ದೇಶದಲ್ಲಿ ಔಷಧೀಯ ಸಸ್ಯಗಳ ಉದ್ಯಮ ಬೃಹತ್ತಾಗಿ ಬೆಳೆದಿದೆ. ವಾರ್ಷಿಕ ದೇಶದಲ್ಲಿ 350 ಮೆಟ್ರಿಕ್‌ ಟನ್‌ ಸಸ್ಯ ಜನ್ಯ ಉತ್ಪನ್ನಗಳಿಗೆ ಬೇಡಿಕೆ ಇದೆ. ಆಯುರ್ವೇದ ಸೇರಿದಂತೆ ವಿವಿಧ ಔಷಧ ಹಾಗೂ ಚಿಕಿತ್ಸಾ ಪದ್ಧತಿ ಮತ್ತು ಆಹಾರ ಉದ್ಯಮಗಳಲ್ಲಿ ಬಳಕೆಯಾಗುವ ಈ ಸಸ್ಯ ಸಂಪತ್ತು, ಸರಿ ಸುಮಾರು 10 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ವಹಿವಾಟು ನಡೆಸುತ್ತದೆ.

ಕರ್ನಾಟಕವನ್ನು ಗಂಧದಗುಡಿ ಎಂದು ಹೆಮ್ಮೆಯಿಂದ ಕರೆಯುತ್ತಾರೆ. ಹುಲಿಗಳ ರಾಜ್ಯ, ಆನೆಗಳ ಸಾಮ್ರಾಜ್ಯ ಎನ್ನುವ ವಿಶೇಷಣಗಳು ಈಗ ಹೊಸದಾಗಿ ಸೇರಿಕೊಂಡಿವೆ. ಆದರೆ, ನಮ್ಮ ರಾಜ್ಯ ಔಷಧೀಯ ಸಸ್ಯಗಳ ಬೀಡು ಎನ್ನುವುದು ನಿಮಗೆ ಗೊತ್ತೇ..?

ಭಾರತದಲ್ಲಿ ಸುಮಾರು 7 ಸಾವಿರ ಪ್ರಭೇದದ ಔಷಧೀಯ ಸಸ್ಯ

ಭಾರತದಲ್ಲಿ ಸುಮಾರು 7 ಸಾವಿರ ಪ್ರಭೇದದ ಔಷಧೀಯ ಸಸ್ಯಗಳಿದ್ದರೆ, ಈ ಪೈಕಿ ಪಶ್ಚಿಮಘಟ್ಟಗಳು ಸೇರಿದಂತೆ ನಮ್ಮ ರಾಜ್ಯದ ಕಾಡುಗಳಲ್ಲೇ ಬರೋಬ್ಬರಿ 2 ಸಾವಿರ ಪ್ರಭೇದದ ಔಷಧೀಯ ಸಸ್ಯಗಳು ಇವೆ. ಇದು ದೇಶದಲ್ಲೇ ಅತಿ ಹೆಚ್ಚು ಔಷಧೀಯ ಸಸ್ಯ ಸಂಪತ್ತು. ನಮ್ಮಲ್ಲಿ ಅತಿ ಹೆಚ್ಚು ಸಸ್ಯ ವೈವಿಧ್ಯತೆ ಇರುವುದರಿಂದಲೇ ಔಷಧೀಯ ಸಸ್ಯಗಳ ಜಾತಿ ಸಂಖ್ಯೆಯೂ ಹೆಚ್ಚು.

ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಸ್ಥಾಪನೆ

2002ರಲ್ಲಿ ರಾಜ್ಯದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆಂದು ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರವನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಡಿಯಲ್ಲಿ ಸ್ಥಾಪಿಸಲಾಯಿತು. ಔಷಧೀಯ ಸಸ್ಯಗಳ ಕುರಿತು ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು, ಔಷಧೀಯ ಸಸ್ಯಗಳ ಸಂಖ್ಯೆ ಮತ್ತು ಲಭ್ಯತೆಯ ಮೌಲ್ಯಮಾಪನ, ಪವಿತ್ರವನ, ದೈವಿಕ ವನಗಳ ಹೆಸರಿನಲ್ಲಿ ಸಂರಕ್ಷಣೆ ಮಾಡುವುದು, ಅರಣ್ಯ ಮತ್ತು ಕೃಷಿ ಪ್ರದೇಶಗಳಲ್ಲಿ ಔಷಧೀಯ ಸಸ್ಯಗಳನ್ನು ನೆಡುವುದು, ಔಷಧೀಯ ಸಸ್ಯಗಳ ಉದ್ಯಾನಗಳ ಸ್ಥಾಪನೆ, ರೈತರು, ಉದ್ಯಮಿಗಳು, ಸಾರ್ವಜನಿಕರು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಸಂಪರ್ಕ ಬೆಳೆಸುವುದು, ತಜ್ಞರೊಂದಿಗೆ ಸಲಹೆ ಮತ್ತು ಸಮಾಲೋಚನೆ ನಡೆಸುವುದ ಜೊತೆಗೆ ಔಷಧೀಯ ಸಸ್ಯ ವಲಯದ ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸುವುದು ಮತ್ತು ಅನುಷ್ಠಾನಗೊಳಿಸುವುದು ಈ ಪ್ರಾಧಿಕಾರದ ಪ್ರಮುಖ ಯೋಜನೆಗಳಾಗಿವೆ.

ಸಣ್ಣ ಗಿಡ, ಪೊದೆ, ಬಳ್ಳಿ ಮತ್ತು ಮರ ಸೇರಿದಂತೆ ದೇಶದಾದ್ಯಂತ ಸುಮಾರು 1178 ಪ್ರಭೇದದ ಔಷಧೀಯ ಸಸ್ಯಗಳ ವಹಿವಾಟು ನಡೆಯುತ್ತದೆ. ಈ ಪೈಕಿ ಕರ್ನಾಟಕದಲ್ಲಿ 677ಕ್ಕೂ ಹೆಚ್ಚು ಪ್ರಭೇದದ ಸಸ್ಯಗಳನ್ನು ನಾನಾ ಕಂಪನಿಗಳು ಖರೀದಿಸಿ ಬೇರೆ ಬೇರೆ ಉದ್ದೇಶಕ್ಕೆ ಬಳಸುತ್ತಿವೆ. ರಾಜ್ಯದಲ್ಲಿ ಸುಮಾರು 500 ಎಕರೆ ಪ್ರದೇಶದಲ್ಲಿ ಮಾತ್ರ ಔಷಧೀಯ ಸಸ್ಯಗಳ ಕೃಷಿ ನಡೆಯುತ್ತಿದ್ದು, ಇದನ್ನು ಹೆಚ್ಚಿಸಲು ಪ್ರಾಧಿಕಾರವು ನಾನಾ ಯೋಜನೆಗಳನ್ನು ರೂಪಿಸಿದೆ.

ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಅತಿ ಹೆಚ್ಚು ಔಷಧೀಯ ಸಸ್ಯಗಳ ಸಂಗ್ರಹಣೆ ನಡೆಯುವುದು ಅರಣ್ಯ ಮೂಲದಿಂದ, ಉಳಿದವು ಕೃಷಿಕರಿಂದ ಸಂಗ್ರಹಿಸಲಾಗುತ್ತದೆ. ಈ ಕ್ಷೇತ್ರದ ವ್ಯಾಪಾರ, ವಹಿವಾಟು ಮತ್ತು ಸಂಶೋಧನೆಯಲ್ಲಿ ಮಧ್ಯಪ್ರದೇಶ ಮತ್ತು ಛತ್ತೀಸಗಢ ಮುಂಚೂಣಿಯಲ್ಲಿವೆ. ಅಶ್ವಗಂಧ, ತುಳಸಿ, ಒಂದೆಲಗ, ಮಾಕಳಿ, ಆಡುಸೋಗೆ, ಅಮೃತಬಳ್ಳಿ ಹೀಗೆ ಸುಮಾರು 50ಕ್ಕೂ ಹೆಚ್ಚಿನ ಔಷಧೀಯ ಸಸ್ಯಗಳನ್ನು ಬೆಳೆಯಲಾಗುತ್ತಿದೆ. ರಾಜ್ಯದ ನಾನಾ ಭಾಗಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಔಷಧೀಯ ಸಸ್ಯಗಳ ರೈತರ ಗುಂಪುಗಳು ಕೆಲಸ ನಿರ್ವಹಿಸುತ್ತಿವೆ. 19ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಹೊಸ ಔಷಧೀಯ ಸಸ್ಯಗಳ ಸಂರಕ್ಷಣಾ ಪ್ರದೇಶಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.

