17 ರಂದು ಡಾ.ಭ.ನಾಗರಾಜ್‌ ಅವರ ಎರಡು ಕೃತಿಗಳ ಬಿಡುಗಡೆ

| Published : Aug 13 2025, 12:30 AM IST

ಸಾರಾಂಶ

ನಾಸ್ಟಾಲ್ಜಿಯಾ- ಎನ್ನುವ ಆಂಗ್ಲ ಕಥೆಗಳ ಸಂಗ್ರಹ ಮತ್ತು ಅವರ ಜೀವನ ಚರಿತೆಯ ಅನುವಾದಿತ ಕೃತಿ, ವಿಟ್ನೆಸ್‌ ಕವಯಿತ್ರಿ ಸುಕನ್ಯಾ ಮಾರುತಿ ಬಿಡುಗಡೆ ಮಾಡುವರು. ಜಿ.ಎಲ್‌.ತ್ರಿಪುರಾಂತಕ ಕೃತಿಗಳನ್ನು ಕುರಿತು ಮಾತನಾಡುವರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅಧ್ಯಕ್ಷತೆ ವಹಿಸುವರು.

ಕನ್ನಡಪ್ರಭ ವಾರ್ತೆ ಮೈಸೂರು

ವೈದ್ಯ ಹಾಗೂ ಸಾಹಿತಿ ಡಾ.ಭ.ನಾಗರಾಜ್‌ ಅವರ ಎರಡು ಕೃತಿಗಳು ಆ.17ರಂದು ಬೆಳಗ್ಗೆ 11ಕ್ಕೆ ತ್ಯಾಗರಾಜ ರಸ್ತೆಯ ಪತ್ರಕರ್ತರ ಭವನದಲ್ಲಿ ಬಿಡುಗಡೆಯಾಗಲಿವೆ.

ನಾಸ್ಟಾಲ್ಜಿಯಾ- ಎನ್ನುವ ಆಂಗ್ಲ ಕಥೆಗಳ ಸಂಗ್ರಹ ಮತ್ತು ಅವರ ಜೀವನ ಚರಿತೆಯ ಅನುವಾದಿತ ಕೃತಿ, ವಿಟ್ನೆಸ್‌ ಕವಯಿತ್ರಿ ಸುಕನ್ಯಾ ಮಾರುತಿ ಬಿಡುಗಡೆ ಮಾಡುವರು. ಅಂಕಣಕಾರ ಜಿ.ಎಲ್‌.ತ್ರಿಪುರಾಂತಕ ಕೃತಿಗಳನ್ನು ಕುರಿತು ಮಾತನಾಡುವರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅಧ್ಯಕ್ಷತೆ ವಹಿಸುವರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್‌ ಮತ್ತಿತರರು ಉಪಸ್ಥಿತರಿರುವರು.

ಮೂಲತಃ ವಿಜಯನಗರ (ಹಿಂದಿನ ಬಳ್ಳಾರಿ) ಜಿಲ್ಲೆಯ ಕೊಟ್ಟೂರು ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿ. ಭದ್ರಶೆಟ್ಟಿ ಸಣ್ಣರುದ್ರಪ್ಪ ಅವರ ಪುತ್ರರಾದ ಡಾ.ಭ ನಾಗರಾಜ್‌ ಮೈಸೂರಿನಲ್ಲಿ ದಶಕಗಳಿಂದ ನೆಲೆಸಿದ್ದು ಸಾಹಿತ್ಯಾಸಕ್ತರಿಗೆ ಪರಿಚಿತವಾದ ಹೆಸರು. ಆ.5ರಂದು 82 ವಸಂತಗಳನ್ನು ಪೂರೈಸಿದ್ದಾರೆ.

ಕೊಟ್ಟೂರಿನಲ್ಲಿ ಪ್ರೌಢ ಶಿಕ್ಷಣ ಮುಗಿಸಿ 1962 ರಲ್ಲಿ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ ನಂತರ ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ‌ಪದವಿ ಪಡೆದು ಹಳ್ಳಿಯ ಜನರ ಮಧ್ಯೆದಲ್ಲಿ ಇದ್ದು ಅವರಿಗೆ ವೈದ್ಯಕೀಯ ಸೇವೆ ಸಲ್ಲಿಸಬೇಕು ಎನ್ನುವ ಆಶಯದಿಂದ ನಂಜನಗೂಡು ತಾಲೂಕಿನ ಕಳಲೆಯಲ್ಲಿ, ಕುಟುಂಬ ಸಹಿತ ನೆಲೆಸಿ, ದೀಪಕ್‌ ಕ್ಲಿನಿಕ್‌ ಆರಂಭಿಸಿದರು.

ಕಳಲೆಯ ಸುತ್ತಮುತ್ತಲಿನ ಹಳ್ಳಿಗಳಿಗೆ ಮೊಪೆಡ್ ನಲ್ಲಿ ಹೋಗಿ ಚಿಕಿತ್ಸೆ ನೀಡುತ್ತಿದ್ದರು, ಹಣ ಸಂಪಾದನೆಯ ಮಹತ್ವಾಕಾಂಕ್ಷೆ ಇಲ್ಲದೆ. ನಂತರ ಅದೇ ತಾಲೂಕಿನ ನಗರ್ಲೆಗೆ ಬಂದು, ಸುತ್ತಮುತ್ತ ಹಳ್ಳಿಗಳಿಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದರು. ಮುಂದಿನ ದಿನಗಳಲ್ಲಿ ಅವರ ಈ ವೈದ್ಯಕೀಯ ಸೇವೆ ಗುಂಡ್ಲುಪೇಟೆ ಮತ್ತು ಸುತ್ತಲಿನ ಹಳ್ಳಿಗಳು ಮತ್ತು ಬಂಡೀಪುರದ ಗಿರಿಜನರ ಹಾಡಿಗಳವರೆಗೆ, ವಿಸ್ತರಿಸಿತು. ಗುಂಬಳ್ಳಿ ಮತ್ತು ಸುತ್ತಲಿನ ಹಳ್ಳಿಗಳಿಗೆ ಅಲ್ಲಿಂದ ಆಚೆಗೆ ಬಿಳಿಗಿರಿ ರಂಗನ ಬೆಟ್ಟದ ಪುರಾಣಿಪೋಡಿ ಮತ್ತಿತರ ಪೋಡಿಗಳಿಗೆ ಹೋಗಿ ಗಿರಿಜನರಿಗೆ ಚಿಕಿತ್ಸೆ ನೀಡುತ್ತಿದ್ದರು.

ಶಾಲಾ ದಿನಗಳಿಂದಲೇ ತೀವ್ರ ಸಾಹಿತ್ಯಾಸಕ್ತರಾಗಿದ್ದ ಅವರು, ಬಳ್ಳಾರಿಯಿಂದ ಪ್ರಕಾಶನಗೊಳ್ಳುತ್ತಿದ್ದ ಕೋ. ಚೆನ್ನಬಸಪ್ಪ ಅವರ ಸಂಪಾದಕತ್ವದ ‘ರೈತ’ ಪತ್ರಿಕೆಯಲ್ಲಿ ಪ್ರಥಮ ಕವನ ಸಂಕಲನ ಪ್ರಕಟಗೊಂಡಿತ್ತು. ಹೊಸಪೇಟೆಯ ‘ಸ್ವತಂತ್ರ’ ಪತ್ರಿಕೆ ಮತ್ತು ಹುಬ್ಬಳ್ಳಿಯ ‘ಪ್ರಪಂಚ’ , ‘ವಿಶ್ವವಾಣಿ’ ಪತ್ರಿಕೆ ಮತ್ತು ಆಗ ಜನಪ್ರಿಯ ಮಾಸ ಪತ್ರಿಕೆಯಾಗಿದ್ದ ‘ಮಲ್ಲಿಗೆ’ಯಲ್ಲಿ ಇವರ ಬರಹಗಳು ಮತ್ತು ಕಥೆಗಳು ಪ್ರಕಟಗೊಂಡಿದ್ದವು.

