ಶಿರಾ ಮಾರ್ಗದ ಸಿಮೆಂಟ್‌ ರಸ್ತೆ ಪ್ರಗತಿ ಪರಿಶೀಲನೆ

| Published : Nov 20 2023, 12:45 AM IST

ಸಾರಾಂಶ

ಶಾಸಕ ಎಚ್‌.ವಿ.ವೆಂಕಟೇಶ್‌ ಭಾನುವಾರ ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆಯ ಅಧಿಕಾರಿಗಳ ಜತೆ ತೆರಳಿ ಪ್ರಗತಿಯಲ್ಲಿರುವ 2.50ಕೋಟಿ ವೆಚ್ಚದ ಶಿರಾ ಸಿಮೆಂಟ್‌ ರಸ್ತೆ ಹಾಗೂ 50ಲಕ್ಷ ವೆಚ್ಚದ ಚರಂಡಿ ನಿರ್ಮಾಣ ಕಾಮಗಾರಿಯ ಪರಿಶೀಲನೆ ನಡೆಸಿದರು.

ಶಾಸಕ ಎಚ್‌.ವಿ.ವೆಂಕಟೇಶ್‌ ರಿಂದ ಪರಿಶೀಲನೆ । ಕಾಮಗಾರಿಯ ಗುಣಮಟ್ಟ ಹಾಗೂ ಸುಸಜ್ಜಿತ ಚರಂಡಿ ನಿರ್ಮಾಣಕ್ಕೆ ಸೂಚನೆ

ಕನ್ನಡಪ್ರಭ ವಾರ್ತೆ ಪಾವಗಡ

ಶಾಸಕ ಎಚ್‌.ವಿ.ವೆಂಕಟೇಶ್‌ ಭಾನುವಾರ ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆಯ ಅಧಿಕಾರಿಗಳ ಜತೆ ತೆರಳಿ ಪ್ರಗತಿಯಲ್ಲಿರುವ 2.50ಕೋಟಿ ವೆಚ್ಚದ ಶಿರಾ ಸಿಮೆಂಟ್‌ ರಸ್ತೆ ಹಾಗೂ 50ಲಕ್ಷ ವೆಚ್ಚದ ಚರಂಡಿ ನಿರ್ಮಾಣ ಕಾಮಗಾರಿಯ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಶಾಸಕ ಎಚ್‌.ವಿ.ವೆಂಕಟೇಶ್‌, ಪಟ್ಟಣದ ಶಿರಾ ಹಾಗೂ ಅರಸೀಕೆರೆ ಮಾರ್ಗದ ಸುಮಾರು ಅರ್ಧ ಕಿಮೀ ರಸ್ತೆ ತೀವ್ರ ಆಧೋಗತಿಯಲ್ಲಿತ್ತು. ಇದರಿಂದ ಜನಸಾಮಾನ್ಯ ಹಾಗೂ ಬಸ್‌ ಲಾರಿ ಕಾರು ಆಟೋ ದ್ವಿಚಕ್ರ ವಾಹನಗಳ ಒಡಾಟಕ್ಕೆ ತೀವ್ರ ಆಡಚಣೆ ಹಾಗೂ ವಾಹನ ದಟ್ಟಣೆ ಎದುರಾಗಿತ್ತು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ತಂದೆಯವರಾದ ವೆಂಕಟರಮಣಪ್ಪ ಶಾಸಕರಾಗಿದ್ದ ವೇಳೆ ಈ ರಸ್ತೆ ಕಾಮಗಾರಿಯ ಪ್ರಗತಿಗೆ 2.50ಕೋಟಿ ಹಾಗೂ ರಸ್ತೆ ಬದಿಯ ಚರಂಡಿ ನಿರ್ಮಾಣದ ಕಾಮಗಾರಿಗೆ ಪುರಸಭೆಯ 50ಲಕ್ಷ ವಿನಿಯೋಗಿಸಲಾಯಿತು ಎಂದರು.

