ವೇದವು ಭಾರತಕ್ಕೆ ಮಾತ್ರವಲ್ಲ, ಪ್ರಪಂಚಕ್ಕೇ ಬೆಳಕು ನೀಡಿದೆ. ಆದ್ದರಿಂದ ವೇದದ ಮಹತ್ವ ಅರಿತು ನಡೆಯಬೇಕು ಎಂದು ಕೂಡಲಿ ಶೃಂಗೇರಿ ಶಂಕರಾಚಾರ್ಯ ಸಂಸ್ಥಾನದ ಅಭಿನವ ಶಂಕರ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ವೇದವು ಭಾರತಕ್ಕೆ ಮಾತ್ರವಲ್ಲ, ಪ್ರಪಂಚಕ್ಕೇ ಬೆಳಕು ನೀಡಿದೆ. ಆದ್ದರಿಂದ ವೇದದ ಮಹತ್ವ ಅರಿತು ನಡೆಯಬೇಕು ಎಂದು ಕೂಡಲಿ ಶೃಂಗೇರಿ ಶಂಕರಾಚಾರ್ಯ ಸಂಸ್ಥಾನದ ಅಭಿನವ ಶಂಕರ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು.ಮುಳಬಾಗಿಲಿನ ಶ್ರೀಪಾದರಾಜ ಮಠದ ಅಂಗ ಸಂಸ್ಥೆಯಾದ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್ ಹಾಗೂ ಜಯನಗರದ ವಿಜಯ ಕಾಲೇಜು ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ವೇದ ವಿಜ್ಞಾನ ಮತ್ತು ಜಾಗತಿಕ ಸಮಕಾಲೀನ ಸವಾಲುಗಳು’ ಕುರಿತ 7ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ವೇದ ಪ್ರಪಂಚಕ್ಕೇ ಬೆಳಕು, ಮಾರ್ಗದರ್ಶನ ನೀಡಿದೆ. ಆದ್ದರಿಂದ ವೇದದ ಪ್ರಯೋಜನ ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವೇದ ಹಾಗೂ ವಿಜ್ಞಾನ ಬದುಕಿನ ಭಾಗವಾಗಿವೆ. ಈ ನಿಟ್ಟಿನಲ್ಲಿ ವೇದ ಹಾಗೂ ವಿಜ್ಞಾನಕ್ಕೆ ಭಾರತದಲ್ಲಿ ಆದ್ಯತೆ ನೀಡಲಾಗುತ್ತಿದೆ. ವೇದ ಹಾಗೂ ವಿಜ್ಞಾನವನ್ನು ಬೇರೆ ಬೇರೆಯಾಗಿ ನೋಡಲು ಸಾಧ್ಯವಿಲ್ಲ ಎಂದರು.ಗುರುಕುಲ ಶಿಕ್ಷಣ ಪಡೆಯಲು ಎಲ್ಲರೂ ತಯಾರಾಗಬೇಕು. ಗುರುಕುಲ ಶಿಕ್ಷಣ ಪದ್ಧತಿ ಎಂದರೆ ಮನೆಯಲ್ಲೇ ಕುಳಿತು ಓದುವುದಲ್ಲ. ವೇದದ ತಿರುಳನ್ನು ತಿಳಿದು ವೇದದ ಮುಖಾಂತರ ಜೀವನಶೈಲಿ ಬದಲಾಯಿಸಿಕೊಳ್ಳಬೇಕು. ವಿಜ್ಞಾನದ ಮೂಲಕ ವೇದವನ್ನು ಸಮಾಜಕ್ಕೆ ಹೇಗೆ ನೀಡಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಹೇಳಿದರು.
ಸಮ್ಮೇಳನ ಜ.24 ರವರೆಗೂ ನಡೆಯಲಿದೆ. ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ವಿದ್ವಾಂಸ ಅರಳು ಮಲ್ಲಿಗೆ ಪಾರ್ಥಸಾರಥಿ, ಬಿಎಚ್‌ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಬಾಲಕೃಷ್ಣ ಮತ್ತಿತರರು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.