ಆಟೋ ಕನಿಷ್ಠ ದರ 36 ರು. ಹೆಚ್ಚಳಕ್ಕೆ ಪ್ರಸ್ತಾವ ಸಾರಿಗೆ ಸಚಿವರ ಒಪ್ಪಿಗೆ

| Published : Jul 02 2025, 01:47 AM IST

ಸಾರಾಂಶ

ನಗರದಲ್ಲಿ ಆಟೋರಿಕ್ಷಾ ಮೀಟರ್ ದರ ಪರಿಷ್ಕರಣೆ ಬಹುತೇಕ ಖಚಿತವಾಗಿದೆ. ಮೊದಲ 1.9 ಕಿ.ಮೀ ಗೆ ಕನಿಷ್ಠ ದರ ಹಾಲಿ 30 ರು.ಗಳಿಂದ 36 ರು., ನಂತರದ ಪ್ರತಿ ಕಿ.ಮೀಗೆ ಹಾಲಿ 15 ರು.ಗಳಿಂದ 18 ರು.ಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಆಟೋರಿಕ್ಷಾ ಮೀಟರ್ ದರ ಪರಿಷ್ಕರಣೆ ಬಹುತೇಕ ಖಚಿತವಾಗಿದೆ. ಮೊದಲ 1.9 ಕಿ.ಮೀ ಗೆ ಕನಿಷ್ಠ ದರ ಹಾಲಿ 30 ರು.ಗಳಿಂದ 36 ರು., ನಂತರದ ಪ್ರತಿ ಕಿ.ಮೀಗೆ ಹಾಲಿ 15 ರು.ಗಳಿಂದ 18 ರು.ಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಐವರು ಸದಸ್ಯರ ಸಮಿತಿಯ ಶಿಫಾರಸು ಆಧರಿಸಿ ಜಿಲ್ಲಾ ಸಾರಿಗೆ ಪ್ರಾಧಿಕಾರವಾಗಿರುವ (ಡಿಟಿಎ) ಜಿಲ್ಲಾಧಿಕಾರಿ ಜಿ. ಜಗದೀಶ ಸಲ್ಲಿಸಿರುವ ಪ್ರಸ್ತಾವನೆಗೆ ಸಾರಿಗೆ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ. ದರ ಪರಿಷ್ಕರಣೆಯ ಕಡತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನಿಸಲಾಗಿದೆ. ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಮಾರ್ಚ್ ತಿಂಗಳಲ್ಲಿ ಆಟೋ ಚಾಲಕರ ಸಂಘಟನೆಗಳು, ಪ್ರಯಾಣಿಕರು ಸೇರಿದಂತೆ ಸಂಬಂಧಿಸಿದ ಎಲ್ಲರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕನಿಷ್ಠ ದರವನ್ನು 40 ರು. ನಿಗದಿಪಡಿಸಬೇಕು. ನಂತರದ ಪ್ರತಿ ಕಿ.ಮೀಗೆ 20 ರು. ನಿಗದಿಪಡಿಸಬೇಕು ಎಂದು ಆಟೋ ಚಾಲಕರ ಸಂಘಟನೆಗಳು ಮನವಿ ಮಾಡಿದ್ದವು. ಆದರೆ, ಡಿಟಿಎ ಶೇ.20ರಷ್ಟು ದರ ಹೆಚ್ಚಳಕ್ಕೆ ಸಹಮತಿ ನೀಡಿದೆ.

ಬೈಕ್ ಟ್ಯಾಕ್ಸಿ ನಿಷೇಧದ ಬಳಿಕ ನಿರ್ಧಾರ: ಆಟೋ ಬಾಡಿಗೆ ಹೆಚ್ಚಳ ಮಾಡಿದರೆ ಕಡಿಮೆ ದರದಲ್ಲಿ ಸೇವೆ ಒದಗಿಸುವ ಬೈಕ್ ಟ್ಯಾಕ್ಸಿ ಕಡೆ ಮತ್ತಷ್ಟು ಜನ ಮುಖ ಮಾಡುತ್ತಾರೆ ಎನ್ನುವ ಕಾರಣಕ್ಕೆ ದರ ಹೆಚ್ಚಳದ ಕುರಿತು ಆಟೋ ಚಾಲಕರು ಹಿಂಜರಿಕೆ ಹೊಂದಿದ್ದರು. ಆದರೆ, ಇತ್ತೀಚೆಗೆ ಬೈಕ್ ಟ್ಯಾಕ್ಸಿಗಳನ್ನು ನಗರದಲ್ಲಿ ನಿಷೇಧಿಸಿರುವುದರಿಂದ ದರ ಹೆಚ್ಚಳ ಬೇಡಿಕೆಗೆ ಬಲ ಬಂದಿದೆ.