ಹೂ-ಹಣ್ಣು ದರ ಏರಿಕೆ ನಡುವೆ ವರಮಹಾಲಕ್ಷ್ಮೀ ಹಬ್ಬಕ್ಕೆ ಖರೀದಿ ಭರಾಟೆ

| Published : Aug 06 2025, 01:45 AM IST

ಸಾರಾಂಶ

ವರಮಹಾಲಕ್ಷ್ಮಿ ಹಬ್ಬಕ್ಕೆ ನಗರದ ಮಾರುಕಟ್ಟೆ ಕಳೆಗಟ್ಟಿದ್ದು, ಹೂ-ಹಣ್ಣುಗಳ ದರ ವಿಪರೀತ ಏರಿಕೆ ನಡುವೆ ಖರೀದಿ ಭರಾಟೆ ಜೋರಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವರಮಹಾಲಕ್ಷ್ಮಿ ಹಬ್ಬಕ್ಕೆ ನಗರದ ಮಾರುಕಟ್ಟೆ ಕಳೆಗಟ್ಟಿದ್ದು, ಹೂ-ಹಣ್ಣುಗಳ ದರ ವಿಪರೀತ ಏರಿಕೆ ನಡುವೆ ಖರೀದಿ ಭರಾಟೆ ಜೋರಾಗಿದೆ.

ಹಬ್ಬದ ಹಿಂದಿನ ದಿನ ದರ ಇನ್ನೂ ಹೆಚ್ಚುವ ಕಾರಣದಿಂದ ಮಂಗಳವಾರವೇ ಕೆ.ಆರ್. ಮಾರುಕಟ್ಟೆಯಲ್ಲಿ ಹೂವು ಖರೀದಿಸಲು ಆಗಮಿಸಿದ್ದ ಗ್ರಾಹಕರ ಸಂದಣಿ ಹೆಚ್ಚಾಗಿತ್ತು. ಜತೆಗೆ ಮಲ್ಲೇಶ್ವರ, ಗಾಂಧಿಬಜಾರ್, ಯಶವಂತಪುರ, ಮಡಿವಾಳ ಮಾರುಕಟ್ಟೆ, ಮಾಗಡಿ ರಸ್ತೆ ಸೇರಿದಂತೆ ಬಡಾವಣೆಗಳಲ್ಲಿ ಇರುವ ಸ್ಥಳೀಯ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ನಗರದ ಹಲವು ಬಡಾವಣೆಗಳಲ್ಲಿ ದಿಢೀರ್‌ ಮಿನಿ ಮಾರುಕಟ್ಟೆಗಳು ಕೂಡ ತಲೆ ಎತ್ತಿವೆ.

ವಿಶೇಷವಾಗಿ ಕನಕಾಂಬರ ಹೂವಿಗೆ ಬೆಲೆ ತೀವ್ರ ಜಾಸ್ತಿಯಾಗಿದೆ. ಮಲ್ಲಿಗೆ, ಸಂಪಿಗೆ ಸೇರಿದಂತೆ ಹಲವು ಬಗೆಯ ಹೂವುಗಳಿಗೆ ಬೇಡಿಕೆ ಜತೆಗೆ ದರವೂ ಅಧಿಕವಾಗಿತ್ತು. ಲಕ್ಷ್ಮೀ ದೇವಿ, ಪ್ರಭಾವಳಿ ಅಲಂಕಾರಕ್ಕೆ ಬಳಸಲ್ಪಡುವ ಸೇವಂತಿಗೆ, ಡೇರೆ ಹೂವು, ಗುಲಾಬಿ, ತಾವರೆ ಹೂವು, ಕೇದಿಗೆ, ಮಲ್ಲಿಗೆ ಹೂವು ದರಗಳೂ ದುಬಾರಿಯಾಗಿವೆ. ಅದರೂ ಖರೀದಿ ಸಂಭ್ರಮ ಕಡಿಮೆಯಾಗಿರಲಿಲ್ಲ. ಜತೆಗೆ ಕಳಸ ಇಡುವವರು ಲಕ್ಷ್ಮಿಗೆ ಉಡಿಸಲು ಸೀರೆ-ಕುಪ್ಪಸ, ಲಕ್ಷ್ಮಿ ಮೂರ್ತಿ, ಬೆಳ್ಳಿಯ ಲಕ್ಷ್ಮಿ ಮುಖವಾಡ ಖರೀದಿಸುತ್ತಿರುವುದು ಕಂಡು ಬಂತು.

