ಕದನ ವಿರಾಮಕ್ಕೆ ಭಾರತ ಒಪ್ಪಿದ್ದು ಏಕೆ?

| N/A | Published : May 11 2025, 12:27 PM IST

indian army

ಸಾರಾಂಶ

ಭಾರತವು ಪಾಕಿಸ್ತಾನದೊಂದಿಗಿನ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದರಿಂದ ಅನೇಕ ಭಾರತೀಯರಲ್ಲಿ, ವಿಶೇಷವಾಗಿ ವ್ಯೂಹಾತ್ಮಕ ಮತ್ತು ರಾಷ್ಟ್ರೀಯವಾದಿ ವಲಯಗಳಲ್ಲಿ ನಿರಾಶೆಯ ಭಾವ ಮೂಡಿರುವುದು ಸ್ಪಷ್ಟವಾಗಿದೆ.

 ರಾಜೇಶ್‌ ಕಾಲ್ರಾ

ಭಾರತವು ಪಾಕಿಸ್ತಾನದೊಂದಿಗಿನ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದರಿಂದ ಅನೇಕ ಭಾರತೀಯರಲ್ಲಿ, ವಿಶೇಷವಾಗಿ ವ್ಯೂಹಾತ್ಮಕ ಮತ್ತು ರಾಷ್ಟ್ರೀಯವಾದಿ ವಲಯಗಳಲ್ಲಿ ನಿರಾಶೆಯ ಭಾವ ಮೂಡಿರುವುದು ಸ್ಪಷ್ಟವಾಗಿದೆ. ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪ್ರಮುಖ ಸ್ಥಳಗಳಲ್ಲಿ ತಟಸ್ಥಗೊಳಿಸಲಾಗಿದ್ದು, ಪ್ರಮುಖ ವಾಯುನೆಲೆಗಳಿಗೆ ಅಪಾರ ಹಾನಿಯಾಗಿದೆ. ಅಂತೆಯೇ, ಪಾಕಿಸ್ತಾನದ ಎಲ್ಲಾ ವೈಮಾನಿಕ, ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಯಶಸ್ವಿಯಾಗಿ ತಡೆಹಿಡಿಯಲಾಯಿತು ಅಥವಾ ತಟಸ್ಥಗೊಳಿಸಲಾಯಿತು. ಈ ಮೂಲಕ ಭಾರತ ಮೇಲುಗೈ ಸಾಧಿಸಿದೆ ಎಂಬುದು ಪ್ರಸ್ತುತ ಇರುವ ಭಾವನೆ.

ಹೀಗಿರುವಾಗ, ಈಗ ಏಕೆ ಕದನವಿರಾಮಕ್ಕೆ ಒಪ್ಪಿಕೊಳ್ಳಲಾಯಿತು? ಯುದ್ಧ ಮುಂದುವರೆಸಿ ಪಿಒಕೆ(ಪಾಕ್‌ ಆಕ್ರಮಿತ ಕಾಶ್ಮೀರ)ಯನ್ನೂ ಯಾಕೆ ವಶಪಡಿಸಿಕೊಳ್ಳಬಾರದು? ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಬಹುತೇಕರು ಎಡವುತ್ತಿರುವುದು ಇಲ್ಲೇ. ಪಾಕಿಸ್ತಾನ ಒಂದು ವಿಫಲವಾಗಿರುವ ದೇಶ. ಅದರ ಬಳಿ ಕಳೆದುಕೊಳ್ಳಲು ಏನೂ ಇಲ್ಲ. ಅಲ್ಲಿನ ನಾಯಕರೇ ದೇಶವನ್ನು ಲೂಟಿ ಮಾಡಿ, ಸಂಪತ್ತನ್ನು ವಿದೇಶಗಳಲ್ಲಿ ಬಚ್ಚಿಟ್ಟಿದ್ದಾರೆ. ಈಗ ಪರಿಸ್ಥಿತಿ ಉಲ್ಬಣಿಸಿದರೆ ಅದರಿಂದ ಹಾನಿಯಾಗುವುದು, ವೇಗವಾಗಿ ಬೆಳೆಯುತ್ತಿರುವ ದೊಡ್ಡ ಜಾಗತಿಕ ಆರ್ಥಿಕತೆ, ಉದಯೋನ್ಮುಖ ಜಾಗತಿಕ ರಾಜಕೀಯ ಶಕ್ತಿ, ಜಾಗತಿಕ ಸ್ಥಿರತೆ, ವ್ಯಾಪಾರ ಮತ್ತು ಗ್ರಹಿಕೆಯ ವಿಷಯದಲ್ಲಿ ಹೆಚ್ಚಿನ ಅಪಾಯದಲ್ಲಿರುವ ರಾಷ್ಟ್ರವಾದ ಭಾರತಕ್ಕೆ. ಅಮೆರಿಕದ ಪಾತ್ರವೇನು? ತೆರೆಯ ಹಿಂದೆ ಏನು ನಡೆಯಿತು ಎಂಬುದನ್ನು ತಿಳಿದುಕೊಳ್ಳುವುದು ಅತಿ ಮುಖ್ಯ. ಭಾರತ ತನ್ನ ವಾಯುನೆಲೆಗಳ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರಿಂದ(ಡಿಜಿಎಂಒ) ಕದನ ವಿರಾಮದ ಮನವಿ ಬಂದಿದೆ.

