ಸಾರಾಂಶ
- ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್ ಭೈರಪ್ಪ ಅಭಿಮತ
- ಭಾರತ ರತ್ನ ಸರ್.ಎಂ.ವಿ ಪುಸ್ತಕದ ಕನ್ನಡ ಅನುವಾದ ಕೃತಿ ಲೋಕಾರ್ಪಣೆ---
ಕನ್ನಡಪ್ರಭ ವಾರ್ತೆ ಮೈಸೂರುಯಾವ ಪ್ರತಿಫಲಾಪೇಕ್ಷೆಯನ್ನೂ ಮಾಡದ ಸರ್.ಎಂ. ವಿಶ್ವೇಶ್ವರಯ್ಯ ಅವರು, ತಮ್ಮ ಜ್ಞಾನವನ್ನು ಮಾರಿಕೊಳ್ಳಲು ಇಷ್ಟಪಡಲಿಲ್ಲ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಹೇಳಿದರು.
ನಗರದ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕಸಾಪ ಬುಧವಾರ ಆಯೋಜಿಸಿದ್ದ ಡಾ.ಡಿ.ಎಸ್. ಜಯಪ್ಪಗೌಡ ಅವರ ಆಂಗ್ಲ ಭಾಷೆಯ ಭಾರತ ರತ್ನ ಸರ್.ಎಂ.ವಿ ಪುಸ್ತಕದ ಕನ್ನಡ ಅನುವಾದ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಅವರೊಬ್ಬ ತಪಸ್ವಿಯಂತೆ. ತಮ್ಮ ಕೆಲಸಕ್ಕೆ ಪ್ರತಿಫಲಾಪೇಕ್ಷೆ ನಿರೀಕ್ಷಿಸಲಿಲ್ಲ. ಕೆ.ಆರ್.ಎಸ್ ಅಣೆಕಟ್ಟೆಗೆ ಸ್ವಯಂ ಚಾಲಿತ ಗೇಟ್ ನಿರ್ಮಿಸಿದಾಗ, ಆ ತಂತ್ರಜ್ಞಾನವನ್ನು ಅಮೆರಿಕ ಬಳಸಿಕೊಂಡಿತು. ಇದರ ಹಕ್ಕು ಸ್ವಾಮ್ಯವನ್ನೂ ಕೂಡ ವಿಶ್ವೇಶ್ವರಯ್ಯ ಅವರು ಕೇಳಲಿಲ್ಲ. ಜ್ಞಾನ ಇಡೀ ಪ್ರಪಂಚಕ್ಕೆ ಸಲ್ಲಬೇಕು ಎಂದು ಸುಮ್ಮನಾಗಿದ್ದಾಗಿ ಅವರು ಹೇಳಿದರು.
ಹಾಗೆ ನೋಡಿದರೆ ವಿಶ್ವೇಶ್ವರಯ್ಯ ಒಂದು ರೀತಿಯಲ್ಲಿ ಸನ್ಯಾಸಿ. ಭದ್ರಾವತಿ ಕಬ್ಬಿಣ ಕಾರ್ಖಾನೆ, ಪೇಪರ್ ಮಿಲ್ ಆರಂಭಿಸಿದಾಗ ವಿಶ್ವೇಶ್ವರಯ್ಯ ಹೆಸರು ನಾಮಕರಣಕ್ಕೆ ಮಹಾರಾಜರು ಮುಂದಾದಾಗ ಅದನ್ನು ನಿರಾಕರಿಸಿದರು. ಒಮ್ಮೆ ಪತ್ರಿಕೆಯವರು ಕರ್ನಾಟಕದಲ್ಲಿ ಜನರ ಪ್ರೀತಿ ವ್ಯಕ್ತಿಯ ಸರ್ವೇ ನಡೆಸಿದಾಗ ಡಾ. ರಾಜಕುಮಾರ್ ಅವರಿಗೆ ಶೇ. 21 ಮತ ಬಂದರೆ, ವಿಶ್ವೇಶ್ವರಯ್ಯ ಅವರಿಗೆ ಶೇ. 51 ಮತ ಬಂದಿತ್ತು. ಭಾರತದ ಮಟ್ಟದ ಸರ್ವೇಯಲ್ಲೂ ಇದು ಪುನರಾವರ್ತನೆಯಾಯಿತು ಎಂದು ಅವರು ವಿವರಿಸಿದರು.ಜವಾಹರ್ ಲಾಲ್ ನೆಹರು ಅವರು ವಿಶ್ವೇಶ್ವರಯ್ಯ ಅವರಿಗೆ ಭಾರತ ರತ್ನ ನೀಡಲು ಆಯ್ಕೆ ಮಾಡಿದಾಗ ಪ್ರಶಸ್ತಿ ಸ್ವೀಕರಿಸುತ್ತೇನೆ. ಅಂದ ಮಾತ್ರಕ್ಕೆ ನಿಮ್ಮ ಆರ್ಥಿಕ ನೀತಿ ಬೆಂಬಲಿಸುವುದಾಗಿ ತಿಳಿಯಬಾರದು ಎಂದಿದ್ದಾಗಿ ಹೇಳಿದರು.
ಕರ್ನಾಟಕದಲ್ಲಿ ಒಂದು ಗುಂಪು ಹುಟ್ಟಿಕೊಂಡು, ಆ ಗುಂಪು ಸಾಹಿತ್ಯದ ಒಳಗೂ ಇದೆ. ಚೆನ್ನಾಗಿ ಬರೆಯೋರ ಮುಖಕ್ಕೆ ಮಸಿ ಬಳಿಯುತ್ತಾರೆ. ಜಯಪ್ಪ ಗೌಡರ ವಿಶ್ವೇಶ್ವರಯ್ಯ ಪುಸ್ತಕಕ್ಕೂ ಏಕವಚನದ ಭಾಷಾ ಪ್ರಯೋಗ ಮಾಡಿದ್ದಾಗಿ ಅವರು ಟೀಕಿಸಿದರು.ಅಣೆಕಟ್ಟೆ ಬಳಿ ಕಾಮಗಾರಿ ಬೇಡ
ಕೃತಿ ಕುರಿತು ಮಾತನಾಡಿದ ಇತಿಹಾಸ ತಜ್ಞ ಡಾ.ಎನ್.ಎಸ್. ರಂಗರಾಜು, ಕನ್ನಂಬಾಡಿ ಅಣೆಕಟ್ಟೆ ಬಳಿ ಡಿಸ್ನಿಲ್ಯಾಂಡ್ ನಿರ್ಮಾಣದಂತ ಯಾವುದೇ ಕಾಮಗಾರಿ ಮಾಡಬಾರದು ಎಂದು ಮನವಿ ಮಾಡಿದರು.124 ಅಡಿ ಸಾಮರ್ಥ್ಯದ ಅಣೆಕಟ್ಟೆಗೆ 111 ಅಡಿ ಆಳದವರೆಗೆ ಫೌಂಡೇಷನ್ ಹಾಕಲಾಗಿದೆ. 14.25 ಅಡಿ ಅಗಲದ ಬೇಸಮೆಂಟ್ ಇದೆ. ಇಂದಿಗೂ ಸಣ್ಣ ಸೋರಿಕೆಯಾಗದಂತೆ ಜಾಗ್ರತೆ ವಹಿಸಲಾಗುತ್ತಿದೆ. ಅಣೆಕಟ್ಟೆಯ ಒಂದು ಕಲ್ಲು ಅಲುಗಾಡಿದರೂ ತೊಂದರೆ ಎಂದು ಅವರು ಹೇಳಿದರು.
ದಿವಾನರಾಗಿ ನಿಷ್ಠೆಯಿಂದ ಕೆಲಸ ಮಾಡಿದ ವಿಶ್ವೇಶ್ವರಯ್ಯ ಅವರಿಗೆ ಕಪ್ಪು ಚುಕ್ಕೆ ಇಲ್ಲ. ವಿಶ್ವೇಶ್ವರಯ್ಯ-ನಾಲ್ವಡಿ ಅವರ ಪತ್ರ ವ್ಯವಹಾರವನ್ನು ಕೃತಿಯಲ್ಲಿ ದಾಖಲಿಸಲಾಗಿದೆ. ವಿಶ್ವೇಶ್ವರಯ್ಯ ಅವರ ವೈಯಕ್ತಿಕ ಜೀವನವನ್ನು ದಾಖಲಾಗಿದೆ ಎಂದು ಅವರು ವಿವರಿಸಿದರು.ಮೈಸೂರಿನಲ್ಲಿ ಬ್ರಿಟಿಷರ ಆಡಳಿತ ಪ್ರಾರಂಭವಾಗಿದ್ದು 1831 ರಿಂದ ಕೃತಿಯಲ್ಲಿ 1815 ಎಂದಾಗಿದೆ. ಮೊಘಲರು, ಮರಾಠರು ಮತ್ತು ವಿಜಯನಗರ ಸಾಮ್ರಾಜ್ಯದ ಬಗ್ಗೆ ಚರ್ಚೆ ಅಗತ್ಯ ಇಲ್ಲ. ಮುಂದಿನ ಮುದ್ರಣದಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ರಂಗರಾಜು ಸಲಹೆ ನೀಡಿದರು.
ಎಂಜಿನಿಯರ್ ಗಳ ಸಂಸ್ಥೆ ಅಧ್ಯಕ್ಷೆ ಡಾ.ಆರ್. ದೀಪು ಅಧ್ಯಕ್ಷತೆ ವಹಿಸಿದ್ದರು. ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಉದ್ಯಮಿ ಎ.ಎಸ್. ಸತೀಶ್, ಲೇಖಕ ಡಾ.ಡಿ.ಎಸ್. ಜಯಪ್ಪಗೌಡ, ಎನ್. ಅಮುದ ಪರಮೇಶ್ವರ್ ಇದ್ದರು.ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.