ಈ ತೆರೆದ ಬಾಗಿಲುಗಳ ಸಚಿವರು ಯಾವಾಗಲೂ ಮನೆಯಲ್ಲಿ ಇರೋದಿಲ್ಲ, ಇದ್ದರೂ ಸಾಹೇಬರು ರೆಸ್ಟ್ ನಲ್ಲಿ ಇದ್ದಾರೆ ಅಂತ ಅವರ ಸೆಕ್ರೆಟರಿಗಳೇ ಅವರನ್ನು ನೋಡಲಿಕ್ಕೆ ಬಿಡುವುದಿಲ್ಲ. ಹೀಗಿರುವಾಗ ಇವರ ಪಕ್ಕದಲ್ಲೇ ಇರುವ ಮತ್ತೊಬ್ಬ ಫುಲ್ಲೀ ಕ್ಲೋಸ್ಡ್ ಬಾಗಿಲು ಸಚಿವರು ತಮ್ಮ ಇಲಾಖೆಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಲು ಪತ್ರಿಕಾಗೋಷ್ಠಿ ಕರೆದಿದ್ದರು,
ಅಕ್ಕಪಕ್ಕ ಸಚಿವರ ಮನೆಗಳು, ಇಬ್ಬರದ್ದೂ ತದ್ವಿರುದ್ಧ ನಡವಳಿಕೆ, ಒಬ್ಬರ ಮನೆ ಯಾವಾಗಲೂ ತೆರೆದ ಬಾಗಿಲು, ತೆರೆದ ಕಾಂಪೌಂಡ್, ಮತ್ತೊಬ್ಬ ಸಚಿವರದ್ದು ಮನೆಯ ಒಳಗೆ ಏನಾಗುತ್ತಿದೆ ಎಂದು ಕಾಣದಷ್ಟು ಎತ್ತರದ ಕಾಂಪೌಂಡ್. ಎತ್ತರದ ಬಾಗಿಲು, ಆ ಬಾಗಿಲುಗಳಲ್ಲಿ ಯಾರಾದರೂ ಇಣುಕಿ ನೋಡಿದರೂ ಕಾಣಬಾರದೆಂದು ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿದ ಗ್ರಿಲ್ಸ್.
ಈ ತೆರೆದ ಬಾಗಿಲುಗಳ ಸಚಿವರು ಯಾವಾಗಲೂ ಮನೆಯಲ್ಲಿ ಇರೋದಿಲ್ಲ, ಇದ್ದರೂ ಸಾಹೇಬರು ರೆಸ್ಟ್ ನಲ್ಲಿ ಇದ್ದಾರೆ ಅಂತ ಅವರ ಸೆಕ್ರೆಟರಿಗಳೇ ಅವರನ್ನು ನೋಡಲಿಕ್ಕೆ ಬಿಡುವುದಿಲ್ಲ. ಹೀಗಿರುವಾಗ ಇವರ ಪಕ್ಕದಲ್ಲೇ ಇರುವ ಮತ್ತೊಬ್ಬ ಫುಲ್ಲೀ ಕ್ಲೋಸ್ಡ್ ಬಾಗಿಲು ಸಚಿವರು ತಮ್ಮ ಇಲಾಖೆಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಲು ಪತ್ರಿಕಾಗೋಷ್ಠಿ ಕರೆದಿದ್ದರು.
ಆ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಆರಾಮವಾಗಿ ನಿಂತಿದ್ದ ಸಚಿವರಿಗೆ ‘ಏನ್ ಸಾರ್, ಒಬ್ಬರೇ ನಿಂತಿದ್ದೀರಿ, ನಿಮ್ಮ ಈ ಮನೆಯಲ್ಲಿ ಇಷ್ಟೊಂದು ಎತ್ತರದ ಕಾಂಪೌಂಡ್, ಬಾಗಿಲುಗಳ ಗ್ರಿಲ್ಸ್‌ಗೆ ಪ್ಲಾಸ್ಟಿಕ್ ಹಾಳೆ, ಇವೆಲ್ಲಾ ಯಾಕೆ ಸಾರ್? ನಿಮ್ಮ ಕ್ಷೇತ್ರದಿಂದ ಜನ ಬರಬಾರದು ಅಂತಾನಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಸಚಿವರು ಏನ್ರೀ ಈ ಜನಾ... ನನಗಂತೂ ಸಾಕಾಗಿ ಹೋಗಿದೆ, ಸುಮ್ಮನೆ ಮುತ್ತಿಕೊಳ್ತಾರೆ, ಊಟ, ತಿಂಡಿ ಏನ್ ಮಾಡೋಕೂ ಬಿಡಲ್ಲ. ಅದಕ್ಕಾಗಿಯೇ ಯಾರೇ ಬರಲಿ ಒಳಗೆ ಇದಾರೋ, ಇಲ್ಲವೋ ಗೊತ್ತಾಗಬಾರದು ಅಂತ ಫುಲ್ಲೀ ಕ್ಲೋಸ್ಡ್.
