರಿದ್ದಾರೆ. ಆ ಜನರನ್ನು ಗುರುತಿಸುವ ಕೆಲಸ ಆಗಿಲ್ಲ.
ಸಂಪುಟ ಸಭೆಗೆ ಮಹಾಸಭಾದ ನಿಲುವು ಹೇಗೆ ಮುಟ್ಟಿಸುವಿರಿ?\B
ಕಳೆದ ವರ್ಷವೇ ನಮ್ಮ ಸಮುದಾಯದಿಂದ ಈ ವರದಿ ಒಪ್ಪುಲು ಸಾಧ್ಯವಿಲ್ಲ ಎನ್ನುವ ನಿರ್ಧಾರ ಮಾಡಿ ಆಗಿದೆ. ಇನ್ನೂ ಅವಶ್ಯತೆ ಇದ್ದರೆ ಮತ್ತೊಮ್ಮೆ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಸಭೆ ಮಾಡಿ ಹೆಚ್ಚಿನ ನಿರ್ಧಾರಗಳೇನಾದರೂ ಅಗತ್ಯವಿದ್ದರೆ ಮಾಡುತ್ತಾರೆ. ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಅವರು ಸರ್ಕಾರದ ಪ್ರಮುಖ ಸಚಿವರಿದ್ದಾರೆ. ಅವರ ಮೂಲಕ ಈ ಸಮೀಕ್ಷಾ ವರದಿಯಲ್ಲಿರುವ ಎಲ್ಲಾ ಲೋಪಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಹಾಗೂ ಮಹಾಸಭಾದ ನಿಲುವನ್ನು ತಿಳಿಸುವ ಕೆಲಸ ಮಾಡುತ್ತೇವೆ.
ಸರ್ಕಾರ ಈ ಸಮೀಕ್ಷೆಯನ್ನು ಒಪ್ಪಿ ಅನುಷ್ಠಾನಕ್ಕೆ ಮುಂದಾದರೆ?\B
ಊಹಾಪೋಹದ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಕಷ್ಟು ರಾಜಕೀಯ ಅನುಭವ ಇರುವವರು. ಇಡೀ ರಾಜ್ಯವನ್ನು ಅನೇಕ ಬಾರಿ ತಿರುಗಾಡಿದ್ದಾರೆ. ಬಹಳ ಪ್ರಬುದ್ಧತೆಯಿಂದ, ವಿವೇಕಪೂರ್ಣವಾದ ತೀರ್ಮಾನ ಮಾಡುತ್ತಾರೆಂಬ ದೃಢ ನಂಬಿಕೆ ಇದೆ. ಈಗ ಏನೇ ಹೇಳಿದರೂ ತಪ್ಪಾಗುತ್ತೆ. ಅಂಥ ತೀರ್ಮಾನ ಏನಾದರೂ ಆದರೆ ಮುಂದೆ ನೋಡೋಣ. ವೈಯಕ್ತಿಕವಾಗಿ ನಾನು ಸಿದ್ದರಾಮಯ್ಯ ಅವರ ಹಿತೈಷಿಯಾಗಿ ಹೇಳುವುದಾದರೆ ಈ ವರದಿ ಜಾರಿಗೆ ಮುಂದಾದರೆ ಸುಮ್ಮನೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ನಾವು ಜಾತಿಗಣತಿಗೆ ವಿರೋಧ ಮಾಡಲ್ಲ. ಆದರೆ, ಇಂಥ ವರದಿಯಿಂದ ದಲಿತರಿಗೂ ನ್ಯಾಯ ಸಿಗುವುದಿಲ್ಲ. ಹೊಸದಾಗಿ ಸಮೀಕ್ಷೆ ಮಾಡಿ, ಎಲ್ಲ ಸಮುದಾಯಗಳಿಗೂ ನ್ಯಾಯಯುತವಾಗಿ ಸಿಗಬೇಕಾದ ಪ್ರವರ್ಗದಡಿ ಸ್ಥಾನ ಕಲ್ಪಿಸಿ ಎಂದು ಹೇಳುತ್ತೇನೆ.
ವರದಿಯಲ್ಲಿ ಹೇಳಿರುವಂತೆ ಲಿಂಗಾಯತರ ಜನಸಂಖ್ಯೆ ಸರಿಯಿದೆಯೇ?\B
ಲಿಂಗಾಯತ ಅಥವಾ ವೀರಶೈವ ಲಿಂಗಾಯತ ಜನಸಂಖ್ಯೆ ಎಷ್ಟು ಎಂದು ಈ ವರದಿಯಿಂದ ಅಳೆಯಲು ಆಗಲ್ಲ. ಲಿಂಗಾಯತ ಆಚಾರ ವಿಚಾರ ಅನುಸರಿಸುವ ಜನ ರಾಜ್ಯದಲ್ಲಿ 3 ಕೋಟಿ ಇದ್ದಾರೆ. ಅವರೆಲ್ಲರನ್ನೂ ಲಿಂಗಾಯತರು ಅಂತ ಹೇಳಿ ಎಂದು ನಾವು ನಿರೀಕ್ಷಿಸುವುದಿಲ್ಲ. ಲಿಂಗಾಯತರು ಮುಂದುವರೆದ ಪ್ರವರ್ಗಗಳಲ್ಲೂ ಇದ್ದಾರೆ. ಹಿಂದುಳಿದ ಪ್ರವರ್ಗಗಳಲ್ಲೂ ಇದ್ದಾರೆ. ಎಲ್ಲರನ್ನೂ ಲೆಕ್ಕ ಹಾಕಿದಾಗ ಸಮಗ್ರ ಲಿಂಗಾಯತರ ಸಂಖ್ಯೆ ಸಿಗುತ್ತದೆ. ಅಲ್ಲದೆ, ಸರ್ಕಾರ ಈಗ ನೀಡಿರುವುದು ಬರೀ ಪ್ರಮುಖಾಂಶಗಳು ಅಷ್ಟೆ. ಪೂರ್ಣ ದತ್ತಾಂಶ ಬಿಡುಗಡೆ ಮಾಡಿದರೆ ಮಾತ್ರ ಲಿಂಗಾಯತರಷ್ಟೇ ಅಲ್ಲ, ಎಲ್ಲಾ ಸಮಾಜದವರೂ ತಮ್ಮ ಸಮುದಾಯದ ಅಂಕಿ-ಅಂಶ ಸರಿ ಇದೆಯಾ? ಇಲ್ವಾ? ಅಂತ ಪರಿಶೀಲಿಸಿ ಸರ್ಕಾರಕ್ಕೆ ಫೀಡ್‌ಬ್ಯಾಕ್ ಕೊಡಬಹುದು. ಆದರೆ, ಈಗ ದತ್ತಾಂಶವೇ ಬಹಿರಂಗವಾಗಿಲ್ಲ. ಯಾವ ದತ್ತಾಂಶ ಮೇಲೆ ಈ ಪ್ರಮುಕಾಂಶ (ಆಬ್ಸ್ಟ್ರಾಕ್ಟ್) ತಯಾರಿಸಲಾಗಿದೆ ಎನ್ನುವುದು ತಿಳಿಯಬೇಕು.
ಮತ್ತೆ ಲಿಂಗಾಯತರು 66 ಲಕ್ಷ, ವೀರಶೈವ ಲಿಂಗಾಯತರು 10ಲಕ್ಷಕ್ಕೂ ಹೆಚ್ಚು ಅಂತ ಉಲ್ಲೇಖಿಸಲಾಗಿದೆಯಲ್ವಾ?\B
ಲಿಂಗಾಯತ, ವೀರಶೈವ ಲಿಂಗಾಯತ ಅಂತ ವಿಭಾಗವೇ ಸರಿಯಲ್ಲ.\B \Bನ್ಯಾಯಬದ್ಧವಾಗಿ ಎರಡೂ ಒಂದೇ ಎಂದು ಹೇಳಬಹುದಿತ್ತು. ಸಮೀಕ್ಷೆಗೆ ಹೋದಾಗ ಬೇರೆ ಬೇರೆ ಅಂತ ಹೇಳಿದ್ದಾರೆ. ಅದಕ್ಕೆ ಹಾಗೆ ದಾಖಲಿಸಿದ್ದೇವೆ ಎಂದು ಅವರು ಹೇಳಬಹುದು. ಇರಲಿ ಅದು ದೊಡ್ಡದಲ್ಲ. ಆದರೆ, ಚಿನ್ನಪ್ಪರೆಡ್ಡಿ ಆಯೋಗದಲ್ಲಿ ಹಿಂದುಳಿದ ಲಿಂಗಾಯತರ ಜನಸಂಖ್ಯೆ ಶೇ.17.43 ರಷ್ಟಿತ್ತು. ಈಗಿನ ವರದಿಯಲ್ಲಿ ಅದು ಶೇ.11.09 ಆಗಿದೆ. ಆದರೆ, ನಮ್ಮ ಫಲವಂತಿಕೆ ದರ(ಫರ್ಟಿಲಿಟಿ ರೇಟ್) ಶೇ.1.8 ಇದೆ. ಅದರ ಪ್ರಕಾರ 30 ವರ್ಷಗಳ ಅಂತರದಲ್ಲಿ ಲಿಂಗಾಯತರ ಒಟ್ಟು ಜನಸಂಖ್ಯೆ 1.30 ಕೋಟಿಯಾದರೂ ಇರಬೇಕಿತ್ತು. ಬದಲಿಗೆ ಶೇ.6.32 ರಷ್ಟು ಕಡಿಮೆ ಆಗಿದೆ. ಈ ರೀತಿ ಜನಸಂಖ್ಯೆ ಕಡಿಮೆ ಆಗಲು ಏನಾದರೂ ಭಾರೀ ಬರಗಾಲ, ಮಾರಕ ರೋಗ, ನರಸಂಹಾರ ಏನಾದರೂ ಆಗಿದೆಯಾ? ಹೇಳಬೇಕಲ್ವಾ?
