ಕಟ್ಟಡಗಳಿಗೆ ಓಸಿ-ಸಿಸಿ ಭವಿಷ್ಯ ಇಂದು ನಿರ್ಧಾರ!

| N/A | Published : Sep 04 2025, 02:00 AM IST / Updated: Sep 04 2025, 10:48 AM IST

Greater Bengaluru

ಸಾರಾಂಶ

ಗ್ರೇಟರ್‌ ಬೆಂಗಳೂರು ವ್ಯಾಪ್ತಿ ಹಾಗೂ ರಾಜ್ಯಾದ್ಯಂತ ಕೆಲ ವರ್ಗದ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ (ಓಸಿ) ಹಾಗೂ ನಿರ್ಮಾಣ ಕಾರ್ಯಾರಂಭ ಪತ್ರಗಳಿಂದ (ಸಿಸಿ) ವಿನಾಯಿತಿ ನೀಡುವ ಮಹತ್ವದ ವಿಷಯ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಗ್ರೇಟರ್‌ ಬೆಂಗಳೂರು ವ್ಯಾಪ್ತಿ ಹಾಗೂ ರಾಜ್ಯಾದ್ಯಂತ ಕೆಲ ವರ್ಗದ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ (ಓಸಿ) ಹಾಗೂ ನಿರ್ಮಾಣ ಕಾರ್ಯಾರಂಭ ಪತ್ರಗಳಿಂದ (ಸಿಸಿ) ವಿನಾಯಿತಿ ನೀಡುವ ಮಹತ್ವದ ವಿಷಯ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ.ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆ-2024ರ ನಿಯಮ 241(7) ಅಡಿ ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ 1,200 ಚದರಡಿ ವಿಸ್ತೀರ್ಣ ಮೀರದಂತಹ ನಿವೇಶನಗಳಲ್ಲಿ ನೆಲ ಮತ್ತು 2 ಅಂತಸ್ತು ಅಥವಾ ಸ್ಟಿಲ್ಟ್‌ ಮತ್ತು 3 ಅಂತಸ್ತಿನ ಕಟ್ಟಡಗಳಿಗೆ ಓಸಿ ಮತ್ತು ಸಿಸಿ ಪಡೆಯುವುದರಿಂದ ವಿನಾಯಿತಿ ನೀಡಲು ಸಭೆಯಲ್ಲಿ ವಿಷಯ ಮಂಡನೆಯಾಗಲಿದೆ.ನಕ್ಷೆಮಂಜೂರಾತಿ ಪ್ರಕಾರ ಕಟ್ಟಡ ನಿರ್ಮಾಣ ಮಾಡದೆ ಓಸಿ, ಸಿಸಿ ಹೊಂದಿಲ್ಲದ ಕಟ್ಟಡಗಳಿಗೆ ನೀರು, ವಿದ್ಯುತ್‌ ಹಾಗೂ ಒಳಚರಂಡಿ ಸಂಪರ್ಕ ನೀಡದಂತೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಇದರ ಅನ್ವಯ ಕಳೆದ ಆರು ತಿಂಗಳಿಂದ ರಾಜ್ಯದಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಿಸಿರುವ ಕಟ್ಟಡಗಳಿಗೆ ಓಸಿ, ಸಿಸಿ ನಿರಾಕರಿಸಲಾಗಿತ್ತು. ಪರಿಣಾಮ ವಿದ್ಯುತ್, ನೀರು ಸಂಪರ್ಕವನ್ನೂ ನೀಡಿರಲಿಲ್ಲ. ಇದರಿಂದ ಲಕ್ಷಾಂತರ ಜನ ಸಮಸ್ಯೆಗೆ ಸಿಲುಕಿದ್ದರು.

ಇದೇ ನಿರ್ಧಾರದ ಅನ್ವಯ ಕರ್ನಾಟಕ ಮುನಿಸಿಪಲ್‌ ಕಾಯಿದೆ 1976 ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಉಪಬಂಧಗಳ ಅನ್ವಯ ಮಾದರಿ ಕಟ್ಟಡ ಉಪನಿಯಗಳಲ್ಲಿ ತಿದ್ದುಪಡಿ ಅಳವಡಿಸಿಕೊಂಡು, ಸಂಬಂಧಪಟ್ಟ ನಿರ್ದಿಷ್ಟ ಕಟ್ಟಡಗಳಿಗೆ ರಾಜ್ಯಾದ್ಯಂತ ಸಿಸಿ ಹಾಗೂ ಓಸಿಯಿಂದ ವಿನಾಯಿತಿ ನೀಡಲು ನಿರ್ಧರಿಸುವ ಸಾಧ್ಯತೆಯಿದೆ.

