‘ವಾಲ್ಮೀಕಿಯ ಜೀವನ ನಮಗೆ ಆದರ್ಶವಾಗಬೇಕು‘

| Published : Nov 16 2023, 01:16 AM IST

‘ವಾಲ್ಮೀಕಿಯ ಜೀವನ ನಮಗೆ ಆದರ್ಶವಾಗಬೇಕು‘
Share this Article
  • FB
  • TW
  • Linkdin
  • Email

ಸಾರಾಂಶ

ವಾಲ್ಮೀಕಿಯ ಜೀವನ ನಮಗೆಲ್ಲರಿಗೂ ಆದರ್ಶವಾಗಬೇಕು. ಪ್ರತಿ ದಿವಸವೂ ವಾಲ್ಮೀಕಿಯು ದಾರಿ ದೀಪವಾಗಬೇಕು ಎಂದು ವಾಲ್ಮೀಕಿ ಸಮಾಜದ ಪ್ರಭಾವಿ ನಾಯಕ, ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಗುಂಡ್ಲುಪೇಟೆಯ ಡಿ.ದೇವರಾಜ್ ಅರಸು ಕ್ರೀಡಾಂಗಣದಲ್ಲಿ ನಡೆದ ವಾಲ್ಮೀಕಿ ಜಯಂತಿ । ಸಚಿವ ಸತೀಶ್ ಜಾರಕಿಹೊಳಿ ಕರೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ವಾಲ್ಮೀಕಿಯ ಜೀವನ ನಮಗೆಲ್ಲರಿಗೂ ಆದರ್ಶವಾಗಬೇಕು. ಪ್ರತಿ ದಿವಸವೂ ವಾಲ್ಮೀಕಿಯು ದಾರಿ ದೀಪವಾಗಬೇಕು ಎಂದು ವಾಲ್ಮೀಕಿ ಸಮಾಜದ ಪ್ರಭಾವಿ ನಾಯಕ, ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಾಲ್ಮೀಕಿ ಬರೆದ ಗ್ರಂಥದಲ್ಲಿ ಮಾನವೀಯ ಮೌಲ್ಯಗಳಿವೆ. ವಾಲ್ಮೀಕಿ ಸಮಾಜ ಆರ್ಥಿಕ,ಶೈಕ್ಷಣಿಕ,ಸಾಮಾಜಿಕವಾಗಿ ಮುಂದೆ ಬರಬೇಕು ಎಂದು ಅನೇಕ ನಾಯಕರು ಹೋರಾಟ ನಡೆಸಿದ್ದಾರೆ. ಸಮಾಜ ಶೈಕ್ಷಣಿಕವಾಗಿ ಮುಂದೆ ಬರಲಿ ಎಂದು ಸರ್ಕಾರ ಆನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.

ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಾಕಷ್ಟು ಕಾರ್ಯಕ್ರಮ ಜಾರಿಗೆ ತರಲಾಗಿದೆ. ವಿದ್ಯಾವಂತರು ಹಾಗೂ ನೌಕರರು ಸರ್ಕಾರದ ಎಲ್ಲಾ ಸೌಲಭ್ಯ ಪಡೆದುಕೊಂಡು ಆರ್ಥಿಕ,ಶೈಕ್ಷಣಿಕ, ಸಾಮಾಜಿಕವಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು.

ಸಚಿವ ನಾಗೇಂದ್ರ ಮಾತನಾಡಿ, ಡಿ.ದೇವರಾಜ ಅರಸು ಕ್ರೀಡಾಂಗಣದ ಅಭಿವೃದ್ಧಿಗೆ 25 ಲಕ್ಷ ಅನುದಾನ ಹಾಗೂ ಪಟ್ಟಣದ ವಾಲ್ಮೀಕಿ ಭವನವನ್ನುಪೂರ್ಣ ಗೊಳಿಸಲು ಅನುದಾನ ನೀಡುವುದಾಗಿ ಭರವಸೆ ನೀಡಿದರು. ಶಾಸಕರಾದ ಅನಿಲ್‌ ಚಿಕ್ಕಮಾದು,ದರ್ಶನ್‌ ಧ್ರುವನಾರಾಯಣ ಹಾಗೂ ಸಾಹಿತಿ ಡಾ.ಅನುಸೂಯ ಎಸ್ ಕೆಂಪನಹಳ್ಳಿ ಪ್ರಧಾನ ಭಾಷಣದಲ್ಲಿ ವಾಲ್ಮೀಕಿ ಜೀವನ ಕುರಿತು ಮಾತನಾಡಿದರು.

