ಸಾರಾಂಶ
ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದಿದ್ದ ದೇಶದ ನಾಯಕರು ಬ್ರಿಟಿಷ್ ಅಧಿಕಾರಿಯನ್ನು ಇಲ್ಲೇ ಉಳಿಸಿಕೊಳ್ಳಲು ಬಯಸಿದ್ದರು!
- - ಅಭಿವೃದ್ಧಿ ಕಾರಣದ ಪ್ರದೇಶದಲ್ಲಿ ಅಧಿಕಾರ ಚಲಾಯಿಸುವ ಭರದಲ್ಲಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಸತ್ತ ಹಸುಗೂಸುಗಳು ಹಾಗೂ ಮಲೇರಿಯಾ, ಕಾಲರಾಗೆ ಕರುಳ ಕುಡಿಗಳನ್ನು ಕಳೆದುಕೊಂಡ ಬ್ರಿಟಿಷ್ ಅಧಿಕಾರಿಗಳ ಸಂಕಟ ದೂರದ ಇಂಗ್ಲೆಂಡಿಗೂ ಕೇಳಿಸದಷ್ಟು ಘೋರವಾಗಿತ್ತು.
- -- ‘ಭಾರತವನ್ನು ವಿಭಜನೆ ಮಾಡಿ ಪಾಕಿಸ್ತಾನವನ್ನು ಸೃಷ್ಟಿಸಬೇಕೆಂಬ ಜಿನ್ನಾರ ಸಂಕಲ್ಪ ಬದಲಿಸಬೇಕೆಂದು ನಾನಾ ಉಪಾಯಗಳನ್ನು ಮಾಡಿದೆ. ಆದರೆ, ಜಿನ್ನಾರಿಗೆ ಪಾಕಿಸ್ತಾನ ಎಂಬ ರಾಷ್ಟ್ರವನ್ನು ಸೃಷ್ಟಿಸುವ ಹುಚ್ಚಿದ್ದು, ಭಾರತ ತುಂಡರಿಸದಿರುವ ನನ್ನ ಯಾವ ಮಾತೂ ಅವರಿಗೆ ಹಿಡಿಸಲಿಲ್ಲ’ ಎಂದು ಬ್ಯಾಟನ್ ಹೇಳಿಕೊಂಡಿದ್ದರು.
- -- ಭಾರತ ವಿಭಜನೆ ನಿಜಕ್ಕೂ ದುಷ್ಟ ಕೆಲಸ. ಈ ಕೆಲಸ ಮಾಡಬೇಕೆಂದು ನನ್ನನ್ನು ಯಾರೂ ಬಲವಂತ ಮಾಡುವಂತಿಲ್ಲ. ಆದರೆ ಭಾರತವೆಂಬ ನನ್ನ ದೇಶ ಮತೀಯ ಹುಚ್ಚಿಗೆ ಸಿಕ್ಕಿರುವಾಗ ಬೇರೇನೂ ಮಾರ್ಗ ಕಾಣುತ್ತಿಲ್ಲ. ಜಗತ್ತಿಗೆ ಗೊತ್ತಿರಲಿ. ವಿಭಜನೆಯ ತೀರ್ಮಾನ ಭಾರತೀಯ ನಾಯಕರದ್ದು ಎಂದು ನಾವು ಪ್ರಪಂಚಕ್ಕೆ ತಿಳಿಸಬೇಕು. ಒಂದಲ್ಲ ಒಂದು ದಿನ ತಮ್ಮ ತೀರ್ಮಾನಕ್ಕೆ ಭಾರತೀಯರು ದುಃಖ ಪಡುತ್ತಾರೆ ಎಂದಿದ್ದರು ಬ್ಯಾಟನ್ --
- ಭಾರತಕ್ಕೆ ಆಗಸ್ಟ್ 15ರಂದು ಸ್ವಾತಂತ್ರ್ಯ ಕೊಡುತ್ತಾರಂತೆ ಎನ್ನುತ್ತಲೇ ಜ್ಯೋತಿಷ್ಯ ಶಿರೋಮಣಿಗಳು ಲೆಕ್ಕಾಚಾರ ಹಾಕಿದ್ದರು. ಅಂದು ಶನಿ ಮತ್ತು ರಾಹುಗಳ ಪ್ರಭಾವ ಜಾಸ್ತಿ ಎಂದು ಸ್ವಾಮಿ ಮದಾನಂದ ಎಂಬ ಜ್ಯೋತಿಷಿ ‘ಅಂದುಕೊಡಬೇಡಿ. ದೇಶಕ್ಕೆ ಬರ, ಕ್ಷಾಮ, ನೆರೆ ಹಾವಳಿ ಬರುತ್ತದೆ’ ಎಂದು ವೈಸರಾಯ್‌ಗೆ ಕೋರಿಕೆ ಸಲ್ಲಿಸಿದ್ದರು.
- -- ಒಂದು ಹಂತದಲ್ಲಿ ನೆಹರು ಅವರು ಮೌಂಟ್ ಬ್ಯಾಟನ್ ಮೇಲೆ ಅತಿ ವಿಶ್ವಾಸ ಹೊಂದಿದ್ದರು. ‘ದೇಶ ಸ್ವತಂತ್ರವಾದ ಮೇಲೂ ನೀವು ಇಂಡಿಯಾದಲ್ಲೇ ಇರಿ. ದೇಶದ ಗವರ್ನರ್ ಪದವಿ ನೀವು ಒಪ್ಪಬೇಕು’ ಎಂದಿದ್ದರು. ಸ್ವತಃ ಮಹಾತ್ಮ ಗಾಂಧಿ ಅವರು ಇದೇ ಕೋರಿಕೆ ಇಟ್ಟಿದ್ದರು.
- -- 1947ರ ಆಗಸ್ಟ್ 14ರ ಸಂಜೆ ಸೂರ್ಯ ಮುಳುಗುತ್ತಿದ್ದ. ಬಿದಿರಿನ ದೊಣ್ಣೆ, ಜಿಂಕೆ ಚರ್ಮ, ಕಮಂಡಲಗಳನ್ನು ಹಿಡಿದು ಸನ್ಯಾಸಿಗಳಿಬ್ಬರು ನವ ದೆಹಲಿಯ ಯಾರ್ಕ್ ರಸ್ತೆಯಲ್ಲಿರುವ 17ನೇ ನಂಬರ್ ಮನೆಯಲ್ಲಿ ಜವಾಹರ್ ಲಾಲ್ ನೆಹರೂ ಅವರನ್ನು ಕೂರಿಸಿ ಪವಿತ್ರ ಸ್ನಾನ ಮಾಡಿಸುತ್ತಿದ್ದರು. --
-ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ.
ಎರಡನೇ ಜಾಗತಿಕ ಯುದ್ಧದ ತರುವಾಯ ಬ್ರಿಟನ್‌ನ ಲೇಬರ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯ ಘೋಷಣೆಯಂತೆ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟರೆ ಹೇಗೆ ಎಂಬ ಜಿಜ್ಞಾಸೆಯಲ್ಲಿ ಹಲವು ಸಮಯ ವ್ಯಯಿಸುತ್ತದೆ. ಅಂದಿನ ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಎಟ್ಲಿ ಭಾರತದ ಕಟ್ಟಕಡೆಯ ವೈಸ್‌ರಾಯ್ ಆಗಿ ಮೌಂಟ್ ಬ್ಯಾಟನ್ ಅವರನ್ನು ನೇಮಿಸುವುದಕ್ಕೆ ಹಲವು ಯೋಜನೆಗಳನ್ನು ಮನದಲ್ಲಿ ಸೃಷ್ಟಿ ಮಾಡಿಟ್ಟುಕೊಳ್ಳುತ್ತಾರೆ. ಅವತ್ತಿನ ಕಾಂಗ್ರೆಸ್ ಪಕ್ಷದ ಧೋರಣೆ, ಜಿನ್ನಾರ ಹಠಮಾರಿತನ, ಭಾರತವನ್ನು ಇಬ್ಬಾಗ ಮಾಡಿ ಪಾಕಿಸ್ತಾನ ಮತ್ತು ಹಿಂದುಸ್ತಾನಿಗಳ ಪ್ರತ್ಯೇಕ ಬದುಕಿಗೆ ಅವಕಾಶ, ಇಂತಹ ಹತ್ತು ಹಲವು ಯೋಚನೆಗಳಿಗೆ ಮೌಂಟ್ ಬ್ಯಾಟನ್ ನೀರೆರೆಯುತ್ತಾರೆ.
ಮೌಂಟ್ ಬ್ಯಾಟನ್ ಆಗಮನ
‘ಸೂರ್ಯ ಮುಳುಗದ ನಾಡು’ ಬ್ರಿಟನ್‌ನ ಆಡಳಿತ ಒಂದರ್ಥದಲ್ಲಿ ದಾಸ್ಯದ ಸಂಕೋಲೆಯಲ್ಲಿ ಭಾರತದ ನೆಲವನ್ನು ಬಂಧಿಸುತ್ತಿದ್ದರೂ ಮತ್ತೊಂದೆಡೆ ಬಿಳಿಯರ ಆಳ್ವಿಕೆ ಭಾರತಕ್ಕೆ ಬೇಕಾದಷ್ಟು ಹೊಸತನದ ಸ್ಪರ್ಶವನ್ನು ನೀಡಿತ್ತು. ಬ್ರಿಟನ್ ಅನುಸರಿಸುತ್ತಿದ್ದ ಆಡಳಿತ ಕ್ರಮ, ನ್ಯಾಯಾಂಗ ವ್ಯವಸ್ಥೆ, ಶಿಕ್ಷಣ, ಆರೋಗ್ಯ, ಅಸ್ಪೃಶ್ಯತೆ ನಿವಾರಣೆ ಜೊತೆಯಲ್ಲಿ ಭಿನ್ನ-ಭಿನ್ನ ಭಾಷೆಗಳ ನಡುವೆ ಭಾರತದುದ್ದಕ್ಕೂ ಆಂಗ್ಲ ಭಾಷೆಯ ಮೂಲಕ ದೇಶವನ್ನು ಹೊಸತನದಿಂದ ಬೆಸೆಯಿತು. 1857ರಲ್ಲಿ ನಡೆದ ದಂಗೆಯ ನಂತರ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಶೈಲಿಯೇ ಬದಲಾಯಿತು. ಅಂದಿನ 300 ದಶಲಕ್ಷ ಭಾರತೀಯರ ಹಣೆಬರಹದ ಆಡಳಿತ 39 ವರ್ಷ ವಯಸ್ಸಿನ ಮಹಿಳೆಯ ಕೈ ಸೇರಿತು. ಆಕೆಯೇ ರಾಣಿ ವಿಕ್ಟೋರಿಯಾ. ಒಂದರ್ಥದಲ್ಲಿ ಭಾರತದ ಚಕ್ರವರ್ತಿ ಎಂಬ ಬ್ರಿಟನ್ ಸಂಜಾತೆ. ರಾಣಿಯಿಂದ ನೇಮಿಸಲ್ಪಟ್ಟ ವೈಸ್‌ರಾಯ್ ವಿಶ್ವದ ಐದನೇ ಒಂದು ಭಾಗವಾಗಿದ್ದ ಜನಸಂಖ್ಯೆಯ ಬಡ ಭಾರತದ ವಾರಸುದಾರ. ಇದನ್ನೇ ‘ಕಾನೂನು ಕಟ್ಟಳೆಗಳರಿಯದ ಮುಗ್ಧ ಜನರನ್ನು ಆಳಲೆಂದೇ ಶ್ವೇತ ಜನಾಂಗ ಸೃಷ್ಟಿಯಾಯಿತು’ ಎಂದು ಯಿಡ್ ಯಾರ್ಡ್ ಕ್ಲಿಪಿಂಗ್ ಘೋಷಿಸಿದ್ದ. ಭಾರತದಲ್ಲಿ ಬ್ರಿಟಿಷರಿಗೆ ಹೆಚ್ಚು ಮುದ ಕೊಡುವ ವಿಚಾರವೆಂದರೆ ಕ್ರೀಡೆ. ಅದರಲ್ಲೂ ಕ್ರಿಕೆಟ್, ಟೆನಿಸ್, ಗಾಲ್ಫ್‌ಗಳೆಲ್ಲಾ ಭಾರತಮಯವಾಗಿ ಹೋಯಿತು. ಬ್ರಿಟಿಷ್ ಅಧಿಕಾರಿಗಳ ಮಡದಿಯರನ್ನು ‘ಮ್ಯಾಮ್ ಸಾಹೇಬ್’ ಎಂದು ಕರೆಯುವುದು ರೂಢಿಯಾಯಿತು. ಮಾತ್ರವಲ್ಲ ಅದು ಗೌರವದ ಸಂಕೇತವಾಗಿತ್ತು. ಬಿಳಿ ಮುಖದ ಬ್ರಿಟಿಷ್ ಅಧಿಕಾರಿಗಳ ಪೈಕಿ ಕೆಲವರು ಮಾತ್ರ ಮಡದಿಯರನ್ನು ಕರೆತಂದಿದ್ದರು. ಕೆಲವರು ಕಾಲನ ಲೀಲೆಗೆ ಸೋತು ಭಾರತದ ಪ್ರಜೆಗಳನ್ನೇ ಪಾಣಿ ಗ್ರಹಿಣಿ ಮಾಡಿಕೊಂಡಿದ್ದರು. ಕಾಲಮಾನದ ರೀತಿಯಲ್ಲೇ ಅವರಿಗಾದ ಸಂತಾನವೇ ‘ಆಂಗ್ಲೋ ಇಂಡಿಯನ್’ ಎಂದು ಇಂದಿಗೂ ಕರೆಯಲ್ಪಡುತ್ತಿದೆ. ಗತಿಸಿದ ಇತಿಹಾಸದ ಕುರುಹುಗಳೊಂದಿಗೆ ಜಾತಿ, ಧರ್ಮ, ವರ್ಗ, ಮೇಲು-ಕೀಳುಗಳ ಸಂಘರ್ಷದ ನಡುವೆ ಬದುಕಿನ ಬಂಡಿ ಸಾಗಿಸುತ್ತಿದ್ದ ಭಾರತದ ನೆಲದಲ್ಲಿ ಬ್ರಿಟಿಷರು ಒಂದರ್ಥದಲ್ಲಿ ದೂರ ನಿಂತು ಅಧಿಕಾರ ಚಲಾಯಿಸುತ್ತಿದ್ದರು.
ಬ್ರಿಟಿಷರಿಗೂ ಇತ್ತು ಭಾರತದಲ್ಲಿ ಸಂಕಷ್ಟ
ಸೂರ್ಯ ಮುಳುಗದ ದೇಶದಿಂದ ಬಂದು ಭಾರತವನ್ನು ಒತ್ತೆಯಿಟ್ಟುಕೊಂಡಂತೆ ಅಧಿಕಾರ ನಡೆಸಿದ ಬ್ರಿಟಿಷರ ಬದುಕು ಸುಖದ ಸುಪ್ಪತ್ತಿಗೆಯಾಗಿತ್ತಾ? ಎಂಬ ಪ್ರಶ್ನೆಗೆ ಉತ್ತರ ಸುಲಭವಲ್ಲ. ಭಾರತದಲ್ಲಿ ಕರ್ತವ್ಯನಿರತ ಬ್ರಿಟಿಷ್ ಅಧಿಕಾರಿಗಳು ಚೀಫ್ ಕಮಿಷನರ್, ಕಲೆಕ್ಟರ್ ಹುದ್ದೆಯಿಂದ ಹಿಡಿದು ವೈಸ್‌ರಾಯ್‌ವರೆಗೆ ಅಧಿಕಾರ ಚಲಾವಣೆಯೊಂದಿಗೆ ಅನಾಹುತಗಳ ರಾಶಿ ರಾಶಿ ಅನುಭವಿಸಿದ್ದರು. ಭಾರತದಲ್ಲಿ ಬಹುತೇಕ ಯುರೋಪಿಯನ್ ಸೆಮಿಟರಿ ಎಂದು ಕರೆಯುವ ಸ್ಮಶಾನದಲ್ಲಿ ಸಣ್ಣಸಣ್ಣ ಮಕ್ಕಳ ಗೋರಿಕಲ್ಲುಗಳು ಕಾಣ ಸಿಗುತ್ತವೆ. ಅಭಿವೃದ್ಧಿ ಕಾರಣದ ಪ್ರದೇಶದಲ್ಲಿ ಅಧಿಕಾರ ಚಲಾಯಿಸುವ ಭರದಲ್ಲಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಸತ್ತ ಹಸುಗೂಸುಗಳು ಹಾಗೂ ಮಲೇರಿಯಾ, ಕಾಲರಾಗೆ ಕರುಳ ಕುಡಿಗಳನ್ನು ಕಳೆದುಕೊಂಡ ಬ್ರಿಟಿಷ್ ಅಧಿಕಾರಿಗಳ ಸಂಕಟ ದೂರದ ಇಂಗ್ಲೆಂಡಿಗೂ ಕೇಳಿಸದಷ್ಟು ಘೋರವಾಗಿತ್ತು. ಹಿರಿಯ ಅಧಿಕಾರಿ ಮೇಜರ್ ಅರ್ಬಿ ಬಾಲ್ಡ್ 1902ರಲ್ಲಿ ಕಾಡೆಮ್ಮೆ ತಿವಿತದಿಂದ ಸತ್ತರೆ, ಹ್ಯಾರಿನ್ ಮ್ಯಾಕರೇಡ್ ಆನೆಯ ತುಳಿತಕ್ಕೆ ಸಾವನ್ನಪ್ಪಿದರು. ಬಡವರ ಮಕ್ಕಳಿಗೆ ಶಿಕ್ಷಣ ಕೊಡುವ ಭರದಲ್ಲಿ ಸಿರಿಕಾ ಮಿಷನ್ ಸ್ಕೂಲ್‌ನಲ್ಲಿ ಪಾಠ ಮಾಡುವಾಗ ಗೆದ್ದಲು ತಿಂದ ಹಳೆಯ ತೊಲೆಯೊಂದು ಮುರಿದು ಬಿದ್ದು 30 ವರ್ಷದ ಸಿಸ್ಟರ್ ಮೇರಿ ಸಾವನ್ನಪ್ಪಿದರು. ಇಂತಹ ಅನಾಹುತಗಳನ್ನು ಆಳಲು ಬಂದ ಬ್ರಿಟಿಷರು ಅನುಭವಿಸಿದ್ದರು. ಸರಿಸುಮಾರು 190 ವರ್ಷಗಳ ಬ್ರಿಟಿಷ್ ಆಡಳಿತ ಅವಧಿಯಲ್ಲಿ ಸಾಕಷ್ಟು ಜನ ಜೀವನದ ಬದಲಾವಣೆಯೊಂದಿಗೆ ಮೂಕ ರೋದನದ ಮೂಲಕ ಬಿಳಿಯ ಮುಖದವರು ಪಟ್ಟ ಪಡಿಪಾಟಲು ಕಡಿಮೆಯಲ್ಲ.
