ಸಾರಾಂಶ
ಬೆಂಗಳೂರು : ಸಮಾಜದ ದೊಡ್ಡ ದೊಡ್ಡ ವ್ಯಕ್ತಿಗಳ ಅಕ್ರಮ, ಅನಾಚಾರಕ್ಕೆ ಕಠಿಣ ಶಿಕ್ಷೆ ಕೊಡಿಸಲು ವಿಶೇಷ ಕಾನೂನು ರೂಪಿಸುವ ಅಗತ್ಯವಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಭಾರತೀಯ ವಿದ್ಯಾ ಭವನದಲ್ಲಿ ಆಯೋಜಿಸಿದ್ದ ಡಾ। ಶಿವಕುಮಾರ ಸ್ವಾಮೀಜಿಗಳ 118ನೇ ಜಯಂತ್ಯೋತ್ಸವ ಹಾಗೂ ನ್ಯಾ.ಶಿವರಾಜ ಪಾಟೀಲರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಿಕ್ ಪಾಕೆಟ್ ಮಾಡುವವರು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾವು ಆರೋಪಿಸುತ್ತೇವೆ. ಆದರೆ ಪರಮೋಚ್ಛ ಶಿಷ್ಟಾಚಾರ ಅನುಭವಿಸುವವರೇ ತಪ್ಪು ಮಾಡುತ್ತಿದ್ದಾರೆ. ಇಂತಹವರಿಗೆ ಕಠಿಣ ಶಿಕ್ಷೆ ವಿಧಿಸಲು ವಿಶೇಷ ಕಾನೂನು ರೂಪಿಸುವ ಅಗತ್ಯವಿದೆ. ಇಲ್ಲದಿದ್ದರೆ ದೊಡ್ಡವರು ಮಾಡುವ ತಪ್ಪುಗಳನ್ನು ಸಣ್ಣವರೂ ಮಾಡಿದರೆ ಸಮಾಜ ಎಲ್ಲಿಗೆ ತಲುಪುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಶೇಷ ಕಾನೂನು ರೂಪಿಸಲು ನ್ಯಾಯಾಂಗ ಕ್ಷೇತ್ರದ ಗಣ್ಯರು ಸೂಕ್ತ ಮಾರ್ಗದರ್ಶನ ನೀಡಬೇಕು. ನ್ಯಾಯಮೂರ್ತಿ ಶಿವರಾಜ್ ಪಾಟೀಲರಿಂದಾಗಿಯೇ ರಾಜ್ಯದಲ್ಲಿ ಮಾನವ ಹಕ್ಕುಗಳ ಆಯೋಗ ಸ್ಥಾಪನೆಯಾಯಿತು. ನ್ಯಾ.ಪಾಟೀಲರು ಸಕಾರಾತ್ಮಕ ಚಿಂತನೆ ಉಳ್ಳವರಾಗಿದ್ದಾರೆ. ಸರ್ಕಾರ ಮತ್ತು ಸಮಾಜಕ್ಕೆ ಬಹು ದೊಡ್ಡ ಆಸ್ತಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ಧಗಂಗಾ ಮಠದ ಡಾ। ಶಿವಕುಮಾರ ಸ್ವಾಮೀಜಿಗಳು ಮಹಾನ್ ಸಂತರಾಗಿದ್ದರು. ಜಾತಿ-ಮತದ ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ನೀಡಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಠದಲ್ಲಿ ವಿದ್ಯಾಭ್ಯಾಸ ಮಾಡಿದ ಸಹಸ್ರಾರು ಜನರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಶಿಕ್ಷಣ, ದಾಸೋಹದ ಮೂಲಕ ಶ್ರೀಗಳು ಸಲ್ಲಿಸಿರುವ ಸೇವೆ ಎಂದಿಗೂ ಅಜರಾಮರವಾಗಿರಲಿದೆ ಎಂದು ತಿಳಿಸಿದರು.
ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ಹೆಚ್ಚುವರಿ ಅಡ್ವೋಕೇಟ್ ಜನರಲ್ ಎನ್.ದೇವದಾಸ್, ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ಅಶೋಕ ಹಿಂಚಗೇರಿ, ಹಿರಿಯ ವಕೀಲರಾದ ಉದಯ ಹೊಳ್ಳ, ಕೆ.ಜಿ.ರಾಘವನ್ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))