ಔಷಧೀಯ ಸಸ್ಯಗಳ ಮಾರುಕಟ್ಟೆ ಹೆಚ್ಚು ಕಡಿಮೆ ಅಸಂಘಟಿತ ವಲಯದಲ್ಲಿ ಇದ್ದ ಹಾಗೆ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಮಾರುಕಟ್ಟೆ ಮಂಡಿಗಳ ಕೊರತೆ ಬೃಹತ್‌ ಪ್ರಮಾಣದಲ್ಲಿದೆ. ರಾಜ್ಯದಲ್ಲಿ ಔಷಧೀಯ ಸಸ್ಯಗಳಿಗೆ ಉದ್ಯಮ ಸ್ವರೂಪ ನೀಡುವ ಮತ್ತು ಅವುಗಳಿಗೆ ಸರಿಯಾದ ಮಾರುಕಟ್ಟೆ ಮತ್ತು ಮೌಲ್ಯ ಸಿಗುವಂತೆ ನೋಡಿಕೊಳ್ಳಲು ಪ್ರಾಧಿಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅದರಂತೆ ಈ ಸಸ್ಯಗಳ ಕೃಷಿ ಮಾಡುವ ರೈತರಿಗೆ ಅನುಕೂಲ ಮಾಡಿಕೊಡಲು ಬೆಳೆ ಸಮೀಕ್ಷೆ ಮಾಡಿ ಅವರ ಆರ್‌ಟಿಸಿಯಲ್ಲಿ 122 ಜಾತಿಯ ಸಸ್ಯಗಳನ್ನು ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಸಾಗಾಣಿಕೆ ಪರವಾನಗಿ ಪಡೆಯುವುದು ಸುಲಭವಾಗುತ್ತದೆ.

ಕರ್ನಾಟಕದಲ್ಲಿ ಔಷಧೀಯ ಸಸ್ಯಗಳನ್ನು ಎಪಿಎಂಸಿ ವ್ಯಾಪ್ತಿಗೆ ತರುವ ಪ್ರಯತ್ನಗಳು ಸಹ ನಡೆಯುತ್ತಿವೆ. ಬೆಂಗಳೂರಿನ ಯಶವಂತಪುರದಲ್ಲಿ ಸಮರ್ಪಿತ ಔಷಧೀಯ ಸಸ್ಯಗಳ ವ್ಯಾಪಾರ ಕೇಂದ್ರ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಇದರಿಂದ ಔಷಧೀಯ ಸಸ್ಯಗಳಿಗೆ ಉತ್ತಮ ಮಾರುಕಟ್ಟೆ, ದರ ಹಾಗೂ ಕೃಷಿಗೆ ಉತ್ತೇಜನ ಸಿಕ್ಕಂತಾಗುತ್ತದೆ. ರಾಜ್ಯದಾದ್ಯಂತ ೫-೬ ಪ್ರಾದೇಶಿಕ ಮಾರುಕಟ್ಟೆ ಕೇಂದ್ರಗಳೊಂದಿಗೆ ಸಂಪರ್ಕ ಹೊಂದಿರುವ ಒಂದು ಪ್ರಮುಖ ಔಷಧೀಯ ಸಸ್ಯಗಳ ಮಾರುಕಟ್ಟೆ ಕೇಂದ್ರ ಸ್ಥಾಪಿಸಲು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಧುನಿಕ ಸಂಸ್ಕರಣೆ, ಶ್ರೇಣಿಕರಣ, ಗೋದಾಮು, ಪರೀಕ್ಷಾಲಯ, ಬೀಜ ಬ್ಯಾಂಕ್‌ ಮತ್ತಿತರ ಅನುಕೂಲಗಳನ್ನು ಸಹ ಒದಗಿಸಲಾಗುತ್ತಿದೆ.

