ಎಲ್ಲರೂ ಮಾಡಬಹುದಾದ ಸರಳ ಯೋಗ ಆಸನಗಳು : ಸೂರ್ಯನಿಗೆ ಅನುದಿನ ನಮಸ್ಕರಿಸಿ

| N/A | Published : Jun 21 2025, 11:00 AM IST

surya namaskara
ಎಲ್ಲರೂ ಮಾಡಬಹುದಾದ ಸರಳ ಯೋಗ ಆಸನಗಳು : ಸೂರ್ಯನಿಗೆ ಅನುದಿನ ನಮಸ್ಕರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

-ಆಸನಗಳನ್ನು ಮಾಡುವ ವೇಳೆ ಎಲ್ಲಾ ಅಂಗಾಂಗಗಳನ್ನು ಉಪಯೋಗಿಸುವ ಕಾರಣ, ಬಿಗಿದ ಸ್ನಾಯುಗಳು ಸಡಿಲವಾಗಿ, ಕೀಲುಗಳ ಚಲನೆಯಾಗಿ ದೇಹವು ಫ್ಲೆಕ್ಸಿಬಲ್‌ ಆಗುತ್ತದೆ. ಅಂತೆಯೇ, ರಕ್ತ ಚಲನೆಯೂ ಸರಾಗವಾಗುತ್ತದೆ.

ಸುಖಾಸನ: ಪ್ರಯಾಸದಾಯಕವಲ್ಲದ ಸುಖಾಸನ ಮಾಡಲು ಎರಡೂ ಕಾಲುಗಳನ್ನು ಮಡಚಿ ನೆಲದ ಮೇಲೆ ನೇರವಾಗಿ ಕೂರಬೇಕು. ಇದರಿಂದ ಬೆನ್ನೆಲುಬು, ಭುಜ, ಸೊಂಟದ ಬಾಗುವಿಕೆ ನಿವಾರಣೆಯಾಗುತ್ತದೆ. ಜತೆಗೆ ಮನಸ್ಸು ಶಾಂತವಾಗಿ ಏಕಾಗ್ರತೆ ವೃದ್ಧಿಸುತ್ತದೆ.

ಪದ್ಮಾಸನ: ಇದು ಸುಖಾಸನವನ್ನು ಹೋಲುತ್ತದಾದರೂ ಅದಕ್ಕಿಂತ ಕೊಂಚ ಜಟಿಲ. ಪದ್ಮಾಸನದಲ್ಲಿ 10ರಿಂದ 15 ನಿಮಿಷ ಕೂರುವುದರಿಂದ ದೇಹದ ಭಂಗಿ ಸರಿಯಾಗುತ್ತದೆ. ಜತೆಗೆ ಕೀಲುಗಳೂ ಸಡಿಲವಾಗಿ, ಫ್ಲೆಕ್ಸಿಬಲ್‌ ಆಗುತ್ತವೆ. ಮಾನಸಿಕ ಶಾಂತಿ, ಆತಂಕ ನಿವಾರಣೆಗೂ ಸಹಕಾರಿ.

ವಜ್ರಾಸನ: ಮಂಡಿಗಳನ್ನು ನೆಲಕ್ಕೆ ಊರಿ, ಹಿಮ್ಮಡಿಗಳ ಮೇಲೆ ಕುಳಿತುಕೊಳ್ಳಬೇಕು. ಈ ಆಸನವು ಜೀರ್ಣಕ್ರಿಯನ್ನು ಉತ್ತಮಗೊಳಿಸುವ ಕಾರಣ, ಊಟವಾದ ಬಳಿಕ 10 ನಿಮಿಷ ಅಭ್ಯಾಸ ಮಾಡಲು ಶಿಫಾರಸು ಮಾಡಲಾಗುತ್ತದೆ. ಜತೆಗೆ ಬೆನ್ನು ನೋವು ನಿವಾರಣೆಯಲ್ಲೂ ಪರಿಣಾಮಕಾರಿ.

ಬಾಲಾಸನ: ವಜ್ರಾಸನದಲ್ಲಿ ಕುಳಿತು, ಎರಡೂ ಕೈಗಳನ್ನು ಮುಂದೆ ಚಾಚಿ, ನೆಲ ಸ್ಪರ್ಷಿಸುವಂತೆ ಮುಂದೆ ಬಾಗಬೇಕು. ಹೀಗೆ ಮಾಡುವುದರಿಂದ ಭುಜ, ಬೆನ್ನು, ಸೊಂಟದ ಸಮಸ್ಯೆಗಳು ಇಲ್ಲವಾಗುತ್ತವೆ. ಜತೆಗೆ ಇದು ನರಮಂಡಲವನ್ನು ಶಾಂತಗೊಳಿಸುತ್ತದೆ ಹಾಗೂ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸುತ್ತದೆ.

