ಬೆಂಗಳೂರು : ಕರ್ನಾಟಕ ಬಾಸ್ಕೆಟ್‌ಬಾಲ್‌ ಸಾಧಕಿಯರಿಗೆ ಸನ್ಮಾನ, ₹15.50 ಲಕ್ಷ ನಗದು ಬಹುಮಾನ

| Published : Dec 08 2024, 01:16 AM IST / Updated: Dec 08 2024, 05:06 AM IST

ಸಾರಾಂಶ

ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆಯಿಂದ ಗೌರವ. ಫಿಬಾ ಏಷ್ಯಾ ಅಧ್ಯಕ್ಷ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ. ಗೋವಿಂದರಾಜು ಸೇರಿ ಪ್ರಮುಖರು ಉಪಸ್ಥಿತರಿದ್ದರು.

  ಬೆಂಗಳೂರು : ವಿವಿಧ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಕರ್ನಾಟಕದ ಬಾಸ್ಕೆಟ್‌ಬಾಲ್‌ ತಂಡಗಳಿಗೆ ಶನಿವಾರ ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ ಸನ್ಮಾನಿಸಿ, ಒಟ್ಟು 15.50 ಲಕ್ಷ ರು. ನಗದು ಬಹುಮಾನ ಹಸ್ತಾಂತರಿಸಿದೆ.

74ನೇ ರಾಷ್ಟ್ರೀಯ ಜೂನಿಯರ್‌ ಬಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಚಿನ್ನ ವಿಜೇತ ತಂಡಕ್ಕೆ ₹11.50 ಲಕ್ಷ, 38ನೇ ಯುವ ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಬೆಳ್ಳಿ ಹಾಗೂ ನ್ಯಾಷನಲ್‌ ಗೇಮ್ಸ್‌ನ ಬೆಳ್ಳಿ ವಿಜೇತ ಹಿರಿಯರ ತಂಡಕ್ಕೆ ತಲಾ ₹2 ಲಕ್ಷ ರು. ನೀಡಲಾಯಿತು. ಕಂಠೀರವ ಕ್ರೀಡಾಂಗಣದ ಒಲಿಂಪಿಕ್ಸ್‌ ಭವನದಲ್ಲಿ ನಡೆದ ಸಮಾರಂಭದಲ್ಲಿ ಫಿಬಾ ಏಷ್ಯಾ ಅಧ್ಯಕ್ಷ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ. ಗೋವಿಂದರಾಜು ಸೇರಿ ಪ್ರಮುಖರು ಉಪಸ್ಥಿತರಿದ್ದರು.

ಬ್ಯಾಡ್ಮಿಂಟನ್‌: ಅಶ್ವಿನಿ-ತನಿಶಾ, ಅನ್ಮೋಲ್‌, ಸತೀಶ್‌ ಫೈನಲ್‌ಗೆ

ಗುವಾಹಟಿ: ಗುವಾಹಟಿ ಮಾಸ್ಟರ್ಸ್‌ ಸೂಪರ್‌ 100 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತ 3 ವಿಭಾಗಗಳಲ್ಲಿ ಫೈನಲ್‌ ಪ್ರವೇಶಿಸಿದೆ. ಮಹಿಳಾ ಸಿಂಗಲ್ಸ್‌ನಲ್ಲಿ ಅನ್ಮೋಲ್‌ ಖಾರ್ಬ್‌, ಪುರುಷರ ಸಿಂಗಲ್ಸ್‌ನಲ್ಲಿ ಸತೀಶ್‌ ಕುಮಾರ್‌, ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೊ ಫೈನಲ್‌ಗೇರಿದ್ದಾರೆ.ಸೆಮಿಫೈನಲ್‌ನಲ್ಲಿ 17 ವರ್ಷದ ಅನ್ಮೋಲ್‌, ಭಾರತದವರೇ ಆದ ಮಾನ್ಶಿ ಸಿಂಗ್‌ ವಿರುದ್ಧ 21-19, 21-17ರಲ್ಲಿ ಗೆದ್ದರು. ಸತೀಶ್‌ ಚೀನಾದ ವಾಂಗ್‌ ಝೆಂಗ್‌ ಕ್ಷಿಂಗ್‌ ವಿರುದ್ಧ 13-21, 21-14, 21-16ರಲ್ಲಿ ಜಯಗಳಿಸಿದರು. ತನಿಶಾ ಹಾಗೂ ಕರ್ನಾಟಕದ ಅಶ್ವಿನಿ ಜೋಡಿ, ಚೀನಾದ ಕೆಂಗ್‌ ಶು-ವಾಂಗ್‌ ಟಿಂಗ್‌ ವಿರುದ್ಧ 21-14, 21-14ರಲ್ಲಿ ಜಯಗಳಿಸಿತು. ಭಾನುವಾರ ಫೈನಲ್‌ ನಡೆಯಲಿವೆ.