ಗಾಂಧೀಜಿಗೆ ಕಾಡಿತ್ತು ವಿಭಜನೆ ಸಂಘರ್ಷ
1947ರಲ್ಲಿ ಮಹಾತ್ಮ ಗಾಂಧೀಜಿಯವರಿಗೆ ಅಂತರ್ ಖುಷಿಯ ಉತ್ಸಾಹ ತುಡಿಯುತ್ತಿತ್ತು. ತಮ್ಮ ಜೀವನದ ಬಹುಪಾಲು ಯಾವುದನ್ನು (ಸ್ವಾತಂತ್ರ್ಯ) ಪಡೆಯಲು ಹೋರಾಡುತ್ತಿದ್ದರೋ ಅದೇ ಭಾರತಕ್ಕೆ ಸಿಗುವ ಲಕ್ಷಣ ಕಾಣುತ್ತಿತ್ತು. ಇನ್ನೇನು ಸ್ವಾತಂತ್ರ್ಯ ಸಿಗುತ್ತದೆ ಎನ್ನುವ ಸಂದರ್ಭ ಗಾಂಧಿ ಚಿಂತಾಕ್ರಾಂತರಾಗಿದ್ದರು. ಎಲ್ಲೆಂದರಲ್ಲಿ ಹಿಂದೂ- ಮುಸ್ಲಿಂ ಸಂಘರ್ಷ. ಅದರೊಂದಿಗೆ ಗಾಂಧೀಜಿ ಮತ್ತೊಂದು ವಿಷಯದಲ್ಲಿ ಹೆದರಿದ್ದರು- ಅದೇ ದೇಶ ವಿಭಜನೆಯ ಸಂದೇಶ. ಎದುರು-ಬದರಾಗಿ ಕುಳಿತು ಗಾಂಧೀಜಿಯವರಿಗೆ ಮೌಂಟ್ ಬ್ಯಾಟನ್ ಹೇಳಿದರು: ‘ಬ್ರಿಟಿಷರು ಎಂದೂ ಉದ್ಧಟ ಶಕ್ತಿಗೆ ಮಣಿಯುವುದಿಲ್ಲ. ಆದರೆ, ಅಹಿಂಸೆಯ ಹೋರಾಟದ ಮೂಲಕ ನೀವು ಗೆದ್ದಿದ್ದೀರಿ. ಹಾಗಾಗಿ ಬ್ರಿಟಿಷರು ಖಂಡಿತವಾಗಿ ಭಾರತವನ್ನು ಬಿಟ್ಟು ಹೋಗುತ್ತಾರೆ.’ ಮಧ್ಯದಲ್ಲಿ ಗಾಂಧೀಜಿ ಮಾತನಾಡಿ, ‘ಹೋಗುವಾಗ ಭಾರತವನ್ನು ವಿಭಜಿಸಿ ಹೋಗಬೇಡಿ, ವಿಭಜನೆಯ ಬೇಡಿಕೆ ತಿರಸ್ಕರಿಸುವುದರಿಂದ ನನ್ನ ರಕ್ತದ ಕೋಡಿ ಹರಿದರೂ ಪರವಾಗಿಲ್ಲ.’ ‘ನಿಮ್ಮ ಕಾಳಜಿ ಅರ್ಥವಾಗುತ್ತೆ. ಆದರೆ ದೇಶ ವಿಭಜನೆಯೇ ಕಟ್ಟ ಕಡೆಯ ಪರಿಹಾರ. ಅದು ಬಿಟ್ಟರೆ ಬೇರೆ ಮಾರ್ಗವೆಲ್ಲಿದೆ?’ ಎಂಬ ಮೌಂಟ್ ಬ್ಯಾಟನ್ ಸಹಜ ಪ್ರಶ್ನೆಗೆ ಗಾಂಧಿ ಉತ್ತರಿಸಿದ್ದು, ‘ಯಾರು ಬೇಕಾದರೂ ಆಳಲಿ, ಅಗತ್ಯವೆನಿಸಿದರೆ ಜಿನ್ನಾ ನೇತೃತ್ವವನ್ನು ಪರಿಶೀಲಿಸೋಣ’ ಎಂಬ ಸಲಹೆಯನ್ನು ಗಾಂಧಿ ನೀಡಿದ್ದರು. ‘ಇದಕ್ಕೆ ಕಾಂಗ್ರೆಸ್ ಒಪ್ಪುವುದೇ..?’ ಎಂದು ಮೌಂಟ್ ಬ್ಯಾಟನ್ ಮರು ಪ್ರಶ್ನಿಸಿದ್ದರು. ದೇಶ ಒಂದಾಗಿ ಉಳಿಯಲು ಎಲ್ಲ ಮಗ್ಗಲಲ್ಲೂ ಯೋಚಿಸೋಣ ಎಂದು ಮೌಂಟ್ ಬ್ಯಾಟನ್ ತನ್ನಲ್ಲೇ ಯೋಚಿಸಿದರು.
ದೇಶದ ವಿಭಜನೆಯ ಹಪಾಹಪಿತನ ಗಾಂಧಿ ಸಲಹೆ ಕಾರ್ಯಗತ ಮಾಡುವುದು ಕಷ್ಟ. ಹಾಗೆಂದು ತಳ್ಳಿ ಹಾಕುವಂತಿಲ್ಲ. ಜಿನ್ನಾ ಮತ್ತು ಮೌಂಟ್ ಬ್ಯಾಟನ್ 1947ರ ಏಪ್ರಿಲ್ ತಿಂಗಳಲ್ಲಿ ಆರು ಬಾರಿ ಭೇಟಿಯಾದರು. ‘ಭಾರತವನ್ನು ವಿಭಜನೆ ಮಾಡಿ ಪಾಕಿಸ್ತಾನವನ್ನು ಸೃಷ್ಟಿಸಬೇಕೆಂಬ ಜಿನ್ನಾರ ಸಂಕಲ್ಪ ಬದಲಿಸಬೇಕೆಂದು ನಾನಾ ಉಪಾಯಗಳನ್ನು ಮಾಡಿದೆ. ಆದರೆ, ಜಿನ್ನಾರಿಗೆ ಪಾಕಿಸ್ತಾನ ಎಂಬ ರಾಷ್ಟ್ರವನ್ನು ಸೃಷ್ಟಿಸುವ ಹುಚ್ಚಿದ್ದು, ಭಾರತ ತುಂಡರಿಸದಿರುವ ನನ್ನ ಯಾವ ಮಾತೂ ಅವರಿಗೆ ಹಿಡಿಸಲಿಲ್ಲ’ ಎಂದು ಬ್ಯಾಟನ್ ಹೇಳಿಕೊಂಡಿದ್ದರು. ಎಲ್ಲಿಯವರೆಗೆ ದೇಶ ವಿಭಜನೆಯ ಹಪಾಹಪಿತನ ಜಿನ್ನಾರಿಗಿತ್ತೆಂದರೆ, ಮೌಂಟ್ ಬ್ಯಾಟನ್ ದೃಷ್ಟಿಯಲ್ಲಿ ‘ಮಾತುಕತೆಗಳ ಕಾಲ ಮುಗಿದು ಹೋಯಿತು. ಉಳಿದಿರುವುದು ಒಂದೇ ದಾರಿ. ಗಾಂಧೀಜಿಯನ್ನು ಒಪ್ಪಿಸುವುದು, ಜಿನ್ನಾರಿಗೆ ಸಮಾಧಾನ ಹೇಳುವುದು.’
