14 ಹೈಕೋರ್ಟ್ ಜಡ್ಜ್‌ ವರ್ಗಕ್ಕೆ ಶೀಘ್ರ ಅಧಿಸೂಚನೆ: ಸುಪ್ರೀಂಗೆ ಕೇಂದ್ರ

| Published : Oct 10 2023, 01:00 AM IST

14 ಹೈಕೋರ್ಟ್ ಜಡ್ಜ್‌ ವರ್ಗಕ್ಕೆ ಶೀಘ್ರ ಅಧಿಸೂಚನೆ: ಸುಪ್ರೀಂಗೆ ಕೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆ ಕುರಿತು ಕೊಲಿಜಿಯಂ ನೀಡಿದ್ದ ಶಿಫಾರಸುಗಳ ಪೈಕಿ 14 ಹೈಕೋರ್ಟ್‌ ನ್ಯಾಯಾಧೀಶರ ವರ್ಗಾವಣೆಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಉಳಿದ 12 ಶಿಫಾರಸುಗಳು ಪ್ರಕ್ರಿಯೆಯಲ್ಲಿವೆ ಎಂದು ಸುಪ್ರೀಂಕೋರ್ಟ್‌ಗೆ ಸೋಮವಾರ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ನವದೆಹಲಿ: ನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆ ಕುರಿತು ಕೊಲಿಜಿಯಂ ನೀಡಿದ್ದ ಶಿಫಾರಸುಗಳ ಪೈಕಿ 14 ಹೈಕೋರ್ಟ್‌ ನ್ಯಾಯಾಧೀಶರ ವರ್ಗಾವಣೆಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಉಳಿದ 12 ಶಿಫಾರಸುಗಳು ಪ್ರಕ್ರಿಯೆಯಲ್ಲಿವೆ ಎಂದು ಸುಪ್ರೀಂಕೋರ್ಟ್‌ಗೆ ಸೋಮವಾರ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೊಲಿಜಿಯಂ ಶಿಫಾರಸುಗಳನ್ನು ಕಾರ್ಯಗತಗೊಳಿಸುವಲ್ಲಿ ಕೇಂದ್ರ ಸರ್ಕಾರ ತೀರಾ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ 2 ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಪೀಠವು, ಕೂಡಲೇ ಬಾಕಿ ಇರುವ 70 ಶಿಫಾರಸುಗಳನ್ನು ಕಾರ್ಯಗತಗೊಳಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕಳೆದ ವಾರ ಕೇಂದ್ರಕ್ಕೆ ಚಾಟೀ ಬೀಸಿತ್ತು. ಬಳಿಕ ಪೀಠಕ್ಕೆ ಉತ್ತರಿಸಲು ಅಟಾರ್ನಿ ಜನರಲ್‌, ಒಂದು ವಾರ ಕಾಲಾವಕಾಶ ಕೇಳಿದ್ದರು. ಸೋಮವಾರ ನಡೆದ ವಿಚಾರಣೆಯಲ್ಲಿ ದೆಹಲಿ ಹೈಕೋರ್ಟ್‌ ನ್ಯಾಯಾಧೀಶರಾದ ಸಿದ್ಧಾರ್ಥ್‌ ಮೃದುಲ್‌ ಅವರನ್ನು ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸುವ ಶಿಫಾರಸಿನ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಡಿಸಲಾಗುವುದು. ಹಾಗೂ 14 ನ್ಯಾಯಾಧೀಶರ ವರ್ಗಾವಣೆ ಅಧಿಸೂಚನೆಯನ್ನು ಶೀಘ್ರವೇ ಹೊರಡಿಸಲಾಗುವುದು ಹಾಗೂ ಉಳಿದ 12 ಶಿಫಾರಸು ಪ್ರಕ್ರಿಯೆಯಲ್ಲಿವೆ ಎಂದು ತಿಳಿಸಿದೆ. ಬಳಿಕ ಪೀಠವು ವಿಚಾರಣೆಯನ್ನು ಅ.20ಕ್ಕೆ ಮುಂದೂಡಿತು. ----- ಒಟ್ಟು 70 ಶಿಫಾರಸುಗಳ ಪೈಕಿ 26 ನ್ಯಾಯಾಧೀಶರ ವರ್ಗಾವಣೆಯ ಶಿಫಾರಸುಗಳಿದ್ದವು. ಇವೆಲ್ಲ ಕಳೆದ ನವೆಂಬರ್‌ನಿಂದಲೇ ಬಾಕಿ ಇವೆ. ನ್ಯಾಯಾಂಗ ನಿಗದಿಪಡಿಸಿದ ಕಾಲಮಿತಿಯೊಳಗೆ ಕೇಂದ್ರವು ಕೊಲಿಜಿಯಂ ಶಿಫಾರಸನ್ನು ಕಾರ್ಯಗತಗೊಳಿಸುತ್ತಿಲ್ಲವಾದ್ದರಿಂದ ಅದರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಕೋರಿ ಬೆಂಗಳೂರಿನ ವಕೀಲರ ಸಂಘವು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.