ಜಯಂತಿಗೆ ಕೈ ಕೊಟ್ಟ ಗಿರೀಶ್‌, ಮಲ್ಲೇಶ್‌:

ಗುಂಡ್ಲುಪೇಟೆ: ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಮುಖಂಡರಾದ ಪಿ.ಗಿರೀಶ್‌,ಎನ್.ಮಲ್ಲೇಶ್‌ ಮತ್ತವರ ಬೆಂಬಲಿಗರು ಭಾಗವಹಿಸದೇ ಜಯಂತಿಗೆ ಕೈ ಕೊಟ್ಟಿದ್ದಾರೆ.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅಧ್ಯಕ್ಷತೆಯಲ್ಲಿ ನಡೆದ ವಾಲ್ಮೀಕಿ ಜಯಂತಿ ಆಚರಣೆ ಪೂರ್ವ ಭಾವಿ ಸಭೆಯಲ್ಲಿ ಬಿಜೆಪಿ ಮುಖಂಡರಾದ ಪಿ.ಗಿರೀಶ್‌,ಎನ್.ಮಲ್ಲೇಶ್‌ ಹಾಗೂ ಬಿಜೆಪಿ ಪುರಸಭೆ ಸದಸ್ಯರು ಭಾಗವಹಿಸಿ, ಎಲ್ಲರೂ ಒಟ್ಟಾಗಿ ಸೇರಿ ಜಯಂತಿ ಆಚರಿಸಲು ಒಪ್ಪಿಗೆ ಸೂಚಿಸಿದ್ದರು.

ಆದರೆ ಪೂರ್ವಭಾವಿ ಸಭೆಯಲ್ಲಾದ ನಿರ್ಣಯದಂತೆ ಆಹ್ವಾನ ಪತ್ರಿಕೆ ಸಿದ್ದಗೊಂಡ ಬಳಿಕ ನಿರೀಕ್ಷೆಯಂತೆಯೇ ಜಯಂತಿಗೂ ಮುನ್ನವೇ ಮುನಿಸಿಕೊಂಡಿದ್ದರು.

ಅಲ್ಲದೇ, ಶಾಸಕ ಎಚ್.‌ಎಂ.ಗಣೇಶ್‌ ಪ್ರಸಾದ್‌ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಮುಖಂಡರಾದ ಪಿ.ಗಿರೀಶ್‌,ಎನ್.ಮಲ್ಲೇಶ್‌ ಶಾಸಕರ ಎಡ,ಬಲ ಕುಳಿತಿದ್ದರು. ಇದು ಕೂಡ ನಾಯಕ ಸಮಾಜದ ಕಾಂಗ್ರೆಸ್ಸಿಗರ ಅಸಮಾಧಾನಕ್ಕೆ ಕಾರಣವಾಗಿತ್ತು.