ಭಾರತ ದೇಶದ ವಿಭಜನೆ ಬಗ್ಗೆ ನಲವತ್ತೇಳರ ಏಪ್ರಿಲ್ 10ರಂದು ಮೌಂಟ್ ಬ್ಯಾಟನ್ ಅವರು ಜಿನ್ನಾರ ಬಳಿ ಬಂದು ಎರಡು ಗಂಟೆ ಮಾತನಾಡಿದರು. ಚರ್ಚಿಸಿದರು. ತಮಾಷೆ ಮಾಡಿದರು. ವಾದ ಮಾಡಿದರು. ಪ್ರಾರ್ಥಿಸಿದರು. 40 ಕೋಟಿ ಜನರನ್ನು ಹೊಂದಿರುವ ಒಂದು ಕೇಂದ್ರ ಸರ್ಕಾರದ ಅಧಿಕಾರ ಹೊಂದಿರುವ ಸುಂದರ ಭಾರತವನ್ನು ಕಣ್ಣಿಗೆ ಕಟ್ಟುವಂತೆ ಜಿನ್ನಾ ಮುಂದಿಟ್ಟರು. ಜಿನ್ನಾ ಯಾವುದಕ್ಕೂ ಮಣಿಯಲಿಲ್ಲ. ಮೌಂಟ್ ಮೌನವಾಗಿ ಕುಳಿತರು. ಅಖಂಡ ಭಾರತಕ್ಕೆ ನನ್ನ ಪ್ರಯತ್ನ ಮುಂದುವರೆದರೆ, ಬ್ರಿಟಿಷರು ಬಿಟ್ಟುಹೋದ ಭಾರತ ಅಜಾಗರೂಕತೆ, ಮತೀಯ ಹಿಂಸಾಚಾರದಲ್ಲಿ ತೊಡಗಿದರೆ ಆಗುವ ಕಷ್ಟನಷ್ಟಗಳ ಬಗ್ಗೆ ಯೋಚಿಸಿ ಈ ದುರಂತಗಳು ನಮಗೆ ಬೇಕಿಲ್ಲ ಎಂದು ಮನದಲ್ಲೇ ಊಹಿಸಿದರು. ತನ್ನ ಚೀಫ್ ಆಫ್ ಸ್ಟಾಫ್ ಲಾರ್ಡ್ ಇಸೇನ್ ಅನ್ನು ಕರೆದು ಇಂಡಿಯಾ ವಿಭಜನೆಗೆ ಯೋಜನೆ ತಯಾರಿಸುವುದು ನಮ್ಮ ಮುಂದಿನ ದಾರಿ ಎಂದರು ಮೌಂಟ್ ಬ್ಯಾಟನ್. ಇಂಡಿಯಾವನ್ನು ವಿಭಜಿಸಿ ಭಾರತ- ಪಾಕಿಸ್ತಾನ ಎಂದು ಇಬ್ಭಾಗ ಮಾಡಿದರೂ ದೇಶದಲ್ಲಿರುವ ಅರ್ಧದಷ್ಟು ಮುಸಲ್ಮಾನರು ಮೂಲ ಭಾರತದಲ್ಲೇ ಉಳಿದು ಹೋಗುತ್ತಾರೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಮುಸ್ಲಿಮರು ಹಂಚಿ ಹೋಗಿದ್ದಾರೆ. ಭಾರತವೆಂಬ ಹಿಂದೂ ಸಮುದ್ರದಲ್ಲಿ ಸಣ್ಣ ಸಣ್ಣ ದ್ವೀಪಗಳಂತೆ ಅವರ ಅಸ್ತಿತ್ವ ಇರುತ್ತದೆ. ಪಾಕಿಸ್ತಾನ ಸೃಷ್ಟಿಯಾದ ಮೇಲೂ 50 ದಶಲಕ್ಷ ಮುಸ್ಲಿಮರು ಭಾರತದಲ್ಲಿ ಉಳಿಯುತ್ತಾರೆ. ಹೀಗಾಗಿ ವಿಶ್ವದಲ್ಲೇ ಪಾಕಿಸ್ತಾನ, ಇಂಡೋನೇಷ್ಯಾ ಬಿಟ್ಟರೆ ಭಾರತದಲ್ಲೇ ಹೆಚ್ಚು ಮುಸ್ಲಿಮರು ಇರುತ್ತಾರೆ. ಮುಂದೊಂದು ದಿನ ಪಾಕಿಸ್ತಾನ ಮತ್ತು ಭಾರತ ನಡುವೆ ಯುದ್ಧವೇನಾದರೂ ಸಂಭವಿಸಿದರೆ...? ಗಟ್ಟಿತನದ ಮನುಷ್ಯ ಮೌಂಟ್ ಬ್ಯಾಟನ್ ಒಮ್ಮೆಲೆ ಅವಕ್ಕಾಗುತ್ತಾರೆ. ಗಾಂಧೀಜಿ ದುಗುಡದಿಂದಲೇ ಹೇಳಿದ್ದರು.. ‘ನನ್ನನ್ನು ಮಹಾತ್ಮ ಎನ್ನುತ್ತೀರಿ. ಅಖಂಡ ಭಾರತದ ನನ್ನ ಅಭಿಪ್ರಾಯಕ್ಕೆ ಅದೇಕೇ ಸಹಮತ ಇಲ್ಲ? ವಿಭಜಿತ ಭಾರತದ ಶಾಂತಿಗಿಂತ ಅಖಂಡ ಭಾರತದ ಕ್ರಾಂತಿಯೇ ಮೇಲು.’ ಆದರೆ ನೆಹರೂ, ವಲ್ಲಭಭಾಯಿ ಪಟೇಲ್, ಡಾ। ರಾಜೇಂದ್ರ ಪ್ರಸಾದ್ ಅವರು ‘ದೇಶ ವಿಭಜನೆ ದುಃಖದ ವಿಷಯವಾದರೂ ಇಂದಿನ ಕಾಲಘಟ್ಟದಲ್ಲಿ ಅನಿವಾರ್ಯ’ ಎಂದುಬಿಟ್ಟರು.
