ಇನ್ನು ತುಮಕೂರಿನಲ್ಲೂ ಅಂ.ರಾ. ಕ್ರಿಕೆಟ್ ಕ್ರೀಡಾಂಗಣ: ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ ಶಿಲಾನ್ಯಾಸ

| Published : Dec 03 2024, 12:30 AM IST / Updated: Dec 03 2024, 05:49 AM IST

ಸಾರಾಂಶ

50 ಎಕರೆಯಲ್ಲಿ ನಿರ್ಮಾಣಗೊಳ್ಳಲಿರುವ ಸ್ಟೇಡಿಯಂ. 2 ವರ್ಷದಲ್ಲಿ ಕಾಮಗಾರಿ ಪೂರ್ಣ ನಿರೀಕ್ಷೆ. ಮೈಸೂರಲ್ಲೂ ಸ್ಟೇಡಿಯಂ ನಿರ್ಮಾಣಕ್ಕೆ ಜಾಗ ಕೊಡುತ್ತೇನೆ ಎಂದು ಸಿಎಂ

  ತುಮಕೂರು :  ಇನ್ನು ಕೆಲ ವರ್ಷಗಳಲ್ಲೇ ಕರ್ನಾಟಕದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ತಲೆ ಎತ್ತಿ ನಿಲ್ಲಲಿದೆ. ತುಮಕೂರಿನಲ್ಲಿ ಕ್ರೀಡಾಂಗಣದ ಕಾಮಗಾರಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದಾರೆ.ಜಿಲ್ಲೆಯ ಸೋರೆಕುಂಟೆ ಬಳಿಯ ಪಿ.ಗೊಲ್ಲಹಳ್ಳಿ ಗ್ರಾಮದ 50 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ಮಂಜೂರಾಗಿರುವ ಜಮೀನು ಆದೇಶ ಪತ್ರವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ಸಿದ್ದರಾಮಯ್ಯ ಅವರ ಹಸ್ತಾಂತರಿಸಿದರು. ಕ್ರೀಡಾಂಗಣಕ್ಕೆ ಒಟ್ಟು 150 ಕೋಟಿ ರು. ವೆಚ್ಚವಾಗಲಿದೆ ಎಂದು ಹೇಳಲಾಗುತ್ತಿದೆ.

ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ, ‘ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೀಡಲಾಗಿದೆ. 

ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಕ್ರೀಡಾ ಪ್ರಗತಿಗೆ ಕ್ರೀಡಾಂಗಣ ಪೂರಕವಾಗಲಿದೆ’ ಎಂದು ತಿಳಿಸಿದರು. ಅಲ್ಲದೆ, ಶೀಘ್ರದಲ್ಲೇ ಕ್ರೀಡಾಂಗಣ ನಿರ್ಮಾಣ ಮಾಡಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಅಡಿಗಲ್ಲು ಹಾಕುವುದರ ಮೂಲಕ ಜಿಲ್ಲೆಯ ಜನರ ಅನೇಕ ವರ್ಷಗಳ ಕನಸು ನನಸಾಗಿದೆ. ಕೆಎಸ್‌ಸಿಎ ಎರಡು ವರ್ಷದಲ್ಲಿ ಸ್ಟೇಡಿಯಂ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದೆ ಎಂದರು.

ಈ ಸಂದರ್ಭ ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಎನ್.ರಾಜಣ್ಣ, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ. ಕೆ.ಗೋವಿಂದರಾಜು, ಶಾಸಕರಾದ ಬಿ.ಸುರೇಶ್‌ಗೌಡ, ಜ್ಯೋತಿಗಣೇಶ್, ಸುರೇಶ್, ವೆಂಕಟೇಶ್, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಆರ್.ರಾಜೇಂದ್ರ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಘುರಾಮ್‌ ಭಟ್‌, ಕಾರ್ಯದರ್ಶಿ ಶಂಕರ್, ಮಾಜಿ ಶಾಸಕ ಗೌರಿಶಂಕರ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಮಹಾನಗರಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಮೈಸೂರಲ್ಲೂ ಸ್ಟೇಡಿಯಂ ನಿರ್ಮಾಣಕ್ಕೆ ಜಾಗ: ಸಿಎಂ

ತುಮಕೂರಿನ ಬಳಿಕ ಮೈಸೂರಿನಲ್ಲೂ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ‘ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಬೇಡಿಕೆಯಿಟ್ಟಿದೆ. ಕ್ರೀಡಾಂಗಣಕ್ಕಾಗಿ ಸರ್ಕಾರದಿಂದ ಜಾಗ ಕೊಡುತ್ತೇವೆ’ ಎಂದು ತಿಳಿಸಿದರು.

ಬ್ಯಾಟ್‌ ಬೀಸಿದ ಸಿಎಂ

ಕ್ರೀಡಾಂಗಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಿಕೆಟ್‌ ಆಡಿದರು. ಅವರ ಜೊತೆ ಗೃಹ ಸಚಿವ ಪರಮೇಶ್ವರ್‌, ಸಚಿವ ಕೆಎನ್‌ ರಾಜಣ್ಣ ಕೂಡಾ ಬ್ಯಾಟ್‌ ಬೀಸಿದರು. ಇದರ ಫೋಟೋ, ವಿಡಿಯೋ ವೈರಲ್‌ ಆಗಿದೆ.

ಕರ್ನಾಟಕದ ಎರಡನೇ ಅಂ.ರಾ. ಕ್ರೀಡಾಂಗಣ

ತುಮಕೂರಿನಲ್ಲಿ ಕರ್ನಾಟಕದ 2ನೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ. ಸದ್ಯ ಬೆಂಗಳೂರಿನಲ್ಲಿರುವ ಕ್ರೀಡಾಂಗಣ ರಾಜ್ಯದ ಏಕೈಕ ಅಂ.ರಾ. ಕ್ರೀಡಾಂಗಣ ಎನಿಸಿಕೊಂಡಿದೆ. 1974ರಲ್ಲಿ ನಿರ್ಮಾಣಗೊಂಡಿದ್ದ ಈ ಕ್ರೀಡಾಂಗ 2024ರ ನ.22ಕ್ಕೆ 50 ವರ್ಷ ಪೂರ್ಣಗೊಳಿಸಿತ್ತು.