ಟ್ರಂಪ್‌ ವೀಸಾ ಪ್ರಹಾರ: ಸ್ವಾವಲಂಬಿ ಭಾರತಕ್ಕೆ ತೆರೆದ ಅವಕಾಶ

| N/A | Published : Sep 22 2025, 10:32 AM IST

Donald J Trump

ಸಾರಾಂಶ

ಅಮೆರಿಕ ಅಧ್ಯಕ್ಷ ಟ್ರಂಪ್‌ ಘೋಷಿಸಿದ ವೀಸಾ ಶುಲ್ಕ ಹೆಚ್ಚಳ ಭಾರತೀಯರಲ್ಲಿ ಕಳವಳ ಉಂಟುಮಾಡಿದೆ, ಆದರೆ ವಿಶ್ವದ ಬೃಹತ್‌ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಿವೆ. ಭಾರತ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದೆ. ಹಾಗಾಗಿ ಭಾರತ ಆತಂಕಪಡುವ ಅಗತ್ಯವಿಲ್ಲವೆಂಬುದು ಸ್ಪಷ್ಟ.

ಅಮೆರಿಕ ಅಧ್ಯಕ್ಷ ಟ್ರಂಪ್‌ ಘೋಷಿಸಿದ ವೀಸಾ ಶುಲ್ಕ ಹೆಚ್ಚಳ ಭಾರತೀಯರಲ್ಲಿ ಕಳವಳ ಉಂಟುಮಾಡಿದೆ. ಅಮೆರಿಕದ ಕಂಪನಿಗಳು ಭಾರತೀಯರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಹಿಂದೇಟು ಹಾಕಬಹುದು ಎಂಬ ಆತಂಕ ವ್ಯಕ್ತವಾಗಿದೆ. ಆದರೆ ವಿಶ್ವದ ಬೃಹತ್‌ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಿವೆ. ಭಾರತ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದೆ. ಹಾಗಾಗಿ ಭಾರತ ಆತಂಕಪಡುವ ಅಗತ್ಯವಿಲ್ಲವೆಂಬುದು ಸ್ಪಷ್ಟ.

ಆತಂಕದ ಅಲೆ ಹುಟ್ಟಿಸಿದ ಟ್ರಂಪ್‌ ವೀಸಾ ನೀತಿ । ಪ್ರಧಾನಿ ಮೋದಿ ಕರೆಯಂತೆ ಆತ್ಮನಿರ್ಭರವಾಗಲು ಇದು ಸಕಾಲ

ನಾರಾಯಣ ಯಾಜಿ

ಸೆ.19ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್‌-1ಬಿ ವೀಸಾ ಶುಲ್ಕದಲ್ಲಿ ಹೆಚ್ಚಳ ಮಾಡಿ, ವಾರ್ಷಿಕ 88 ಲಕ್ಷ ರು.ಗಳಿಗೆ ($100,000) ಏರಿಸಿರುವುದಾಗಿ ಘೋಷಿಸಿದರು. ಅನೇಕ ಭಾರತೀಯರಿಗೆ ಇದು ಬಾಂಬ್‌ ದಾಳಿ ಮಾಡಿದಂತಾಯಿತು. ಅಧಿಕಾರಕ್ಕೆ ಬಂದಂದಿನಿಂದಲೂ ‘ಅಮೆರಿಕ ಮೊದಲು’ ಎನ್ನುವ ತಮ್ಮ ನೀತಿಗನುಗುಣವಾಗಿ, ವಿದೇಶಿ ಉದ್ಯೋಗಿಗಳನ್ನು ಅಮೆರಿಕದ ಕಂಪನಿಗಳು ನೇಮಿಸಿಕೊಳ್ಳುವುದರ ವಿರುದ್ಧ ಟ್ರಂಪ್ ಸಿಡಿಯುತ್ತಲೇ ಇದ್ದರು. ಅದರ ಬೆನ್ನಲ್ಲೇ ಟ್ರಂಪ್ ಹೊರಡಿಸಿದ ಹೊಸ ನಿಯಮ ಒಮ್ಮೆಲೇ ಜಗತ್ತಿನಲ್ಲಿ ಅನೇಕ ಗೊಂದಲಗಳಿಗೆ ಕಾರಣವಾಯಿತು. ಮೈಕ್ರೋಸಾಫ್ಟ್‌ನಂತಹ ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಸೆ.21ರ ರಾತ್ರಿ 11.59ರೊಳಗೆ ಅಮೆರಿಕ ಪ್ರವೇಶಿಸಬೇಕೆಂದು ಕರೆಗೊಟ್ಟವು. ರಜೆ ಅಥವಾ ಕಂಪನಿಯ ವ್ಯವಹಾರದ ನಿಮಿತ್ತ ಸ್ವದೇಶಕ್ಕೆ ಮರಳಿದ್ದ ಸಾವಿರಾರು ಉದ್ಯೋಗಿಗಳು ಪ್ರವಾಸವನ್ನು ಮೊಟಕುಗೊಳಿಸಿ ಅಮೆರಿಕದ ವಿಮಾನ ಹತ್ತಲು ಯತ್ನಿಸಿದರು. ಪರಿಣಾಮ ವಿಮಾನ ಟಿಕೆಟ್‌ ದರ ಗಗನಕ್ಕೇರಿತು. ಅನೇಕರು ಟಿಕೆಟ್‌ ಸಿಗದೆ ಪರದಾಡಿದರು. ಒಟ್ಟಾರೆ ಜಾಗತಿಕವಾಗಿ, ವಿಶೇಷವಾಗಿ ಭಾರತಕ್ಕೆ ಇದು ಗಂಭೀರ ಸಮಸ್ಯೆಯಾಗಿ ಕಾಡಿದ್ದು ಸುಳ್ಳಲ್ಲ. ಇಷ್ಟೆಲ್ಲ ಅವಾಂತರ ಸೃಷ್ಟಿಯಾದ ಬೆನ್ನಲ್ಲೇ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೆರೋಲಿನ್ ಲೆವಿಟ್ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಇದಕ್ಕೊಂದು ಸ್ಪಷ್ಟೀಕರಣ ನೀಡಿದರು. ಅವರ ಸ್ಪಷ್ಟೀಕರಣ ಹೀಗಿದೆ:

