ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ಆಫ್ಘನ್‌ ಇನ್‌: ಆಸೀಸ್‌, ಬಾಂಗ್ಲಾ ಔಟ್‌!

| Published : Jun 26 2024, 12:40 AM IST

ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ಆಫ್ಘನ್‌ ಇನ್‌: ಆಸೀಸ್‌, ಬಾಂಗ್ಲಾ ಔಟ್‌!
Share this Article
  • FB
  • TW
  • Linkdin
  • Email

ಸಾರಾಂಶ

ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ಅಫ್ಘಾನಿಸ್ತಾನ ಲಗ್ಗೆ. ಆಸ್ಟ್ರೇಲಿಯಾ, ಬಾಂಗ್ಲಾದೇಶಕ್ಕೆ ಭಾರಿ ನಿರಾಸೆ. ಸೆಮೀಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ ಆಫ್ಘನ್‌.

ಕಿಂಗ್ಸ್‌ಟೌನ್‌: ಅದೃಷ್ಟ ಧೈರ್ಯವಂತರ ಕೈಹಿಡಿಯಲಿದೆ ಎನ್ನುವ ಮಾತಿದೆ. ಅದು ಮಂಗಳವಾರ ಸೂಪರ್‌-8 ಹಂತದ ಅಂತಿಮ ಪಂದ್ಯದಲ್ಲಿ ಮತ್ತೊಮ್ಮೆ ನಿಜವಾಯಿತು. ತನಗೆ ಎದುರಾದ ಎಲ್ಲಾ ಸವಾಲುಗಳನ್ನು ಧೈರ್ಯವಾಗಿ ಎದುರಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶವನ್ನು ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 8 ರನ್‌ಗಳಿಂದ ಸೋಲಿಸಿ ಇದೇ ಮೊದಲ ಬಾರಿಗೆ ಯಾವುದೇ ಮಾದರಿಯ ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಿ ಸಂಭ್ರಮಿಸಿತು. ಸೆಮೀಸ್‌ ರೇಸ್‌ನಲ್ಲಿದ್ದ ಆಸ್ಟ್ರೇಲಿಯಾ, ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದವು.

