ಆನೆ ತಡೆ ಗಟ್ಟಿ,ಇಲ್ಲ ಅಧಿಕಾರ ಬಿಟ್ಟು ತೊಲಗಿ!
KannadaprabhaNewsNetwork | Published : Oct 25 2023, 01:15 AM IST
ಆನೆ ತಡೆ ಗಟ್ಟಿ,ಇಲ್ಲ ಅಧಿಕಾರ ಬಿಟ್ಟು ತೊಲಗಿ!
ಸಾರಾಂಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಂಚಿನಲ್ಲಿ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟಿ ಇಲ್ಲವೇ, ಅಧಿಕಾರ ಬಿಟ್ಟು ತೊಲಗಿ ಎಂದು ಕಾಡಂಚಿನ ನೂರಾರು ಮಂದಿ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹೆಡಿಯಾಲ ಉಪ ವಿಭಾಗದಲ್ಲಿ ನಾಲ್ಕು ಮಂದಿ ರೈತರು ಮಾನವ,ಪ್ರಾಣಿ ಸಂಘರ್ಷಕ್ಕೆ ಬಲಿ. ಗುಂಡ್ಲುಪೇಟೆ ಭಾಗದಲ್ಲೂ ಮಾನವ,ಪ್ರಾಣಿ ಸಂಘರ್ಷಕ್ಕೂ ಮುನ್ನ ಶಾಸಕರು ಎಚ್ಚೆತ್ತುಕೊಳ್ಳಲಿ ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಂಚಿನಲ್ಲಿ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟಿ ಇಲ್ಲವೇ, ಅಧಿಕಾರ ಬಿಟ್ಟು ತೊಲಗಿ ಎಂದು ಕಾಡಂಚಿನ ನೂರಾರು ಮಂದಿ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ತಾರತಮ್ಯ ನೀತಿ ಹಾಗು ರೈತರ ಬಗೆಗಿನ ಅಸಡ್ಡೆಯಿಂದ ಹೆಡಿಯಾಲ ಉಪ ವಿಭಾಗ ಒಂದರಲ್ಲೇ ಮಾನವ, ಪ್ರಾಣಿ ಸಂಘರ್ಷಕ್ಕೆ ನಾಲ್ಕು ಜನ ರೈತರು ಬಲಿಯಾಗಿದ್ದಾರೆ. ಇಲ್ಲಿಯು ರೈತರು ಕಾಡಾನೆಗಳ ದಾಳಿಗೆ ಬಲಿಯಾಗಬೇಕೇ ಎಂದು ಪ್ರಶ್ನಿಸಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ, ಕುಂದಕೆರೆ, ಮದ್ದೂರು, ಮೊಳೆಯೂರು ವಲಯಗಳಲ್ಲಿ ಅತಿ ಹೆಚ್ಚು ಕಾಡಾನೆಗಳು ದಾಳಿ ನಡೆಸಿವೆ. ಇಂತಹ ವಲಯಗಳಿಗೆ ಕಂದಕ ಹಾಗು ಸೋಲಾರ್ ನಿರ್ವಹಣೆಗೆ ಅನುದಾನ ನೀಡದೆ ಇರುವುದೇ ಕಾಡಾನೆಗಳ ಹಾವಳಿ ಹೆಚ್ಚಲು ಪ್ರಮುಖ ಕಾರಣವಾಗಿದೆ. ಕಾಡಾನೆಗಳ ಹಾವಳಿ ಇಲ್ಲದ ಬಹುತೇಕ ವಲಯಗಳಿಗೆ ಕೋಟ್ಯಾಂತರ ಅನುದಾನ ನೀಡುವ ಅರಣ್ಯ ಇಲಾಖೆ, ಕಾಡಾನೆಗಳ ಹಾವಳಿ ಹೆಚ್ಚಿರುವ ವಲಯಗಳಿಗೇಕೆ ಅನುದಾನ ನೀಡುತ್ತಿಲ್ಲ. ಇದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ರೈತರು ಪ್ರಶ್ನಿಸಿದ್ದಾರೆ. ಕಾಡಾನೆಗಳು ಹೆಚ್ಚಿರುವ ತಾಲೂಕಿನ ಓಂಕಾರ,ಕುಂದಕೆರೆ,ಮದ್ದೂರು ವಲಯಗಳಿಗೆ ಅನುದಾನ ನೀಡಲು ಅರಣ್ಯ ಇಲಾಖೆ ಹಿಂದೇಟು ಹಾಕುತ್ತಿದ್ದು, ಅನುದಾನ ಕಡಿತ ಮಾಡುವುದು ಯಾವ ಕಾರಣಕ್ಕಾಗಿ ಎಂಬುದನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಮಹದೇವಪ್ಪಆಗ್ರಹಿಸಿದ್ದಾರೆ. ಹೇಳೋರು ಕೇಳೋರು ಇಲ್ಲವೇ? ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ವರ್ಗಾವಣೆಗೆ ತಡೆ ತಂದಿರುವ ಕಾರಣ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಇವರನ್ನು ಹೇಳೋರು, ಕೇಳೋರು ಯಾರು ಇಲ್ಲವೇ? ಎಂಬ ಪ್ರಶ್ನೆಯು ಎದ್ದಿದೆ. ಆದ್ದರಿಂದ ಇವರ ಸರ್ವಾಧಿಕಾರತ್ವದ ಧೋರಣೆಗೆ ಸ್ಥಳೀಯ ಶಾಸಕರು ಕಡಿವಾಣ ಹಾಕಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಕಾಡಾನೆ ದಾಳಿ; ಟೊಮೆಟೋ ಬೆಳೆ ನಾಶ ತಾಲೂಕಿನ ಆಲತ್ತೂರು ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಕುಯ್ದು ಗುಡ್ಡೆ ಹಾಕಿದ್ದ ಟಮೇಟೋವನ್ನು ಕಾಡಾನೆಗಳು ತುಳಿದು ನಾಶ ಮಾಡಿರುವ ಘಟನೆ ತಾಲೂಕಿನ ಸವನಕಳ್ಳಿ ಪಾಳ್ಯದ ಬಳಿ ಸೋಮವಾರ ರಾತ್ರಿ ನಡೆದಿದೆ.ಆಲತ್ತೂರು ಸ್ವಾಮಿ ಗೌಡರ ಸವಕನಹಳ್ಳಿ ಪಾಳ್ಯದ ಬಳಿಯ ಜಮೀನಿನಲ್ಲಿ ಕಾಡಾನೆಗಳು ದಾಳಿ ಇಟ್ಟು ಕುಯ್ದು ಗುಡ್ಡೆ ಹಾಕಿದ್ದ ಕ್ರೇಟ್‌ಗಳನ್ನು ಕೆಡವಿರುವ ಆನೆಗಳು ಟಮೇಟೋ ತುಳಿದಿವೆ. ಮಂಗಳವಾರ ಬೆಳಗ್ಗೆ ಜಮೀನಿಗೆ ರೈತ ಸ್ವಾಮಿ ಗೌಡ ಹೋದಾಗ ಟಮೇಟೋ ಹಾಳಾಗಿರುವುದನ್ನು ಕಂಡು ರೈತ ಕಂಗಾಲಾಗಿದ್ದಾರೆ.ಕೈ ಬಂದೆ ತುತ್ತು ಬಾಯಿಗೆ ಬರದಂತೆ ಅರಣ್ಯ ಇಲಾಖೆ ಮಾಡಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಆಲತ್ತೂರು ಗ್ರಾಮದ ಮಹದೇವಸ್ವಾಮಿ ಜಮೀನಿನಲ್ಲಿ ಟಮೇಟೋ ಹಾಗು ಬಾಳೆ ಗಿಡ ತುಳಿದು ಕಾಡಾನೆಗಳು ಹಾಳು ಮಾಡಿದ್ದವು. ಓಂಕಾರ ವಲಯದಂಚಿನ ಮಂಚಹಳ್ಳಿ, ಆಲತ್ತೂ ರು, ಕುರುಬರಹುಂಡಿ, ಹೊಸಪುರ, ಶ್ರೀಕಂಠಪುರ, ಯಡವನಹಳ್ಳಿ, ಕೋಟೆಕೆರೆ, ಬೆಟ್ಟದಮಾದಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿವೆ. -- 24ಜಿಪಿಟಿ2 ಗುಂಡ್ಲುಪೇಟೆ ತಾಲೂಕಿನ ಸವಕನಹಳ್ಳಿ ಪಾಳ್ಯದ ರೈತ ಸ್ವಾಮಿ ಗೌಡ ಜಮೀನಿನಲ್ಲಿ ಕುಯ್ದು ಗುಡ್ಡೆ ಹಾಕಿದ್ದ ಟೋಮೆಟೋವನ್ನು ಕಾಡಾನೆಗಳು ತುಳಿದು ಹಾಕಿರುವುದು. ---