ಬೆಂಗಳೂರಿನ ಸ್ಥಳೀಯ ಸಂಸ್ಥೆಗೆ ಬರೋಬ್ಬರಿ ಒಂದೂವರೆ ಶತಮಾನದ ಇತಿಹಾಸ..

| N/A | Published : May 15 2025, 01:39 AM IST / Updated: May 15 2025, 05:29 AM IST

BBMP latest news today photo

ಸಾರಾಂಶ

  ಬೆಂಗಳೂರಿಗೆ ಮೂಲಸೌಕರ್ಯ ಒದಗಿಸುವ ಸ್ಥಳೀಯ ಸಂಸ್ಥೆಗೆ ಬರೋಬ್ಬರಿ ಒಂದೂವರೆ ಶತಮಾನದ ಇತಿಹಾಸವಿದ್ದು, ಇದೀಗ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ದ ಮೂಲಕ ನೂತನ ವ್ಯವಸ್ಥೆಗೆ ಅಣಿಯಾಗುತ್ತಿದೆ.

 ಬೆಂಗಳೂರು : ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇದೀಗ ಏಷ್ಯಾದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಒಂದೂವರೆ ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರಿಗೆ ಮೂಲಸೌಕರ್ಯ ಒದಗಿಸುವ ಸ್ಥಳೀಯ ಸಂಸ್ಥೆಗೆ ಬರೋಬ್ಬರಿ ಒಂದೂವರೆ ಶತಮಾನದ ಇತಿಹಾಸವಿದ್ದು, ಇದೀಗ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ದ ಮೂಲಕ ನೂತನ ವ್ಯವಸ್ಥೆಗೆ ಅಣಿಯಾಗುತ್ತಿದೆ.

ಗುರುವಾರದಿಂದ ಬೆಂಗಳೂರಿನ ಆಡಳಿತ ವ್ಯವಸ್ಥೆಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಜಾರಿಗೆ ಬರಲಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ 1881ರ ಬ್ರಿಟಿಷರ ಆಡಳಿತಾವಧಿಯಲ್ಲಿ ಪುರಸಭೆಯ ಆಡಳಿತ ವ್ಯವಸ್ಥೆ ಜಾರಿ ಬಂದಿತ್ತು. ಬ್ರಿಟಿಷರು ನಗರದ ಆಡಳಿತ ವ್ಯವಸ್ಥೆಯನ್ನು ಒಡೆಯರ್‌ ಅವರಿಗೆ ನೀಡಿದ್ದರು. ಬೆಂಗಳೂರು ಮುನಿಸಿಪಾಲಿಟಿ ಮತ್ತು ಬೆಂಗಳೂರಿನ ನಾಗರಿಕ ಮತ್ತು ಮಿಲಿಟರಿ ಸ್ಟೇಶನ್‌ ಅನ್ನು ಕಾನೂನು ಜಾರಿಗೊಳಿಸಲಾಗಿತ್ತು.

ಸ್ವಾತಂತ್ರ್ಯ ಬಳಿಕ 1949ರಲ್ಲಿ ಬೆಂಗಳೂರು ನಗರ ಕಾರ್ಪೊರೇಶನ್‌ ಕಾಯ್ದೆ ಅಡಿಯಲ್ಲಿ ಕಾರ್ಪೊರೇಶನ್‌ ರೂಪದಲ್ಲಿ ಎರಡು ಪುರಸಭೆಗಳನ್ನು ವಿಲೀನಗೊಳಿಸಿ ಬೆಂಗಳೂರು ನಗರ ಪಾಲಿಕೆ ಅಸ್ತಿತ್ವಕ್ಕೆ ತರಲಾಯಿತು. ಮೊದಲ ಬೆಂಗಳೂರು ನಗರಪಾಲಿಕೆಯಲ್ಲಿ 75 ವಾರ್ಡ್‌ಗಳಿದ್ದವು. ಚುನಾವಣೆ ನಡೆಸಿ ಬೆಂಗಳೂರಿಗೆ ನಗರ ಸಭೆಗೆ ಆರ್‌. ಸುಬ್ಬಣ್ಣ ಅವರು ಮೊದಲ ಮೇಯರ್‌ ಆಗಿ ನೇಮಕಗೊಂಡಿದ್ದರು.