ಆದರೂ ಶಾಸಕರು ಕಾಂಗ್ರೆಸ್‌,ಬಿಜೆಪಿ ಎನ್ನುವುದು ಬೇಡ, ಸಮಾಜದವರು ಒಟ್ಟಾಗಿ ಸೇರಿ ಜಯಂತಿ ಆಚರಿಸೋಣ ಎಂದಿದ್ದರು.ಆದರೆ ಬಿಜೆಪಿಗರು ಜಯಂತಿಗೆ ಗೈರಾಗಿದ್ದು ಸರಿಯಲ್ಲ ಎಂಬ ಮಾತು ಸಭೆಯಲ್ಲಿ ಕೇಳಿ ಬಂತು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್‌, ಮಾಜಿ ಸಂಸದ ಎ.ಸಿದ್ದರಾಜು,ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ,ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌,ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ,ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ,ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್‌,ಬಿ.ಎಂ.ಮುನಿರಾಜು,ಸಮಾಜದ ಮುಖಂಡರಾದ ಎಸ್.ಸಿ.ಬಸವರಾಜು,ವೆಂಕಟೇಶ್‌ ನಾಯಕ,ಬಂಗಾರನಾಯಕ,ಎನ್.ಕುಮಾರ್‌,ಕಾರ್ಗಳ್ಳಿ ಸುರೇಶ್‌,ವೆಂಕಟೇಶ್‌ ನಾಯಕ,ತಹಸೀಲ್ದಾರ್‌ ಟಿ.ರಮೇಶ್‌ ಬಾಬು,ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಸೇರಿದಂತೆ ಸಾವಿರಾರು ಜನರು ಹಾಜರಿದ್ದರು.

------

ಬಾಕ್ಸ್‌.......

ಜಿಲ್ಲೆಯ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿದ್ದು ಎಚ್‌ಎಸ್‌ಎಂ

ಗುಂಡ್ಲುಪೇಟೆ: ಗುಂಡ್ಲುಪೇಟೆ ಕ್ಷೇತ್ರದ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿದ್ದ ದಿವಂಗತ ಎಚ್.ಎಸ್.ಮಹದೇವಪ್ರಸಾದ್‌, ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಸಚಿವ ಸತೀಶ್‌ ಜಾರಕಿಹೊಳಿ ಮೆಲಕು ಹಾಕಿದರು. ಪಟ್ಟಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಮಹದೇವಪ್ರಸಾದ್‌ ನನಗೂ ಆತ್ಮೀಯರಾಗಿದ್ದರು.ಅವರಲ್ಲಿ ಚಾಣಾಕ್ಷತೆ ಇತ್ತು. ಅಲ್ಲದೆ ಗುಂಡ್ಲುಪೇಟೆ ಕ್ಷೇತ್ರದ ಜೊತೆಗೆ ಜಿಲ್ಲೆಗೂ ಸಾಕಷ್ಟು ಸರ್ಕಾರದ ಯೋಜನೆ ತಂದಿದ್ದರು ಎಂದರು. ಚಾಮರಾಜನಗರ ಜಿಲ್ಲೆಯಲ್ಲಿ ಮಹದೇವಪ್ರಸಾದ್‌ ಕೆರೆಗೆ ಮೊದಲ ಬಾರಿಗೆ ನೀರು ಹರಿಸಿದ್ದರು. ಇದೊಂದು ಮೈಲಿಗಲ್ಲಾಗಿದೆ. ಹಾಗಾಗಿ ಮಹದೇವಪ್ರಸಾದ್‌ ಸದಾ ಜಿಲ್ಲೆಯ ಜನರ ನನಪಿನಲ್ಲಿರುತ್ತಾರೆ ಎಂದರು.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕೂಡ ಮಹದೇವಪ್ರಸಾದ್‌ ದಾರಿಯಲ್ಲಿಯೇ ಕೆಲಸ ಮಾಡುತ್ತಿದ್ದು, ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಮಹದೇವಪ್ರಸಾದ್‌ ಹಾದಿಯಲ್ಲಿಯೇ ಗಣೇಶ್‌ ಪ್ರಸಾದ್‌ ಮುಂದುವರಿಯಬೇಕು ಎಂದರು.

-------------

ಬಾಕ್ಸ್‌ -2......

