ಭಾರತದ ಅಭ್ಯಾಸ ವೇಳೆ ಅಭಿಮಾನಿಗಳ ಹುಚ್ಚಾಟ: ಇನ್ನು ಪ್ರ್ಯಾಕ್ಟೀಸ್‌ ವೇಳೆ ಫ್ಯಾನ್ಸ್‌ಗೆ ಕ್ರೀಡಾಂಗಣ ಪ್ರವೇಶವಿಲ್ಲ!

| Published : Dec 05 2024, 12:30 AM IST / Updated: Dec 05 2024, 04:01 AM IST

ಭಾರತದ ಅಭ್ಯಾಸ ವೇಳೆ ಅಭಿಮಾನಿಗಳ ಹುಚ್ಚಾಟ: ಇನ್ನು ಪ್ರ್ಯಾಕ್ಟೀಸ್‌ ವೇಳೆ ಫ್ಯಾನ್ಸ್‌ಗೆ ಕ್ರೀಡಾಂಗಣ ಪ್ರವೇಶವಿಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಅಡಿಲೇಡ್‌ನಲ್ಲಿ ನೆಟ್‌ ಪ್ರ್ಯಾಕ್ಟೀಸ್‌ ವೀಕ್ಷಿಸಲು ನೆರೆದಿದ್ದ 3000 ಅಭಿಮಾನಿಗಳು. ಆಟಗಾರರನ್ನು ಹೀಯಾಳಿಸಿ ಅನುಚಿತ ವರ್ತನೆ. ಫೇಸ್‌ಬುಕ್‌ ಲೈವ್‌, ಕಿರುಚಾಡಿ ತೊಂದರೆ. ಭಾರತ ತಂಡ ದೂರು

ಅಡಿಲೇಡ್‌: ಸ್ಟಾರ್‌ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ ಸೇರಿದಂತೆ ಭಾರತೀಯ ಕ್ರಿಕೆಟಿಗರ ಮೇಲೆ ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಕ್ರೇಜ್‌ ಇದೆ. ಭಾರತೀಯರು ಕ್ರೀಡಾಂಗಣದಲ್ಲಿದ್ದಾಗ, ಅಭ್ಯಾಸ ನಿರತರಾಗಿದ್ದಾಗ ಅಥವಾ ಪ್ರಯಾಣದ ವೇಳೆ ಅಭಿಮಾನಿಗಳು ಜೈಕಾರ ಕೂಗುವುದು, ಫೋಟೋಗೆ ಹಾತೊರೆಯುವುದು ಈಗ ಸಾಮಾನ್ಯ ಸಂಗತಿ. ಆದರೆ ಬುಧವಾರ ಇದು ಅತಿರೇಕಕ್ಕೆ ಹೋಗಿದ್ದು, ಹುಚ್ಚಾಟ ನಡೆಸಿದ್ದಾರೆ.

ಆಸ್ಟ್ರೇಲಿಯಾ ಸರಣಿಯ 2ನೇ ಟೆಸ್ಟ್‌ಗೂ ಮುನ್ನ ಅಡಿಲೇಡ್‌ನಲ್ಲಿ ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿದ್ದಾಗ ಅಭಿಮಾನಿಗಳು ಮನಬಂದಂತೆ ವರ್ತಿಸಿದ್ದಾರೆ. ಸುಮಾರು 3000ಕ್ಕೂ ಹೆಚ್ಚು ಅಭಿಮಾನಿಗಳು ಕ್ರೀಡಾಂಗಣ ಬಳಿ ನೆರೆದಿದ್ದು, ಆಟಗಾರರ ಅಭ್ಯಾಸದ ದೃಶ್ಯಗಳನ್ನು ಫೇಸ್‌ಬುಕ್‌ ಲೈವ್‌ ಮಾಡುತ್ತಾ, ಜೋರಾಗಿ ಕಿರುಚಾಡುತ್ತಾ ಆಟಗಾರಿಗೆ ತೊಂದರೆ ನೀಡಿದ್ದಾರೆ. ಇನ್ನೂ ಕೆಲ ಅಭಿಮಾನಿಗಳು ಆಟಗಾರರನ್ನು ಹೀಯಾಳಿಸಿ ಅನುಚಿತ ವರ್ತನೆ ತೋರಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ, ಅಭಿಮಾನಿಯೋರ್ವ ಆಟಗಾರನಿಗೆ ಗುಜರಾತಿ ಭಾಷೆಯಲ್ಲಿ ಹಾಯ್‌ ಹೇಳುವಂತೆ ಪದೇ ಪದೇ ಒತ್ತಾಯಿಸಿದ್ದಾನೆ. ರೋಹಿತ್‌ ಶರ್ಮಾ, ರಿಷಭ್‌ ಪಂತ್‌ಗೆ ಸಿಕ್ಸರ್‌ ಸಿಡಿಸುವಂತೆಯೂ ಬೊಬ್ಬೆ ಹಾಕಿ ತೊಂದರೆ ನೀಡಿದ್ದಾರೆ. ಜೊತೆಗೆ, ಆಟಗಾರರು ಔಟಾದಾಗ ಅಥವಾ ಚೆಂಡು ಬಿಟ್ಟಾಗ ಅಭಿಮಾನಿಗಳು ವ್ಯಂಗ್ಯವಾಡಿದ್ದಾಗಿ ವರದಿಯಾಗಿದೆ.‘ಭಾರತದ ಅಭ್ಯಾಸ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿತ್ತು. 