ಇದರಲ್ಲಿ ಅಮೆರಿಕದ ಪಾತ್ರವಿದೆ. ಅದು ಒಡ್ಡಿದ ಷರತ್ತುಗಳಿಗೆ ಒಪ್ಪದ ಹೊರತು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್‌)ಯಿಂದ ಸಿಗಬೇಕಿದ್ದ ಸಾಲವನ್ನು ತಡೆಹಿಡಿಯಲಾಗುತ್ತಿತ್ತು ಮತ್ತು ಅದರಿಂದ ಪಾಕಿಸ್ತಾನದ ಮೇಲೆ ಆರ್ಥಿಕ ಒತ್ತಡ ಸೃಷ್ಟಿಯಾಗುತ್ತಿತ್ತು. ಭಾರತ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದೆ. ಇದರನ್ವಯ, ನದಿ ನೀರಿನ ಕುರಿತು ಪಾಕಿಸ್ತಾನದೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲಾಗುವುದಿಲ್ಲ. ಅಂತೆಯೇ, ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಉತ್ತರದ 3 ನದಿಗಳ ಯೋಜನೆಗಳನ್ನು ಪಾಕಿಸ್ತಾನದ ಅರಿವಿಗೆ ತರದೆ ಮುಂದುವರಿಸಲಾಗುತ್ತದೆ.

ಇದಕ್ಕಿಂತಲೂ ಮುಖ್ಯವಾದ ಅಂಶವೆಂದರೆ, ‘ಇನ್ನುಮುಂದೆ ಉಗ್ರದಾಳಿಗಳನ್ನು ಯುದ್ಧ ಕೃತ್ಯ ಎಂದು ಪರಿಗಣಿಸಲಾಗುವುದು’ ಎನ್ನುವ ಮೂಲಕ ಭಾರತ ತನ್ನ ಯುದ್ಧ ಸಿದ್ಧಾಂತದಲ್ಲಿ ಮಾಡಿಕೊಂಡಿರುವ ಬದಲಾವಣೆಯನ್ನು ಅಮೆರಿಕ ಒಪ್ಪಿದಂತಿದೆ. ಇದಕ್ಕಿಂತಲೂ ದೊಡ್ಡ ಬೆದರಿಕೆ ಇರುವುದು ಬೇರೆ ಕಡೆ.

