ಇಂದು ಅಯೋಧ್ಯೆಯಲ್ಲಿ ಉ.ಪ್ರ ಸಚಿವ ಸಂಪುಟ ಸಭೆ

| Published : Nov 09 2023, 01:01 AM IST / Updated: Nov 09 2023, 01:02 AM IST

ಸಾರಾಂಶ

ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಪನೆಗೆ ಭರದಿಂದ ಸಿದ್ಧತೆ ನಡೆಯುತ್ತಿರುವ ನಡುವೆಯೇ, ನ.9ರಂದು ಅಯೋಧ್ಯೆಯಲ್ಲಿ ಸಚಿವ ಸಂಪುಟದ ಸಭೆ ನಡೆಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ನಿರ್ಧರಿಸಿದೆ.

ಅಯೋಧ್ಯೆ: ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಪನೆಗೆ ಭರದಿಂದ ಸಿದ್ಧತೆ ನಡೆಯುತ್ತಿರುವ ನಡುವೆಯೇ, ನ.9ರಂದು ಅಯೋಧ್ಯೆಯಲ್ಲಿ ಸಚಿವ ಸಂಪುಟದ ಸಭೆ ನಡೆಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ನಿರ್ಧರಿಸಿದೆ.1989ರಲ್ಲಿ ನ.9ರಂದೇ ವಿಶ್ವ ಹಿಂದೂ ಪರಿಷತ್‌ನಿಂದ ರಾಮಮಂದಿರದ ಶಿಲಾನ್ಯಾಸ ನೆರವೇರಿತ್ತು ಹಾಗೂ 2019ರಲ್ಲಿ ಇದೇ ದಿನದಂದು ಸುಪ್ರೀಂ ಕೋರ್ಟ್‌ನಿಂದ ರಾಮಜನ್ಮಭೂಮಿ ಪ್ರಕರಣದಲ್ಲಿ ಅಂತಿಮ ತೀರ್ಪು ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಇದೇ ದಿನಾಂಕದಂದು ಸಚಿವ ಸಂಪುಟ ಸಭೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಸಿದ್ಧತೆ ನಡೆಸಿದೆ.

ಈ ಸಭೆಯಲ್ಲಿ ಹೊರರಾಜ್ಯದ ಚುನಾವಣಾ ಪ್ರಚಾರಕ್ಕೆ ತೆರಳಿರುವ ಸಂಪುಟ ಸದಸ್ಯರೂ ಭಾಗಿಯಾಗಲಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ನಿತೀಶ್‌ ಕುಮಾರ್‌ ತಿಳಿಸಿದ್ದಾರೆ.11:30ಕ್ಕೆ ಸಭೆ ಆರಂಭವಾಗಲಿದ್ದು, ಸಭೆಯ ನಂತರ ಸದಸ್ಯರು ರಾಮಲಲ್ಲಾ ದರ್ಶನ ಮಾಡುವ ಜೊತೆಗೆ, ರಾಮಮಂದಿರ-ಹನುಮಾನ್‌ಗಢಿ ದೇಗುಲ ಹಾಗೂ ಕನಕ ಭವನ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ.