ಕೂಂಬಿಂಗ್‌ ಮಾಡಿ ವೀರಪ್ಪನ್‌ನಿಂದಡಾ। ರಾಜ್‌ ರಕ್ಷಣೆಗೆ ನಡೆದಿತ್ತು ಸಿದ್ಧತೆ

| Published : Dec 16 2023, 02:00 AM IST

ಕೂಂಬಿಂಗ್‌ ಮಾಡಿ ವೀರಪ್ಪನ್‌ನಿಂದಡಾ। ರಾಜ್‌ ರಕ್ಷಣೆಗೆ ನಡೆದಿತ್ತು ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ನಟ ಡಾ। ರಾಜ್‌ಕುಮಾರ್‌ ಅವರನ್ನು ಅಪಹರಿಸಿದ್ದ ವೀರಪ್ಪನ್‌ ವಿರುದ್ಧ ಕೂಂಬಿಂಗ್‌ ಕಾರ್ಯಾಚರಣೆ ನಡೆಸಲು ಅಂದಿನ ಎಸ್‌.ಎಂ.ಕೃಷ್ಣ ಸಿದ್ಧತೆ ನಡೆಸಿದ್ದರು. ಆದರೆ ರಾಜ್‌ ಜೀವಕ್ಕೆ ಅಪಾಯ ಆಗುವ ಸಾಧ್ಯತೆಯಿಂದಾಗಿ ಕಾರ್ಯಾಚರಣೆ ಕೈಬಿಡಲಾಯಿತು ಎಂದು ಮಾಜಿ ಪೊಲೀಸ್‌ ಮಹಾನಿರ್ದೇಶಕ ಡಾ। ಶಂಕರ್‌ ಬಿದರಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ವರನಟ ಡಾ। ರಾಜ್‌ಕುಮಾರ್‌ ಅವರನ್ನು ವೀರಪ್ಪನ್‌ ಅಪಹರಿಸಿದ ನಂತರ ಕಾಡಿನಲ್ಲಿ ಕೂಂಬಿಂಗ್‌ ಮಾಡಿ ರಾಜ್‌ಕುಮಾರ್‌ ಅವರನ್ನು ಕರೆತರಲು ಅಂದಿನ ಸಿಎಂ ಎಸ್‌.ಎಂ.ಕೃಷ್ಣ ಆದೇಶಿಸಲು ಮುಂದಾಗಿದ್ದರು. ಆದರೆ, ಈ ಕಾರ್ಯಾಚರಣೆಯಲ್ಲಿ ರಾಜ್‌ಕುಮಾರ್‌ ಅವರಿಗೂ ಅಪಾಯ ಎದುರಾಗಲಿದೆ ಎಂಬ ಕಾರಣಕ್ಕಾಗಿ ಆದೇಶ ಮಾಡದೆ ಸಂಧಾನ ಮಾತುಕತೆಗೆ ನಿರ್ಧರಿಸಿದರು’ ಎಂದು ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಡಾ। ಶಂಕರ್‌ ಬಿದರಿ ಹೇಳಿದರು.

ಕರ್ನಾಟಕ ರತ್ನ ಡಾ। ಪುನೀತ್‌ ರಾಜ್‌ಕುಮಾರ್‌ ಸೇವಾ ಸಮಿತಿಯಿಂದ ನಗರದ ಗಾಂಧಿಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಡಾ। ರಾಜ್‌ಕುಮಾರ್‌ ರತ್ನ ಪ್ರಶಸ್ತಿ ಹಾಗೂ ಡಾ। ಅಪ್ಪು ಸೇವಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಡುಗಳ್ಳ ವೀರಪ್ಪನ್‌ ಅಂದಿನ ಶಾಸಕ ನಾಗಪ್ಪ, ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಜತೆಗೆ ಡಾ। ರಾಜ್‌ಕುಮಾರ್‌ ಅವರನ್ನು ಅಪಹರಿಸುವ ಯೋಜನೆ ರೂಪಿಸಿದ್ದ. ಆ ಬಗ್ಗೆ ಮಾಹಿತಿ ದೊರೆತ ಕೂಡಲೆ ಮೂವರಿಗೂ ಭದ್ರತೆ ಒದಗಿಸಲಾಗಿತ್ತು. ಡಾ। ರಾಜ್‌ಕುಮಾರ್‌ ಅವರು ಗಾಜನೂರಿಗೆ ಹೋದಾಗಲೂ ಭದ್ರತೆಯೊಂದಿಗೆ ತೆರಳುವಂತಹ ವ್ಯವಸ್ಥೆ ಮಾಡಿದ್ದೆವು. ಅದರೆ, ದುರಾದೃಷ್ಟವಶಾತ್‌ ಅವರನ್ನು ವೀರಪ್ಪನ್‌ ಅಪಹರಿಸಿದ್ದ. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರ ವೀರಪ್ಪನ್‌ ಅಡಗಿದ್ದ ಕಾಡಿನಲ್ಲಿ ಕೂಂಬಿಂಗ್‌ ನಡೆಸಿ ರಾಜ್‌ಕುಮಾರ್‌ ಅವರನ್ನು ವಾಪಾಸು ಕರೆತರುವ ಬಗ್ಗೆಯೂ ಚರ್ಚಿಸಿತ್ತು. ಆದರೆ, ಈ ಕಾರ್ಯಾಚರಣೆಯಿಂದ ರಾಜ್‌ಕುಮಾರ್‌ ಅವರಿಗೂ ಅಪಾಯ ಎದುರಾಗಲಿದೆ ಎಂಬ ಕಾರಣಕ್ಕಾಗಿ ಅದನ್ನು ಕೈಬಿಡಲಾಯಿತು ಎಂದರು.

