ಸಾರಾಂಶ
ವಡೋದರಾ: ಅಂಡರ್-23 ರಾಜ್ಯ ಎ ಟ್ರೋಫಿ ರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಉತ್ತರ ಪ್ರದೇಶದ ಸಮೀರ್ ರಿಜ್ವಿ ಹೊಸ ದಾಖಲೆ ಬರೆದಿದ್ದಾರೆ. ಶನಿವಾರ ತ್ರಿಪುರಾ ವಿರುದ್ಧ ಪಂದ್ಯದಲ್ಲಿ 21 ವರ್ಷದ ರಿಜ್ವಿ 97 ಎಸೆತಗಳಲ್ಲಿ ದ್ವಿಶತಕ ಬಾರಿಸಿದರು.
ಇದು ಟೂರ್ನಿಯ ಇತಿಹಾಸದಲ್ಲೇ ಅತಿ ವೇಗದ ಶತಕ. ಅವರು 97 ಎಸೆತಗಳಲ್ಲಿ 207.22ರ ಸರಾಸರಿಯಲ್ಲಿ ಔಟಾಗದೆ 201 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಒಟ್ಟು 13 ಬೌಂಡರಿ, 20 ಸಿಕ್ಸರ್‌ಗಳಿದ್ದವು.ಸಮೀರ್ ಸ್ಫೋಟಕ ಆಟದ ನೆರವಿನಿಂದ ಉತ್ತರ ಪ್ರದೇಶ 50 ಓವರಲ್ಲಿ 4 ವಿಕೆಟ್‌ಗೆ 405 ರನ್ ಕಲೆಹಾಕಿತು. ಬೃಹತ್ ಗುರಿ ಬೆನ್ನತ್ತಿದ ತ್ರಿಪುರಾ 9 ವಿಕೆಟ್‌ಗೆ 253 ರನ್ ಗಳಿಸಿ, 152 ರನ್‌ಗಳಿಂದ ಪರಾಭವಗೊಂಡಿತು.
ಇಂದು ಭಾರತ vs ಬಾಂಗ್ಲಾ ಫೈನಲ್
ಕೌಲಾ ಲಂಪುರ: ಚೊಚ್ಚಲ ಆವೃತ್ತಿಯ ಅಂಡರ್-19 ಮಹಿಳಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾನುವಾರ ಭಾರತ ಹಾಗೂ ಬಾಂಗ್ಲಾದೇಶ ಸೆಣಸಾಡಲಿವೆ.ಭಾರತ ತಂಡ ‘ಎ’ ಗುಂಪಿನಲ್ಲಿ 2 ಪಂದ್ಯಗಳ ಪೈಕಿ 1ರಲ್ಲಿ ಗೆದ್ದಿದ್ದರೆ, ಮತ್ತೊಂದು ಪಂದ್ಯ ಮಳೆಗೆ ಬಲಿಯಾಗಿತ್ತು. ಬಳಿಕ ಸೂಪರ್-4 ಹಂತದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶವನ್ನು ಮಣಿಸಿ ಫೈನಲ್‌ಗೇರಿದೆ. ಬಾಂಗ್ಲಾ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದಿದ್ದ ಭಾರತ, ಫೈನಲ್‌ನಲ್ಲೂ ಅದೇ ಪ್ರದರ್ಶನ ಮುಂದುವರಿಸುವ ಕಾತರದಲ್ಲಿದೆ. ಮತ್ತೊಂದೆಡೆ ಬಾಂಗ್ಲಾ ತಂಡ ಸೂಪರ್-4 ಹಂತದಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿ, ಟ್ರೋಫಿ ಎತ್ತಿ ಹಿಡಿಯಲು ಕಾಯುತ್ತಿದೆ.
ಇತ್ತೀಚೆಗೆ ನಡೆದಿದ್ದ ಪುರುಷರ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಸೋತು ಟ್ರೋಫಿ ತಪ್ಪಿಸಿಕೊಂಡಿತ್ತು.