ಔಷಧೀಯ ಸಸ್ಯಗಳ ಬಗ್ಗೆ ನಮ್ಮಲ್ಲಿ ತಿಳಿವಳಿಕೆಯೇ ಕಡಿಮೆ. ಈ ಹಿನ್ನೆಲೆಯಲ್ಲಿ ಇವುಗಳ ಮಹತ್ವ ತಿಳಿಸುವ ಉದ್ದೇಶದಿಂದ ರಾಜ್ಯದ ೨೬ ಜಿಲ್ಲೆಗಳ ವಸತಿ ಶಾಲೆಗಳಲ್ಲಿ ಈಗಾಗಲೇ ೪೦೨ ಔಷಧೀಯ ಸಸ್ಯ ವನಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಉದ್ಯಾನದಲ್ಲಿ ೬೫ ಪ್ರಭೇದಗಳಿಗೆ ಸೇರಿದ ೨೦೦ ರಿಂದ ೨೫೦ ಸಸ್ಯಗಳನ್ನು ನೆಡಲಾಗಿದೆ. ರಾಜ್ಯದ ನಾನಾ ವೃಕ್ಷೋದ್ಯಾನಗಳಲ್ಲಿ ಸುಮಾರು ೪೧ ಹೆಕ್ಟೇರ್‌ ಪ್ರದೇಶದಲ್ಲಿ 21 ಸಾರ್ವಜನಿಕ ಔಷಧ ವನಗಳನ್ನು ಈಗಾಗಲೇ

ಸ್ಥಾಪಿಸಲಾಗಿದೆ. ನಮ್ಮ ರೈತರನ್ನು ಕೇರಳ ಸೇರಿದಂತೆ ನಾನಾ ರಾಜ್ಯಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಔಷಧೀಯ ಸಸ್ಯಗಳ ಕಾರ್ಖಾನೆ, ನರ್ಸರಿಗಳಿಗೆ ಭೇಟಿ ಕೊಟ್ಟು, ಹೆಚ್ಚಿನ ಮಾಹಿತಿ ವಿನಿಯಮ ಮಾಡಿಕೊಳ್ಳಲಾಗುತ್ತಿದೆ.

ನಮ್ಮಲ್ಲಿ ಔಷಧೀಯ ಸಸ್ಯಗಳ ಸಂಪತ್ತು ಹೇರಳವಾಗಿದೆ. ಅರಣ್ಯ ಇಲಾಖೆ ಅತ್ಯುತ್ತಮ ಸಂರಕ್ಷಣಾ ಮಾದರಿಗಳಲ್ಲಿ ಇವು ಕೂಡ ಒಂದು. ನಮ್ಮ ನಿವಾಸಿಗಳಿಗೆ ಇವುಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು, ರೈತರು ಔಷಧೀಯ ಸಸ್ಯಗಳ ಕೃಷಿ ಕೈಗೊಳ್ಳುವಂತೆ ಮಾಡಬೇಕು ಮತ್ತು ಇದಕ್ಕೆಲ್ಲ ಸರಿಯಾದ ಮಾರುಕಟ್ಟೆ ಒದಗಿಸುವ ಮೂಲಕ ಈ ಉದ್ಯಮ ಬೃಹತ್‌ ಪ್ರಮಾಣದಲ್ಲಿ ಬೆಳೆಯಲು ಅವಕಾಶ ಮಾಡಿಕೊಡಬೇಕಾಗಿದೆ.