ಗೋಮುಖಾಸನ: ಎರಡೂ ಕಾಲುಗಳನ್ನು ಒಂದರಮೇಲೊಂದು ಇರಿಸಿ, ಎರಡೂ ಕೈಗಳು ಬೆನ್ನಿನ ಹಿಂದೆ ಸಂಧಿಸುವಂತೆ ಇರಬೇಕು. ಹೀಗೆ ಮಾಡುವುದರಿಂದ ಎದೆ, ಭುಜ, ಸೊಂಟ ಹಿಗ್ಗುತ್ತದೆ. ಕೈಗಳು ಫ್ಲೆಕ್ಸಿಬಲ್‌ ಆಗುತ್ತವೆ.

ತಾಡಾಸನ: ನೇರವಾಗಿ ನಿಂತು, ಬೆರಳುಗಳನ್ನು ಪರಸ್ಪರ ಬೆಸೆದು, ಎರಡೂ ಕೈಗಳನ್ನು ಸಾಧ್ಯವಾದಷ್ಟು ಮೇಲೆ ಎತ್ತಬೇಕು. ಇದರಿಂದ ದೇಹದ ವಿನ್ಯಾಸ ಉತ್ತಮವಾಗುವುದರ ಜತೆಗೆ ದೇಹದ ಕೆಳಭಾಗ ಬಲಗೊಳ್ಳುತ್ತದೆ. ಪಾರ್ಕಿನ್‌ಸನ್‌ ಕಾಯಿಲೆ ಬರುವ ಸಂಭವವನ್ನು ನೀಗಿಸಬಲ್ಲದು.

ವೃಕ್ಷಾಸನ: ನೇರವಾಗಿ ನಿಂತು, ಒಂದು ಪಾದವನ್ನು ಇನ್ನೊಂದು ಕಾಲಿನ ತೊಡೆಯ ಮೇಲಿರಿಸಿ, ಕೈಗಳೆರಡನ್ನೂ ನಮಸ್ಕಾರ ಮುದ್ರೆಯಲ್ಲಿ ಮೇಲೆತ್ತಬೇಕು. ಈ ಆಸನದಿಂದ ದೇಹದ ಸಮತೋಲನ, ಸ್ಥಿರತೆ ಸಾಧಿಸಲು ಸಾದ್ಯವಾಗುತ್ತದೆ. ಕಾಲಿನ ಮಾಂಸಖಂಡಗಳು ಬಲಗೊಳ್ಳುತ್ತವೆ.

ವೀರಭದ್ರಾಸನ: ತಾಡಾಸನದಲ್ಲಿ ನಿಂತು ಒಂದು ಮೊಣಕಾಲನ್ನು ಮುಂದೆ ಬಾಗಿಸಿ, ಇನ್ನೊಂದು ಕಾಲನ್ನು ಹಿಂದೆ ಇಟ್ಟು, ಕೈಗಳನ್ನು ನಮಸ್ಕಾರ ಮುದ್ರೆಯಲ್ಲಿ ಮೇಲೆತ್ತಬೇಕು. ಇದು ದೇಹದ ಸಮತೋಲನ ಸುಧಾರಿಸಿ, ಶಕ್ತಿಯನ್ನು ಹೆಚ್ಚಿಸುತ್ತದೆ.

ಭುಜಂಗಾಸನ: ಹೊಟ್ಟೆಯ ಬಲದಲ್ಲಿ ಮಲಗಿ, ಹಾವಿನ ಹೆಡೆಯಂತೆ ಭುಜಗಳನ್ನು ಮೇಲೆತ್ತಬೇಕು. ಇದು ಬೆನ್ನುಮೂಳೆಯ ಸ್ವಾಸ್ಥ್ಯಕ್ಕೆ ಅತ್ಯುತ್ತಮ ಆಸನ. ಜತೆಗೆ ಉಸಿರಾಟವನ್ನೂ ಸರಾಗಗೊಳಿಸುತ್ತದೆ.

ಶವಾಸನ: ಯೋಗಾಭ್ಯಾಸದ ಬಳಿಕ ಕಡ್ಡಾಯ ಹಾಗೂ ಸರ್ವರ ಪ್ರಿಯವಾದ ಆಸನವಿದು. ನೆಲದ ಮೇಲೆ ಅಂಗಾತ ಮಲಗಿ, ಕೈಗಳನ್ನು ದೇಹದ ಪಕ್ಕದಲ್ಲಿಟ್ಟುಕೊಂಡು ಉಸಿರಾಟದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು. ಹೀಗೆ ಮಾಡುವುದರಿಂದ ಉಸಿರಾಟ ಸ್ಥಿಮಿತಕ್ಕೆ ಬಂದು, ನರಮಂಡಲದ ಕೆಲಸ ಉತ್ತಮಗೊಳ್ಳುತ್ತದೆ. ಇದು ಉತ್ತಮ ನಿದ್ರೆಗೂ ಸಹಕಾರಿ.