ಇನ್ಮೇಲೆ ಪತ್ರಿಕಾಗೋಷ್ಠಿಯನ್ನೂ ಮನೆಯ ಲಾನ್ ನಲ್ಲಿಯೇ ಮಾಡ್ತೀನಿ ಹೆಂಗೆ ಅಂದಿದ್ದಾರೆ. ಆಗ ಆ ಪತ್ರಕರ್ತ, ಸಾರ್ ಪತ್ರಿಕಾಗೋಷ್ಠಿ ಇರಲಿ, ನಿಮ್ಮ ಕ್ಷೇತ್ರದ ಜನರೂ ಸಮಸ್ಯೆ ಹೇಳ್ಕೋಬಾರ್ದೆ ಅಂದಿದ್ದಾರೆ, ಅದಕ್ಕೆ ಆ ಸಚಿವರು, ಏನ್ರೀ ಸಮಸ್ಯೆ ಸುಮ್ಮನೆ ಮುತ್ತಿಕೊಳ್ತಾರೆ, ಏನೂ ಸಮಸ್ಯೆ ಇರೋದಿಲ್ಲ. ಸುಮ್ಮನೆ ಬರ್ತಾರೆ ಅಂದು ಬಿಟ್ಟರು...
ಆಗ ಆ ಪತ್ರಕರ್ತ, ಇನ್ನು ಇವರಿಗೆ ಏನ್ ಹೇಳಿದರೂ ಕನ್ವಿನ್ಸ್ ಮಾಡಲು ಸಾಧ್ಯವಿಲ್ಲ. ಅಕಸ್ಮಾತ್ ಈತ ಸೋತರೆ ಅಥವಾ ಸಚಿವ ಸ್ಥಾನದಿಂದ ಕೆಳಗಿಳಿದರೆ ಮಾತ್ರ ಜನರ ಕಷ್ಟ ಅರಿವಾಗುತ್ತೆ ಅಂದುಕೊಂಡು ಸುಮ್ಮನಾಗಿದ್ದಾರೆ.
ಅಂದ ಹಾಗೆ ಆ ಸಚಿವ ಈಗ ಸಚಿವ ಸ್ಥಾನ ಕಳೆದುಕೊಂಡು ಆರಾಮವಾಗಿ ತಿಂಡಿ, ಊಟ ಮಾಡುತ್ತಿದ್ದಾರೆ. ಜನರೂ ಇತ್ತ ತಲೆಯನ್ನೂ ಹಾಕುತ್ತಿಲ್ಲ. ಹೆಂಗೆ....
ಭಾಷಣ ಕೇಳಲು ಬಾಗಿಲು ಲಾಕ್...
ಪ್ರಸ್ತುತ ಎಲ್ಲಿ ನೋಡಿದರೂ ಕೃತಕ ಬುದ್ಧಿಮತ್ತೆ(ಎಐ) ವಿಷಯ ಕುರಿತು ಮಾತು, ಚರ್ಚೆ, ಸಮಾವೇಶ ಮಾಮೂಲಿ. ಅದೇ ರೀತಿ ರಾಜಧಾನಿ ಬೆಂಗಳೂರಿನಲ್ಲೂ ಎಐ ಕುರಿತ ಸಮ್ಮೇಳನದ ಸಮಾರೋಪ ಆಯೋಜಿಸಲಾಗಿತ್ತು.