1) ಇದು ವಾರ್ಷಿಕ ಶುಲ್ಕವಲ್ಲ. ಇದು ಅರ್ಜಿಗೆ ಮಾತ್ರ ಅನ್ವಯಿಸುವ ಒಂದು ಬಾರಿಯ ಶುಲ್ಕವಾಗಿದೆ.

2) ಈಗಾಗಲೇ ಎಚ್‌-1ಬಿ ವೀಸಾಗಳನ್ನು ಹೊಂದಿರುವವರು ಮತ್ತು ಪ್ರಸ್ತುತ ಅಮೆರಿಕದ ಹೊರಗಿರುವವರು ಮರುಪ್ರವೇಶಿಸಲು $100,000 ಶುಲ್ಕ ವಿಧಿಸಲಾಗುವುದಿಲ್ಲ. ಎಚ್‌-1ಬಿ ವೀಸಾ ಹೊಂದಿರುವವರು ಎಂದಿನಂತೆ ದೇಶವನ್ನು ತೊರೆಯಬಹುದು ಮತ್ತು ಮರುಪ್ರವೇಶಿಸಬಹುದು. ಅವರು ಹೊಂದಿರುವ ಈ ಸ್ವಾತಂತ್ರ್ಯ ಟ್ರಂಪ್‌ ಅವರ ಹೊಸ ಘೋಷಣೆಯಿಂದ ಪ್ರಭಾವಿತವಾಗುವುದಿಲ್ಲ.

3) ಇದು ಹೊಸ ವೀಸಾಗಳಿಗೆ ಮಾತ್ರ ಅನ್ವಯಿಸುತ್ತದೆ, ನವೀಕರಣಗಳಿಗೆ ಅಲ್ಲ ಮತ್ತು ಪ್ರಸ್ತುತ ವೀಸಾ ಹೊಂದಿರುವವರಿಗೆ ಅಲ್ಲ.

ಈ ಮೇಲಿನ ಸ್ಪಷ್ಟೀಕರಣದ ನಂತರ ಸದ್ಯದ ಮಟ್ಟಿಗೆ ಈ ಪ್ರಕರಣ ಬಗೆಹರಿದಿದೆ ಎನ್ನಬಹುದು. ಆದರೆ ಇಷ್ಟಕ್ಕೆ ಸುಮ್ಮನಾಗುವಂತಿಲ್ಲ. ಮುಂದಿನ ದಿನಗಳಲ್ಲಿ ಭಾರತೀಯರು ಅಮೆರಿಕ ವೀಸಾದ ಕುರಿತು ಯಾವ ನಿರ್ಣಯವನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಕಾನೂನು ಹೇಳುವುದೇನು?:

ಆಸಕ್ತಿಕರ ವಿಷಯವೆಂದರೆ, ವೀಸಾ ಕುರಿತಾದ ಕಾಯಿದೆಯನ್ನು ಮಾಡುವ ಅಧಿಕಾರ ಅಮೆರಿಕದ ಸಂಸತ್ತಿಗಿದೆಯೇ ವಿನಃ ಅಲ್ಲಿನ ಅಧ್ಯಕ್ಷರಿಗಿಲ್ಲ. ಎಚ್‌-1ಬಿ ವೀಸಾ ಪದ್ಧತಿ ಅಮೆರಿಕಕ್ಕೆ ಅಗತ್ಯವಿರುವ ಕೌಶಲ್ಯ ಹೊಂದಿರುವ ವಿದೇಶಿ ಉದ್ಯೋಗಿಗಳಿಗಾಗಿ ಪರಿಚಯಿಸಲ್ಪಟ್ಟದ್ದಾಗಿದೆ. 1952ರಲ್ಲಿ ಅಮೆರಿಕದ ವಲಸೆ ಮತ್ತು ರಾಷ್ಟ್ರೀಯತೆ ಕಾಯಿದೆಯ ಅಡಿಯಲ್ಲಿ ಮೊದಲ ಬಾರಿ ಈ ವೀಸಾವನ್ನು ಕಾಯಿದೆಯಾಗಿ ಜಾರಿಗೊಳಿಸಲಾಯಿತು. ಆದರೆ ಇದು ಅಮೆರಿಕನ್ನರ ಉದ್ಯೋಗ ಕಸಿಯುವ ವೀಸಾ ಎನ್ನುವ ಕೂಗು ಕೇಳಿಬಂದಾಗ ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್‌ ಎಚ್‌. ಡಬ್ಲ್ಯು. ಬುಶ್ ಅವರ ಕಾಲದಲ್ಲಿ ಸಂಸತ್ತು, ವಲಸೆ ಕಾಯ್ದೆ 1990ರ ಮೂಲಕ ಎಚ್‌-1ಬಿ ಎಂಬ ವಿಶಿಷ್ಟ ವೀಸಾವನ್ನು ಕಾನೂನುಬದ್ಧವಾಗಿ ಜಾರಿಗೆ ತಂದಿತು. ಜೊತೆಗೆ, ಅದನ್ನು ಕೊಡುವ ಸಂಖ್ಯೆಗೆ ಮಿತಿಯನ್ನು ಹೇರಿ ಒಂದು ಶಾಶ್ವತ ನಿಯಮವನ್ನು ಜಾರಿಗೆ ತಂದಿತು. ಈ ಪ್ರಕಾರ ಯಾವುದೇ ಶಾಶ್ವತ ಬದಲಾವಣೆ ಅಥವಾ ಕಾನೂನು ತಿದ್ದುಪಡಿ ಮಾಡಲು ಸಂಸತ್ತು ಮಾತ್ರ ಶಕ್ತಿ ಹೊಂದಿರುತ್ತದೆ.

ಈಗಾಗಲೇ ಕಾನೂನು ತಜ್ಞರು ಟ್ರಂಪ್‌ ಹೊಸ ಘೋಷಣೆಯ ಕುರಿತು ಆಕ್ಷೇಪ ಎತ್ತಿದ್ದಾರೆ. ಈ ಹಿಂದೆ ಕೋವಿಡ್ ಸಮಯದಲ್ಲಿ ಟ್ರಂಪ್ ಇದೇ ರೀತಿ ಕೆಲವರ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಅದನ್ನು ಫೆಡರಲ್ ಕೋರ್ಟ್‌ ಅಸಿಂಧು ಎಂದು ಸಾರಿದರೂ ಸುಪ್ರೀಂ ಕೋರ್ಟ್‌ನಲ್ಲಿ ಟ್ರಂಪ್‌ ಪರವಾಗಿಯೇ ತೀರ್ಪು ಬಂದಿತ್ತು. ಆದರೂ ಸಮಷ್ಟಿಯಾಗಿ ಎಲ್ಲರನ್ನೂ ಈ ಕಾಯಿದೆಯಡಿ ತರಲಾಗುವುದಿಲ್ಲವೆಂದು ಅಮೆರಿಕದ ವಲಸೆ ವಕೀಲರು ಈಗಾಗಲೇ ಈ ನಿರ್ಣಯವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲು ಸಜ್ಜಾಗಿದ್ದಾರೆ. ಅದಕ್ಕೆ ಮೂಲ ಕಾರಣ ಅಧ್ಯಕ್ಷರಿಗೆ ವೀಸಾ ಶುಲ್ಕ ನಿಗದಿಪಡಿಸುವ ಅಧಿಕಾರವಿಲ್ಲವೆಂಬುದೇ ಆಗಿದೆ.