ದೇಹಕ್ಕೆ ಯೋಗಾಸನದಿಂದ

ಆಗುವ ಪ್ರಯೋಜನಗಳೇನು?

-ಆಸನಗಳನ್ನು ಮಾಡುವ ವೇಳೆ ಎಲ್ಲಾ ಅಂಗಾಂಗಗಳನ್ನು ಉಪಯೋಗಿಸುವ ಕಾರಣ, ಬಿಗಿದ ಸ್ನಾಯುಗಳು ಸಡಿಲವಾಗಿ, ಕೀಲುಗಳ ಚಲನೆಯಾಗಿ ದೇಹವು ಫ್ಲೆಕ್ಸಿಬಲ್‌ ಆಗುತ್ತದೆ. ಅಂತೆಯೇ, ರಕ್ತ ಚಲನೆಯೂ ಸರಾಗವಾಗುತ್ತದೆ.

-ಕೆಲ ಆಸನಗಳನ್ನು ಮಾಡುವಾಗ ಒಂದೇ ಕಾಲಿನ ಮೇಲೆ, ಕೈಗಳ ಆಧಾರದಲ್ಲಿ ನಿಲ್ಲುವುದು ಇತ್ಯಾದಿಗಳನ್ನು ಮಾಡುವುದರಿಂದ ದೇಹದ ಸಮತೋಲನ ಸುಧಾರಣೆ ಆಗುತ್ತದೆ.

-ಯೋಗಾಸನ ಮಾಡುವಾಗ ಮೈಕೈ ನೋಯುತ್ತದೆ ಎನ್ನುವುದು ಕೆಲವರ ದೂರಾದರೆ, ಯೋಗದಿಂದ, ನಮಗಿದ್ದ ಬೆನ್ನು, ಸೊಂಟ, ಕೈಕಾಲು ನೋವು, ಸಂಧಿವಾತ ನಿವಾರಣೆಯಾಗಿದೆ ಎಂಬುದು ಹಲವರ ಅನುಭವ.

-ಪ್ರಾಣಾಯಾಮದಿಂದ ಉಸಿರಾಟ ಕ್ರಿಯೆಯ ಮೇಲೆ ನಿಯಂತ್ರಣ ಸಾಧನೆ ಸಾಧ್ಯವಾಗುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುವುದಲ್ಲದೆ, ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ.

ನಮ್ಮ ಮನಸ್ಸಿನ ಮೇಲೆ

ಯೋಗದ ಮ್ಯಾಜಿಕ್‌!

ಸಣ್ಣ ವಯಸ್ಸಿನಲ್ಲೇ ಸರ್ವೇಸಾಮಾನ್ಯವಾಗಿರುವ ಮಾನಸಿಕ ಸಮಸ್ಯೆಗಳಿಗೆ ಯೋಗದಿಂದ ಸಮಾಧಾನ ಸಾಧ್ಯ. ಆಸನಗಳನ್ನು ಮಾಡುವ ವೇಳೆ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವ ಕಲೆ ಸಿದ್ಧಿಸುವುದರಿಂದ, ನಮ್ಮ ಮನಃಸ್ಥಿತಿಗಳ ಮೇಲೆಯೂ ಹಿಡಿತ ಸಾಧಿಸುವುದು ಸುಲಭವಾಗುತ್ತದೆ. ವ್ಯಾಯಾಮ ಮತ್ತು ನಿಯಂತ್ರಿತ ಉಸಿರಾಟದಿಂದ ಖಿನ್ನತೆ, ಒತ್ತಡ, ಆತಂಕ ಇತ್ಯಾದಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಜ್ಞಾಪಕ ಶಕ್ತಿ ವೃದ್ಧಿ, ಏಕಾಗ್ರತೆ ಮತ್ತು ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಲು ಸಹ ಯೋಗಾಸನ ಸಹಕಾರಿ.

