ಈಡನ್‌ನಲ್ಲಿ ಇಂಗ್ಲೆಂಡನ್ನು ಚೆಂಡಾಡಿದ ಭಾರತ! 7 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿ 1-0 ಮುನ್ನಡೆ

| Published : Jan 23 2025, 12:46 AM IST / Updated: Jan 23 2025, 04:03 AM IST

ಈಡನ್‌ನಲ್ಲಿ ಇಂಗ್ಲೆಂಡನ್ನು ಚೆಂಡಾಡಿದ ಭಾರತ! 7 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿ 1-0 ಮುನ್ನಡೆ
Share this Article
  • FB
  • TW
  • Linkdin
  • Email

ಸಾರಾಂಶ

1ನೇ ಟಿ20ಯಲ್ಲಿ ಭಾರತಕ್ಕೆ 7 ವಿಕೆಟ್‌ ಭರ್ಜರಿ ಜಯ. 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ. ಇಂಗ್ಲೆಂಡ್‌ 132ಕ್ಕೆ10. ವರುಣ್‌ಗೆ 3, ಅರ್ಶ್‌ದೀಪ್‌ಗೆ 2 ವಿಕೆಟ್‌. ಭಾರತ 12.5 ಓವರಲ್ಲಿ 133ಕ್ಕೆ3. ಅಭಿಷೇಕ್‌ 34 ಎಸೆತಗಳಲ್ಲಿ 79 ರನ್‌.

ಕೋಲ್ಕತಾ: ಮುಂದಿನ ಟಿ20 ವಿಶ್ವಕಪ್‌ಗೆ ಇನ್ನೂ 1 ವರ್ಷವಿದ್ದು, ತವರಿನಲ್ಲೇ ನಡೆಯಲಿರುವ ಟೂರ್ನಿಗೆ ಸೂಕ್ತ ಆಟಗಾರರನ್ನು ಗುರುತಿಸುವ ಕೆಲಸವನ್ನು ಭಾರತ ತಂಡ ಸರಿಯಾಗಿ ಮಾಡುತ್ತಿರುವಂತೆ ಕಾಣುತ್ತಿದೆ. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯು ಟಿ20 ವಿಶ್ವಕಪ್‌ನ ಸಿದ್ಧತೆಯ ಭಾಗವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಬುಧವಾರ ಇಲ್ಲಿನ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಲ್ರೌಂಡ್‌ ಪ್ರದರ್ಶನ ತೋರಿದ ಭಾರತ 7 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿ 1-0 ಮುನ್ನಡೆ ಪಡೆಯಿತು.

ಭಾರತ ತಂಡದ ಸಂಯೋಜನೆಯು ಬಲಿಷ್ಠವಾಗಿತ್ತು. ಹಲವು ಬೌಲಿಂಗ್‌ ಆಯ್ಕೆಗಳ ಜೊತೆ ಕೆಳ ಕ್ರಮಾಂಕದ ವರೆಗೂ ಬ್ಯಾಟಿಂಗ್‌ ಬಲವನ್ನು ಹೊಂದಿದ್ದ ಭಾರತ, ಇಂಗ್ಲೆಂಡನ್ನು ಚೆಂಡಾಡಿತು. ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ, ಪ್ರವಾಸಿ ತಂಡದ ಆತ್ಮವಿಶ್ವಾಸವನ್ನು ಪವರ್‌-ಪ್ಲೇನಲ್ಲಿ ಕುಗ್ಗಿಸಿತು. ನಾಯಕ ಜೋಸ್‌ ಬಟ್ಲರ್‌ರ ಏಕಾಂಗಿ ಹೋರಾಟ ತಂಡವನ್ನು 20 ಓವರಲ್ಲಿ 132 ರನ್‌ಗೆ ತಲುಪಿಸಿತು.

ಬ್ಯಾಟಿಂಗ್‌ಗೆ ಅನುಕೂಲಕಾರಿಯಾಗಿದ್ದ ಪಿಚ್‌ನಲ್ಲಿ ಸುಲಭ ಗುರಿ ಬೆನ್ನತ್ತಿದ ಭಾರತಕ್ಕೆ ಮೊದಲು ಸಂಜು ಸ್ಯಾಮ್ಸನ್‌ ಹಾಗೂ ಆನಂತರ ಅಭಿಷೇಕ್‌ ಶರ್ಮಾರ ಸ್ಫೋಟಕ ಆಟ ನೆರವಾಯಿತು. ಕೇವಲ 12.5 ಓವರಲ್ಲಿ ಭಾರತ 3 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಗಸ್‌ ಆ್ಯಟ್ಕಿನ್ಸನ್‌ ಎಸೆದ ಇನ್ನಿಂಗ್ಸ್‌ನ 2ನೇ ಓವರಲ್ಲಿ 22 ರನ್‌ ದೋಚಿದ ಸ್ಯಾಮ್ಸನ್‌ 20 ಎಸೆತದಲ್ಲಿ 26 ರನ್‌ ಗಳಿಸಿ ಔಟಾದರು. ಬಳಿಕ ಇಂಗ್ಲೆಂಡ್‌ ಬೌಲರ್‌ಗಳನ್ನು ಮನಬಂದಂತೆ ಚಚ್ಚಿದ ಅಭಿಷೇಕ್‌, ಕೇವಲ 34 ಎಸೆತದಲ್ಲಿ 5 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 79 ರನ್‌ ಸಿಡಿಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದರು. 