ಬ್ರಿಟನ್‌ಗೆ ಭಾರತ ವಿಭಜನೆಯ ಸಂಕಷ್ಟದ ಪತ್ರ
ಮೌಂಟ್ ಬ್ಯಾಟನ್ ಅವರು ಬ್ರಿಟನ್‌ಗೆ ಪತ್ರ ಬರೆದೇ ಬಿಟ್ಟರು: ‘ಭಾರತ ವಿಭಜನೆ ನಿಜಕ್ಕೂ ದುಷ್ಟ ಕೆಲಸ. ಈ ಕೆಲಸ ಮಾಡಬೇಕೆಂದು ನನ್ನನ್ನು ಯಾರೂ ಬಲವಂತ ಮಾಡುವಂತಿಲ್ಲ. ಆದರೆ ಭಾರತವೆಂಬ ನನ್ನ ದೇಶ ಮತೀಯ ಹುಚ್ಚಿಗೆ ಸಿಕ್ಕಿರುವಾಗ ಬೇರೇನೂ ಮಾರ್ಗ ಕಾಣುತ್ತಿಲ್ಲ. ಜಗತ್ತಿಗೆ ಗೊತ್ತಿರಲಿ. ವಿಭಜನೆಯ ತೀರ್ಮಾನ ಭಾರತೀಯ ನಾಯಕರದ್ದು ಎಂದು ನಾವು ಪ್ರಪಂಚಕ್ಕೆ ತಿಳಿಸಬೇಕು. ಒಂದಲ್ಲ ಒಂದು ದಿನ ತಮ್ಮ ತೀರ್ಮಾನಕ್ಕೆ ಭಾರತೀಯರು ದುಃಖ ಪಡುತ್ತಾರೆ.’ ಅಂದು ವೈಸ್‌ರಾಯ್ ಮೌಂಟ್ ಬ್ಯಾಟನ್ ನಿರುಮ್ಮಳವಾಗಿ ಮಾಧ್ಯಮಗಳ ಎದುರು ಕುಳಿತಿದ್ದರು. ರಷ್ಯಾ, ಅಮೆರಿಕ, ಚೀನಾ, ಯುರೋಪ್‌ಗಳ ಸಹಿತ ಭಾರತೀಯ ಪತ್ರಕರ್ತರು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಸರಾಗವಾಗಿ ಉತ್ತರ ಕೊಡುತ್ತಿದ್ದರು. ಗರಗಸ ನಾಲಿಗೆಯ ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆಗೆ ತುಸು ಯೋಚಿಸಿದರು. ಮಾಧ್ಯಮದವರ ಪ್ರಶ್ನೆ ಏನಾಗಿತ್ತೆಂದರೆ ‘ನೀವು ಭಾರತೀಯರಿಗೆ ಅಧಿಕಾರ ಹಸ್ತಾಂತರಿಸಲು ನಿರ್ಧರಿಸಿದ್ದೀರಾ?’ ಮೌನ ಮುರಿದ ವೈಸರಾಯ್, ‘ಹೌದು.. ಯೋಚಿಸಿದ್ದೇವೆ’ ಎಂದರು. ‘ಯಾವ ದಿನಾಂಕ..?’ ಎಂಬ ಪ್ರಶ್ನೆಗೆ ‘ಒಂದು ಒಳ್ಳೆಯ ದಿನ...’ ಎಂದು ಮಾತು ಮುಗಿಸಿದ ವೈಸ್ ರಾಯ್ ಮನಸ್ಸಿಗೆ ಅನೇಕ ದಿನಗಳು ಸುಳಿದು ಹೋಗಿದ್ದವು. ಆದರೆ ಆತ ಜೀವನದಲ್ಲೇ ಮರೆಯಲಾಗದ ದಿನ ಆಗಸ್ಟ್ 15. ಇದೇ ವೈಸರಾಯ್ ಮೌಂಟ್ ಬ್ಯಾಟನ್ ಎದುರು ಒಮ್ಮೆ ಜಪಾನ್ ಸೇನೆ ಶರಣಾದ ದಿನವದು. ಅದನ್ನು ಜ್ಞಾಪಿಸಿಕೊಳ್ಳುತ್ತಲೇ ಹೇಳಿದರು ಆಗಸ್ಟ್ 15 1947.
ಭಾರತದಲ್ಲಿ ಜ್ಯೋತಿಷ್ಯಕ್ಕೆ ತುಂಬಾ ಮರ್ಯಾದೆ.
ಎಲ್ಲದಕ್ಕೂ ಅಂದರೆ, ಮದುವೆ-ಮುಂಜಿ, ಮನೆ ಜಾಗ ಖರೀದಿ, ಮಾರಾಟ, ಅಷ್ಟೇ ಏಕೆ ಕ್ಷೌರ ಮಾಡಿಕೊಳ್ಳಲು ಜ್ಯೋತಿಷ್ಯ ಕೇಳುವುದು ಸಂಪ್ರದಾಯ ಮತ್ತು ಅನಿವಾರ್ಯ. ಭಾರತಕ್ಕೆ ಆಗಸ್ಟ್ 15ರಂದು ಸ್ವಾತಂತ್ರ್ಯ ಕೊಡುತ್ತಾರಂತೆ ಎನ್ನುತ್ತಲೇ ಜ್ಯೋತಿಷ್ಯ ಶಿರೋಮಣಿಗಳು ಲೆಕ್ಕಾಚಾರ ಹಾಕಿದ್ದರು. ಅಂದು ಶನಿ ಮತ್ತು ರಾಹುಗಳ ಪ್ರಭಾವ ಜಾಸ್ತಿ ಎಂದು ಸ್ವಾಮಿ ಮದಾನಂದ ಎಂಬ ಜ್ಯೋತಿಷಿ ‘ಅಂದುಕೊಡಬೇಡಿ. ದೇಶಕ್ಕೆ ಬರ, ಕ್ಷಾಮ, ನೆರೆ ಹಾವಳಿ ಬರುತ್ತದೆ’ ಎಂದು ವೈಸರಾಯ್‌ಗೆ ಕೋರಿಕೆ ಸಲ್ಲಿಸುತ್ತಾರೆ. ಇಂಡಿಯಾ ಎಂಬ ದೇಶದ ತುಂಬೆಲ್ಲಾ ತುಂಬಿ ತುಳುಕುತ್ತಿದ್ದ ಬ್ರಿಟನ್ ಅಧಿಕಾರಿಶಾಹಿತನ ಕರಗುತ್ತಾ, ನಮಗೆ ಸ್ವಾತಂತ್ರ್ಯವಂತೆ ಎಂಬ ಪಿಸುಮಾತು ಬಿಸಿ ಬಿಸಿಯಾಗಿ ಕಿವಿಯಿಂದ ಕಿವಿಗೆ ಬಡವ ಬಲ್ಲಿದರೆನ್ನದೆ ಹರಡುತ್ತಿತ್ತು. ಹಿಂದೂಗಳು, ಮುಸ್ಲಿಮರು, ಸಿಖ್ಖರು, ಬೌದ್ಧ, ಜೈನ್ ಪಾರ್ಸಿಗಳ ಸಹಿತ ತುಂಡರಸರಾಗಿ ರಾಜ್ಯಭಾರ ಮಾಡುತ್ತಿದ್ದ ರಾಜ, ಮಹಾರಾಜರು ಸ್ವಾತಂತ್ರ್ಯದ ತೆಕ್ಕೆಯೊಳಗೆ ತಮ್ಮ ಅಸ್ತಿತ್ವ ಹುಡುಕುತ್ತಿದ್ದರು. ಅದರಲ್ಲೂ ರಾಜ-ಮಹಾರಾಜರು ನಂಬಿಕೊಂಡದ್ದು ವೈಸ್‌ರಾಯ್ ಮೌಂಟ್ ಬ್ಯಾಟನ್‌ರನ್ನು. ಬ್ಯಾಟನ್ ಅವರು ರಾಜವಂಶಕ್ಕೆ ಸೇರಿದವರು ಎಂಬುದು ಅನೇಕ ರಾಜರಲ್ಲಿ ಭರವಸೆಯನ್ನು ನೆಟ್ಟು ಬೆಳೆಸಿತ್ತು. ಅದನ್ನು ಬಳಸಿಕೊಂಡ ಬ್ಯಾಟನ್, ‘ರಾಜರನ್ನು ಭೇಟಿ ಮಾಡಿ ಆಗಸ್ಟ್ 15ರ ಒಳಗೆ ಇಂಡಿಯಾ ಅಥವಾ ಪಾಕಿಸ್ತಾನಕ್ಕೆ ಸೇರ್ಪಡೆಗೊಳ್ಳಿ. ಬ್ರಿಟಿಷ್ ಸರಕಾರ ಕೊಟ್ಟಿರುವ ಪದಕಗಳನ್ನು ಧರಿಸುವ ಹಕ್ಕನ್ನು ಊರ್ಜಿತಗೊಳಿಸುವ ಷರತ್ತು ವಿಧಿಸಿ ಸಹಿ ಹಾಕಿ’ ಎಂದು ಸಲಹೆ ನೀಡಿದ್ದರು. ಕಾಶ್ಮೀರದ ರಾಜ ಹರಿಸಿಂಗ್, ಹೈದರಾಬಾದ್ ಆಳುತ್ತಿದ್ದ ಏಳನೆಯ ನಿಜಾಮ ಅಲಿ ಖಾನ್ ಬಹಾದ್ದೂರ್ ಅವರು ಗೊಂದಲದ ಗೂಡಾಗಿ, ಗೊತ್ತು ಗುರಿಯಿಲ್ಲದ ಯೋಜನೆಯಿಂದ ತೀರ್ಮಾನ ತೆಗೆದುಕೊಳ್ಳಲಾಗದಷ್ಟು ಅಸಹಾಯಕರಾಗಿದ್ದರು.