ವೀಸಾದಾರರಲ್ಲಿ ಭಾರತೀಯರೇ ಅಧಿಕ:

ಪ್ರತಿವರ್ಷ ಅಮೆರಿಕವು ಅಲ್ಲಿ ಕಲಿತ ಪದವೀಧರ ಕೋಟಾ ಸೇರಿಸಿ ಒಟ್ಟು 85,000 ಎಚ್‌-1ಬಿ ವೀಸಾವನ್ನು ವಿದೇಶಿಯರಿಗೆ ನೀಡುತ್ತದೆ. ಇದು 6 ವರ್ಷಗಳ ಅವಧಿಗೆ ಇದ್ದು, ನಂತರ ನವೀಕರಿಸಿಕೊಳ್ಳಬಹುದಾಗಿದೆ. ತನ್ಮೂಲಕ ಅಮೆರಿಕದ ಪೌರತ್ವ ಪಡೆಯಲು ಗ್ರೀನ್ ಕಾರ್ಡ್‌ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಮೆರಿಕದಲ್ಲಿ ಓದಿದವರ ಕೋಟಾವೂ ಸೇರಿದಂತೆ ಪ್ರತಿವರ್ಷವೂ ಇದಕ್ಕಿಂತ ಸುಮಾರು 8ರಿಂದ 10 ಪಟ್ಟು ಅರ್ಜಿಗಳು ಬರುತ್ತಿವೆ. ಇತ್ತೀಚಿಗೆ ಚೀನಾದ ಅಭಿವೃದ್ಧಿಯಿಂದಾಗಿ ಅಲ್ಲಿನವರ ಅಮೆರಿಕ ವಲಸೆ ಕಡಿಮೆಯಾಗಿದೆ. ಈ ವೀಸಾದಲ್ಲಿ ಸುಮಾರು ಶೇ.70 ಭಾರತೀಯರ ಪಾಲಾಗುತ್ತಿದೆ. ಅಮೆರಿಕದಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಭಾರತೀಯರು ಈ ವೀಸಾದಡಿಯಲ್ಲಿದ್ದಾರೆ. ಅವರ ಕುಟುಂಬದವರೂ ಸೇರಿ ಒಟ್ಟು ಸಂಖ್ಯೆ ಸುಮಾರು 7 ಲಕ್ಷ ದಾಟಬಹುದೆಂದು ಅಂದಾಜಿಸಲಾಗಿದೆ.

ಭಾರತೀಯರ ಮೇಲೇಕೆ ಕೆಂಗಣ್ಣು?:

ಅಮೆರಿಕದ ಜನಸಂಖ್ಯೆಯ ಶೇ.1.5 ಭಾರತೀಯರಿದ್ದಾರೆ. ಇವರೆಲ್ಲರೂ ಕೌಶಲ್ಯಭರಿತ ತಂತ್ರಜ್ಞರಾಗಿರುವುದರಿಂದ ಸಹಜವಾಗಿ ಇವರ ಸಂಬಳ ಅಮೆರಿಕದವರಿಗಿಂತ ಜಾಸ್ತಿಯಿದೆ. ತಲಾ ಆದಾಯ ಅಮೆರಿಕದ ನಾಗರಿಕರದ್ದು $75,000 ಇದ್ದರೆ ಭಾರತೀಯರದ್ದು ಸರಾಸರಿ $100000 - $125000ಗಳಷ್ಟಿದೆ. ದೊಡ್ಡ ಮನೆ, ಲಕ್ಷುರಿ ಕಾರು ಇವೆಲ್ಲವನ್ನೂ ಬಹುಪಾಲು ಭಾರತೀಯರು ಹೊಂದಿದ್ದಾರೆ. ಭಾರತೀಯರ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಆಡಳಿತದ ಮಹತ್ವದ ಹುದ್ದೆಯಲ್ಲಿದ್ದಾರೆ. ಅಮೆರಿಕದವರ ಬಡತನದ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಸುಮಾರು ಶೇ.12ರಷ್ಟಿದ್ದರೆ, ಭಾರತ ಮೂಲದವರದ್ದು ಶೇ.6ರಷ್ಟಿದೆ. ಇದು ಸಹಜವಾಗಿ ಅಲ್ಲಿನವರ ಕಣ್ಣು ಕುಕ್ಕಿಸುತ್ತಿದೆ. ಹಾಗಾಗಿ ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯರನ್ನು ಮೋಸಗಾರರೆಂದು, ಭಾರತವನ್ನು ಭ್ರಷ್ಟರ ದೇಶ ಎಂದು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಅಮೆರಿಕನ್ನರ ಬಟ್ಟಲ ಅನ್ನವನ್ನು ನಾವು ಕಸಿದುಕೊಳ್ಳುತ್ತಿದ್ದೇವೆ ಎನ್ನುವ ಭಾವನೆ ಅವರಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿದೆ.

