ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಇದೇ ತಿಂಗಳ 28ರಂದು (ಶುಕ್ರವಾರ) ನಮ್ಮ ಎಲ್ಲಾ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.ಮಂಗಳವಾರ ನಗರದ ಬಿಜೆಪಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರ ಸಭೆ ನಡೆಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮಹಾನಗರದ ಬಿಜೆಪಿ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಬಜೆಟ್‍ನಲ್ಲಿ ಹೆಚ್ಚು ಅನುದಾನ ನೀಡುವಂತೆ ಒತ್ತಾಯಿಸಿ ಮನವಿ ನೀಡುತ್ತೇವೆ ಎಂದು ಹೇಳಿದರು.ಬೆಂಗಳೂರಿನ ಜ್ವಲಂತ ಸಮಸ್ಯೆಗಳ ಕುರಿತು ಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲಿದ್ದು, ಅದರ ಬಗ್ಗೆಯೂ ಚರ್ಚೆ ಆಗಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆ ಆಗಬೇಕು. ಗ್ರೇಟರ್ ಬೆಂಗಳೂರು ಪ್ರಸ್ತಾಪ ಕೈಬಿಡಬೇಕು. ಟನೆಲ್ ರಸ್ತೆ ಯೋಜನೆ ಕೈಬಿಟ್ಟು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಸರ್ಕಾರ ಚಿಂತಿಸಬೇಕು ಎಂದು ಒತ್ತಾಯಿಸಿದರು.
ಟನೆಲ್ ರಸ್ತೆ ಯೋಜನೆ ಕೈಬಿಡಬೇಕು:ಬೆಂಗಳೂರು ನಗರದ ರಸ್ತೆ ಗುಂಡಿಗಳನ್ನು ಮುಚ್ಚಲೂ ಈ ಸರ್ಕಾರಕ್ಕೆ ಆಗುತ್ತಿಲ್ಲ. ಆದರೆ, ಟನೆಲ್ ರಸ್ತೆ ಕುರಿತು ಮಾತನಾಡುತ್ತಿದ್ದಾರೆ. ಟನೆಲ್ ರಸ್ತೆ ಯೋಜನೆ ಕೈಬಿಟ್ಟು ಮೆಟ್ರೋ ಬೋಗಿಗಳನ್ನು ಹೆಚ್ಚಿಸಬೇಕು. ಟ್ರಾಫಿಕ್ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಬದಲಿ ಮಾರ್ಗೋಪಾಯಗಳನ್ನು ಚರ್ಚಿಸಬೇಕು. ಅವೈಜ್ಞಾನಿಕ ಟನೆಲ್ ರಸ್ತೆ ಯೋಜನೆ ಕೈಬಿಡುವಂತೆ ಒತ್ತಾಯಿಸುವ ಕುರಿತು ಸಮಗ್ರ ಚರ್ಚೆ ಆಗಿದೆ ಎಂದು ತಿಳಿಸಿದರು.
ಇ-ಖಾತಾದಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಗ್ರೇಟರ್ ಬೆಂಗಳೂರು ಎಂಬ ಕಥೆ ಹೇಳಿಕೊಂಡು ಬಿಬಿಎಂಪಿ ಚುನಾವಣೆ ಮುಂದೂಡುವ ಷಡ್ಯಂತ್ರ ನಡೆಯುತ್ತಿದೆ. ರಾಜ್ಯ ಸರ್ಕಾರವು ಬೆಂಗಳೂರಿನ ಉದ್ಧಾರದ ಕಥೆ ಹೇಳುತ್ತಾ ಚುನಾವಣೆ ಮುಂದೂಡುವ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಅವಕಾಶ ಕೊಡಬಾರದು. ಸರ್ಕಾರವು ತಕ್ಷಣವೇ ಬಿಬಿಎಂಪಿ ಚುನಾವಣೆ ನಡೆಸಬೇಕು. ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದರು.ಮೆಟ್ರೋ ದರ ಏರಿಕೆ ಕೇಂದ್ರ ಮಾಡಿಲ್ಲ:
ಇತ್ತೀಚೆಗೆ ರಾಜ್ಯ ಸರ್ಕಾರವು ಮೆಟ್ರೋ ಪ್ರಯಾಣ ದರ ಏರಿಸಿದ್ದು, ಅದರ ವಿರುದ್ಧ ಮತ್ತು ದರ ಇಳಿಕೆಗೆ ಒತ್ತಾಯಿಸಿ ಹೋರಾಟ ಮಾಡುವ ಕುರಿತು ಚರ್ಚೆ ಮಾಡಲಾಗಿದೆ. ಮೆಟ್ರೋ ದರವನ್ನು ಕೇಂದ್ರ ಸರ್ಕಾರ ಹೆಚ್ಚಿಸಿಲ್ಲ. ಈ ಕುರಿತು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ನಡೆದಿದೆ ಎಂದು ವಿಜಯೇಂದ್ರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಭೆಗೆ ಗೈರು ಹಾಜರು ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಶೋಕ್ ಅವರು ಈ ಸಭೆಗೆ ಆದಷ್ಟು ಬರುವುದಾಗಿ ಹೇಳಿದ್ದರು. ಅವರು ಬಜೆಟ್ ಕುರಿತ ಪೂರ್ವಭಾವಿ ಸಭೆ ಕರೆದಿದ್ದಾರೆ. ನಾವು ಕೂಡ ಆ ಸಭೆಗೆ ತೆರಳುತ್ತೇವೆ ಎಂದು ಉತ್ತರಿಸಿದರು.
ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಲೆಹರ್ ಸಿಂಗ್, ಶಾಸಕರಾದ ಕೆ.ಗೋಪಾಲಯ್ಯ, ಎಸ್.ಆರ್.ವಿಶ್ವನಾಥ್, ಸಿ.ಕೆ.ರಾಮಮೂರ್ತಿ, ಎಂ.ಕೃಷ್ಣಪ್ಪ, ರವಿ ಸುಬ್ರಹ್ಮಣ್ಯ, ಬೈರತಿ ಬಸವರಾಜ್, ಉದಯ ಗರುಡಾಚಾರ್ ಇದ್ದರು.