ಮೌಂಟ್ ಬ್ಯಾಟನ್‌ಗೆ ಗವರ್ನರ್ ಜನರಲ್ ಆಫರ್
ಒಂದು ಹಂತದಲ್ಲಿ ನೆಹರು ಅವರು ಮೌಂಟ್ ಬ್ಯಾಟನ್ ಮೇಲೆ ಅತಿ ವಿಶ್ವಾಸ ಹೊಂದಿದ್ದರು. ‘ದೇಶ ಸ್ವತಂತ್ರವಾದ ಮೇಲೂ ನೀವು ಇಂಡಿಯಾದಲ್ಲೇ ಇರಿ. ದೇಶದ ಗವರ್ನರ್ ಪದವಿ ನೀವು ಒಪ್ಪಬೇಕು’ ಎಂದಿದ್ದರು. ‘ವಿಚಿತ್ರ ನೋಡಿ, ಬ್ರಿಟಿಷರೇ ತೊಲಗಿಯೆನ್ನುತ್ತಿದ್ದ ದೇಶವು ಬ್ರಿಟಿಷ್ ಚಕ್ರಾಧಿಪತ್ಯದ ಸಂಕೇತವಾದ ವೈಸ್‌ರಾಯ್‌ನನ್ನು ಸ್ವತಂತ್ರ ಭಾರತದ ಪ್ರಥಮ ಗವರ್ನರ್ ಜನರಲ್ ಆಗಿ ಎಂದು ಹೇಳುತ್ತಿದೆ. ಎಂತಹ ವಿಧಿ ವಿಲಾಸ’ ಎಂದು ಮೌಂಟ್ ಅಚ್ಚರಿಗೊಂಡಿದ್ದರು. ಸ್ವತಃ ಮಹಾತ್ಮ ಗಾಂಧಿ ಅವರು ಮೌಂಟ್ ಬ್ಯಾಟನ್ ಅವರನ್ನು ಕಂಡು ಸ್ವತಂತ್ರ ಇಂಡಿಯಾದ ಪ್ರಥಮ ಗವರ್ನರ್ ಜನರಲ್ ಆಗುವಂತೆ ಕೋರಿಕೆ ಸಲ್ಲಿಸಿದರು. ಅದರೊಂದಿಗೆ ಗಾಂಧಿ ಹೇಳಿದ ಮಾತು, ‘ಸ್ವತಂತ್ರ ಭಾರತವೆಂದರೆ, ಐಶ್ವರ್ಯದಿಂದ ತುಂಬಿ ತುಳುಕು ಆಡಂಬರದ ದೇಶವಲ್ಲ, ಇಲ್ಲಿಯ ಗವರ್ನರ್ ಸಾಧಾರಣ ಮನೆಯಲ್ಲಿ ವಾಸ ಮಾಡಿ, ಮಾದರಿ ಎಂದು ದೇಶಕ್ಕೇ ತೋರಿಸಬೇಕು. ನನಗೆ ಭಾರತದ ಮೊದಲ ಗವರ್ನರ್ ಒಬ್ಬ ಪರಿಶಿಷ್ಟ ಜಾತಿಯ ಸ್ತ್ರೀಯಾಗಬೇಕೆಂಬ ಬಯಕೆ ಇತ್ತು.’ ಗಾಂಧಿ ಮುಂದುವರಿಸುತ್ತಲೇ ಮೌಂಟ್ ಬ್ಯಾಟನ್ ಮನದಲ್ಲೇ ಮೆಲುಕು ಹಾಕಿದರು. ‘ಈ ಘಾಟಿ ಮುದುಕನಿಗೆ ನಾನು ಗವರ್ನರ್ ಜನರಲ್ ಆಗಬೇಕಂತೆ, ನಾಳೆ ನಿನ್ನ ಮನೆಯ ಕಕ್ಕಸನ್ನು ನೀನೇ ತೊಳೆದುಕೋ ಎಂದರೂ ಅಚ್ಚರಿ ಇಲ್ಲ’. ಗಾಂಧಿಯೊಂದಿಗೆ ಮಾತು ಮುಂದುವರಿಸಿದ ಮೌಂಟ್ ವಿಷಯ ಬದಲಿಸಿದರು. ಆಗಸ್ಟ್ 15 ಒಳ್ಳೆಯ ದಿನ ಅಲ್ಲವೆಂದು ಜ್ಯೋತಿಷಿಗಳು ಹೇಳಿದ್ದರು. 14ನೇ ತಾರೀಕು ಮಧ್ಯರಾತ್ರಿ ಶುಭ ಗಳಿಗೆ ಇದೆ ಎಂದು ಉಲ್ಲೇಖಿಸಿದ್ದರು. ಮೌಂಟ್ ಬ್ಯಾಟನ್ ಇದೇ ಸರಿಯಾದ ಕ್ಷಣ ಎಂದು ತೀರ್ಮಾನಿಸಿದ್ದರು.
ಸ್ವಾತಂತ್ರ್ಯ ಸ್ವೀಕಾರದ ಕ್ಷಣಗಳು
1947ರ ಆಗಸ್ಟ್ 14ರ ಸಂಜೆ ಸೂರ್ಯ ಮುಳುಗುತ್ತಿದ್ದ. ಬಿದಿರಿನ ದೊಣ್ಣೆ, ಜಿಂಕೆ ಚರ್ಮ, ಕಮಂಡಲಗಳನ್ನು ಹಿಡಿದು ಸನ್ಯಾಸಿಗಳಿಬ್ಬರು ನವ ದೆಹಲಿಯ ಯಾರ್ಕ್ ರಸ್ತೆಯಲ್ಲಿರುವ 17ನೇ ನಂಬರ್ ಮನೆಯಲ್ಲಿ ಜವಾಹರ್ ಲಾಲ್ ನೆಹರೂ ಅವರನ್ನು ಕೂರಿಸಿ ಪವಿತ್ರ ಸ್ನಾನ ಮಾಡಿಸುತ್ತಿದ್ದರು. ಸನ್ಯಾಸಿಗಳನ್ನು ಕಂಡರೆ ಅಷ್ಟಕ್ಕಷ್ಟೇ ಎಂಬ ಭಾವನೆ ಹೊಂದಿದ್ದ ನೆಹರೂ ಪ್ರಥಮ ಬಾರಿಗೆ ಹಣೆಗೆ ವಿಭೂತಿ ಹೆಚ್ಚಿಕೊಂಡು ಧಾರ್ಮಿಕ ಕಾರ್ಯದಲ್ಲಿ ತೊಡಗಿದ್ದರು. ಎಲ್ಲಾ ಕಡೆ ಹಾರಾಡುತ್ತಿದ್ದ ಯೂನಿಯನ್ ಜ್ಯಾಕ್ ಬಾವುಟ ಅಗಸ್ಟ್ 14ರ ಸಂಜೆ ಇಳಿಯುತ್ತಿತ್ತು. ಆ ಜಾಗದಲ್ಲಿ ಮರುದಿನ ಭಾರತದ ಬಾವುಟ ಹಾರಬೇಕಾಗಿತ್ತು. ಲಕ್ನೋದ ದ ಟವರ್ ಆಫ್ ರೆಸಿಡೆನ್ಸಿ ಮೇಲೆ ಹಾರುತ್ತಿದ್ದ ಬ್ರಿಟನ್ ಧ್ವಜವನ್ನು 1857ರಿಂದ ಇಳಿಸಿದ್ದೇ ಇಲ್ಲ. ಅದು ಬ್ರಿಟನ್‌ನ ಶೌರ್ಯ ಮತ್ತು ಕೆಚ್ಚೆದೆಯ ಸಾಹಸದ ಪ್ರತೀಕ ಎಂದು ಬ್ರಿಟನ್ ಭಾವಿಸಿತ್ತು. 14ನೇ ತಾರೀಖಿನ ರಾತ್ರಿ 10 ಗಂಟೆಗೆ ಅದರ ಕೇರ್ ಟೇಕರ್ ಅದನ್ನು ಇಳಿಸಿ ದೀರ್ಘ ನಿಟ್ಟಿಸಿರು ಬಿಟ್ಟ. ಬಾವುಟ ಕಟ್ಟಲು ತಯಾರಿಸಿದ್ದ ಲೋಹದ ಕೋಲನ್ನು ಮತ್ತೊಬ್ಬ ಕತ್ತರಿಸಿ ಹಾಕಿದ. ಇನ್ನು ಈ ಟವರ್ ಮೇಲೆ ಬೇರೆ ಯಾವುದೇ ಬಾವುಟ ಹಾರುವುದಿಲ್ಲ ಎಂದಾತ ನಿರ್ಧರಿಸಿದ್ದ. ಪ್ರಧಾನಿ ಆಗಲಿರುವ ನೆಹರೂ ಸನ್ಯಾಸಿಗಳು ಹಣೆಗೆ ಹಚ್ಚಿದ ವಿಭೂತಿಯನ್ನು ತೊಳೆದುಕೊಂಡು ಊಟಕ್ಕೆ ಕುಳಿತಾಗಲೇ ಲಾಹೋರ್‌ನಿಂದ ಬಂದ ಫೋನ್, ‘ಲಾಹೋರ್‌ನಲ್ಲಿ ಹಿಂದೂಗಳು, ಸಿಖ್ಖರು ಇದ್ದ ಮೊಹಲ್ಲಾಗಳಿಗೆ ಕುಡಿಯುವ ನೀರು ಕೊಡುತ್ತಿಲ್ಲ. ಮೊಹಲ್ಲಾದಿಂದ ಹೊರ ಹೋಗುತ್ತಿರುವವರನ್ನು ಕತ್ತಿಯಿಂದ ಕತ್ತರಿಸಲಾಗುತ್ತಿದೆ’. ಚಿಂತೆಯ ಮುಖ ಮುದ್ರೆಯೊಂದಿಗೆ ನೆಹರೂ ತಮ್ಮ ಸನಿಹದಲ್ಲಿದ್ದ ಮಗಳು ಇಂದಿರಾರಲ್ಲಿ ‘ಈಗ ಏನು ಮಾಡಲು ಸಾಧ್ಯ.. ನನ್ನ ಸುಂದರ ಲಾಹೋರ್ ಹೊತ್ತಿ ಉರಿಯುತ್ತಿದೆಯಂತೆ. ಹೌದು, ಇಂಡಿಯಾಗೆ ಸ್ವಾತಂತ್ರ್ಯ ಬರುತ್ತದೆ. ಆದರೆ ಅದು ಬಂದಾಗ ರಕ್ತ ಕಾಲುವೆ ಹರಿಯುತ್ತದೆ ಎಂಬ ಪರದೇಶದ ವಿಮರ್ಶಕರು ಆಡಿದ ಮಾತು ಸತ್ಯ ಆಗುತ್ತೋ ಏನೋ..?’ ಬ್ಯಾಟನ್‌ಗೆ ದೇಶದ ಹಿತ ಚಿಂತೆ ಕಾಂಗ್ರೆಸ್ ನಾಯಕರು ಖಾದಿ ತೊಟ್ಟು ನೆರೆದಿದ್ದರು. ಅಲ್ಲಿಯ ಗೋಡೆಯ ಮೇಲೆ ತೂಗು ಹಾಕಲಾಗಿದ್ದ ವೈಸ್‌ರಾಯ್ ತೈಲ ಚಿತ್ರವನ್ನು ತೆಗೆದು ಹಾಕಲಾಗಿತ್ತು.