ಸೂರ್ಯನಿಗೆ ಅನುದಿನ

108 ನಮಸ್ಕಾರ ಹಾಕಿ

ಶಕ್ತಿಯ ಮೂಲವಾದ ಸೂರ್ಯದೇವ ಉದಯಿಸುವ ಹೊತ್ತಿನಲ್ಲಿ, ಆತನ ಕಡೆ ಮುಖ ಮಾಡಿ ಸೂರ್ಯನಮಸ್ಕಾರ ಮಾಡುವುದರಿಂದ ಇಡೀ ದಿನಕ್ಕೆ ಸಾಲುವಷ್ಟು ಚೈತನ್ಯ ನಮ್ಮದಾಗುತ್ತದೆ. ಯೋಗದಲ್ಲಿರುವ ಎಲ್ಲಾ 84 ಆಸನಗಳನ್ನು ನಿತ್ಯ ಮಾಡಲು ಸಾಧ್ಯವಾಗದಿದ್ದರೂ, ಈ 12 ಆಸನಗಳನ್ನು ದಿನನಿತ್ಯ 108 ಬಾರಿ ಮಾಡುವುದರಿಂದ ಅವುಗಳ ಪೂರ್ಣ ಲಾಭವನ್ನು ಪಡೆಯಬಹುದು. ಶುರುವಿನಲ್ಲಿ 3ರಿಂದ 5 ಸುತ್ತು ಸೂರ್ಯನಮಸ್ಕಾರ ಮಾಡುವುದು ಸೂಕ್ತ.

ಪ್ರಾಣಿ ಪ್ರಪಂಚದಲ್ಲೂ ಇದೆ

ಯೋಗಾಸನ ಅಭ್ಯಾಸ!

ಮೂಳೆಗಳೇ ಇಲ್ಲದ ಜಲವಾಸಿ ಆಕ್ಟೋಪಸ್‌, ನುಲಿಯುತ್ತಲೇ ಚಲಿಸುವ ಸರಿಸೃಪಗಳನ್ನು ಹೊರತುಪಡಿಸಿದರೆ, ಬೆಕ್ಕನ್ನು ವಿಶ್ವದಲ್ಲೇ ಅತಿ ಫ್ಲೆಕ್ಸಿಬಲ್‌ ಪ್ರಾಣಿ ಎಂದು ಗುರುತಿಸಲಾಗುತ್ತದೆ. ಅದು ಮಾಡುವಷ್ಟು ಕಸರತ್ತುಗಳನ್ನು ಇನ್ಯಾವ ಪ್ರಾಣಿಯೂ ಮಾಡಲಾಗದು. ‘ಮಾರ್ಜಾಲಾಸನ’ ಎಂಬೊಂದು ಆಸನವೇ ಇದೆ ಎನ್ನುವುದನ್ನು ಮರೆಯಲಾಗದು. ಇನ್ನು ನಾಯಿಗಳ ಹೆಸರಲ್ಲಿ ‘ಊರ್ಧ್ವ ಮುಖ ಶ್ವಾನಾಸನ’, ಹೆಡೆಯೆತ್ತಿದ ಹಾವನ್ನು ಹೋಲುವ ‘ಭುಜಂಗಾಸನ’, ಹಲ್ಲಿಯಂತೆ ಕಾಣುವ ‘ಉತ್ಥಾನ ಪೃಷ್ಠಾಸನ’, ಹಸುಗಳಂತೆ ‘ಬಿಟಿಲಾಸನ’, ಮಂಗಗಳಿಗೆ ಮೀಸಲಾದ ‘ಹನುಮಾನಾಸನ’, ಒಂದು ಕಾಲಲ್ಲಿ ನಿಂತ ಪಾರಿವಾಳದಂತೆ ‘ಏಕ ಪದ ರಾಜಕಪೋತಾಸನ’, ‘ಮಂಡೂಕಾಸನ’, ‘ಗರುಡಾಸನ’, ‘ಮತ್ಸ್ಯಾಸನ’ ಇತ್ಯಾದಿಗಳು ಪ್ರಾಣಿಗಳಿಂದ ಪ್ರೇರಿತ ಆಸನಗಳಾಗಿವೆ.

11 ವರ್ಷ ಎಲ್ಲೆಲ್ಲಿ ನಡೆದಿದ್ದವು?

2015- ನವದೆಹಲಿ

2016- ಚಂಡೀಗಢ

2017-ಲಖನೌ

2018- ಡೆಹ್ರಾಡೂನ್‌

2019- ರಾಂಚಿ

2020- ಲೇಹ್‌

2021-ಚಾಂಗ್ಲಾಂಗ್(ಅರುಣಾಚಲ ಪ್ರದೇಶ)

2022- ಮೈಸೂರು

2023- ಜಬಲ್ಪುರ(ಮಧ್ಯಪ್ರದೇಶ)

2024- ಕಾರ್ಗಿಲ್‌

2025- ವಿಶಾಖಪಟ್ಟಣಂ

Read more Articles on