ಭಾರತದ ಮುಂದಿನ ನಡೆ ಹೇಗೆ?:

ಅನೇಕ ಪಾಲಕರ ಆತಂಕವಿರುವುದು ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಕುರಿತು. ಅವರೆಲ್ಲರೂ ಇದೀಗ ಎಫ್‌1 ವೀಸಾದಲ್ಲಿ ಇದ್ದಾರೆ. ಅವರು ಮುಂದೆ ಎಚ್‌-1ಬಿ ವೀಸಾಕ್ಕೆ ಆಯ್ಕೆಯಾದರೆ ಆಗ $100,000 ಶುಲ್ಕ ಪಾವತಿಸಬೇಕಾಗುತ್ತದೆ. ಹಾಗಾಗಿ ಅಂತಹವರು ಸದ್ಯದ ಮಟ್ಟಿಗೆ ಭಾರತಕ್ಕೆ ರಜೆಯ ಮೇಲೆ ಬರುವ ನಿರ್ಧಾರವನ್ನು ಮುಂದೂಡುವುದು ಒಳ್ಳೆಯದು. ಇನ್ನು ಅಮೆರಿಕದ ಕಂಪನಿಗಳು ದುಬಾರಿ ವೀಸಾ ಶುಲ್ಕವನ್ನು ಪಾವತಿಸಿ ಭಾರತೀಯರನ್ನು ನೇಮಿಸಿಕೊಳ್ಳಲು ಹಿಂದೇಟು ಹಾಕಬಹುದು ಎಂಬುದು. ಆದರೆ ಇದಕ್ಕೂ ಆತಂಕಪಡುವ ಅಗತ್ಯವಿಲ್ಲ. ಭಾರತ ಇಂದು $17 ಟ್ರಿಲಿಯನ್ ಮಾರುಕಟ್ಟೆ ಹೊಂದಿರುವ ದೇಶವಾಗಿದೆ. ಮೊದಲಿಗೆ ಅಮೆರಿಕದಿಂದ ಒಂದರಿಂದ ಎರಡು ಲಕ್ಷ ಜನ ಭಾರತಕ್ಕೆ ಮರಳಿ ಬಂದರೂ ಅವರಿಗೆ ಉದ್ಯೋಗವಕಾಶ ನಮ್ಮಲ್ಲಿದೆ. ನಾವು ಕೃತಕ ಬುದ್ಧಿಮತ್ತೆಯಲ್ಲಿ (ಎಐ) ಇನ್ನೂ ಮುಂದುವರಿಯುತ್ತಿದ್ದೇವೆ. ಅಮೆರಿಕದ ಉನ್ನತ ಕಂಪನಿಗಳಲ್ಲಿ ದುಡಿದವರು ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಿ, ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸುವಂತೆ ಉತ್ತೇಜನ ನೀಡಬೇಕು. ಕೋವಿಡೋತ್ತರದಲ್ಲಿ ಚೀನಾ ಜಾಗತಿಕವಾಗಿ ಎಲ್ಲರನ್ನೂ ಎದುರಿಸಿ ಪ್ರತಿಭಾವಂತರನ್ನು ತನ್ನ ದೇಶಕ್ಕೆ ಕರೆಸಿಕೊಂಡಿದ್ದನ್ನು ಮರೆಯಕೂಡದು.

ನಮ್ಮ ಪ್ರಧಾನಮಂತ್ರಿಗಳು ಈಗಾಗಲೇ ‘ನೂರು ದುಃಖಗಳಿಗೆ ಒಂದೇ ಒಂದು ಔಷಧಿ ಇದೆ. ಅದುವೇ ಸ್ವಾವಲಂಬಿ ಭಾರತ. ಜಗತ್ತಿಗೆ ಭಾರತ ಏನೆಂದು ತೋರಿಸುವ ಸಮಯ ಬಂದಿದೆ. ನಾವು ದೃಢಸಂಕಲ್ಪ ಮಾಡಲೇಬೇಕು. ವಿದೇಶಿ ಅವಲಂಬನೆ ಹೆಚ್ಚಾದಷ್ಟೂ ದೇಶದ ವೈಫಲ್ಯ ಹೆಚ್ಚಾಗುತ್ತದೆ. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ, ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವು ಆತ್ಮನಿರ್ಭರವಾಗಬೇಕು’ ಎಂದಿದ್ದಾರೆ. ಇದು ನಮ್ಮ ಗುರಿಯಾಗಬೇಕು.

Read more Articles on