ಯುವರಾಜ್‌ ಸಿಂಗ್‌ ದಾಖಲೆ ಮುರಿದ ಕರ್ನಾಟಕದ ಪ್ರಖರ್‌!

| Published : Jan 16 2024, 01:45 AM IST / Updated: Jan 16 2024, 01:37 PM IST

ಸಾರಾಂಶ

ಇಲ್ಲಿ ನಡೆದ ಕೂಚ್‌ ಬೆಹಾರ್‌ ಅಂಡರ್‌ 19 ಟೂರ್ನಿಯ ಮುಂಬೈ ವಿರುದ್ಧದ ಫೈನಲ್‌ ಪಂದ್ಯದಲ್ಲಿ ರಾಜ್ಯದ ಪ್ರಖರ್‌ ಚತುರ್ವೇದಿ ಐತಿಹಾಸಿಕ ರನ್‌ ಗಳಿಸಿದ್ದಾರೆ. 358 ರನ್‌ ಗಳಿಸದ್ದ ಯುವರಾಜ್‌ ಸಿಂಗ್‌ರ ಹಳೆಯ ದಾಖಲೆಯನ್ನು ಮುರಿದರು.

ಶಿವಮೊಗ್ಗ: ಇಲ್ಲಿ ನಡೆದ ಕೂಚ್‌ ಬೆಹಾರ್‌ ಅಂಡರ್‌ 19 ಟೂರ್ನಿಯ ಮುಂಬೈ ವಿರುದ್ಧದ ಫೈನಲ್‌ ಪಂದ್ಯದಲ್ಲಿ ರಾಜ್ಯದ ಪ್ರಖರ್‌ ಚತುರ್ವೇದಿ ಐತಿಹಾಸಿಕ ರನ್‌ ಗಳಿಸಿದ್ದಾರೆ. 

ಈ ಮೂಲಕ ಕೂಚ್‌ ಬೆಹಾರ್‌ ಟೂರ್ನಿಯ ಫೈನಲ್‌ನಲ್ಲಿ 400 ರನ್‌ ಸಿಡಿಸಿದ ಮೊದಲ ಆಟಗಾರ ಎನ್ನುವ ದಾಖಲೆಗೆ ಪ್ರಖರ್‌ ಪಾತ್ರರಾದರು. 

ಈ ಪಂದ್ಯದಲ್ಲಿ 638 ಎಸೆತ ಎದುರಿಸದ ಪ್ರಖರ್‌, 46 ಬೌಂಡರಿ, 3 ಸಿಕ್ಸ್‌ರ್‌ ನೆರವಿನೊಂದಿಗೆ 404 ರನ್‌ ಗಳಿಸಿದ್ದರು. ಫೈನಲ್‌ನಲ್ಲಿ ಅತಿಹೆಚ್ಚು ರನ್‌ ಬಾರಿಸಿದ ದಾಖಲೆಯೂ ಪ್ರಖರ್‌ ಪಾಲಾಯಿತು. ಅವರು, ಯುವರಾಜ್‌ ಸಿಂಗ್‌ರ ದಾಖಲೆ ಮುರಿದರು. 

ಪಂಜಾಬ್‌ನ ಯುವಿ 1999ರ ಫೈನಲ್‌ನಲ್ಲಿ ಬಿಹಾರ ವಿರುದ್ಧ 358 ರನ್‌ ಚಚ್ಚಿದ್ದರು. ಇನ್ನು ಟೂರ್ನಿಯ ಇತಿಹಾಸದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ 400 ರನ್‌ ಗಳಿಸಿದ ಕೇವಲ 2ನೇ ಬ್ಯಾಟರ್‌ ಎನ್ನುವ ಹಿರಿಮೆಯೂ ಪ್ರಖರ್‌ದ್ದಾಯಿತು. 

2012ರಲ್ಲಿ ಮಹಾರಾಷ್ಟ್ರದ ವಿಜಯ್‌ ಝೊಲ್‌ ಅಸ್ಸಾಂ ವಿರುದ್ಧ ಔಟಾಗದೆ 451 ರನ್‌ ಗಳಿಸಿದ್ದರು. ಇದು ಇದುವರೆಗೆ ಟೂರ್ನಿಯಲ್ಲಿ ದಾಖಲಾಗಿರುವ ಗರಿಷ್ಠ ಮೊತ್ತವಾಗಿದೆ. ಈ ಪಂದ್ಯದಲ್ಲಿ ಕರ್ನಾಟಕ 223 ಓವರ್‌ಗಳಲ್ಲಿ 890 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತ್ತು.