ಅಭಿಷೇಕ್‌ರ ಹೊಡೆತಗಳಿಗೆ ಇಂಗ್ಲೆಂಡ್‌ ಬೌಲರ್‌ಗಳ ಬಳಿ ಉತ್ತರವೇ ಇರಲಿಲ್ಲ. ತಿಲಕ್‌ ವರ್ಮಾ (ಔಟಾಗದೆ 19) ತಂಡವನ್ನು ಜಯದ ದಡ ಸೇರಿಸಿದರು. ಅರ್ಶ್‌ದೀಪ್‌ ಮಿಂಚು: ಫಿಲ್‌ ಸಾಲ್ಟ್‌ (0) ಹಾಗೂ ಬೆನ್‌ ಡಕೆಟ್‌(4)ರನ್ನು ಪೆವಿಲಿಯನ್‌ಗಟ್ಟಿದ ಅರ್ಶ್‌ದೀಪ್‌ ಇಂಗ್ಲೆಂಡ್‌ಗೆ ಆರಂಭಿಕ ಆಘಾತ ನೀಡಿದರು. ಪವರ್‌-ಪ್ಲೇನಲ್ಲಿ ಕೇವಲ 46 ರನ್‌ ಗಳಿಸಿದ ಇಂಗ್ಲೆಂಡನ್ನು ಆ ಬಳಿಕ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಕಾಡಿದರು. ಏಕಾಂಗಿ ಹೋರಾಟ ನಡೆಸಿದ ಜೋಸ್‌ ಬಟ್ಲರ್‌ 44 ಎಸೆತದಲ್ಲಿ 68 ರನ್‌ ಗಳಿಸಿ ತಂಡ ಅಲ್ಪ ಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ಮೊದಲ 6 ಓವರಲ್ಲಿ 22 ಎಸೆತದಲ್ಲಿ 34 ರನ್‌ ಚಚ್ಚಿದ್ದ ಬಟ್ಲರ್‌ಗೆ ನಂತರದ 10 ಓವರಲ್ಲಿ ಎದುರಿಸಲು ಸಿಕ್ಕಿದ್ದು ಕೇವಲ 20 ಎಸೆತ. ಇದು ಇಂಗ್ಲೆಂಡ್‌ಗೆ ಮಾರಕವಾಯಿತು. ವರುಣ್‌ಗೆ 3, ಹಾರ್ದಿಕ್‌ ಹಾಗೂ ಅಕ್ಷರ್‌ಗೆ ತಲಾ 2 ವಿಕೆಟ್‌ ದೊರೆಯಿತು.ಸ್ಕೋರ್‌: ಇಂಗ್ಲೆಂಡ್‌ 20 ಓವರಲ್ಲಿ 132/10 (ಬಟ್ಲರ್‌ 68, ಬ್ರೂಕ್‌ 17, ವರುಣ್‌ 3-23), ಭಾರತ 12.5 ಓವರಲ್ಲಿ 133/3 (ಅಭಿಷೇಕ್‌ 79, ಸ್ಯಾಮ್ಸನ್‌ 26, ಆರ್ಚರ್‌ 2-21) ಪಂದ್ಯಶ್ರೇಷ್ಠ: ವರುಣ್‌ ಚಕ್ರವರ್ತಿ

 ಅತಿಹೆಚ್ಚು ವಿಕೆಟ್‌:

ಅರ್ಶ್‌ದೀಪ್‌ ನಂ.1

ಭಾರತ ಪರ ಅಂ.ರಾ.ಟಿ20ಯಲ್ಲಿ ಅತಿಹೆಚ್ಚು ವಿಕೆಟ್‌ ಕಿತ್ತ ಬೌಲರ್‌ಗಳ ಪಟ್ಟಿಯಲ್ಲಿ ಅರ್ಶ್‌ದೀಪ್‌ ಸಿಂಗ್‌ ಮೊದಲ ಸ್ಥಾನಕ್ಕೇರಿದ್ದಾರೆ. ಎಡಗೈ ವೇಗಿ 61 ಪಂದ್ಯಗಳಲ್ಲಿ 97 ವಿಕೆಟ್‌ ಕಬಳಿಸಿದ್ದು, 96 ವಿಕೆಟ್‌ ಪಡೆದಿರುವ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಸಿಂಗ್‌ರನ್ನು ಹಿಂದಿಕ್ಕಿದರು.