ಮಳೆ ಬಾಧಿತ ಪಂದ್ಯದಲ್ಲಿ ಆಫ್ಘನ್‌ ಮೇಲುಗೈ ಸಾಧಿಸಿತು. ರಹಮಾನುಲ್ಲಾ ಗುರ್ಬಾಜ್‌ ಹಾಗೂ ರಶೀದ್‌ ಖಾನ್‌ರ ಆಕರ್ಷಕ ಬ್ಯಾಟಿಂಗ್‌ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ಗೆ 115 ರನ್‌ ಕಲೆಹಾಕಿದ ಆಫ್ಘನ್‌, ಅತ್ಯುತ್ತಮ ಬೌಲಿಂಗ್‌ ದಾಳಿ ಸಂಘಟಿಸಿತು.ಮೊದಲ ಇನ್ನಿಂಗ್ಸ್‌ ಬಳಿಕ ಮಳೆ ಸುರಿದ ಕಾರಣ, ಆಟ 20 ನಿಮಿಷ ತಡವಾಗಿ ಆರಂಭಗೊಂಡಿತು. ಬಾಂಗ್ಲಾ, ನೆಟ್‌ ರನ್‌ರೇಟ್‌ ಆಧಾರದಲ್ಲಿ ಆಫ್ಘನ್‌ ಹಾಗೂ ಆಸ್ಟ್ರೇಲಿಯಾ ಎರಡನ್ನೂ ಹಿಂದಿಕ್ಕಿ ಸೆಮೀಸ್‌ಗೇರಬೇಕಿದ್ದರೆ, 116 ರನ್‌ ಗುರಿಯನ್ನು 12.1 ಓವರಲ್ಲಿ ಬೆನ್ನತ್ತಬೇಕಿತ್ತು. ಆ ನಂತರ ಪದೇ ಪದೇ ಮಳೆ ಆಟಕ್ಕೆ ಅಡ್ಡಿಪಡಿಸಿದ ಕಾರಣ, ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ ಬಾಂಗ್ಲಾಗೆ ಗುರಿ ಬದಲಾಗುತ್ತಲೇ ಇತ್ತು.23ಕ್ಕೆ 3 ವಿಕೆಟ್‌ ಕಳೆದುಕೊಂಡರೂ, ಲಿಟನ್‌ ದಾಸ್‌ ಹೋರಾಟ ಬಿಡಲಿಲ್ಲ. ಶೋಮ ಸರ್ಕಾರ್‌ ಹಾಗೂ ತೌಹಿದ್‌ ಹೃದೋಯ್‌ರನ್ನು ಜೊತೆಗಿರಿಸಿಕೊಂಡು ಗುರಿ ಬೆನ್ನತ್ತಲು ಲಿಟನ್‌ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಮಧ್ಯ ಓವರ್‌ಗಳಲ್ಲಿ ರಶೀದ್‌ ಖಾನ್‌ ನೀಡಿದ ಆಘಾತದಿಂದ ಬಾಂಗ್ಲಾ ಚೇತರಿಸಿಕೊಳ್ಳಲು ಸಾಧ್ಯವಾಗದೆ 11 ಓವರ್‌ ಮುಕ್ತಾಯಕ್ಕೆ 7 ವಿಕೆಟ್‌ ಕಳೆದುಕೊಂಡು 80 ರನ್‌ ಗಳಿಸಿತು.ಈ ಹಂತದಲ್ಲಿ ಮತ್ತೆ ಅಡ್ಡಿಯಾದ ಕಾರಣ, ಬಾಂಗ್ಲಾ ಸೆಮೀಸ್‌ ಆಸೆ ಕೈಚೆಲ್ಲಿತು. ಆದರೆ ಬಾಂಗ್ಲಾ ಗೆದ್ದಿದ್ದರೆ ಆಸ್ಟ್ರೇಲಿಯಾಗೆ ಸೆಮೀಸ್‌ಗೇರಲು ಅವಕಾಶ ಸಿಗುತ್ತಿತ್ತು. ಇದಕ್ಕೆ ಆಫ್ಘನ್‌ ಬೌಲರ್‌ಗಳು ಅವಕಾಶ ನೀಡಲಿಲ್ಲ.17.5 ಓವರಲ್ಲಿ ಬಾಂಗ್ಲಾ 105 ರನ್‌ಗೆ ಆಲೌಟ್‌ ಆಯಿತು. ಜೊತೆಗಾರರಿಲ್ಲದೆ ಏಕಾಂಗಿಯಾದ ಆರಂಭಿಕ ಬ್ಯಾಟರ್‌ ಲಿಟನ್‌ 49 ಎಸೆತದಲ್ಲಿ 54 ರನ್‌ ಗಳಿಸಿ ಔಟಾಗದೆ ಉಳಿದರು. ರಶೀದ್‌ ಹಾಗೂ ನವೀನ್‌ ಉಲ್‌ ಹಕ್‌ ತಲಾ 4 ವಿಕೆಟ್‌ ಕಬಳಿಸಿದರು.ಗುರ್ಬಾಜ್‌, ರಶೀದ್‌ ಆಸರೆ: ಪವರ್‌-ಪ್ಲೇನಲ್ಲಿ ವಿಕೆಟ್‌ ನಷ್ಟವಿಲ್ಲದೆ 27 ರನ್‌ ಗಳಿಸಿದ ಅಫ್ಘಾನಿಸ್ತಾನ, 10 ಓವರ್‌ ಅಂತ್ಯಕ್ಕೆ ವಿಕೆಟ್‌ ಕಳೆದುಕೊಳ್ಳದೆ 58 ರನ್‌ ಗಳಿಸಿತು. ಗುರ್ಬಾಜ್‌ 55 ಎಸೆತದಲ್ಲಿ 43 ರನ್‌ ಗಳಿಸಿದರು. 84 ರನ್‌ಗೆ 1 ವಿಕೆಟ್‌ ಕಳೆದುಕೊಂಡಿದ್ದ ಆಫ್ಘನ್‌ ದಿಢೀರ್‌ ಕುಸಿತ ಕಂಡಿತು. 9 ರನ್‌ ಅಂತರದಲ್ಲಿ 4 ವಿಕೆಟ್‌ ಪತನಗೊಂಡವು. ತಂಡದ ಮೊತ್ತ 93ಕ್ಕೆ 5 ಇದ್ದಾಗ ರಶೀದ್‌ ಖಾನ್‌ ಕ್ರೀಸ್‌ಗಿಳಿದರು. ಇನ್ನಿಂಗ್ಸಲ್ಲಿ 14 ಎಸೆತ ಬಾಕಿ ಉಳಿದಿತ್ತು. ಈ ಪೈಕಿ 10 ಎಸೆತ ಎದುರಿಸಿದ ರಶೀದ್‌, 3 ಸಿಕ್ಸರ್‌ಗಳೊಂದಿಗೆ 19 ರನ್‌ ಸಿಡಿಸಿ ಔಟಾಗದೆ ಉಳಿದರು. ಅವರ ಇನ್ನಿಂಗ್ಸ್‌, ಆಫ್ಘನ್‌ ಪಾಲಿಗೆ ವರದಾನವಾಯಿತು.ಸ್ಕೋರ್‌: ಅಫ್ಘಾನಿಸ್ತಾನ 20 ಓವರಲ್ಲಿ 115/5 (ಗುರ್ಬಾಜ್‌ 43, ರಶೀದ್‌ 19*, ಇಬ್ರಾಹಿಂ 18, ರಿಶಾದ್‌ 3-26), ಬಾಂಗ್ಲಾ 17.5 ಓವರಲ್ಲಿ 105/10 (ಲಿಟನ್‌ 54*, ತೌಹಿದ್‌ 14, ರಶೀದ್‌ 4-23, ನವೀನ್‌ 4-26) ಪಂದ್ಯಶ್ರೇಷ್ಠ: ನವೀನ್‌.

