ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿಮೀ ಎತ್ತರಿಸಿದ ಮಾರ್ಗದಲ್ಲಿ ಬಿಇಎಂಎಲ್‌ ನೀಡಿರುವ ಪ್ರೊಟೊಟೈಪ್‌ ರೈಲಿನ ಪ್ರಾಯೋಗಿಕ ಸಂಚಾರ, ತಪಾಸಣೆ ಚುರುಕಿನಿಂದ ಸಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿಮೀ ಎತ್ತರಿಸಿದ ಮಾರ್ಗದಲ್ಲಿ ಬಿಇಎಂಎಲ್‌ ನೀಡಿರುವ ಪ್ರೊಟೊಟೈಪ್‌ ರೈಲಿನ ಪ್ರಾಯೋಗಿಕ ಸಂಚಾರ, ತಪಾಸಣೆ ಚುರುಕಿನಿಂದ ಸಾಗಿದೆ.

ಬೆಳಗ್ಗೆ 9ರಿಂದ ಸಂಜೆ 7.30ರವರೆಗೆ ರೈಲನ್ನು ಸಂಚರಿಸಿ ತಪಾಸಣೆ ಮಾಡಲಾಗುತ್ತಿದೆ. ರೈಲನ್ನು ವಿವಿಧ ವೇಗದಲ್ಲಿ ಸಂಚರಿಸಿ ಟ್ರಾಕ್ಷನ್‌ ಹಾಗೂ ಬ್ರೇಕ್‌ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ರೈಲಿನ ಮೋಟಾರ್ ಮತ್ತು ಪ್ರೊಪಲ್ಷನ್ ವ್ಯವಸ್ಥೆಯ ದಕ್ಷತೆ, ಶಕ್ತಿ ಮತ್ತು ಕಾರ್ಯಾಚರಣೆಯ ಸ್ಥಿರತೆಯನ್ನು ಅಳೆಯುವ ಕಾರ್ಯಕ್ಷಮತೆಯ ಮೌಲ್ಯಮಾಪನ, ಸಾಮಾನ್ಯ ವೇಗ ವಿದ್ಯುತ್‌ ಶಕ್ತಿಯ ಬಳಕೆ ಮತ್ತು ಬ್ರೇಕಿಂಗ್‌ ನಿಯತಾಂಕಗಳನ್ನು ಪರಿಶೀಲಿಸಲಾಗುತ್ತಿದೆ. ಮುಂದಿನ ಫೆ. 15ರವರೆಗೆ ಈ ಪರೀಕ್ಷೆ ನಡೆಸುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

ಬಳಿಕ ಆಸಿಲೇಷನ್‌, ಸಿಗ್ನಲಿಂಗ್‌, ವಿದ್ಯುತ್‌ ಮತ್ತು ದೂರ ಸಂಪರ್ಕ ವ್ಯವಸ್ಥೆ ಸೇರಿದಂತೆ ಇನ್ನಿತರೆ ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಏಪ್ರಿಲ್‌ ಮಧ್ಯಭಾಗದವರೆಗೆ ಈ ತಪಾಸಣೆ ನಡೆಸಿ ವರದಿ ರೂಪಿಸಿಕೊಳ್ಳುವುದಾಗಿ ಬೆಂಗಳೂರು ಮಟ್ರೋ ರೈಲು ನಿಗಮವು ತಿಳಿಸಿದೆ.

ಬಳಿಕ ಆರ್‌ಡಿಎಸ್‌ಒ (ರಿಸರ್ಚ್‌ ಡಿಸೈನ್‌ ಆ್ಯಂಡ್‌ ಸ್ಟ್ಯಾಂಡರ್ಡ್ಸ್‌ ಆರ್ಗನೈಸೇಶನ್‌), ಸಿಎಂಆರ್‌ಎಸ್‌ ತಜ್ಞರ ತಂಡಗಳು ಪರಿಶೀಲನೆ ನಡೆಸಿ ಅವು ತಮ್ಮ ವರದಿ ಮಾಡಿಕೊಳ್ಳಲಿವೆ. ಈ ವರದಿ ಆಧರಿಸಿ ಕೇಂದ್ರ ರೈಲ್ವೆ ಮಂಡಳಿಯು ಸುರಕ್ಷತಾ ಪ್ರಮಾಣಪತ್ರ ನೀಡಲಿದ್ದು, ಬಳಿಕ ಮೇ ತಿಂಗಳಲ್ಲಿ ವಾಣಿಜ್ಯ ಸಂಚಾರ ನಡೆಸುವ ಗುರಿ ಹೊಂದಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.

ಕಾಳೇನ ಅಗ್ರಹಾರದಿಂದ ನಾಗವಾರವರೆಗಿನ 21.56 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಐದು ಪ್ಯಾಕೇಜ್‌ಗಳಲ್ಲಿ ಕೈಗೊಳ್ಳಲಾಗಿದೆ. ಇದರಲ್ಲಿ 7.5 ಕಿ.ಮೀ. ಎತ್ತರಿಸಿದ ಮಾರ್ಗವಿದ್ದು, ಉಳಿದ 13 ಕಿಮೀ ಸುರಂಗ ಮಾರ್ಗವಾಗಿದೆ. ಈ ಮಾರ್ಗವು ಒಟ್ಟು 17 ನಿಲ್ದಾಣಗಳನ್ನು ಒಳಗೊಂಡಿದೆ.

ಸದ್ಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎತ್ತರಿಸಿದ ಮಾರ್ಗದ ನಿರ್ಮಾಣ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ ಈ ಮಾರ್ಗದಲ್ಲಿ ಇದೀಗ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ. ಈ ಮಾರ್ಗದಲ್ಲಿ ಒಟ್ಟು ಐದು ನಿಲ್ದಾಣಗಳು ಇವೆ. ಪರೀಕ್ಷಾರ್ಥ ಸಂಚಾರ ಮುಗಿದ ಬಳಿಕ ಸುರಕ್ಷತಾ ಪ್ರಮಾಣಪತ್ರ ಲಭಿಸಿದ ಬಳಿಕ ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ನಡೆಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಅಧಿಕಾರಿಗಳು ತಿಳಿಸಿದ್ದಾರೆ.

ನಿಲ್ದಾಣಗಳು ಯಾವುವು?

ಎತ್ತರಿಸಿದ ಮಾರ್ಗ:

ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ತಾವರೆಕೆರೆ

ಸುರಂಗ ಮಾರ್ಗ:

ಡೇರಿ ಸರ್ಕಲ್‌, ಲಕ್ಕಸಂದ್ರ, ಲ್ಯಾಂಗ್‌ಫೋರ್ಡ್‌, ರಾಷ್ಟ್ರೀಯ ಮಿಲಿಟರಿ ಶಾಲೆ, ಎಂ.ಜಿ. ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್‌ ನಿಲ್ದಾಣ, ಪಾಟರಿ ಟೌನ್‌, ಟ್ಯಾನರಿ ರಸ್ತೆ, ವೆಂಕಟೇಶಪುರ, ಕಾಡುಗೊಂಡನಹಳ್ಳಿ, ನಾಗವಾರ.