ಭೈರಪ್ಪನವರು ನಡೆದು ಬಂದ ಹಾದಿ : ಭಿಕ್ಷಾನ್ನ ಸ್ವೀಕರಿಸಿ ವಿದ್ಯಾಭ್ಯಾಸ ಪಡೆದ ಮಹಾ ಕಷ್ಟ ಸಹಿಷ್ಣು

| N/A | Published : Sep 25 2025, 11:43 AM IST

SL Byrappa
ಭೈರಪ್ಪನವರು ನಡೆದು ಬಂದ ಹಾದಿ : ಭಿಕ್ಷಾನ್ನ ಸ್ವೀಕರಿಸಿ ವಿದ್ಯಾಭ್ಯಾಸ ಪಡೆದ ಮಹಾ ಕಷ್ಟ ಸಹಿಷ್ಣು
Share this Article
  • FB
  • TW
  • Linkdin
  • Email

ಸಾರಾಂಶ

ಎಸ್.ಎಲ್‌. ಭೈರಪ್ಪ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಸಂತೇಶಿವರ ಗ್ರಾಮದವರು. ಬಾಲ್ಯಕಾಲದಲ್ಲಿ ಬಹಳ ಕಷ್ಟ ಅನುಭವಿಸಿದ್ದರು. ತಂದೆ ಜವಾಬ್ದಾರಿ ನಿಭಾಯಿಸಲಿಲ್ಲ. ತಾಯಿಯಿಂದಲೇ ತಾನು ಇಷ್ಟು ದೂರ ನಡೆದು ಬರಲು ಸಾಧ್ಯವಾಯಿತು ಎಂದು ಅವರು ಹೇಳಿಕೊಂಡಿದ್ದರು.

ಎಸ್.ಎಲ್‌. ಭೈರಪ್ಪ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಸಂತೇಶಿವರ ಗ್ರಾಮದವರು. ಬಾಲ್ಯಕಾಲದಲ್ಲಿ ಬಹಳ ಕಷ್ಟ ಅನುಭವಿಸಿದ್ದರು. ತಂದೆ ಜವಾಬ್ದಾರಿ ನಿಭಾಯಿಸಲಿಲ್ಲ. ತಾಯಿಯಿಂದಲೇ ತಾನು ಇಷ್ಟು ದೂರ ನಡೆದು ಬರಲು ಸಾಧ್ಯವಾಯಿತು ಎಂದು ಅವರು ಹೇಳಿಕೊಂಡಿದ್ದರು.

ಬಾಲ್ಯಕಾಲದಲ್ಲಿ ಅವರು ಮಾವನ ಮನೆಯಲ್ಲಿದ್ದು ಓದಿದ್ದರು. ಮಾವ ಅಪಾರವಾದ ಹಿಂಸೆ ಕೊಡುತ್ತಿದ್ದರು. ಸಿಕ್ಕಾಪಟ್ಟೆ ಕೆಲಸ ಮಾಡಿಸುತ್ತಿದ್ದರು. ಬಾಲ್ಯದ ಸಂದರ್ಭದಲ್ಲಿ ಪ್ಲೇಗ್‌ ಮಹಾಮಾರಿಗೆ ಅವರ ತಾಯಿ, ಸಹೋದರರು ತೀರಿಕೊಂಡಿದ್ದರು. ಒಬ್ಬ ತಮ್ಮ ಆರನೇ ವಯಸ್ಸಿಗೆ ತೀರಿಕೊಂಡಿದ್ದ. ಅಂತ್ಯಕ್ರಿಯೆ ಮಾಡಲು ಯಾರೂ ಹತ್ತಿರ ಬಂದಿರಲಿಲ್ಲ. ಭೈರಪ್ಪನವರು ತಾನೇ ಹೆಗಲಿಗೆ ಹಾಕಿಕೊಂಡು ಹೋಗಿ ಸುಟ್ಟು ಬಂದೆ ಎನ್ನುತ್ತಾರೆ.

ಭಾರಿ ಕಷ್ಟದಿಂದ ವಾರಾನ್ನ, ಭಿಕ್ಷಾನ್ನ ಸ್ವೀಕರಿಸಿ ವಿದ್ಯಾಭ್ಯಾಸ ಪಡೆದ ಮಹಾ ಕಷ್ಟ ಸಹಿಷ್ಣು ಅವರು. ತಾನು ಪಟ್ಟ ಕಷ್ಟ ಬೇರೆ ಮಕ್ಕಳ ಪಡಬಾರದು ಎಂಬ ಉದ್ದೇಶದಿಂದ ಅಂತ್ಯ ಕಾಲದಲ್ಲಿ ತನ್ನ ದುಡ್ಡನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟ ಕರುಣಾಮಯಿ.

ಅವರು ವಿದ್ಯಾರ್ಥಿ ದೆಸೆಯಿಂದಲೂ ಮೈಸೂರಿನಲ್ಲಿಯೇ ನೆಲೆ ನಿಂತು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡವರು. ಕೆಲಕಾಲ ಭಾರತೀಯ ಭಾಷಾ ಸಂಸ್ಥಾನದಲ್ಲಿ [ಸಿಐಐಎಲ್‌] ಕೆಲಸ ಮಾಡಿದ್ದರು.

ಉಪನ್ಯಾಸಕರಾಗಿ ಕೆಲಸ ಮಾಡಿದ್ದ ಅವರು, ಸಾಹಿತಿಯಾಗಿ ದೇಶವೇ ಮೆಚ್ಚುವ ಕೆಲಸ ಮಾಡಿದರು. ಅವರ ಕೃತಿಗಳು ಅಪಾರ ಜನಮನ್ನಣೆಗೆ ಪಾತ್ರವಾಗಿವೆ. ಯಾರ ಕಾದಂಬರಿ ಹೆಚ್ಚು ಮುದ್ರಣ ಕಂಡಿದೆ ಎಂದು ಕೇಳಿದರೆ, ಯಾರ ಕೃತಿಗಳು ಅತಿ ಹೆಚ್ಚು ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ ಎಂದು ಕೇಳಿದರೆ, ಯಾರ ಕೃತಿಗಳು ಜಾಸ್ತಿ ಸಿನಿಮಾ, ಧಾರಾವಾಹಿಗಳಾಗಿವೆ ಎಂದು ಕೇಳಿದರೆ ಅದಕ್ಕೆ ಉತ್ತರ ಎಸ್‌ಎಲ್‌ ಭೈರಪ್ಪ ಎಂದೇ ಆಗಿದೆ.

‘ನನ್ನ ಹೆಸರು ಭೈರಪ್ಪ ಎಂದು ಬಂದಿದ್ದು ನಾವು ಆದಿಚುಂಚನಗಿರಿಯ ಕಾಲಭೈರವನ ದೇವರ ಭಕ್ತರಾಗಿದ್ದರಿಂದ. ಭೈರ ಮತ್ತು ಅಪ್ಪ ಸೇರಿ ಭೈರಪ್ಪ ಆಯಿತು’ ಎನ್ನುತ್ತಿದ್ದರು.

1999ರಲ್ಲಿ ಕನಕಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಭೈರಪ್ಪ ಅವರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಮೈಸೂರು ಹಾಗೂ ಗುಲ್ಬರ್ಗ ವಿವಿ ಗೌರವ ಡಾಕ್ಟರೇಟ್, ಹಂಪಿ ಕನ್ನಡ ವಿವಿಯಿಂದ ನಾಡೋಜ ಪ್ರಶಸ್ತಿ ದೊರೆತಿದ್ದವು. ಸರಸ್ವತಿ ಸಮ್ಮಾನ್‌ ಪ್ರಶಸ್ತಿ ಕೂಡ ದೊರೆತಿತ್ತು. ಅವರಿಗೆ 2023ರಲ್ಲಿ ದೇಶದ ಮೂರನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಲಭಿಸಿತ್ತು.

ಮೈಸೂರಿನಲ್ಲಿದ್ದರೂ ಅವರಿಗೆ ಊರಿನ ಸೆಳೆತ ಇತ್ತು. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಬಹಳ ಶ್ರಮಪಟ್ಟು ಹುಟ್ಟೂರಿಗೆ ಕುಡಿಯುವ ನೀರಿನ ಯೋಜನೆ ಮಾಡಿಸಿಕೊಟ್ಟಿದ್ದರು. ಅಲ್ಲಿನ ಕೆರೆಯನ್ನು ಅಭಿವೃದ್ಧಿ ಮಾಡಿಸಿದ್ದರು. ಅದರ ಉದ್ಘಾಟನಾ ಸಮಾರಂಭಕ್ಕಾಗಿ ಊರಿಗೆ ಹೋಗಿ, ಪುಟ್ಟ ಮಗುವಿನಂತೆ ಇಡೀ ಊರು ಸುತ್ತಾಡಿ ಬಂದಿದ್ದರು.

ಕಷ್ಟದಿಂದ ಬೆಳೆದು ಬಂದು ಮುಂದೆ ಬಡ ಮಕ್ಕಳಿಗಾಗಿ, ಊರಿನ ಜನರಿಗಾಗಿ ಮಿಡಿದು ಅವರಿಗಾಗಿ ದುಡಿದ ಅಪರೂಪದ ಜೀವ ಎಸ್‌ಎಲ್‌ ಭೈರಪ್ಪ.

Read more Articles on