ಹೊರಗಡೆ ಬ್ರಿಟನ್ ಧ್ವಜವನ್ನು ಕೆಳಗಿಳಿಸಿದರು. ಧ್ವಜವನ್ನು ದಿಟ್ಟಿಸಿ ನೋಡುತ್ತಿದ್ದ ವೈಸ್‌ರಾಯ್ ಧ್ವಜವನ್ನು ತನ್ನ ಸುಪರ್ದಿಯಲ್ಲಿ ತೆಗೆದುಕೊಂಡರು. ಮೌಂಟ್ ಬ್ಯಾಟನ್ ಅದೇನೋ ದೀರ್ಘವಾಗಿ ಯೋಚಿಸುತ್ತಾರೆ. ತನ್ನಾಳ್ವಿಕೆಯ ಭಾರತದ ಬಗ್ಗೆ ಒಮ್ಮೆ ಮನಸ್ಸು ತೆರೆದುಕೊಳ್ಳುತ್ತಾರೆ. ಭಾರತ ಒಂದರಲ್ಲೇ ಸ್ವಿಜರ್ಲೆಂಡ್‌ನಲ್ಲಿರುವಷ್ಟು ಜನಸಂಖ್ಯೆಯ ಕುಷ್ಟರೋಗಿಗಳಿದ್ದಾರೆ. ಬೆಲ್ಜಿಯಂನಲ್ಲಿರುವಷ್ಟು ಮಂದಿ ಅಲೆಮಾರಿಗಳಿದ್ದಾರೆ. ಹಾವಾಡಿಗರು, ಭವಿಷ್ಯ ನುಡಿವವರು, ಲಂಬಾಣಿಗಳು, ಮುಗ್ಧರು, ಅಮಾಯಕರು ಮಾಯ, ಮಾಟ- ಮಂತ್ರವಾದಿಗಳು, ನಾಟಿ ಪಂಡಿತರು ಇವರೆಲ್ಲರ ಮಧ್ಯೆ ಭಾರತದ ಬದುಕಿನ ಬಂಡಿ ಸಾಗುತ್ತದೆ. ನಾನಾಳಿದ ಇಂಡಿಯಾದಲ್ಲಿ ಮೂವತ್ತೆಂಟು ಸಾವಿರ ಜನ ನಿತ್ಯ ಹುಟ್ಟುತ್ತಾರೆ. ಅದರಲ್ಲಿ ಕಾಲು ಭಾಗದಷ್ಟು ಮಕ್ಕಳು ಐದು ವರ್ಷ ತಲುಪುವುದರೊಳಗೆ ಸಾಯುತ್ತವೆ. ಒಂದು ವರ್ಷಕ್ಕೆ ಸರಾಸರಿ 10 ಮಿಲಿಯನ್ ಜನರು ಜಾತಿ, ಧರ್ಮದ ಗೋಚರವಿಲ್ಲದೆ ಆಹಾರದ ಮತ್ತು ಅಪೌಷ್ಟಿಕತೆಯಿಂದ ಸಾಯುತ್ತಾರೆ. ಆದರೆ, ಭಾರತ ಆಧ್ಯಾತ್ಮಿಕವಾಗಿ ಬಹಳ ಸಾಧನೆ ಮಾಡಿದ ದೇಶ. ಬೌದ್ಧಮತ ಹುಟ್ಟಿದ್ದೇ ಇಲ್ಲಿ. ಹಿಂದೂ ಧರ್ಮದ ಮಾತೃಭೂಮಿ ಭಾರತ. ಜಗತ್ತಿನ ಯಾವುದೇ ರಾಷ್ಟ್ರದಲ್ಲಿಲ್ಲದಷ್ಟು ಮುಸ್ಲಿಮರು ಭಾರತದಲ್ಲಿದ್ದಾರೆ. ಹಿಂದೂಗಳಿಗೆ ಮುಕ್ಕೋಟಿ ದೇವತೆಗಳು, ಕಲೆಗೊಬ್ಬ ದೇವತೆ, ಸಾವಿಗೆ, ರೋಗಕ್ಕೆ, ಐಶ್ವರ್ಯಕ್ಕೆ, ವಿದ್ಯೆಗೆ ಒಬ್ಬೊಬ್ಬ ದೇವರು.
ಭಾರತದಲ್ಲಿ ಅರಳಿ ಮರವನ್ನು ಪೂಜಿಸುತ್ತಾರೆ.
ಎಂಥ ಭೂಮಿ ಭಾರತ.. ಇಲ್ಲಿ ಮುನ್ನೂರು ಮೂವತ್ತು ಲಕ್ಷ ಕಪಿಗಳಿವೆ, ಇನ್ನೂರು ಲಕ್ಷ ಗೋವುಗಳಿವೆ. ಇಪ್ಪತ್ತು ಸಾವಿರ ಮಂದಿ ವರ್ಷಕ್ಕೆ ಹಾವು ಕಚ್ಚಿ ಸಾಯುತ್ತಾರೆ. ಆದರೂ ಹಾವನ್ನು ಪ್ರಕೃತಿಯೆಂದು ಪೂಜಿಸುತ್ತಾರೆ ಭಾರತದಲ್ಲಿ. ಶೇಕಡ 83ರಷ್ಟು ಮಂದಿ ಅಕ್ಷರಾಭ್ಯಾಸದಿಂದ ವಂಚಿತರಾಗಿದ್ದಾರೆ. ಇಂಡಿಯಾದ ಸರಾಸರಿ ವಾರ್ಷಿಕ ಮಳೆ 114 ಸೆಂ.ಮೀ., ಕೆಲವು ಕಡೆ ತೊಟ್ಟು ಮಳೆಯೂ ಇಲ್ಲ. ಮೂರು ಲಕ್ಷ ಚದರ ಕಿ.ಮೀ. ಅಂದರೆ ಇಡೀ ಜರ್ಮನಿಯಷ್ಟು ಪ್ರದೇಶ ಬರಡು ಭೂಮಿ. ದೇಶಕ್ಕೆ ಮೂರು ಸಾವಿರ ಎಂಟು ನೂರು ಮೈಲಿ ಸಮುದ್ರವಿದೆ. ಆದರೆ ಮೀನುಗಾರಿಕೆ ಪ್ರಾಚೀನ ರೀತಿಯಲ್ಲೇ ಇದ್ದು, ಮೀನುಗಾರರೆಲ್ಲಾ ಕಡುಬಡವರು. ಸಂಸತ್ ಭವನ ಸೇರಲಿರುವ ಭವ್ಯ ಭಾರತದ ಮುಂದಿನ ಅಧಿಪತಿಗಳಾಗಲಿರುವವರಿಗೆ ಈ ಸಮಸ್ಯೆಗಳ ಬಗ್ಗೆ ಗೊತ್ತಿದ್ದ ಚಹರೆ ಕಾಣುತ್ತಿಲ್ಲ.