1949 ರಿಂದ 1995ರ ಅವಧಿಯಲ್ಲಿ ಒಟ್ಟು 33 ಮೇಯರ್‌ ಗಳು ಬೆಂಗಳೂರು ನಗರ ಪಾಲಿಕೆಗೆ ನೇಮಕಗೊಳ್ಳುವ ಮೂಲಕ ಆಡಳಿತ ನಡೆಸಿದರು. ಈ ಅವಧಿಯಲ್ಲಿ 1967 ರಿಂದ 1970, 1975ರಿಂದ 1983 ಹಾಗೂ 1989 ರಿಂದ 1990ರಲ್ಲಿ ಒಟ್ಟು ಮೂರು ಆಡಳಿತಾಧಿಕಾರಿ ಅವಧಿಯನ್ನು ಬೆಂಗಳೂರು ನಗರ ಪಾಲಿಕೆ ಕಂಡಿತ್ತು.

1995ರಲ್ಲಿ ಹೆಚ್ಚುವರಿಯಾಗಿ 36 ವಾರ್ಡ್‌ಗಳನ್ನು ಸೇರ್ಪಡೆ ಮಾಡಿ ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ) ರಚನೆ ಮಾಡಲಾಯಿತು. ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿಯಿಂದಲೇ ಆರಂಭಗೊಂಡಿತ್ತು. 1996ರಲ್ಲಿ ಮೊದಲ ಬಿಎಂಪಿಗೆ ಚುನಾವಣೆ ನಡೆಸಲಾಯಿತು. 2006ರ ವರೆಗೆ ಬಿಎಂಪಿ ಅಸ್ಥಿತ್ವದಲ್ಲಿ ಇತ್ತು. ಈ ಅವಧಿಯಲ್ಲಿ 10 ಮೇಯರ್‌ ಬಿಎಂಪಿ ಆಡಳಿತ ನಡೆಸಿದರು.

2007ರಲ್ಲಿ 8 ನಗರ ಸ್ಥಳೀಯ ಮಂಡಳಿಗಳು ಮತ್ತು ನಗರದ ಸುತ್ತಲಿನ 111 ಹಳ್ಳಿಗಳನ್ನು ಬೆಂಗಳೂರು ಮಹಾನಗರ ಪಾಲಿಕೆಗೆ ವಿಲೀನಗೊಳಿಸಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಸ್ತಿತ್ವಕ್ಕೆ ತರಲಾಯಿತು. ಅಲ್ಲಿಂದ ಈವರೆಗೆ ಬರೋಬ್ಬರಿ 18 ವರ್ಷ ಕಳೆದಿದ್ದು, ಎರಡು ಚುನಾವಣೆ ಮಾತ್ರ ನಡೆಸಲಾಗಿದ್ದು, 10 ಮಂದಿ ಮೇಯರ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಉಳಿದೆಲ್ಲಾ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಅಡಳಿತಾಧಿಕಾರಿಗಳೇ ಆಡಳಿತ ನಡೆಸಿದ್ದಾರೆ. ಇದೀಗ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಜಾರಿಗೊಳಿಸಲಾಗುತ್ತಿದ್ದು, ರಚನೆಯಾಗುವ ನಗರ ಪಾಲಿಕೆಗಳು ಗ್ರೇಟರ್‌ ಬೆಂಗಳೂರು ಆಡಳಿತ ಅಧಿನಿಯಮದಡಿ ಕಾರ್ಯ ನಿರ್ವಹಿಸಲಿದೆ.

ಬೆಂಗಳೂರಿನ ಸ್ಥಳೀಯ ಸಂಸ್ಥೆಯ ಇತಿಹಾಸ

* 1881ರ ಬ್ರಿಟಿಷರ ಅವಧಿಯಲ್ಲಿ ಪುರಸಭೆ ಸ್ಥಾಪನೆ

* ಬೆಂಗಳೂರು ನಗರ ಪಾಲಿಕೆ: 1949 ರಿಂದ 1995

* ಬೆಂಗಳೂರು ಮಹಾನಗರ ಪಾಲಿಕೆ: 1995ರಿಂದ 2006

* ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ: 2007 ರಿಂದ 2025

* ಗ್ರೇಟರ್‌ ಬೆಂಗಳೂರು: 2025 ರಿಂದ