ನಾಳೆಯಿಂದ ಶಿವಾಲಯ, ನಾಗ ಪ್ರತಿಷ್ಠಾಪನೆ ಸಮಾರಂಭ

| Published : Jan 27 2025, 01:45 AM IST

ಸಾರಾಂಶ

ನಗರದ ಬಿಳೇಕಹಳ್ಳಿ ವಿಜಯ ಬ್ಯಾಂಕ್‌ ಲೇಔಟ್‌ನಲ್ಲಿರುವ ಮುಲ್ಕಿ ಸುಂದರ ರಾಮ ಶೆಟ್ಟಿ ನಗರ ಅಯ್ಯಪ್ಪ ಸ್ವಾಮಿ ಟೆಂಪಲ್‌ ಟ್ರಸ್ಟ್‌ನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಶಿವಾಲಯದ ಪೂರ್ಣ ಪ್ರತಿಷ್ಠಾಪನ ಪೂಜಾ ಹಾಗೂ ನಾಗ ಪುನರ್‌ ಪ್ರತಿಷ್ಠಾಪನ ವಿಧಿ ವಿಧಾನ ಈ ತಿಂಗಳ 28ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಬಿಳೇಕಹಳ್ಳಿ ವಿಜಯ ಬ್ಯಾಂಕ್‌ ಲೇಔಟ್‌ನಲ್ಲಿರುವ ಮುಲ್ಕಿ ಸುಂದರ ರಾಮ ಶೆಟ್ಟಿ ನಗರ ಅಯ್ಯಪ್ಪ ಸ್ವಾಮಿ ಟೆಂಪಲ್‌ ಟ್ರಸ್ಟ್‌ನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಶಿವಾಲಯದ ಪೂರ್ಣ ಪ್ರತಿಷ್ಠಾಪನ ಪೂಜಾ ಹಾಗೂ ನಾಗ ಪುನರ್‌ ಪ್ರತಿಷ್ಠಾಪನ ವಿಧಿ ವಿಧಾನ ಈ ತಿಂಗಳ 28ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ಮೊದಲ ಎರಡು ದಿನಗಳ ಕಾಲ ದೇವಸ್ಥಾನದಲ್ಲಿ ಆಂತರಿಕ ಪೂಜಾ ಕೈಂಕರ್ಯಗಳು ನಡೆಯಲಿವೆ. ಕೈಂಕರ್ಯವನ್ನು ಶಬರಿಮಲ ಸನ್ನಿದಾನದ ಅನುವಂಶಿಕ ತಂತ್ರಿಗಳಾದ ತಂತ್ರಿ ಬ್ರಹ್ಮಶ್ರೀ ತಾಜ್ಹಾಮೋನ್‌ ಮಟಂ ಕಂದರಾರು ರಾಜೀವಾರು ಅವರ ನೇತೃತ್ವದಲ್ಲಿ ನೆರವೇರಿಸಲಾಗುತ್ತಿದೆ. ಜ.30ರಂದು ಶಿವಾಲಯದ ಪೂರ್ಣ ಪ್ರತಿಷ್ಠಾಪನ ಪೂಜಾ ಹಾಗೂ ನಾಗ ಪುನರ್‌ ಪ್ರತಿಷ್ಠಾಪನೆ ಬಳಿಕ ಮಧ್ಯಾಹ್ನ 12.30ರಿಂದ ಮಹಾ ಅನ್ನದಾನ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ:

ಜ.30ರಂದು ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಥಕ್ಕಳಿ ಗ್ರಾಮಮ್‌, ಪಾಲಕ್ಕಾಡ್, ಕೇರಳ ತಂಡದಿಂದ ಕಥಕ್ಕಳಿ ನೃತ್ಯರೂಪಕ ‘ಪ್ರಹಲ್ಲಾದ ಚರಿತಮ್‌’ ಪ್ರದರ್ಶನ ಏರ್ಪಡಿಸಲಾಗಿದೆ.

