ವಿಜೃಂಭಣೆಯಿಂದ ಜರುಗಿದ ಶ್ರೀರಂಗಪಟ್ಟಣ ದಸರಾ
KannadaprabhaNewsNetwork | Published : Oct 17 2023, 12:45 AM IST
ವಿಜೃಂಭಣೆಯಿಂದ ಜರುಗಿದ ಶ್ರೀರಂಗಪಟ್ಟಣ ದಸರಾ
ಸಾರಾಂಶ
ದಸರಾ ಮೂಲ ನೆಲೆ ಶ್ರೀರಂಗಪಟ್ಟಣದಲ್ಲಿ ಸಾಂಪ್ರದಾಯಿಕ ದಸರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಜನರ ನಡುವೆ ಶ್ರೀ ಚಾಮುಂಡೇಶ್ವರಿ ವಿಗ್ರಹವನ್ನು ಹೊತ್ತ ಅಂಬಾರಿ ಹಾಗೂ ಅಂಬಾರಿ ಮೆರವಣಿಗೆ ನೆರೆದಿದ್ದವರ ಗಮನಸೆಳೆಯಿತು.
ನಾಡದೇವತೆ ವಿಗ್ರಹ ಹೊತ್ತ ಅಂಬಾರಿಗೆ ರಾಜಮಾತೆ ಪ್ರಮೋದಾದೇವಿ ಪುಷ್ಪಾರ್ಚಣೆ । ಆಕರ್ಷಕ ಜಂಬೂಸವಾರಿ ಮೆರವಣಿಗೆಗೆ ಜಾನಪದ ಕಲಾತಂಡಗಳ ಮೆರುಗು ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ ದಸರಾ ಮೂಲ ನೆಲೆ ಶ್ರೀರಂಗಪಟ್ಟಣದಲ್ಲಿ ಸಾಂಪ್ರದಾಯಿಕ ದಸರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಜನರ ನಡುವೆ ಶ್ರೀ ಚಾಮುಂಡೇಶ್ವರಿ ವಿಗ್ರಹವನ್ನು ಹೊತ್ತ ಅಂಬಾರಿ ಹಾಗೂ ಅಂಬಾರಿ ಮೆರವಣಿಗೆ ನೆರೆದಿದ್ದವರ ಗಮನಸೆಳೆಯಿತು. ಅಂಬಾರಿ ಹೊತ್ತ ಮಹೇಂದ್ರನಿಗೆ ವಿಜಯ ಹಾಗೂ ವರಲಕ್ಷ್ಮಿ ಆನೆಗಳು ಸಾಥ್ ನೀಡುವ ಮೂಲಕ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ವೈಭವ ಮರುಕಳಿಸುವಂತೆ ಮಾಡಿತು. ಕಿರಂಗೂರು ಬನ್ನಿಮಂಟಪದ ಬಳಿ ಮದ್ಯಾಹ್ನ ೩ ರಿಂದ ೪ ಗಂಟೆಗೆ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಶ್ರೀ ಚಾಮುಂಡೇಶ್ವರಿ ವಿಗ್ರಹವನ್ನು ಹೊತ್ತ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಾಡ ಅಧಿದೇವತೆಗೆ ಪೂಜೆ: ಇದಕ್ಕೂ ಮುನ್ನ ಬನ್ನಿಮಂಟಪದಲ್ಲಿ ವಿಶೇಷ ಪುಷ್ಪಾಲಂಕಾರಗಳಿಂದ ಸಿಂಗರಿಸಲಾಗಿದ್ದ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವೇದಬ್ರಹ್ಮ ಡಾ.ಭಾನುಪ್ರಕಾಶ್‌ಶರ್ಮಾ ನೇತೃತ್ವದಲ್ಲಿ ಮೊದಲಿಗೆ ಸ್ಥಳಶುದ್ಧಿ, ಗಣಪತಿ ಹೋಮ, ಪುಣ್ಯಾಹ, ದುರ್ಗಾಶಪ್ತಸತಿ ಪಾರಾಯಣ, ಬನ್ನಿಪೂಜೆ, ಶತವೃದ್ರಪಾರಾಯಣ, ಕೂಷ್ಮಾಂಡ ಛೇದನ, ಮಹಾಮಂಗಳಾರತಿ ಸೇರಿದಂತೆ ಹಲವು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಶಾಸಕ ರಮೇಶ ಬಂಡಿಸಿದ್ದೇಗೌಡ ದಂಪತಿ ಸಮೇತ ಪೂಜೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬನ್ನಿಮಂಟಪದಿಂದ ಹೊರಟ ಅಂಬಾರಿ ಮೆರವಣಿಗೆ ಕಿರಂಗೂರು, ಬಾಬುರಾಯನಕೊಪ್ಪಲು ಮಾರ್ಗವಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಶ್ರೀರಂಗಪಟ್ಟಣ ಮುಖ್ಯ ದ್ವಾರವನ್ನು ಪ್ರವೇಶಿಸಿತು. ಪಟ್ಟಣದ ಮುಖ್ಯ ರಸ್ತೆಗಳ ಎರಡೂ ಕಡೆ ನೆರೆದಿದ್ದ ಜನಸ್ತೋಮವು ಅಂಬಾರಿ ಮೆರವಣಿಗೆ ಹಾಗೂ ಕಲಾ ತಂಡಗಳ ಸೊಬಗನ್ನು ಕಣ್ತುಂಬಿಕೊಂಡರು. ನಂತರ ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿ ನಿರ್ಮಾಣಗೊಂಡಿರುವ ಶ್ರೀರಂಗ ವೇದಿಕೆ ಬಳಿ ಮೆರವಣಿಗೆ ಅಂತ್ಯಗೊಂಡಿತು. ಜಾನಪದ ಕಲಾತಂಡಗಳ ಆಕರ್ಷಣೆ ಮೆರವಣಿಗೆಯಲ್ಲಿ ಪೊಲೀಸ್ ಬ್ಯಾಂಡ್, ಅಶ್ವದಳ, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆ ಕೋಲಾಟ, ಗಾರುಡಿ ಗೊಂಬೆ, ತಮಟೆ, ಕಂಸಾಳೆ, ಡೊಳ್ಳು ಕುಣಿತ, ಸೋಮನ ಕುಣಿತ, ಒನಕೆ ಕುಣಿತ, ರಂಗದ ಕುಣಿತ, ಕೋಳಿ ನೃತ್ಯ, ಕಹಳೆ, ನಾಸಿಕ್ ಡೋಲ್, ದೊಡ್ಡ ಆಂಜನೇಯ, ಪಟ್ಟದ ಕುಣಿತ, ಯಕ್ಷಗಾನ ನೃತ್ಯ, ಹುಲಿವೇಷ, ಹಾಲಕ್ಕಿ ಸುಗ್ಗಿ ಕುಣಿತ, ಕೇರಳ ಚಂಡೆ, ಜಗ್ಗಲಿಗೆ, ಮಹಿಳಾ ಡೊಳ್ಳು ಕುಣಿತ ಕಲಾ ತಂಡಗಳು ಭಾಗವಹಿಸಿ ವಿಶೇಷ ಮೆರಗು ನೀಡಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗೃಹಲಕ್ಷಿ ಯೋಜನೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಸ್ಥಬ್ದ ಚಿತ್ರ, ಅರೋಗ್ಯ ಇಲಾಖೆ ವತಿಯಿಂದ ಹೃದಯಘಾತ ತ್ವರಿತ ಚಿಕಿತ್ಸೆಗೆ ಸ್ಟೆಮಿ ಯೋಜನೆ ಕುರಿತು ಸ್ಥಬ್ದ ಚಿತ್ರ, ರೇಷ್ಮೆ ಇಲಾಖೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ವತಿಯಿಂದ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಸ್ಥಬ್ದ ಚಿತ್ರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಾರ್ವಜನಿಕ ವೀಕ್ಷಣೆಗೆ ಆಸನ ವ್ಯವಸ್ಥೆ: ಬನ್ನಿಮಂಟಪದ ಬಳಿ ವಿಶೇಷ ಪೂಜೆ ಹಾಗೂ ಅಂಬಾರಿ ಮೆರವಣಿಗೆ ಚಾಲನೆ ನೀಡುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರಿಗೆ ಬೆಂಗಳೂರು-ಮೈಸೂರು ಹೆದ್ದಾರಿ, ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣ, ಪುರಸಭೆ ವೃತ್ತ ಹಾಗೂ ತಾಲೂಕು ಕಚೇರಿ ಮುಂಭಾಗ ಆಸನದ ವ್ಯವಸ್ಥೆ ಮಾಡಲಾಗಿತ್ತು. ಪೂಜೆ ವೇಳೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ಪಿ.ಎಂ.ನರೇಂದ್ರ ಸ್ವಾಮಿ, ಕದಲೂರು ಉದಯ್, ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಕ್ ತನ್ವೀರ್ ಆಸಿಫ್, ಉಪ ವಿಭಾಗಾಧಿಕಾರಿ ನಂದೀಶ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ತಿಮ್ಮಯ್ಯ, ಶ್ರೀರಂಗಪಟ್ಟಣ ತಹಸೀಲ್ದಾರ್ ಅಶ್ವಿನಿ, ಪುರಸಭೆ ಮುಖ್ಯಾಧಿಕಾರಿ ರಾಣಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.