ಮುಸ್ಲಿಮರ ಜನಸಂಖ್ಯೆ ನಂ.1 ಎಂದು ತೋರಿಸಲು ಲಿಂಗಾಯತರನ್ನು ಒಡೆಯಲಾಗಿದೆ ಎಂಬ ಆರೋಪಗಳೂ ಇವೆಯಲ್ವಾ?\B
ನಮಗೆ ಗೊತ್ತಿಲ್ಲ. ಅದು ಸರ್ಕಾರಕ್ಕೆ ಗೊತ್ತು. ನಮ್ಮ ಸಮುದಾಯದ ಜನಸಂಖ್ಯೆಯನ್ನು ಯಾವ ಸರ್ಕಾರ, ಯಾವ ವರದಿಯೂ ಕಡಿಮೆ ಮಾಡಲಾಗಲ್ಲ. ಅವರ ವರದಿಯಲ್ಲಿ ಬೇಕಿದ್ದರೆ ಲಿಂಗಾಯತರು 5 ಲಕ್ಷ ಇದ್ದಾರೆ ಅಂತ ಬರೆದುಕೊಳ್ಳಿ ನಮಗೇನೂ ಆಗಲ್ಲ. ಫೀಲ್ಡಲ್ಲಿ ಇರುವವರನ್ನು ಗುಂಡು ಹಾರಿಸಿ ಕೊಲ್ಲಲು ಸಾಧ್ಯನಾ? ನಮ್ಮ ಸಮುದಾಯದ ಜನಸಂಖ್ಯೆ ಎಷ್ಟಿದೆ ಅದು ಇದ್ದೇ ಇರುತ್ತದೆ.
ನಿಮ್ಮಲ್ಲೇ ಒಡಕಿದೆಯಲ್ಲ, ಕೆಲವರು ಎರಡೂ ಬೇರೆ ಬೇರೆ ಅಂತಾರೆ, ಲಿಂಗಾಯತ ಜಾತಿಯೇ ಅಲ್ಲ ಧರ್ಮ ಅನ್ನುವವರಿದ್ದಾರೆಯಲ್ವಾ?\B
ಹಿಂದೂ ಕೋಡ್ ಬಿಲ್ ಪ್ರಕಾರ ಅಧಿಕೃತವಾಗಿ ಲಿಂಗಾಯತರು ಮತ್ತು ವೀರಶೈವರು ಹಿಂದೂಧರ್ಮದ ಭಾಗ ಎಂದು ಪರಿಗಣನೆ ಆಗಿದ್ದಾರೆ. ಕೆಲ ವರ್ಷಗಳ ಹಿಂದೆ ನಮ್ಮವರು ಪ್ರತ್ಯೇಕ ಧರ್ಮ ಅಂತ ಬೇಡಿಕೆ ಇಟ್ಟಿದ್ದರು. ಅದಕ್ಕೆ ಸರ್ಕಾರದಿಂದ ಮಂಜೂರಾತಿ ಆಗಿಲ್ಲ. ಹಾಗಾಗಿ ಮಂಜೂರಾತಿ ದೊರೆಯುವವರೆಗೆ ಅವರನ್ನು ಹಿಂದೂಧರ್ಮದ ಭಾಗ ಎಂದೇ ಪರಿಗಣಿಸಬೇಕಾಗುತ್ತದೆ. ಅದರಲ್ಲಿ ತಪ್ಪಿಲ್ಲ. ಆದರೆ, ನಮ್ಮ ಮಹಾಸಭಾದ ನಿಲುವು ಒಂದೇ ಲಿಂಗಾಯತರು, ವೀರಶೈವ ಲಿಂಗಾಯತರು ಬೇರೆ ಬೇರೆ ಅಲ್ಲ ಎರಡೂ ಒಂದೇ. ಇಷ್ಟಲಿಂಗ ಪೂಜೆಸುವವರು, ಪಂಚಾಚಾರ, ಅಷ್ಟಾವರಣ, ಷಟ್‌ಸ್ಥಲ ತತ್ವ ಒಪ್ಪುವವರೆಲ್ಲರೂ ನಮ್ಮವರೇ ಎಂದು 2017ರಲ್ಲೇ ಮಹಾಸಭಾ ನಿಲುವು ತಾಳಲಾಗಿದೆ. ಈ ನಿಲುವಿಗೆ ಈಗಲೂ ಬದ್ಧ. ಎಲ್ಲಕ್ಕಿಂತ ಡಾ.ಶಿವಕುಮಾರ ಸ್ವಾಮೀಜಿಗಳಿಗಿಂತ ದೊಡ್ಡವರು ಯಾರೂ ಇಲ್ಲ. ಬಸವಣ್ಣನವರ ನಂತರದಲ್ಲಿ ಅವರಿದ್ದಾರೆ. ವೀರಶೈವ, ಲಿಂಗಾಯತ ಬೇರೆ ಅಲ್ಲ, ಎರಡೂ ಒಂದೇ ಎಂದು ಅವರು ಹೇಳಿದ್ದಾರೆ. ಅವರ ನಿಲುವಿಗೆ ನಾವು ಬದ್ಧವಾಗಿ ನಡೆಯುತ್ತಿದ್ದೇವೆ.
