ಭಾರತಕ್ಕೆ ಇಂಗ್ಲೆಂಡ್‌ ವಿರುದ್ಧ ಸರಣಿ ಗೆಲುವಿನ ಗುರಿ: ಮೊದಲ ಪಂದ್ಯಕ್ಕೆ ಗೈರಾಗಿದ್ದ ಕೊಹ್ಲಿ ಕಮ್‌ಬ್ಯಾಕ್‌

| N/A | Published : Feb 09 2025, 01:16 AM IST / Updated: Feb 09 2025, 04:08 AM IST

ಭಾರತಕ್ಕೆ ಇಂಗ್ಲೆಂಡ್‌ ವಿರುದ್ಧ ಸರಣಿ ಗೆಲುವಿನ ಗುರಿ: ಮೊದಲ ಪಂದ್ಯಕ್ಕೆ ಗೈರಾಗಿದ್ದ ಕೊಹ್ಲಿ ಕಮ್‌ಬ್ಯಾಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಇಂದು 2ನೇ ಏಕದಿನ ಪಂದ್ಯ: ಸರಣಿ ಗೆಲುವಿನ ಟೀಂ ಇಂಡಿಯಾ ಕಣ್ಣು. ಲಯಕ್ಕೆ ಮರಳಬೇಕಾದ ಒತ್ತಡದಲ್ಲಿ ನಾಯಕ ರೋಹಿತ್‌. ಮೊದಲ ಪಂದ್ಯಕ್ಕೆ ಗೈರಾಗಿದ್ದ ವಿರಾಟ್‌ ತಂಡಕ್ಕೆ ವಾಪಸ್‌. ಜೈಸ್ವಾಲ್‌ ತಂಡದಿಂದ ಔಟ್‌?. ಇಂಗ್ಲೆಂಡ್‌ಗೆ ಸರಣಿ ಸಮಬಲದ ಗುರಿ

ಕಟಕ್‌: ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿಯನ್ನು 4-1ರಲ್ಲಿ ಗೆದ್ದುಕೊಂಡಿರುವ ಟೀಂ ಇಂಡಿಯಾ ಈಗ ಪ್ರವಾಸಿ ತಂಡದ ವಿರುದ್ಧ ಏಕದಿನ ಸರಣಿಯನ್ನೂ ಕೈವಶಪಡಿಸಿಕೊಳ್ಳುವ ಕಾತರದಲ್ಲಿದೆ. ನಾಗ್ಪುರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ರೋಹಿತ್‌ ಶರ್ಮಾ ನಾಯಕತ್ವದ ಭಾರತ, ಕಟಕ್‌ನಲ್ಲೂ ಇಂಗ್ಲೆಂಡ್‌ನ ಕಟ್ಟಿಹಾಕುವ ವಿಶ್ವಾಸದಲ್ಲಿದೆ.

ಭಾರತಕ್ಕೆ ಸದ್ಯ ಸರಣಿ ಗೆಲುವಿಗಿಂತಲೂ ಹೆಚ್ಚು ಆಟಗಾರರ ಲಯದ್ದೇ ಚಿಂತೆಯಾಗಿದೆ. ಅದರಲ್ಲೂ ನಾಯಕ ರೋಹಿತ್‌ರ ಕಳಪೆ ಪ್ರದರ್ಶನ ತಂಡದ ಆಡಳಿತಕ್ಕೆ ಹೆಚ್ಚಿನ ತಲೆನೋವು ತಂದಿಟ್ಟಿದೆ. ಟೆಸ್ಟ್‌ ಸರಣಿಯಲ್ಲಿ ತೀರಾ ಕಳಪೆಯಾಗಿ ಆಡಿದ್ದ ರೋಹಿತ್‌, ಇಂಗ್ಲೆಂಡ್‌ ವಿರುದ್ಧ ಮೊದಲ ಏಕದಿನದಲ್ಲಿ ಕೇವಲ 2 ರನ್‌ಗೆ ಔಟಾಗಿದ್ದರು. ಚಾಂಪಿಯನ್ಸ್‌ ಟ್ರೋಫಿಗೆ ಇನ್ನು ಕೆಲ ದಿನಗಳಿರುವಾಗಲೇ ರೋಹಿತ್‌ ಲಯಕ್ಕೆ ಮರಳಲು ಹೆಣಗಾಡುತ್ತಿರುವುದು ತಂಡದ ಆತ್ಮವಿಶ್ವಾಸ ಕುಗ್ಗಿಸುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿರುವುದು ತುರ್ತು ಅಗತ್ಯತೆ.