ವಾಲ್ಮೀಕಿ ಭವನಕ್ಕೆ ಕಳೆದ ಅವಧಿಯಲ್ಲಿ ಅನುದಾನ ತಂದಿಲ್ಲ

ಗುಂಡ್ಲುಪೇಟೆ: ಪಟ್ಟಣದಲ್ಲಿನ ವಾಲ್ಮೀಕಿ ಭವನಕ್ಕೆ ಕಳೆದ ಅವಧಿಯ ಸರ್ಕಾರದಲ್ಲಿ ಅಂದಿನ ಶಾಸಕರು ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಅತೀ ಶೀಘ್ರದಲ್ಲೇ ವಾಲ್ಮೀಕಿ ಭವನ ಉದ್ಘಾಟನೆಯಾಗಲಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು. ಸಚಿವ ನಾಗೇಂದ್ರ ವಾಲ್ಮೀಕಿ ಭವನಕ್ಕೆ ಅನುದಾನ ನೀಡುವುದಾಗಿ ಹೇಳಿದ್ದಾರೆ. ಆದಷ್ಟು ಬೇಗ ವಾಲ್ಮೀಕಿ ಭವನ ಉದ್ಘಾಟನೆಯಾಗಲಿದೆ ಎಂದರು. ನಾಯಕ ಸಮಾಜದ ಜೊತೆ ನಾನಿರುತ್ತೇನೆ.ನೀವು ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಸರ್ಕಾರ ಬಂದು ಐದು ತಿಂಗಳಾಗಿದೆ. ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಾನೂ ಕೂಡ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತರುತ್ತೇನೆ. ನಾನು ಬಸವತತ್ವದಡಿ ಕ್ಷೇತ್ರದ ಎಲ್ಲಾ ಸಮಾಜದೊಂದಿಗೆ ಇದ್ದು ಕೆಲಸ ಮಾಡುತ್ತೇನೆ. ನನ್ನ ತಂದೆ ಮಹದೇವಪ್ರಸಾದ್‌ ಹಾದಿಯಲ್ಲಿಯೇ ನಡೆದು ಕ್ಷೇತ್ರದ ಅಭಿವೃದ್ಧಿ ಪರ ನಿಲ್ಲುತ್ತೇನೆ ಎಂದರು.ಕೋಟ್......

''''ಪಟ್ಟಣದಲ್ಲಿ ನಡೆದ ವಾಲ್ಮೀಕಿ ಜಯಂತಿ ಸಂಬಂಧ ಪೂರ್ವ ಬಾವಿ ಸಭೆಯಲ್ಲಿ ತೀರ್ಮಾನಿಸಿದಂತೆ ಆಹ್ವಾನ ಪತ್ರಿಕೆ ಮುದ್ರಿಸಿರಲಿಲ್ಲ.ಪೂರ್ವಬಾವಿ ಸಭೆಯಲ್ಲಿ ನಿರ್ಣಯಕ್ಕೆ ವಿರುದ್ಧವಾಗಿ ಆಹ್ವಾನ ಪತ್ರಿಕೆ ಕೈ ಸೇರಿದ ಬಳಿಕ ಜಯಂತಿಗೆ ಬರಲು ಮನಸ್ಸು ಒಪ್ಪಲಿಲ್ಲ.ಶಾಸಕರ ಮಾತಿಗೆ ಒಪ್ಪಿ, ನಾನು ಸೇರಿದಂತೆ ಇತರೆ ಮುಖಂಡರು ಒಟ್ಟಾಗಿ ಸೇರಿ ಜಯಂತಿ ಆಚರಣೆ ಮಾಡಬೇಕೆಂಬ ಬಯಕೆ ಈಡೇರಲಿಲ್ಲ.

-ಪಿ.ಗಿರೀಶ್,ಪುರಸಭೆ ಮಾಜಿ ಅಧ್ಯಕ್ಷ-

-------------

15ಸಿಎಚ್‌ಎನ್‌55ಗುಂಡ್ಲುಪೇಟೆಯಲ್ಲಿ ನಡೆದ ವಾಲ್ಮೀಕಿ ಜಯಂತಿ ಸಮಾರಂಭವನ್ನು ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಿದರು. ಶಾಸಕರಾದ ಎಚ್.ಎಂ.ಗಣೇಶ್ ಪ್ರಸಾದ್, ಅನಿಲ್,ದರ್ಶನ್ ಇದ್ದಾರೆ.

----

ಗುಂಡ್ಲುಪೇಟೆಯಲ್ಲಿ ನಡೆದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿದರು. ಸಚಿವ ಸತೀಶ್ ಜಾರಕಿಹೊಳಿ, ಅನಿಲ್,ದರ್ಶನ್ ಇದ್ದಾರೆ.