ಸಾರಾಂಶ
ಪ್ಯಾರಾಲಿಂಪಿಕ್ ಪದಕ ವಿಜೇತ ಜಾವೆಲಿನ್ ಥ್ರೋ ಪಟು ದೇವೇಂದ್ರ ಝಝಾರಿಯಾ ರಾಜಕೀಯ ಪ್ರವೇಶಿಸಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚುರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ನವದೆಹಲಿ: 2 ಚಿನ್ನ ಸೇರಿ ಒಟ್ಟು 3 ಪ್ಯಾರಾಲಿಂಪಿಕ್ ಪದಕ ವಿಜೇತ ಜಾವೆಲಿನ್ ಥ್ರೋ ಪಟು ದೇವೇಂದ್ರ ಝಝಾರಿಯಾ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಹುಟ್ಟೂರು ರಾಜಸ್ಥಾನದ ಚುರುನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.ತಮಗೆ 8 ವರ್ಷವಿದ್ದಾಗ ಚುರುನಲ್ಲಿ ಮರ ಏರುವಾಗ ವಿದ್ಯುತ್ ತಂತಿ ತಗುಲಿ ಎಡಗೈನ ಮುಂಭಾಗವನ್ನು ಕಳೆದುಕೊಂಡಿದ್ದರು. 42 ವರ್ಷದ ದೇವೇಂದ್ರ, 2004ರ ಅಥೆನ್ಸ್, 2016ರ ರಿಯೋ ಪ್ಯಾರಾಲಿಂಪಿಕ್ಸ್‌ಗಳಲ್ಲಿ ಎಫ್46 ವಿಭಾಗದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು. 2021ರಲ್ಲಿ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟ ದೇವೇಂದ್ರಗೆ ಕೇಂದ್ರ ಸರ್ಕಾರ 2022ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. 2004ರಲ್ಲಿ ಅರ್ಜುನ, 2017ರಲ್ಲಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದ ದೇವೇಂದ್ರ, 2012ರಲ್ಲಿ ಪದ್ಮಶ್ರೀ ಪಡೆದ ದೇಶದ ಮೊದಲ ಪ್ಯಾರಾ ಕ್ರೀಡಾಪಟು ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಇದಲ್ಲದೆ ಭಾರತೀಯ ಪ್ಯಾರಾಲಂಪಿಕ್ಸ್ ಸಮಿತಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೂ ಸ್ಪರ್ಧಿಸಿದ್ದು, ಅವಿರೋಧ ಆಯ್ಕೆಯಾಗುವ ಸಾಧ್ಯತೆಯಿದೆ.