ಆಸ್ಟ್ರೇಲಿಯಾ ತಂಡ ಅಭ್ಯಾಸ ನಡೆಸುತ್ತಿದ್ದಾಗ ಸುಮಾರು 70ರಷ್ಟು ಮಂದಿ ನೆಟ್ಸ್‌ ಬಳಿ ಇದ್ದರು. ಆದರೆ ಭಾರತೀಯರು ನೆಟ್‌ ಪ್ರಾಕ್ಟೀಸ್‌ ಮಾಡುತ್ತಿದ್ದಾಗ 3000ಕ್ಕೂ ಹೆಚ್ಚು ಮಂದಿ ನೆರೆದಿದ್ದರು. ಇಷ್ಟು ಜನರನ್ನು ನಾವು ನಿರೀಕ್ಷಿಸಲಿರಲಿಲ್ಲ. ವಿರಾಟ್‌ ಕೊಹ್ಲಿ ಹಾಗೂ ಶುಭ್‌ಮನ್‌ ಗಿಲ್‌ರನ್ನು ಅಭಿಮಾನಿಗಳು ಸಂಪೂರ್ಣವಾಗಿ ಸುತ್ತುವರಿದಿದ್ದರು. ಆಟಗಾರರನ್ನು ಹೀಯಾಳಿಸಿ ಅನುಚಿತ ವರ್ತನೆ ತೋರಿದ್ದಾರೆ. ಜೋರಾಗಿ ಕಿರುಚಾಡುತ್ತಾ ತೊಂದರೆ ನೀಡಿದ್ದಾರೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

 ತಂಡದಿಂದ ದೂರು: ಅಭಿಮಾನಿಗಳ ಹುಚ್ಚಾಟದಿಂದ ಬೇಸತ್ತ ಭಾರತ ತಂಡದ ಆಟಗಾರರು ಈ ಬಗ್ಗೆ ಕ್ರಿಕೆಟ್‌ ಆಸ್ಟ್ರೇಲಿಯಾ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿಂದಾಗಿ ತಮ್ಮ ಅಭ್ಯಾಸಕ್ಕೆ ತೊಂದರೆ ಉಂಟಾಗಿದ್ದು, ಏಕಾಗ್ರತೆ ಕಳೆದುಕೊಳ್ಳುವಂತಾಗಿದೆ ಎಂದು ದೂರಿದ್ದಾರೆ. 

ಇನ್ನು ಅಭ್ಯಾಸ ವೇಳೆ ಫ್ಯಾನ್ಸ್‌ಗೆ ಪ್ರವೇಶವಿಲ್ಲ!

ಅಡಿಲೇಡ್‌ನಲ್ಲಿ ಹುಚ್ಚಾಟ ನಡೆಸಿದ್ದಕ್ಕಾಗಿ ಇನ್ನು ಸರಣಿಯ ಯಾವುದೇ ಪಂದ್ಯದ ಅಭ್ಯಾಸದ ವೇಳೆಯೂ ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಪ್ರವೇಶ ನೀಡದಿರಲು ಕ್ರಿಕೆಟ್‌ ಆಸ್ಟ್ರೇಲಿಯಾ ನಿರ್ಧರಿಸಿದೆ. ಕ್ರೀಡಾಂಗಣಕ್ಕೆ ಅಭಿಮಾನಿಗಳಿಗೆ ಪ್ರವೇಶವಿಲ್ಲದೆ ಅಥವಾ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರ್ಯಾಕ್ಟೀಸ್‌ ನಡೆಸಲು ಟೀಂ ಇಂಡಿಯಾ ಆಟಗಾರರು ನಿರ್ಧರಿಸಿದ್ದಾರೆ. ಅಲ್ಲದೆ, 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಸಿಡ್ನಿಯಲ್ಲಿ ನಿಗದಿಯಾಗಿದ್ದ ಫ್ರಾನ್ಸ್‌ ಡೇ ಕಾರ್ಯಕ್ರಮವನ್ನೂ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಹೊಸ ಅನುಭವ

‘ಭಾರತದಲ್ಲಿ ಟಿ20 ಅಥವಾ ಏಕದಿನ ಪಂದ್ಯಗಳಿದ್ದಾಗ ನಮ್ಮ ಅಭ್ಯಾಸಕ್ಕೆ ಅಭಿಮಾನಿಗಳಿಗೆ ಪ್ರವೇಶವಿರುತ್ತವೆ. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಅಭ್ಯಾಸ ವೀಕ್ಷಿಸುತ್ತಿದ್ದರು. ಆದರೆ ಅಡಿಲೇಡ್‌ನ ಅನುಭವ ವಿಭಿನ್ನವಾಗಿದೆ. ಅಡಿಲೇಡ್‌ ಟೆಸ್ಟ್‌ ವೇಳೆ ಮೊದಲ ದಿನ ಅಥವಾ ಎಲ್ಲಾ ದಿನಗಳಲ್ಲಿ ನಾವು ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ನಾವು ನಿರೀಕ್ಷಿಸಬಹುದು.

-ಕೆ.ಎಲ್‌.ರಾಹುಲ್‌, ಕ್ರಿಕೆಟಿಗ