04ನೇ ಬಾರಿಗುರ್ಬಾಜ್‌-ಇಬ್ರಾಹಿಂ ಈ ವಿಶ್ವಕಪ್‌ನಲ್ಲಿ 4ನೇ ಬಾರಿಗೆ ಅರ್ಧಶತಕದ ಜೊತೆಯಾಟವಾಡಿದರು. ಇದು ಟಿ20 ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಗರಿಷ್ಠ.02ನೇ ಬ್ಯಾಟರ್‌ಟಿ20 ವಿಶ್ವಕಪ್‌ನಲ್ಲಿ ಆರಂಭಿಕನಾಗಿ ಕ್ರೀಸ್‌ಗಿಳಿದು ಔಟಾಗದೆ ಉಳಿದ 2ನೇ ಬ್ಯಾಟರ್‌ ಲಿಟನ್‌. 2009ರಲ್ಲಿ ಗೇಲ್‌ ಈ ಹಿರಿಮೆಗೆ ಪಾತ್ರರಾಗಿದ್ದರು.66 ಡಾಟ್‌ ಬಾಲ್‌ಅಫ್ಘಾನಿಸ್ತಾನದ ಇನ್ನಿಂಗ್ಸಲ್ಲಿ ಬರೋಬ್ಬರಿ 66 ಡಾಟ್‌ಬಾಲ್‌ಗಳಿದ್ದವು. ಅಂದರೆ 9 ಓವರಲ್ಲಿ ತಂಡ 115 ರನ್‌ ಕಲೆಹಾಕಿತು.

ನಾಳೆ ಸೆಮಿಫೈನಲ್‌ ಸೆಣಸಾಟ2024ರ ಟಿ20 ವಿಶ್ವಕಪ್‌ನಲ್ಲಿ ಇನ್ನು ಕೇವಲ 3 ಪಂದ್ಯಗಳು ಬಾಕಿ ಉಳಿದಿದ್ದು, ಗುರುವಾರ ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ. ಮೊದಲ ಸೆಮಿಫೈನಲ್‌ನಲ್ಲಿ ದ.ಆಫ್ರಿಕಾ ಹಾಗೂ ಅಫ್ಘಾನಿಸ್ತಾನ, 2ನೇ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ಸೆಣಸಲಿವೆ.ಸೆಮೀಸ್‌ ವೇಳಾಪಟ್ಟಿದಿನಾಂಕ ಪಂದ್ಯ ಸ್ಥಳ ಸಮಯ--ಜೂ.27 ದ.ಆಫ್ರಿಕಾ vs ಆಫ್ಘನ್‌ ತರೌಬ ಬೆಳಗ್ಗೆ 6ಕ್ಕೆಜೂ.27 ಭಾರತ vs ಇಂಗ್ಲೆಂಡ್‌ ಪ್ರಾವಿಡೆನ್ಸ್‌ ರಾತ್ರಿ 8ಕ್ಕೆ--------