ಸ್ವಾತಂತ್ರ್ಯದ ಶಂಖನಾದ
ದೇಶದ ಪ್ರಧಾನಿ ಹುದ್ದೆ ನಿರ್ವಹಿಸಲು ಸಿದ್ಧರಾದ ನೆಹರೂ ಮಾತನಾಡಲು ಆರಂಭಿಸಿದರು. ನೆರೆದ ಜನರು ಮಳೆಯಿಂದ ನೆನೆಯುವಂತಾಯ್ತು. ಗಡಿಯಾರದಲ್ಲಿ ಸರಿಯಾಗಿ ರಾತ್ರಿ 12 ಗಂಟೆ ಹೊಡೆದಾಗ ಸಮಯಕ್ಕಾಗಿ ಕಾಯುತ್ತಿದ್ದ ಒಬ್ಬ ಶಂಖನಾದ ಮಾಡಿದ. ದೇಶಕ್ಕೆ ಸ್ವಾತಂತ್ರ್ಯದ ಉದಯವಾಯಿತು. ಸಾಮ್ರಾಜ್ಯ ಶಾಹಿ ಯುಗ ಕಳೆಯಿತು. ಎರಡು ಹೊಸ ರಾಷ್ಟ್ರಗಳು ಸೃಷ್ಟಿಯಾದವು. ನವದೆಹಲಿಯ ಇಂಡಿಯಾ ಗೇಟ್ ಬಳಿ ಆಗಸ್ಟ್ 15ರ ಸಂಜೆ ಸಾರ್ವಜನಿಕ ಸಭೆ ನಿರ್ಣಯವಾಯಿತು. ಧ್ವಜಾರೋಹಣ ಸಮಾರಂಭ ನಡೆಯುವ ಸ್ಥಳ ಜಾಗತಿಕ ಮೊದಲ ಯುದ್ಧದಲ್ಲಿ ಬ್ರಿಟಿಷ್ ಚಕ್ರಾಧಿಪತ್ಯದ ಪರ ಹೋರಾಡಿ ವೀರ ಮರಣ ಹೊಂದಿರುವವರ ನೆನಪಿಗಾಗಿ ಕಟ್ಟಿದ ಕಟ್ಟಡವೇ ಇಂಡಿಯಾ ಗೇಟ್. ಸಮಾರಂಭಕ್ಕೆ ಸುಮಾರು ಮೂವತ್ತು ಸಾವಿರ ಜನ ಬರಬಹುದೆಂದು ಅಂದಾಜು. ಹಿಂದೆಂದೂ ಇಂಡಿಯಾ ಗೇಟ್ ಬಳಿ ಆ ಪ್ರಮಾಣದ ರಾಶಿ ರಾಶಿ ಜನ ಬಂದಿರಲಿಲ್ಲ. ನೆರೆದ ಜನಸ್ತೋಮ 5 ಲಕ್ಷ ಮೀರಿತ್ತು. ಬಡವರು ಬಲ್ಲಿದರೆನ್ನದೆ ಸೇರಿದ ಜನರ ಮುಂದೆ ಸಿದ್ಧತೆಗಳಿಲ್ಲದೆ ಗೊಂದಲವಾಗಿತ್ತು. ಮಕ್ಕಳನ್ನು ತಲೆ ಮೇಲೆ ಹೊತ್ತು ಕೆಲವರು ಭಾಗವಹಿಸಿದ್ದರು. ‘ಆತಂಕ ಬೇಡ ಬ್ಯಾಂಡ್ ಇಲ್ಲದೆ ದ್ವಜಾರೋಹಣ ಮಾಡಬಹುದು’ ಎಂದು ಸಲಹೆಯಿತ್ತ ಮೌಂಟ್ ಬ್ಯಾಟನ್. ಕೇಸರಿ, ಬಿಳಿ, ಹಸಿರು ಬಾವುಟ ಮೇಲೇರಿತು. ಚಕ್ರವರ್ತಿನಿ ವಿಕ್ಟೋರಿಯಾಳ ಮರಿ ಮಗ ಗಗನವೇರಿದ ಭಾರತದ ತ್ರಿವರ್ಣ ಧ್ವಜಕ್ಕೆ ಸೆಲ್ಯೂಟ್ ನೀಡಿದ.
1857ರಲ್ಲಿ ನಡೆದ ದಂಗೆಯ ಪ್ರತೀಕಾರ, ಜಲಿಯನ್ ವಾಲಾಬಾಗ್‌ನಲ್ಲಿ ನಡೆದ ಪೈಶಾಚಿಕ ಕೃತ್ಯ, ಸ್ವಾತಂತ್ರ್ಯ ಹೋರಾಟಗಾರರಿಗೆ ಆದ ಕರಿನೀರ ಶಿಕ್ಷೆ, ತುರಂಗವಾಸ, ಗಡೀಪಾರು ಇವೆಲ್ಲವನ್ನೂ ಮರೆತು ನನ್ನ ಭಾರತ ಎಂಬ ಹೆಮ್ಮೆಯಿಂದ ಜನರು ಕಾದಿದ್ದರು. ಆಕಾಶದಲ್ಲಿ ಕಾಮನಬಿಲ್ಲು ಮೂಡಿತ್ತು. ಮೌಂಟ್ ಬ್ಯಾಟನ್ ಕಣ್ಣಲ್ಲಿ ಆನಂದಬಾಷ್ಪ ತುಂಬಿತ್ತು. ಜನಸ್ತೋಮ ನೋಡಿದ ಬ್ಯಾಟನ್ ದಂಪತಿ, ದೇಶದ ಮೊದಲ ಪ್ರಧಾನಿ ನೆಹರೂರೊಂದಿಗೆ ಜನಸ್ತೋಮಕ್ಕೆ ಕೈ ಬೀಸಿದ್ದರು.
ಈ ಮಧ್ಯೆ ಮರೆತ ಘಟನೆಯೊಂದನ್ನು ನೆನಪಿಸಬೇಕು. ಆಶೀರ್ವಾದ ಪಡೆಯಲು ಬಂದ ಭಾರತ ದೇಶ ಮುನ್ನಡೆಸಬಲ್ಲ ನವ ನಾಯಕರಿಗೆ ಕುಳ್ಳಿರಿಸಿ ಕಿವಿ ಮಾತು ಹೇಳಿದ್ದರು ಗಾಂಧಿ. ‘ಅಧಿಕಾರದ ಬಗ್ಗೆ ಎಚ್ಚರದಿಂದಿರಿ, ಅಧಿಕಾರ ನಿಮ್ಮನ್ನೂ ಭ್ರಷ್ಟರನ್ನಾಗಿ ಮಾಡಬಹುದು, ವೈಭವ ಮತ್ತು ಆಡಂಬರಕ್ಕೆ ತುತ್ತಾಗಬೇಡಿ, ನಾವು ಅಧಿಕಾರಕ್ಕೆ ಬಂದಿರುವುದು ಹಳ್ಳಿಗಾಡಿನ ಬಡವರ ಸೇವೆಗೆ ಎಂಬುದು ಮರೆಯಬೇಡಿ’. ಗಾಂಧಿ ಮಾತನ್ನು ನವ ಭಾರತ ನಿರ್ಮಾಣದ ಗುರಿ ಹೊತ್ತ ಮುಖಂಡರು ವಿನಮ್ರತೆಯಿಂದ ಆಲಿಸಿದ್ದರು.
ಗಾಂಧಿ ಮಾತು ನೆನೆದ ಮೋದಿ
ಇಂದು ಭಾರತದ 79ನೇ ಸ್ವಾತಂತ್ರ್ಯೋತ್ಸವ. 11 ವರ್ಷದ ಕೆಳಗೆ 2014 ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ ಇಂದಿನ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ‘ನಾನು ಪ್ರಧಾನಮಂತ್ರಿಯಾಗಿ ದೇಶದ ತ್ರಿವರ್ಣ ಧ್ವಜ ಹಾರಿಸುತ್ತಿಲ್ಲ, ಬದಲಾಗಿ ದೇಶದ ಪ್ರಧಾನ ಸೇವಕನಾಗಿ ಹಾರಿಸುತ್ತಿದ್ದೇನೆ’ ಎಂಬ ಮಾತು ಅಂದು ಗಾಂಧಿಯ ಮಾತಿನಂತೆ ಬಹುಕಾಲ ನೆನಪಿನಲ್ಲುಳಿಯುವಂತಹದು.