ಮಳೆಯಿಂದ ಹೂವು ಹಾಳು

ಹಬ್ಬಕ್ಕೆ ಸರಿಯಾಗಿ ಹೂವಿನ ಕೊಯ್ಲು ಮಾಡುವಾಗಲೇ ಮಳೆ ಹೆಚ್ಚಾಗಿರುವ ಕಾರಣದಿಂದ ಬೆಳೆ ಹಾಳಾಗಿದೆ. ಕೊಯ್ಲಿಗೆ ಬಂದಿರುವ ಹೂವು ನೀರು, ತೇವದಿಂದ ಕೆಡುತ್ತಿದೆ. ಹೂವು ಕಿತ್ತ ದಿನವೇ ಮಾರಾಟ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಇಲ್ಲದಿದ್ದರೆ ಕೊಳೆತು ನಷ್ಟವಾಗುತ್ತಿದೆ. ಪಾಲಿಹೌಸ್‌ನಲ್ಲಿ ಬೆಳೆದ ಹೂವುಗಳು ಎರಡು-ಮೂರು ದಿನ ಇಟ್ಟರೂ ಹಾಳಾಗಲ್ಲ, ಆದರೆ, ಇವುಗಳ ಬೆಲೆ ಮತ್ತಷ್ಟು ದುಬಾರಿಯಾಗಿದೆ.

ಬೆಲೆ ಏರಿಕೆ ಕುರಿತು ಮಾತನಾಡಿದ ಕೆ.ಆರ್. ಮಾರುಕಟ್ಟೆ ಹೂವು ವ್ಯಾಪಾರಸ್ಥರು, ಮಲ್ಲಿಗೆ ಸೇರಿ ಇತರ ಹೂವುಗಳು ತಮಿಳುನಾಡಿನಿಂದ ಬರುತ್ತಿತ್ತು. ಆದರೆ, ಅಲ್ಲಿಯೂ ಈ ಬಾರಿ ಬೆಳೆ ಹಾಳಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರ, ಕೋಲಾರ ಸೇರಿ ಬೆಂಗಳೂರು ಸುತ್ತಮುತ್ತಲ ಕಡೆಯಿಂದ ಹೂವನ್ನು ನೆಚ್ಚಿಕೊಳ್ಳಬೇಕಿದ್ದು, ಮಾರುಕಟ್ಟೆ ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಆಗದಿರುವ ಕಾರಣ ಬೆಲೆ ಹೆಚ್ಚಾಗಿದೆ ಎಂದರು.

ಹಣ್ಣುಗಳ ದರವೂ ದುಬಾರಿ

ಹಣ್ಣು ದರ (₹)

ಏಲಕ್ಕಿ ಬಾಳೆ 120- 140

ಸೀಬೆ 100

ಮೂಸಂಬಿ 120

ದಾಳಿಂಬೆ 250-300

ಸೇಬು 250- 300

ಅನಾನಸ್ ಜೋಡಿಗೆ ₹ 60

ಕೆ.ಆರ್. ಮಾರುಕಟ್ಟೆಯಲ್ಲಿ ಬಿಡಿ ಹೂವು ದರ (ಕೇಜಿ)

ಹೂವು ದರ (₹)

ಕನಕಾಂಬರ 1200-1500

ಮಲ್ಲಿಗೆ, ಮಳ್ಳೆ ಹೂವು600-800

ಕಾಕಡ ಹೂವು600-700

ಸೇವಂತಿಗೆ ಹೂವು250

ಗುಲಾಬಿ ಹೂವ 250

ಕಣಿಗಲೆ ಹೂವು250

ಬಟನ್ಸ್ ಹೂವು300

ಸುಗಂಧರಾಜ 180-200

ಕೇದಗೆ ಒಂದಕ್ಕೆ60

ತಾವರೆ ಹೂವು (ಜೋಡಿಗೆ) 100

ಬಾಳೆಕಂಬ (ಚಿಕ್ಕ ಜೋಡಿ) 60