ಕೊಹ್ಲಿ ಕಮ್‌ಬ್ಯಾಕ್‌: ಮಂಡಿ ನೋವಿನಿಂದಾಗಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ ಆಡಲಿದ್ದಾರೆ. ಟೆಸ್ಟ್‌ನಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಕೊಹ್ಲಿ ಕೂಡಾ ರೋಹಿತ್‌ರಂತೆಯೇ ಲಯಕ್ಕೆ ಮರಳಲು ಕಾಯುತ್ತಿದ್ದಾರೆ. ಆದರೆ ಇಲ್ಲಿ ಸಮಸ್ಯೆ ಇರುವುದು ಕೊಹ್ಲಿಗೆ ಯಾರು ಜಾಗ ಬಿಟ್ಟುಕೊಡಲಿದ್ದಾರೆ ಎಂಬುದು.

ಕೊಹ್ಲಿ ಆಡದಿದ್ದಾಗ ಅವರ ಬದಲು ತಮಗೆ ಸ್ಥಾನ ಸಿಕ್ಕಿತ್ತು ಎಂದು ಶ್ರೇಯಸ್‌ ಅಯ್ಯರ್‌ ಮೊದಲ ಪಂದ್ಯದ ಬಳಿಕ ಹೇಳಿದ್ದರು. ಆದರೆ ಶ್ರೇಯಸ್‌ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರು. ಹೀಗಾಗಿ 2ನೇ ಪಂದ್ಯದಲ್ಲಿ ಶ್ರೇಯಸ್‌ರನ್ನು ಹೊರಗಿಡುವುದು ಹೇಗೆ ಎಂಬ ಪ್ರಶ್ನೆ ಈಗ ತಂಡದ ಆಡಳಿತದ ಮುಂದಿದೆ. ಆರಂಭಿಕ ಪಂದ್ಯದ ಮೂಲಕ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದ ಯಶಸ್ವಿ ಜೈಸ್ವಾಲ್‌ರನ್ನು ಈ ಪಂದ್ಯದಿಂದ ಕೈಬಿಡುವ ಸಾಧ್ಯತೆ ಹೆಚ್ಚು. ಹೀಗಾದರೆ ಶುಭ್‌ಮನ್‌ ಗಿಲ್‌ ಹಾಗೂ ರೋಹಿತ್‌ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಬೇಕಾಗುತ್ತದೆ.

ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯಕೆ ಕಡಿಮೆ. ಬೌಲಿಂಗ್‌ ವಿಭಾಗವನ್ನು ಮೊಹದಮ್‌ ಶಮಿ ಮುನ್ನಡೆಸಲಿದ್ದು, ಹರ್ಷಿತ್‌ ರಾಣಾ, ಕುಲ್ದೀಪ್ ಯಾದವ್‌, ಆಲ್ರೌಂಡರ್‌ ಸ್ಥಾನದಲ್ಲಿ ಜಡೇಜಾ, ಅಕ್ಷರ್ ಪಟೇಲ್‌, ಹಾರ್ದಿಕ್‌ ಪಾಂಡ್ಯ ಮುಂದುವರಿಯಲಿದ್ದಾರೆ.ಪುಟಿದೇಳುತ್ತಾ ಇಂಗ್ಲೆಂಡ್‌?: ಈಗಾಗಲೇ ಟಿ20 ಸರಣಿಯನ್ನು ಕಳೆದುಕೊಂಡಿರುವ ಇಂಗ್ಲೆಂಡ್‌ಗೆ ಈ ಪಂದ್ಯ ಏಕದಿನ ಸರಣಿಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ತನ್ನ ಆಕ್ರಮಣಕಾರಿ ಆಟದಲ್ಲಿ ಸತತವಾಗಿ ವೈಫಲ್ಯ ಕಾಣುತ್ತಿರುವ ತಂಡ ಈ ಪಂದ್ಯದಲ್ಲಾದರೂ ಪುಟಿದೇಳಲಿದೆಯೇ ಎಂಬ ಕುತೂಹಲವಿದೆ.

ಸಂಭವನೀಯ ಆಟಗಾರರು

ಭಾರತ: ರೋಹಿತ್(ನಾಯಕ), ಗಿಲ್, ವಿರಾಟ್‌, ಶ್ರೇಯಸ್‌, ರಾಹುಲ್‌, ಅಕ್ಷರ್‌, ಹಾರ್ದಿಕ್‌, ಜಡೇಜಾ, ಶಮಿ, ಕುಲ್ದೀಪ್‌, ಹರ್ಷಿತ್‌ ರಾಣಾ.ಇಂಗ್ಲೆಂಡ್‌: ಸಾಲ್ಟ್‌, ಡಕೆಟ್‌, ರೂಟ್‌, ಬ್ರೂಕ್‌, ಬಟ್ಲರ್‌(ನಾಯಕ), ಲಿವಿಂಗ್‌ಸ್ಟೋನ್‌, ಬೆಥೆಲ್‌, ಕಾರ್ಸ್‌, ಆರ್ಚರ್‌, ಸಾಕಿಬ್‌, ಆದಿಲ್‌ ರಶೀದ್‌.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ । ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.

ಪಿಚ್‌ ರಿಪೋರ್ಟ್‌: ಕಟಕ್‌ ಕ್ರೀಡಾಂಗಣದ ಪಿಚ್‌ ಸ್ಪರ್ಧಾತ್ಮಕವಾಗಿದ್ದು, ದೊಡ್ಡ ಮೊತ್ತ ದಾಖಲಾದ ಉದಾಹರಣೆ ಕಡಿಮೆ. ಇಲ್ಲಿ ಒಟ್ಟು 38 ಇನ್ನಿಂಗ್ಸ್‌ಗಳಲ್ಲಿ 6 ಬಾರಿ ಮಾತ್ರ 300+ ರನ್‌ ದಾಖಲಾಗಿದೆ. ಇಲ್ಲಿ ಮಂಜು ಬೀಳುವ ಸಾಧ್ಯತೆ ಇರುವುದರಿಂದ ಟಾಸ್‌ ಗೆಲ್ಲುವ ತಂಡ ಚೇಸಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.

2019ರ ಬಳಿಕ ಮೊದಲ ಬಾರಿ ಕಟಕ್‌ನಲ್ಲಿ ಪಂದ್ಯ

ಕಟಕ್‌ ಕ್ರೀಡಾಂಗಣ 2019ರ ಬಳಿಕ ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಲು ಸಜ್ಜಾಗಿದೆ. 1982ರ ಬಳಿಕ ಈ ಕ್ರೀಡಾಂಗಣದಲ್ಲಿ ಒಟ್ಟು 19 ಏಕದಿನ ಪಂದ್ಯಗಳು ನಡೆದಿವೆ. ಭಾರತ ಇಲ್ಲಿ ಆಡಿರುವ 17 ಪಂದ್ಯಗಳ ಪೈಕಿ 13ರಲ್ಲಿ ಗೆಲುವು ಸಾಧಿಸಿದೆ.