ವೀರಶೈವ ಲಿಂಗಾಯತ ಮಹಾಸಭಾದಿಂದ ಪ್ರತ್ಯೇಕ ಸಮೀಕ್ಷೆ ಮಾಡಿಸುತ್ತೀರಾ?\B
ಹೌದು, 2026ರ ಜನವರಿ 26ರಿಂದ ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಘಟಕಗಳ ಮುಖಾಂತರ ಲಿಂಗಾಯತ ವೀರಶೈವ ಸಮುದಾಯದ ವಿವರವಾದ ಆರ್ಥಿಕ, ಸಾಮಾಜಿಕ ಸಮೀಕ್ಷೆ ಮಾಡಿಸುತ್ತೇವೆ. ನಮ್ಮ ಸಮಾಜ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಮಾಡುವ ಜವಾಬ್ದಾರಿ ಬರೀ ಸರ್ಕಾರದ್ದು ಮಾತ್ರವಲ್ಲ. ನಮ್ಮ ಮಹಾಸಭಾದ್ದೂ ಇದೆ. ಆ ದೃಷ್ಟಿಯಿಂದ ಸಮೀಕ್ಷೆ ಮಾಡಿಸುತ್ತೇವೆ. ಸಮೀಕ್ಷೆಯಲ್ಲಿ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯ ಹೆಸರು, ವಿಳಾಸ, ತಂದೆ, ತಾಯಿ ಹೆಸರು, ವಯಸ್ಸು, ಆಸ್ತಿ, ಆದಾಯ, ಶಿಕ್ಷಣ, ಮಕ್ಕಳ ಶಿಕ್ಷಣ, ಆಧಾರ್ ಕಾರ್ಡು, ರೇಷನ್ ಕಾರ್ಡು, ಓಟರ್ ಐಡಿ ಎಲ್ಲದರ ಬಗ್ಗೆಯೂ 236 ತಾಲೂಕಿನಲ್ಲೂ ಮಾಹಿತಿ ಸಂಗ್ರಹಿಸುತ್ತೇವೆ.
ಲಿಂಗಾಯತರು-ಒಕ್ಕಲಿಗರು ಒಟ್ಟಾಗಿ ಹೋರಾಟ ರೂಪಿಸುವ ಮಾತುಗಳು ಕೇಳಿಬರುತ್ತಿವೆಯಲ್ವಾ? \B
ಈ ವಿಚಾರವಾಗಿ ನನ್ನನ್ನು ಈವರೆಗೂ ಯಾರು ಸಂಪರ್ಕಿಸಿಲ್ಲ. ಅಂತಹ ಬೇಡಿಕೆ ಬಂದರೆ ಬರಲಿ. ನ್ಯಾಯಕ್ಕಾಗಿ, ಸತ್ಯಕ್ಕಾಗಿ ಹೋರಾಡುವುದಾದರೆ ಯಾರ ಜೊತೆಗಾದರೂ ಹೋರಾಟ ಮಾಡಲು ಸಿದ್ಧರಿದ್ದೇವೆ. ಇದರಿಂದ ಲಿಂಗಾಯತರು, ಒಕ್ಕಲಿಗರಿಗೆ ಮಾತ್ರವಲ್ಲ, ಎಲ್ಲ ಸಮುದಾಯದವರಿಗೂ ನ್ಯಾಯ ಸಿಗಬೇಕು. ಏಕೆಂದರೆ, ಈ ಆಯೋಗ ರಚಿಸುವಾಗ ಎಲ್ಲ ಸಮುದಾಯದವರನ್ನೂ ಸದಸ್ಯರನ್ನಾಗಿ ನೇಮಿಸಬೇಕಿತ್ತು. ಪ್ರಮುಖ ಸಮುದಾಯದವರಿಗೇ ಪ್ರಾತಿನಿಧ್ಯ ನೀಡಿಲ್ಲ ಎನ್ನುವ ಆರೋಪಗಳಿವೆ.