ಇತ್ತೀಚೆಗೆ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಜೆನ್-ಝೀ ಸಮುದಾಯಕ್ಕೆ ಸಮಾರೋಪ ಸಮಾರಂಭದಲ್ಲಿಯೂ ಭಾಗವಹಿಸುವಂತೆ ತಾಕೀತು ಮಾಡಲಾಗಿತ್ತು. ಆದರೂ ಒಲ್ಲದ ಮನಸ್ಸಿನಿಂದಲೇ ಬಂದ ಬಹುತೇಕರಿಗೆ ಗಣ್ಯರ ಭಾಷಣ ಕೇಳುವ ಆಸಕ್ತಿಯೇ ಇರಲಿಲ್ಲ. ಅನೇಕ ಸೀಟುಗಳು ಖಾಲಿ ಇದ್ದವು, ಈ ಮಧ್ಯೆ ಗಣ್ಯರು ಭಾಷಣ ಮಾಡುತ್ತಿದ್ದಂತೆ ಉಪನ್ಯಾಸಕರು ಹೊರ ಹೋಗದಂತೆ ತಡೆಯಲು ತಾಕೀತು ಮಾಡಿದರು. ಆದರೂ ವಿದ್ಯಾರ್ಥಿಗಳು ಹೊರ ಹೊರ ಹೋಗುವುದನ್ನು ತಡೆಯಲು ಸಭಾಂಗಣದ ಪ್ರವೇಶ ದ್ವಾರ ಮುಚ್ಚಿ ಲಾಕ್ ಮಾಡಬೇಕಾಯಿತು!
ಹೋಗಲಿ....ಇನ್ನು ಕಾರ್ಯಕ್ರಮದಲ್ಲಿ ಕುಳಿತಿದ್ದ ‘ಜೆನ್‌ಝೀ’ಗಳಲ್ಲಿ ಬಹುತೇಕರು ಭಾಷಣ ಕೇಳುವ ಬದಲು ಮೊಬೈಲ್ ಫೋನ್ ಸ್ಕ್ರಾಲಿಂಗ್‌ನಲ್ಲಿ ಮಗ್ನರಾಗಿದ್ದರು. ಮತ್ತೆ ಕೆಲವರು ಇಂಟರ್ನೆಟ್ ಸಂಪರ್ಕ ಸರಿಯಾಗಿ ಸಿಗುತ್ತಿಲ್ಲವೆಂದು ಕವರೇಜ್ ಸಿಗುವ ಜಾಗ ಹುಡುಕಿಕೊಂಡು ಅತ್ತಿತ್ತ ಓಡಾಡುತ್ತಿದರು.
ಇದನ್ನೆಲ್ಲ ದೂರದಿಂದ ನೋಡುತ್ತಿದ್ದ ವೇದಿಕೆಯಲ್ಲಿದ್ದ ಗಣ್ಯರು ಮಾತ್ರ ವಿದ್ಯಾರ್ಥಿಗಳ ವರ್ತನೆ ನೋಡಿ ಬೇಸರಗೊಂಡಂತೆ ಕಂಡಿತು.
ಮೊಬೈಲ್ ಸ್ವಿಚ್ ಆಫ್ ಆದ್ರ.. ಅದ್ಕೇನು ಪರಿಹಾರನೇ ಇಲ್ಲೇನ್ರೀ...
ಮನೆಯಲ್ಲಿ ಮಕ್ಕಳಿಗೆ ಮೊಬೈಲ್ ನೋಡಬೇಡ ಹಾಳಾಗ್ತೀರ ಎಂದು ಹೇಳುವುದು ಸಾಮಾನ್ಯ ವಿಷಯ. ಆದರೆ ಇಲ್ಲೊಂದು ಮೊಬೈಲ್ ರೈತರಿಗೆ ಬರಬೇಕಾದ ವಿಮಾ ಪರಿಹಾರವನ್ನೇ ಕಿತ್ತುಕೊಂಡಿದೆ. ಜತೆಗೆ ಸಚಿವರ ಅಮೂಲ್ಯ ಸಮಯವನ್ನೂ ಹಾಳು ಮಾಡಿದೆ ಎಂಬುದನ್ನು ನಂಬಲು ಕಷ್ಟವಾದರೂ ನೂರಾಣೆ ಸತ್ಯ.
ಹೊಸದಾಗಿ ಸಚಿವರಾಗಿರುವ ಬಸವರಾಜ ರಾಯರೆಡ್ಡಿ ಸಾಹೇಬ್ರು ಗದಗ ಜಿಲ್ಲೆಯ ಬರ ಪರಿಸ್ಥಿತಿ, ಪರಿಹಾರ ಕಾರ್ಯಗಳ ಪರಿಶೀಲನೆಗೆಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿದ್ದ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆ ಹೇಳಿಕೊಂಡರೆ, ಅಧಿಕಾರಿಗಳು ತಾವು ಏನೇನು ಮಾಡಿದ್ದೇವೆ ಎಂದು ವಿವರಿಸಿದರು.
