ಜನರು ಎಲೆಕ್ಟ್ರಿಕ್‌ ವಾಹನಗಳನ್ನು ಹೆಚ್ಚಾಗಿ ಬಳಸಬೇಕು : ಸಂಸದ ತೇಜಸ್ವಿ ಸೂರ್ಯ ಕರೆ

| N/A | Published : Feb 17 2025, 01:33 AM IST / Updated: Feb 17 2025, 05:58 AM IST

ಸಾರಾಂಶ

ಜನರು ಎಲೆಕ್ಟ್ರಿಕ್‌ ವಾಹನಗಳನ್ನು ಹೆಚ್ಚಾಗಿ ಬಳಸಬೇಕು. ತಮ್ಮಲ್ಲಿರುವ ಪೆಟ್ರೋಲ್‌, ಡೀಸೆಲ್‌ ವಾಹನಗಳನ್ನು ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸಿಕೊಳ್ಳಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಕರೆ ನೀಡಿದರು.

 ಬೆಂಗಳೂರು : ಜನರು ಎಲೆಕ್ಟ್ರಿಕ್‌ ವಾಹನಗಳನ್ನು ಹೆಚ್ಚಾಗಿ ಬಳಸಬೇಕು. ತಮ್ಮಲ್ಲಿರುವ ಪೆಟ್ರೋಲ್‌, ಡೀಸೆಲ್‌ ವಾಹನಗಳನ್ನು ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸಿಕೊಳ್ಳಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಕರೆ ನೀಡಿದರು.

ವಜ್ರ ಮಹೋತ್ಸವದ ಪ್ರಯುಕ್ತ ಶ್ರೀ ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌, ಶ್ರೀನಿವಾಸ ನಗರದ ಶಂಕರ್​ನಾಗ್​ ವೃತ್ತದ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿದ್ಯುತ್ ​ಚಾಲಿತ ವಾಹನಗಳ ಪ್ರದರ್ಶನ ಮತ್ತು ಬೃಹತ್​ ಸಾಲ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈಗಾಗಲೇ ಜನರು ಎಲೆಕ್ಟ್ರಿಕ್‌ ವಾಹನಗಳನ್ನು ಹೆಚ್ಚಾಗಿ ಬಳಸುತ್ತಿದ್ದು ಭವಿಷ್ಯದಲ್ಲಿ ಮತ್ತಷ್ಟು ಅಧಿಕವಾಗಲಿದೆ. ಜನರು ಪೆಟ್ರೋಲ್‌, ಡೀಸೆಲ್‌ ವಾಹನಗಳಿಂದ ಇವಿ ವಾಹನಗಳಿಗೆ ಬದಲಾಗುವ ಮೂಲಕ ನಗರದ ಮಾಲಿನ್ಯ ನಿವಾರಣೆಗೆ ಕೊಡುಗೆ ನೀಡಬೇಕು ಎಂದು ಕೋರಿದರು.

ಸೌರ ಶಕ್ತಿ ಅಳವಡಿಕೆ ಮತ್ತು ಎಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಸಾಕಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.

ಬ್ಯಾಂಕ್‌ನ ಅಧ್ಯಕ್ಷ ಎಂ.ಆರ್‌.ವೆಂಕಟೇಶ್‌ ಮಾತನಾಡಿ, ಕೇಂದ್ರ ಸರ್ಕಾರ ಎಲೆಕ್ಟ್ರಿಕ್‌ ವಾಹನಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ಮುಂದುವರೆಸಬೇಕು. ಕೆಎಸ್‌ಆರ್‌ಟಿಸಿ, ಬಿಬಿಎಂಪಿ, ಬಿಎಂಟಿಸಿಗೆ ಸೇರಿದ ಸ್ಥಳಗಳಲ್ಲಿ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಜಿಂಗ್‌ ಸ್ಟೇಷನ್‌ ಸ್ಥಾಪಿಸಬೇಕು. ಮೇಳದಲ್ಲಿ ಪ್ರಮುಖ 11 ವಿತರಕರು ಇಲ್ಲಿ ಪಾಲ್ಗೊಂಡಿದ್ದು, ಶೇ.9 ರ ಬಡ್ಡಿದರದಲ್ಲಿ ವಾಹನಗಳ ಖರೀದಿಗೆ ಸ್ಥಳದಲ್ಲೇ ಸಾಲ ವಿತರಿಸಲಾಗುತ್ತಿದೆ. ಯಾವುದೇ ಸಂಸ್ಕರಣಾ ಶುಲ್ಕ ವಿಧಿಸುತ್ತಿಲ್ಲ ಎಂದು ತಿಳಿಸಿದರು.

ಶಾಸಕ ರವಿ ಸುಬ್ರಹ್ಮಣ್ಯ, ಪತ್ರಕರ್ತ ಕೆ.ಎನ್‌.ಚನ್ನೇಗೌಡ, ಬಿಬಿಎಂಪಿ ಮಾಜಿ ಸದಸ್ಯ ಸಂಗಾತಿ ವೆಂಕಟೇಶ್​, ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಜೆ.ಮಂಜುನಾಥ್​, ಬ್ಯಾಂಕ್‌ನ ಉಪಾಧ್ಯಕ್ಷ ರಾಮೇಗೌಡ ಉಪಸ್ಥಿತರಿದ್ದರು.