ಗುಂಡಿ ಬಿದ್ದ ರಸ್ತೆ ಬಿಟ್ಟು ಸುಸ್ಥಿತಿಯಲ್ಲಿದ್ದ ರೋಡ್‌ ಕಾಮಗಾರಿಗೆ ಮತ್ತೆ ಟೆಂಡರ್‌

| N/A | Published : Mar 04 2025, 01:45 AM IST / Updated: Mar 04 2025, 09:15 AM IST

ಸಾರಾಂಶ

ಗೋಗರೆದರೂ ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ಅಧಿಕಾರಿಗಳು, ಸುಸ್ಥಿತಿಯಲ್ಲಿರುವ ಟೆಂಡರ್‌ ಶೂರ್‌ ರಸ್ತೆಗಳನ್ನು ಹೊಸದಾಗಿ ಅಭಿವೃದ್ಧಿಪಡಿಸಲು ಮೈಕ್ರೋ ಸರ್ಪೇಸಿಂಗ್‌ ಡಾಂಬರೀಕರಣದ ಹೆಸರಿನಲ್ಲಿ ಅನಗತ್ಯ ವೆಚ್ಚ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ.

 ಬೆಂಗಳೂರು : ಗೋಗರೆದರೂ ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ಅಧಿಕಾರಿಗಳು, ಸುಸ್ಥಿತಿಯಲ್ಲಿರುವ ಟೆಂಡರ್‌ ಶೂರ್‌ ರಸ್ತೆಗಳನ್ನು ಹೊಸದಾಗಿ ಅಭಿವೃದ್ಧಿಪಡಿಸಲು ಮೈಕ್ರೋ ಸರ್ಪೇಸಿಂಗ್‌ ಡಾಂಬರೀಕರಣದ ಹೆಸರಿನಲ್ಲಿ ಅನಗತ್ಯ ವೆಚ್ಚ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ.

ಕಳೆದ 2017-18ನೇ ಸಾಲಿನಲ್ಲಿ ಸರ್ಕಾರದ ನಗರೋತ್ಥಾನ ಅನುದಾನದಲ್ಲಿ ನಗರದ ಕೇಂದ್ರ ಭಾಗದ ರಿಚ್ಮಂಡ್‌ ರಸ್ತೆ, ಸೆಂಟ್‌ ಮಾರ್ಕ್‌ ರಸ್ತೆ, ಕೆ.ಜಿ.ರಸ್ತೆ, ವಿಠಲ್‌ ಮಲ್ಯ ರಸ್ತೆ ಸೇರಿದಂತೆ ಆರು ರಸ್ತೆಗಳನ್ನು ಟೆಂಡರ್‌ ಶೂರ್‌ನಡಿ ಅಭಿವೃದ್ಧಿ ಪಡಿಸಲಾಗಿದೆ. ಈ ರಸ್ತೆಗಳು ಈಗಲೂ ಸುಸ್ಥಿತಿಯಲ್ಲಿ ಇವೆ. ಆದರೂ ಬಿಬಿಎಂಪಿಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗ ಮೈಕ್ರೋ ಸರ್ಪೇಸಿಂಗ್‌ ಡಾಂಬರೀಕರಣ ಮಾಡುತ್ತಿದೆ.

ಅದರಲ್ಲೂ ಕೆ.ಜಿ ರಸ್ತೆಯ ಹಡ್ಸನ್‌ ವೃತ್ತದಿಂದ ಮೈಸೂರು ಬ್ಯಾಂಕ್‌ ವೃತ್ತದವರೆಗೆ ನಗರದಲ್ಲಿ ಪ್ರಪ್ರಥಮ ಬಾರಿಗೆ ‘ಸ್ಟೋನ್‌ ಮ್ಯಾಟ್ರಿಕ್ಸ್ ಡಾಂಬರೀಕರಣ’ ಎಂಬ ವಿನೂತನ ತಂತ್ರಜ್ಞಾನದಿಂದ ಡಾಂಬರೀಕರಣ ಮಾಡಲಾಗಿತ್ತು. ಹೀಗಾಗಿ, ರಸ್ತೆಯ ಗುಣಮಟ್ಟ ಇಂದಿಗೂ ಸುಸ್ಥಿತಿಯಲ್ಲಿ ಇದೆ ಎಂದು ಪಾಲಿಕೆ ಯೋಜನಾ ವಿಭಾಗದ ಅಧಿಕಾರಿಗಳು ವರದಿ ನೀಡಿದರೂ, ಮೈಕ್ರೋ ಸರ್ಪೇಸಿಂಗ್‌ ಡಾಂಬರೀಕರಣ ಮಾಡಲಾಗಿದೆ.

ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ, ಪಾಲಿಕೆ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಬಿಬಿಎಂಪಿಯ ಯೋಜನಾ ವಿಭಾಗ ಮುಖ್ಯ ಎಂಜಿನಿಯರ್‌ ಲೋಕೇಶ್‌, ಯೋಜನಾ ವಿಭಾಗದಿಂದ ಅಭಿವೃದ್ಧಿ ಪಡಿಸಿದ ಟೆಂಡರ್‌ ಶೂರ್‌ ರಸ್ತೆಗಳನ್ನು ಪಾಲಿಕೆಯ ರಸ್ತೆ ಮೂಲಸೌಕರ್ಯ ವಿಭಾಗಕ್ಕೆ ಹಸ್ತಾಂತರ ಮಾಡಲಾಗಿದೆ. ಹಸ್ತಾಂತರಗೊಂಡ ಬಳಿಕ ಕಳೆದ ಎರಡು ವರ್ಷದಿಂದ ಈ ರಸ್ತೆಗಳ ಯಾವುದೇ ನಿರ್ವಹಣೆ ಮಾಡಿಲ್ಲ. ಆದರೂ ರಸ್ತೆಗಳು ಸುಸ್ಥಿತಿಯಲ್ಲಿದ್ದು, ಗುಂಡಿ ಮುಕ್ತವಾಗಿವೆ. ಪಾದಚಾರಿ ಮಾರ್ಗ, ಮಳೆ ನೀರು ಚೇಂಬರ್‌ ಸ್ವಚ್ಛಗೊಳಿಸುವುದು, ಚೇಂಬರ್‌ ಕವರ್‌ ದುರಸ್ತಿ ಪಡಿಸುವುದು, ಮಾರ್ಕಿಂಗ್‌ ಸೇರಿದಂತೆ ನಿರ್ವಹಣೆ ಕಾರ್ಯ ಅಗತ್ಯವಿದೆ. ಆದರೆ, ರಸ್ತೆ ಮತ್ತು ಮೂಲಸೌಕರ್ಯ ವಿಭಾಗದಿಂದ ಇಡೀ ರಸ್ತೆಗಳನ್ನು ಹೊಸದಾಗಿ ಅಭಿವೃದ್ಧಿ ಪಡಿಸಲು ಮುಂದಾಗಿದೆ ಎಂದು ವಿವರಿಸಿದ್ದಾರೆ.

ಸರ್ಕಾರದಿಂದ 2024-25ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿಗೆ ಅನುಮೋದನೆ ನೀಡಲಾದ ₹694 ಕೋಟಿ ವೆಚ್ಚದ ಕಾಮಗಾರಿಯಲ್ಲಿ ಟೆಂಡರ್‌ ಶೂರ್ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗೆ ₹11.50 ಕೋಟಿ ವೆಚ್ಚದಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗುತ್ತಿದೆ. ಟೆಂಡರ್‌ ಶೂರ್‌ ರಸ್ತೆಗಳನ್ನು ಹೊಸದಾಗಿ ಅಭಿವೃದ್ಧಿ ಪಡಿಸುವ ಅಗತ್ಯವಿಲ್ಲ. ನಿರ್ವಹಣೆ ಕಾಮಗಾರಿ ಕೈಗೊಂಡರೆ ಸಾಕು ಎಂಬ ಅಭಿಪ್ರಾಯದೊಂದಿಗೆ, ಟೆಂಡರ್‌ ಶೂರ್‌ ರಸ್ತೆಗಳ ಅಭಿವೃದ್ಧಿ ಟೆಂಡರ್‌ ಪ್ರಕ್ರಿಯೆ ಕೈ ಬಿಡುವಂತೆ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದ್ದಾರೆ.

ಏನಿದು ಮೈಕ್ರೋ ಸರ್ಪೇಸಿಂಗ್‌?

ಹಲವಾರು ವರ್ಷದಿಂದ ಡಾಂಬರೀಕರಣ ಮಾಡದಿರುವ ರಸ್ತೆಯ ಮೇಲ್ಮೈ ಗುಣಮಟ್ಟ ಹೆಚ್ಚಿಸಲು ಗೋಡೆಗಳಿಗೆ ಬಣ್ಣ ಬಳಿದ ರೀತಿಯಲ್ಲಿ ಡಾಂಬರೀಕರಣ ಮಾಡುವ ವಿಧಾನವನ್ನು ಮೈಕ್ರೋ ಸರ್ಪೇಸಿಂಗ್‌ ಡಾಂಬರೀಕರಣ ಎನ್ನಲಾಗುತ್ತದೆ. ಸಾಮಾನ್ಯ ಡಾಂಬರೀಕರಣಕ್ಕೆ ಇದು ಕಡಿಮೆ ವೆಚ್ಚವಾಗಿದೆ. ಈ ರೀತಿ ಮಾಡುವುದರಿಂದ ರಸ್ತೆಯ ಬಾಳಿಕೆ ಹೆಚ್ಚಾಗಲಿದೆ ಎಂಬುದು ಬಿಬಿಎಂಪಿ ಅಭಿಪ್ರಾಯವಾಗಿದೆ.