ಟೆಂಡರ್‌ ಅನ್ವಯ ರಸ್ತೆ ನಿರ್ವಹಣೆ ಪ್ರಗತಿಯಲ್ಲಿದ್ದು ದುರಸ್ತಿ ಕಾಮಗಾರಿ ಹಿನ್ನಲೆಯಲ್ಲಿ ಹಳೇ ರಸ್ತೆ ಕಿತ್ತ ಕಾರಣ ವಾಹನಗಳ ಒಡಾಟಕ್ಕೆ ಸಮಸ್ಯೆ ಆಗಿದೆ. ಶೀಘ್ರ ರಸ್ತೆ ಕಾಮಗಾರಿ ಪೂರೈಸುವಂತೆ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಆದೇಶಿಸಲಾಗಿದ್ದು. ಅಲ್ಲದೇ ಮಳೆ ನೀರು ಸರಗವಾಗಿ ಹರಿಯಲು ರಸ್ತೆ ಬದಿಯಲ್ಲಿ ಸುಸಜ್ಜಿತವಾದ ಚರಂಡಿ ನಿರ್ಮಾಣ ಹಾಗೂ ನಗರದ ಶಿರಾ ರಸ್ತೆ ಮಾರ್ಗದ ಶ್ರೀಶನಿಮಹಾತ್ಮ ವೃತ್ತದಿಂದ ನಾಗರಕಟ್ಟೆ ಹಾಗೂ ಶ್ರೀನಿವಾಸ ಟಾಕೀಸ್‌ ಮುಂಭಾಗ ಮತ್ತು ದೇವಲಕರೆ ಕ್ರಾಸ್‌ ಸಮೀಪದ ವರೆಗೆ ಗುಣಮಟ್ಟದ ಸಿಮೆಂಟ್‌ ರಸ್ತೆ ಕಾಮಗಾರಿ ನಿರ್ವಹಿಸಲು ಸೂಚಿಸಲಾಗಿದೆ ಎಂದರು.ತ್ವರಿತವಾಗಿ ಕಾಮಗಾರಿ ನಿರ್ವಹಿಸಲಿದ್ದ ಇನ್ನೂ, ತಾಲೂಕಿನ ಪ್ರಗತಿಗೆ ವಿಶೇಷ ಒತ್ತು ನೀಡಲಾಗಿದೆ. ಬರಗಾಲದ ಕಾಮಗಾರಿ ನಿರ್ವಹಣೆ ಹಾಗೂ ಜನ ಸಾಮಾನ್ಯರ ಬವಣೆಗೆ ಸ್ಪಂದಿಸುವ ಜತೆಗೆ ಜಾನುವಾರುಗಳ ಕುಡಿವ ನೀರು ಮತ್ತು ಮೇವು ಒದಗಿಸಲು ಅಗತ್ಯ ಕ್ರಮ ವಹಿಸಲಾಗುವುದು. ನಗರ ಸೇರಿದಂತೆ ಗ್ರಾಮೀಣ ಪ್ರಗತಿಗೆ ವಿಶೇಷ ಅದ್ಯತೆ ನೀಡಿ ಕೆಲಸ ಮಾಡುವುದಾಗಿ ಹೇಳಿದರು.

ಈ ವೇಳೆ ತಾ.ಲೋಕೋಪಯೋಗಿ ಇಲಾಖೆಯ ಎಇಇ ಅನಿಲ್‌ಕುಮಾರ್‌, ಪುರಸಭೆಯ ಮುಖ್ಯಾಧಿಕಾರಿ ಶಂಶುದ್ದೀನ್‌, ತಾಲೂಕು ಕಾಂಗ್ರೆಸ್‌ ನಗರಾಧ್ಯಕ್ಷ ಸುದೇಶ್‌ಬಾಬು, ತಾ.ಕಾಂಗ್ರೆಸ್‌ ಮುಖಂಡರಾದ ಎ.ಶಂಕರರೆಡ್ಡಿ, ವೆಂಕಟಮ್ಮನಹಳ್ಳಿಯ ಬತ್ತಿನೇನಿ ನಾನಿ, ಪ್ರಮೋದ್‌ಕುಮಾರ್‌, ಮೈಲಪ್ಪ, ಪುರಸಭೆ ಸದಸ್ಯರಾದ ಪಿ.ಎಚ್‌.ರಾಜೇಶ್‌, ರವಿ, ಮಾಜಿ ಅಧ್ಯಕ್ಷ ಬೋವಿ ಕಾಲೋನಿಯ ರಾಮಾಂಜಿನಪ್ಪ, ವೇಲುರಾಜ್‌, ಬಾಲಸುಬ್ರಮಣ್ಯಂ, ಅಲ್ಪ ಸಂಖ್ಯಾತರ ಘಟಕದ ಷಾಬಾಬು, ಪುರಸಭೆ ಮಾಜಿ ಸದಸ್ಯ ರಿಜ್ಲಾನ್‌ ಉಲ್ಲಾ, ಸ್ಟುಡಿಯೋ ಅಮರ್‌ ಇತರೆ ಆನೇಕ ಮಂದಿ ಪುರಸಭೆ ಸದಸ್ಯರು ಮತ್ತು ತಾ.ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

ಗಡಿ ಭಾಗದ ತಾಲೂಕಿನ ವೆಂಕಟಮ್ಮನಹಳ್ಳಿ ಗ್ರಾಮಕ್ಕೆ ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ಶಾಸಕ ಎಚ್‌.ವಿ.ವೆಂಕಟೇಶ್‌ ಭೇಟಿ ನೀಡಿ ಕಾಲ್ನಡಿಗೆಯಲ್ಲಿ ತೆರಳುವ ಮೂಲಕ ಗ್ರಾಮದ ಸಮಸ್ಯೆ ಹಾಗೂ ವಿವಿಧ ಯೋಜನೆಯ ಪ್ರಗತಿ ಕಾಮಗಾರಿಗಳನ್ನು ವೀಕ್ಷಿಸಿದರು.

ಇದೇ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಎ.ಶಂಕರರೆಡ್ಡಿ,ತಾ,ಕಾಂಗ್ರೆಸ್‌ ಮುಖಂಡ ಹಾಗೂ ಸಿದ್ದಾರ್ಥ ಟ್ರಸ್ಟ್‌ನ ಕಾರ್ಯದರ್ಶಿ ಬತ್ತಿನೇನಿ ನಾಗೇಂದ್ರರಾವ್‌ (ನಾನಿ) ಹಾಗೂ ಇತರೆ ಆನೇಕ ಮಂದಿ ಮುಖಂಡರು ಮತ್ತು ಕಾರ್ಯಕರ್ತರಿದ್ದರು.---