2,000 ಚದರಡಿಗೆ ಹೆಚ್ಚಳ:

ಓಸಿ ಮತ್ತು ಸಿಸಿಗೆ ವಿನಾಯಿತಿ ನೀಡುವ ಸಂಬಂಧ ಜು. 11 ರಂದು ಸಭೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ 2024ರ ನಿಯಮ 241 (7), ಕರ್ನಾಟಕ ಮುನಿಸಿಪಲ್‌ ಕಾಯಿದೆ 1976 ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಉಪಬಂಧಗಳ ಅನ್ವಯ 1,200 ಚದರಡಿಗಿಂತ ಕಡಿಮೆ ವಿಸ್ತೀರ್ಣದಲ್ಲಿನ ಕಟ್ಟಡಗಳಿಗೆ ಓಸಿ ಮತ್ತು ಸಿಸಿಯಿಂದ ಸರ್ಕಾರ ವಿನಾಯಿತಿ ನೀಡಬಹುದು ಎಂದು ಶಿಫಾರಸು ನೀಡಲು ನಿರ್ಧರಿಸಲಾಗಿತ್ತು. ಇದೇ ವಿಷಯ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ.

ಆದರೆ, 1,200 ಅಡಿ ಬದಲಿಗೆ 4,000 ಅಡಿವರೆಗಿನ ವಿಸ್ತೀರ್ಣದ ಕಟ್ಟಡಗಳಿಗೂ ಓಸಿ, ಸಿಸಿಯಿಂದ ವಿನಾಯಿತಿ ನೀಡಬೇಕು. ಇಲ್ಲದಿದ್ದರೆ ಲಕ್ಷಾಂತರ ಕಟ್ಟಡಗಳಿಗೆ ವಿದ್ಯುತ್‌, ನೀರು ಹಾಗೂ ಒಳಚರಂಡಿ ಸಂರ್ಪಕ ಇಲ್ಲದಂತಾಗಲಿದೆ. ಜತೆಗೆ ಹಲವು ನಿವೇಶನದಾರರು ಕಟ್ಟಡಗಳನ್ನೂ ಕಟ್ಟಿಕೊಳ್ಳಲಾಗದೆ ಅತಂತ್ರರಾಗಬೇಕಾಗಿದೆ ಎಂಬ ಆಗ್ರಹವೂ ಇದೆ. ಹೀಗಾಗಿ 2,000 ಚದರಡಿ ವಿಸ್ತೀರ್ಣದವರೆಗೆ ವಿನಾಯಿತಿ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ. ಅಂತಿಮವಾಗಿ ಎಷ್ಟು ವಿಸ್ತೀರ್ಣದ ಕಟ್ಟಡಗಳಿಗೆ ವಿನಾಯಿತಿ ದೊರೆಯಲಿದೆ ಎಂಬುದು ಇಂದು ನಿರ್ಧಾರವಾಗಲಿದೆ.

9,700 ಕೋಟಿ ರು. ವೆಚ್ಚದಲ್ಲಿ ಡಬಲ್‌ ಡೆಕ್ಕರ್‌ ರಸ್ತೆ ನಿರ್ಮಾಣ

ಮೆಟ್ರೋ 3ನೇ ಹಂತದ ಯೋಜನೆಯಡಿ ಜೆ.ಪಿ. ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಇದೇ ವೇಳೆ ಡಬಲ್‌ ಡೆಕ್ಕರ್‌ ರಸ್ತೆ ನಿರ್ಮಾಣ ಮಾಡುವ ಸಲುವಾಗಿ ಮೆಟ್ರೋ ವಯಾಡಕ್ಟ್‌ ಜತೆಗೆ 37.12 ಕಿ.ಮೀ. ಉದ್ದದ ಎಲಿವೇಟೆಡ್‌ ರಸ್ತೆ ನಿರ್ಮಾಣ ಮಾಡಲು 9,700 ಕೋಟಿ ರು. ಮೊತ್ತದ ಯೋಜನೆಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯುವ ಸಾಧ್ಯತೆಯಿದೆ.

Read more Articles on