ತೆರೆಮರೆಯ ಶತ್ರು ಚೀನಾ

ಚೀನಾ ಈ ಸಂದರ್ಭವನ್ನು ಹತ್ತಿರದಿಂದ ಗಮನಿಸುತ್ತಿದೆ. ಇತ್ತೀಚಿನ ಘಟನೆಗಳ ಹಿಂದಿನ ಕಾಣದ ಕೈ ಅದರದ್ದೇ ಇರಬಹುದು. ಭಾರತವನ್ನು ಅಸ್ಥಿರಗೊಳಿಸುವ ಅದರ ವ್ಯೂಹಾತ್ಮಕ ಆಸಕ್ತಿ ಹೊಸದೇನೂ ಅಲ್ಲ. ಚೀನಾ ಭಾರತವನ್ನು ದೀರ್ಘಕಾಲದ ಭೌಗೋಳಿಕ ರಾಜಕೀಯ ಪ್ರತಿಸ್ಪರ್ಧಿಯೆಂದು ಪರಿಗಣಿಸುತ್ತದೆ. 2026ರಿಂದ, ಅಮೆರಿಕದಲ್ಲಿ ಮಾರಾಟವಾಗುವ ಎಲ್ಲಾ ಐಫೋನ್‌ಗಳನ್ನು ಭಾರತದಲ್ಲಿ ಉತ್ಪಾದಿಸುವ ಆ್ಯಪಲ್‌ನ ನಿರ್ಧಾರ, ಚೀನಾದ ಟೆಕ್‌ ಅಧಿಪತ್ಯಕ್ಕೆ ಬಿದ್ದ ದೊಡ್ಡ ಪೆಟ್ಟು. ಪಹಲ್ಗಾಂ ಹತ್ಯಾಕಾಂಡದಂತಹ ಸಂಘಟಿತ ಭಯೋತ್ಪಾದಕ ದಾಳಿ, ನಂತರ ಪಾಕಿಸ್ತಾನದ ಯುದ್ಧ ಪ್ರಚೋದನೆಗಳು ಚೀನಾದ ಹಿತಾಸಕ್ತಿಗಳಿಗೆ ಪೂರಕವಾಗಿವೆ. ಇದರಿಂದ, ಭಾರತ ಹೂಡಿಕೆಗೆ ಅಸುರಕ್ಷಿತ ಎಂದು ಬಿಂಬಿಸಿದಂತಾಗುತ್ತದೆ. ಪಾಕಿಸ್ತಾನವನ್ನು ಬಹುತೇಕ ತನ್ನ ಅಧೀನ ರಾಜ್ಯವೆಂದು ಪರಿಗಣಿಸುವ ಚೀನಾ, ಅದನ್ನು ಈಗಿನ ಸಂಘರ್ಷದ ಪರಿಸ್ಥಿತಿಯಲ್ಲಿ ಭಾರತದ ಮಿಲಿಟರಿ ತಂತ್ರಜ್ಞಾನವನ್ನು ಪರೀಕ್ಷಿಸಲು ಬಳಸುತ್ತಿರಬಹುದು. ಇಂತಹ ಸಂದರ್ಭದಲ್ಲಿ, ಕದನ ವಿರಾಮವು ದೌರ್ಬಲ್ಯವಲ್ಲ, ಅದೊಂದು ತಂತ್ರ.

ಇದು, ಭಾರತದ ಬೆಳವಣಿಗೆ ಹಳಿತಪ್ಪದಂತೆ ಹೊಡೆತವನ್ನು ನೀಡುವ ಹಾಗೂ ಇನ್ಯಾರೋ ಹೆಣೆದ ಬಲೆಗೆ ಎಳೆಯಲ್ಪಡುವ ಬದಲು ಯುದ್ಧರಂಗವನ್ನು ಆಯ್ಕೆಮಾಡಿಕೊಳ್ಳುವ ಬಗ್ಗೆಯಾಗಿದೆ. ಇದು ಕತೆಯ ಅಂತ್ಯವಲ್ಲ, ಕೇವಲ ಹೇಳಿಕೆಯಷ್ಟೇ.

ಭಾರತವು ಸಂಘರ್ಷಕ್ಕೆ ಸಂಬಂಧಿಸಿದ ನಿಯಮಗಳನ್ನೇ ಬದಲಿಸಿಕೊಂಡಿದೆ- ಮಿಲಿಟರಿ, ರಾಜತಾಂತ್ರಿಕ ಹಾಗೂ ಆರ್ಥಿಕವಾಗಿ.