ಡಾ। ರಾಜ್‌ಕುಮಾರ್‌ ಅವರು 108 ದಿನ ಕಾಡಿನಲ್ಲಿದ್ದು ವಾಪಾಸು ಬಂದ ನಂತರ ನಾನು ಅವರನ್ನು ಅವರ ಮನೆಯಲ್ಲ ಭೇಟಿಯಾಗಿದ್ದೆ. ಆಗ ಅವರು ವೀರಪ್ಪನ್‌ ಜತೆಗಿದ್ದ ದಿನಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರು. ಅಲ್ಲದೆ, ವೀರಪ್ಪನ್‌ಗೆ ನಿಮ್ಮ ಬಗ್ಗೆ ಸಾಕಷ್ಟು ಕೋಪವಿದೆ. ಹೀಗಾಗಿ ಹುಷಾರಾಗಿ ಎಂದು ಅಕ್ಕರೆಯಿಂದ ಹೇಳಿದ್ದರು. ಅದರ ಜತೆಗೆ ನಾವು ತೆರೆಯ ಮೇಲೆ ಮಾತ್ರ ನಾಯಕರು. ಆದರೆ, ನೀವು ನಿಜ ಜೀವನದ ನಾಯಕರು ಎಂದು ಹೊಗಳಿ ಕಳುಹಿಸಿದರು ಎಂದು ಶಂಕರ ಬಿದರಿ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ನಟಿ ಗಿರಿಜಾ ಲೋಕೇಶ್‌, ನಿವೃತ್ತ ಪೊಲೀಸ್‌ ಅಧಿಕಾರಿಗಳಾದ ಜಿ.ಎ.ಬಾವಾ, ಬಿ.ಬಿ.ಅಶೋಕ್‌ಕುಮಾರ್‌ ಸೇರಿದಂತೆ ಐವರು ಗಣ್ಯರಿಗೆ ಡಾ। ರಾಜ್‌ಕುಮಾರ್‌ ರತ್ನ ಪ್ರಶಸ್ತಿ ಹಾಗೂ ಆರು ಮಂದಿಗೆ ಡಾ। ಅಪ್ಪು ಸೇವಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ, ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ.ಶಿವರಾಂ, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಇದ್ದರು.

---

‘ಯೂನಿಫಾರಂ ನನ್ನ

ಜೀವ ಉಳಿಸಿತು’

ಕಾರ್ಯಕ್ರಮದಲ್ಲಿ ಡಾ। ರಾಜ್‌ಕುಮಾರ್‌ ಸಾವನ್ನಪ್ಪಿದ್ದ ಸಂದರ್ಭವನ್ನು ನೆನಪಿಸಿಕೊಂಡ ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಬಿ.ಅಶೋಕ್‌ಕುಮಾರ್‌, ರಾಜ್‌ಕುಮಾರ್‌ ಅವರು ತೀರಿಕೊಂಡಾಗ, ಅವರ ಅಭಿಮಾನಿಗಳು ಎಲ್ಲೆಡೆ ಗಲಭೆ ಆರಂಭಿಸಿದ್ದರು. ರಾಜ್‌ಕುಮಾರ್‌ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಗಲಾಟೆ ಆರಂಭಿಸಲಾಗಿತ್ತು. ಈ ಗಲಭೆಯಲ್ಲಿ ಹಲವು ಸಾವನ್ನಪ್ಪಿದ್ದರು. ಆ ಸಂದರ್ಭದಲ್ಲಿ ನನ್ನ ಯೂನಿಫಾರಂ ಮತ್ತು ನೇಮ್‌ಪ್ಲೇಟ್‌ ನನ್ನ ಜೀವ ಉಳಿಸಿದವು ಎಂದು ಹೇಳಿದರು.