1997ರಲ್ಲಿ ಸ್ಥಾಪನೆಯಾಗಿ 28 ವರ್ಷ ಪೂರೈಸಿರುವ ಅಯ್ಯಪ್ಪ ಸ್ವಾಮಿ ದೇಗುಲವಿದು. ಅಯ್ಯಪ್ಪ ಇಲ್ಲಿ ಮುಖ್ಯ ದೇವರಾದರೆ, ಪರಿವಾರ ದೇವರಾಗಿ ವಿನಾಯಕ, ಸುಬ್ರಹ್ಮಣ್ಯ, ಹನುಮಾನ್‌, ಶ್ರೀದೇವಿ, ನವಗ್ರಹ, ನಾಗ ದೇವತೆಗಳಿವೆ. ರಾಜಧಾನಿಯಲ್ಲಿ ಸುಮಾರು 65 ಅಯ್ಯಪ್ಪ ದೇಗುಲಗಳಿವೆ. ಜಾಲಹಳ್ಳಿ ಅಯ್ಯಪ್ಪ ದೇಗುಲ ಹೊರತುಪಡಿಸಿದರೆ ಅತೀ ಹೆಚ್ಚಿನ ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ ಎಂದು ಟ್ರಸ್ಟ್‌ ಅಧ್ಯಕ್ಷ ಕೆ. ಜಯಕರ್ ಶೆಟ್ಟಿ ತಿಳಿಸಿದ್ದಾರೆ.

ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನಡೆವ ಎಲ್ಲ ಕೈಂಕರ್ಯಗಳು ಇಲ್ಲಿಯೂ ನಡೆಯುತ್ತಿದೆ. ಪ್ರತಿ ವರ್ಷ ಜನವರಿ 14ರ ಮಕರ ಜ್ಯೋತಿಯ ಪೂಜೆ, ಮಂಡಲ ಪೂಜೆ ಮಹೋತ್ಸವ, ಫೆಬ್ರವರಿ 9ರಿಂದ ಐದು ದಿನ ವಾರ್ಷಿಕ ಉತ್ಸವ, ಜುಲೈ 12ರಂದು ಪ್ರತಿಷ್ಠಾಪನಾ ದಿನ, ನಾಗರಪಂಚಮಿ, ಗಣೇಶ ಚತುರ್ಥಿ, ನವರಾತ್ರಿಯಲ್ಲಿ ಚಂಡಿಕಾ ಯಾಗ, ಬಳಿಕ ಡಿಸೆಂಬರ್ 25, 26 ಮಂಡಲ ಪೂಜೆ ಕಾರ್ಯಕ್ರಮಗಳು ನಡೆಯುತ್ತವೆ. ಎಲ್ಲ ವಿಶೇಷ ಕಾರ್ಯಕ್ರಮಗಳಲ್ಲಿ ಮಹಾ ಅನ್ನದಾನ ಮಾಡಲಾಗುತ್ತದೆ. ಎರಡೂವರೆ- ಮೂರು ಸಾವಿರ ಜನ ಪ್ರಸಾದ ಸ್ವೀಕರಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಟ್ರಸ್ಟ್‌ನಲ್ಲಿ ಕಾರ್ಯದರ್ಶಿ ಅಶೋಕ್‌ಕುಮಾರ್ ಶೆಟ್ಟಿ, ಖಜಾಂಚಿ ರಾಜೇಂದ್ರ ಶೆಟ್ಟಿ, ಉಪಾಧ್ಯಕ್ಷರಾಗಿ ಎ.ಸಿ.ಹೆಬ್ಬಾರ್‌ ಸೇರಿದಂತೆ 11 ಮಂದಿ ಸುಂದರ ರಾಮ ಶೆಟ್ಟಿ ನಗರ ಅಯ್ಯಪ್ಪ ಸ್ವಾಮಿ ಟೆಂಪಲ್‌ ಟ್ರಸ್ಟ್‌ನಲ್ಲಿದ್ದಾರೆ.