ಮೈಸೂರಿಗ ವೈದ್ಯಕೀಯ ವ್ಯಾಸಂಗಕ್ಕೆ ಸೇರಿದ ಮೇಲೆ ಇವರು ಸೂ.ರಮಾಕಾಂತ, ಎಸ್.ರೂಪರಾಜ್‌, ಕಥೆಗಾರ ವೀರಭದ್ರ, ಕೃಷ್ಣ ಆಲನಹಳ್ಳಿ, ಬೆಸಗರಹಳ್ಳಿ ರಾಮಣ್ಣ , ಯು.ಆರ್.ಅನಂತಮೂರ್ತಿ ಮುಂತಾದ ಸಾಹಿತಿಗಳ ಸಂಪರ್ಕಕ್ಕೆ ಬಂದು, ಇವರ ಬರವಣಿಗೆ ಹೊಸ ದಿಕ್ಕುಗಳಲ್ಲಿ ಹರಡಿ, ‘ಪ್ರಜಾವಾಣಿ’,‘ಕನ್ನಡಪ್ರಭ’, ಸಂವಾದ, ಸಂಕ್ರಮಣ, ಸಾಕ್ಷಿ , ಋಜುವಾತು ಮುಂತಾದ ದೈನಿಕ, ವಾರ ಮತ್ತು ಮಾಸಪತ್ರಿಕೆಗಳಲ್ಲಿ ಅಭಿವ್ಯಕ್ತಗೊಂಡಿತು.

ಇವರ ‘ಸಾಕ್ಷಿ’ 12ನೇ ಸಂಚಿಕೆಯಲ್ಲಿ ಪ್ರಕಟಗೊಂಡ ‘ಶಬ್ದಗಳು’ ಎನ್ನುವ ಭಾಷಾ ಶಾಸ್ತ್ರಕ್ಕೆ ಸಂಬಂಧಿಸಿದ ಲೇಖನ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯದ ಸ್ನಾತಕೋತ್ತರ ಡಾಕ್ಟೋರಲ್‌ ಥಿಸಿಸ್ಸಿನ ವಿದ್ಯಾರ್ಥಿಗಳಿಗೆ ಆಕರ ಲೇಖನವಾಗಿ ಶಿಫಾರಸ್ಸುಗೊಂಡಿತ್ತು.

ಭ.ನಾಗರಾಜ್‌ ಅವರು, ವೈದ್ಯ ವೃತ್ತಿಯಿಂದ ನಿವೃತ್ತರಾದ ಮೇಲೆ ಅನೇಕ ಪುಸ್ತಕಗಳನ್ನು ಬರೆದು ಪ್ರಕಾಶಿಸಿದ್ದಾರೆ.

ಪ್ರಕಟಿತ ಕೃತಿಗಳು:

ಕಾಯುತ್ತಿದ್ದೇನೆ, ಸಾಂಬ ಹಡೆದ ಒನಕೆ- ಕವನ ಸಂಕಲನ, ಮಲ್ಲಿಗೆ ನಿನ್ನ ಮುಡಿಗೆ - ಹನಿಗವನ, ಅಪೂರ್ಣ, ಮಹಾರುದ್ರ, ವಿಪ್ಲವ, ದಿತಿ-ಅದಿತಿ- ಕಾದಂಬರಿಗಳು,.

ಮುಸ್ಸಂಜೆಯ ಮಳೆಯ ನೆನಪುಗಳು, ಇನ್ನಷ್ಟು ನೆನಪುಗಳು - ನೆನಪುಗಳ ಗುಚ್ಛ, ಸಾಕ್ಷಿ -ಜೀವನ ಚರಿತೆ. ನೋ ಪ್ಲೇಸ್‌ ಫಾರ್‌ ಏಂಜಲ್ಸ್‌, ಚಯೋಸ್‌ ಡೋಂಟ್‌ ಡೆಸ್ಟ್ರಾಯ್‌, ಟ್ವಿನ್ಸ್‌- ಇಂಗ್ಲಿಷ್‌ ಕೃತಿಗಳನ್ನು ಪ್ರಕಟಿಸಿದ್ದಾರೆ.