ಸಾರಾಂಶ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಉತ್ತರ, ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿ ವಿವಿಧ ಪ್ರದೇಶದಲ್ಲಿ ಸೋಮವಾರ ಸಂಜೆ ಗಾಳಿ ಸಹಿತ ಮಳೆಯಾಗಿದೆ.
ಬೆಂಗಳೂರಿನಲ್ಲಿ ಪೂರ್ವ ಮುಂಗಾರಿನ ಅಬ್ಬರ ಸೋಮವಾರ ಸಹ ಮುಂದುವರೆದಿದೆ. ಬೆಳಗ್ಗೆ ನಗರದಲ್ಲಿ ಬಿಸಿಲಿನ ವಾತಾವರಣ ಕಂಡು ಬಂತಾದರೂ. ಮಧ್ಯಾಹ್ನ ನಂತರ ಮೋಡ ಕವಿದು ಮಳೆ ಸುರಿದಿದೆ.
ಅರಮನೆ ನಗರ ಹಾಗೂ ರಾಧಾಕೃಷ್ಣ ದೇವಸ್ಥಾನ ವ್ಯಾಪ್ತಿಯಲ್ಲಿ ಒಂದಷ್ಟು ಹೆಚ್ಚಿನ ಪ್ರಮಾಣದ ಮಳೆಯಾಗಿದ್ದು ಬಿಟ್ಟರೆ ಉಳಿದಂತೆ ಬ್ಯಾಟರಾಯನಪುರ, ಕೊಡಿಗೇಹಳ್ಳಿ, ಥಣಿಸಂದ್ರ, ನಾಗವಾರ, ದೇವರಜೀವನಹಳ್ಳಿ, ರಾಮಸ್ವಾಮಿ ಪಾಳ್ಯ, ಪುಲಕೇಶಿನಗರ, ಜೋಗುಪಾಳ್ಯ, ಶಾಂತಲ ನಗರ, ಶಾಂತಿನಗರ, ಹೆಮ್ಮಿಗೆಪುರ, ಜ್ಞಾನಭಾರತಿ, ಹೇರೋಹಳ್ಳಿ, ಪದ್ಮನಾಭನಗರ, ಶಂಕರಮಠ, ಮಹಾಲಕ್ಷ್ಮಿಲೇಔಟ್, ರಾಜಾಜಿನಗರ, ಮಲ್ಲೇಶ್ವರ, ಬಸವೇಶ್ವರನಗರ, ನಂದಿನಿ ಲೇಔಟ್, ಲಗ್ಗೇರಿ, ಲಕ್ಷ್ಮಿದೇವಿನಗರ ಸೇರಿದಂತೆ ಮೊದಲಾದ ಕಡೆ ಸಾಧಾರಣ ಮಳೆಯಾಗಿದೆ.
ಸೋಮವಾರ ಸಂಜೆ ಸುರಿದ ಗಾಳಿ ಮಳೆಗೆ ವಿವಿಧ ಕಡೆ ಮರ ಹಾಗೂ ಮರದ ಕೊಂಬೆ ಮತ್ತು ವಿದ್ಯುತ್ ಕಂಬ ಧರೆಗುರಿಳಿದ ವರದಿಯಾಗಿದೆ. ಶಂಕರ ಮಠ ವಾರ್ಡ್‌ನ ಗೃಹ ಲಕ್ಷ್ಮಿ ಲೇಔಟ್‌ನಲ್ಲಿ ತೆಂಗಿನ ಮರ ಬಿದ್ದು, ಆಟೋ ಜಖಂಗೊಂಡಿದೆ. ಎರಡು ವಿದ್ಯುತ್ ಕಂಬ ಹಾನಿಯಾಗಿದೆ.
ಒಟ್ಟಾರೆ ನಗರದಲ್ಲಿ ಸರಾಸರಿ 4.2 ಮಿ.ಮೀ ಮಳೆಯಾಗಿದೆ. ಕೊಡಿಗೇಹಳ್ಳಿಯಲ್ಲಿ ಅತಿ ಹೆಚ್ಚು 2.4 ಸೆಂ.ಮೀ ಮಳೆಯಾಗಿದೆ. ಕೊಟ್ಟಿಗೆಪಾಳ್ಯದ ಬಸವೇಶ್ವರ ನಗರದಲ್ಲಿ 1.6 ಸೆಂ.ಮೀ, ಚೌಡೇಶ್ವರಿಯಲ್ಲಿ 1.5, ಹೇರೋಹಳ್ಳಿಯಲ್ಲಿ 1.2 ಹಾಗೂ ಸಂಪಗಿರಾಮನಗರದಲ್ಲಿ 1.1 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.