ಆಗ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಅವರು ಮೊಬೈಲ್ ಅವಾಂತರದ ಪ್ರಸಂಗ ಉಲ್ಲೇಖಿಸಿ, ತಾಲೂಕಿನ ಬಿಂಕದಕಟ್ಟಿ ಊರಿನಲ್ಲಿ ಕಳೆದ ವರ್ಷ ಬೆಳೆ ವಿಮೆ ಹಣ ಪಾವತಿಸಿದ ತುಂಬಿದ ರೈತರ ಫಸಲಿನ ಅಂದಾಜು ಮಾಡಲು 10 ಹೊಲ ನಿಗದಿಪಡಿಸಿದರಂತೆ. ಒಂಬತ್ತು ಹೊಲಗಳ ಫಸಲಿನ ಅಂದಾಜು ಮಾಡಿದ ನಂತರ ಹತ್ತನೇಯ ಹೊಲದ ಅಂದಾಜು ಮಾಡಲು ಮುಂದಾದ ತಲಾಟಿ (ಗ್ರಾಮ ಲೆಕ್ಕಾಧಿಕಾರಿ) ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದಕ್ಕೆ ತಲಾಟೆ ತಲೆ ಕೆಡಸಿಕೊಳ್ಳದೆ ಹತ್ತನೇಯ ಹೊಲ ಫಸಲಿನ ಅಂದಾಜು ಮಾಡದೆ ವಾಪಸ್ ಹೋಗಿದ್ದಾನೆ. ಇಷ್ಟಾದ ಮೇಲೆ ಮುಂದೆ ಪರಿಹಾರದ ಹಣ ಬಂದಿದೆ. ಆದರೆ ಹತ್ತನೆಯ ಹೊಲ ಬಿಟ್ಟು ಬಂದ ರೈತರನ್ನು ಹೊರತು ಪಡಿಸಿ ಉಳಿದವರಿಗೆ ಪರಿಹಾರ ಬಂದಿದೆ. ಈಗ ಪರಿಹಾರ ಸಿಗದ ರೈತರು ಸಿಟ್ಟಾಗಿದ್ದಾರೆ. ಇದರಲ್ಲಿ ನಮ್ಮ ತಪ್ಪೇನು ಎಂದು ರೈತರು ಕೇಳುತ್ತಿದ್ದಾರೆ ಎಂದು ವಿವರಿದರು.
ಹಿರಿಯ ಶಾಸಕರ ಮಾತುಗಳನ್ನು ಆಲಿಸಿದ ಸಚಿವ ಬಸವರಾಯ ರಾಯರೆಡ್ಡಿ ಅವರು ಅದು ಭಾರೀ ಮೊಬೈಲ್ ಐತಿ ಬಿಡ್ರಿ. ಅಲ್ರೀ... ಮೊಬೈಲ್ ಸ್ವಿಚ್ ಆಫ್ ಆದ್ರ.. ಅದ್ಕೇನು ಪರಿಹಾರನೇ ಇಲ್ಲನ್ರೀ... ಅಂದು ಅಧಿಕಾರಿಗಳು ಮಾಡಿದ ನಿರ್ಲಕ್ಷ್ಯಕ್ಕೆ ಇಂದು ರೈತರು ಸಂಕಷ್ಟ ಅನುಭವಿಸುವಂಗ್ ಆತ ರ್ರೀ... ಆ ಮೊಬೈಲ್ ಒಂದ್ ಕಡೆ ರೈತರ ಬೆಳೆವಿಮಾ ಪರಿಹಾರನೂ ತಿಂದು ಹಾಕಿತು... ಇತ್ತಾಗ, ಇವತ್ತಿನ ನಮ್ಮ ಸಭೆಯ ಅಮೂಲ್ಯ ಸಮಯನಾ ನುಂಗಿತಪಾ.. ಏನ್ರೀ ಇದೆಲ್ಲಾ.. ಮೊಬೈಲ್ ಸ್ವಿಚ್ ಆಗುದೆಲ್ಲಾ ಕಾರಣನೇನ್ರೀ... ಎಂದು ಒಮ್ಮೆ ನಗುತ್ತಾ ಸಚಿವ ಬಸವರಾಜ ರಾಯರಡ್ಡಿ ಬರ ಪರಿಸ್ಥಿತಿ ಪರಿಶೀಲನಾ ಸಭೆ ಮುಂದುವರಿಸಿದರು.
-ಉಮಾಶಂಕರ್ ಕಾರ್ಯ
-ಮಂಜುನಾಥ್ ನಾಗಲೀಕರ್
-ಶಿವಕುಮಾರ ಕುಷ್ಟಗಿ


