ಸಾರಾಂಶ
ಪುಣೆಯಲ್ಲಿ ಸ್ಪಿನ್ ಟೆಸ್ಟ್ ಫೇಲಾದ ಟೀಂ ಇಂಡಿಯಾ. ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ನ ವೇಗದ ಬೌಲಿಂಗ್ ಎದುರು ಕುಸಿದಿದ್ದ ಭಾರತ 2ನೇ ಟೆಸ್ಟ್‌ನಲ್ಲಿ ಸ್ಪಿನ್ ದಾಳಿಗೆ ತತ್ತರಿಸಿದೆ.
ಪುಣೆ: ಬೆಂಗಳೂರು ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ನ ವೇಗದ ಬೌಲಿಂಗ್ ದಾಳಿಗೆ ನಲುಗಿದ್ದ ಭಾರತ ತಂಡ, ಇಲ್ಲಿ ನಡೆಯುತ್ತಿರುವ 2ನೇ ಟೆಸ್ಟ್‌ನಲ್ಲಿ ಕಿವೀಸ್‌ನ ಸ್ಪಿನ್ ದಾಳಿ ಎದುರು ತತ್ತರಿಸಿದೆ. ಮೊದಲ ಇನ್ನಿಂಗ್ಸಲ್ಲಿ ಕೇವಲ 156 ರನ್‌ಗೆ ಆಲೌಟ್ ಆಗುವ ಮೂಲಕ, ಪ್ರವಾಸಿ ತಂಡಕ್ಕೆ 103 ರನ್ ಮುನ್ನಡೆ ಬಿಟ್ಟುಕೊಟ್ಟ ಭಾರತಕ್ಕೆ ಗೆಲುವು ಕೈಗೆಟುಕದೆ ಹೋಗಬಹುದಾದ ಆತಂಕ ಎದುರಾಗಿದೆ. 2ನೇ ಇನ್ನಿಂಗ್ಸಲ್ಲಿ ದಿಟ್ಟ ಬ್ಯಾಟಿಂಗ್ ನಡೆಸುತ್ತಿರುವ ನ್ಯೂಜಿಲೆಂಡ್, 2ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 198 ರನ್ ಗಳಿಸಿದ್ದು, ಒಟ್ಟಾರೆ ಮುನ್ನಡೆಯನ್ನು 301 ರನ್‌ಗೆ ಹೆಚ್ಚಿಸಿಕೊಂಡಿದೆ.
3ನೇ ದಿನವಾದ ಶನಿವಾರದ ಮೊದಲ ಅವಧಿ ಪಂದ್ಯದ ದಿಕ್ಕನ್ನು ನಿರ್ಧರಿಸಬಹುದು. ನ್ಯೂಜಿಲೆಂಡನ್ನು ಬೇಗನೆ ಆಲೌಟ್ ಮಾಡಿ, ಮೊದಲ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ತೋರಿದ ಹೋರಾಟವನ್ನು ಪ್ರದರ್ಶಿಸಿದರೆ ಭಾರತಕ್ಕೆ ಗೆಲ್ಲುವ ಅವಕಾಶ ಸಿಗಬಹುದು. ಇಲ್ಲವಾದಲ್ಲಿ, ನ್ಯೂಜಿಲೆಂಡ್ 12 ವರ್ಷ ಬಳಿಕ ತವರಿನಲ್ಲಿ ಭಾರತಕ್ಕೆ ಸರಣಿ ಸೋಲಿನ ರುಚಿ ತೋರಿಸಲಿದೆ. ಜೊತೆಗೆ ಭಾರತೀಯ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ಬರೆಯಲಿದೆ.
ಮೊದಲ ದಿನ ನ್ಯೂಜಿಲೆಂಡನ್ನು 259 ರನ್‌ಗೆ ಆಲೌಟ್ ಮಾಡಿ, ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 1 ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿತ್ತು. ಶುಕ್ರವಾರ ತಕ್ಕಮಟ್ಟಿಗೆ ಉತ್ತಮ ಆರಂಭ ಪಡೆದ ಭಾರತ, ಮತ್ತ್ಯಾವುದೇ ವಿಕೆಟ್ ಕಳೆದುಕೊಳ್ಳದೆ 50 ರನ್ ಪೂರೈಸಿತು.
ಯಶಸ್ವಿ ಜೈಸ್ವಾಲ್ ಹಾಗೂ ಶುಭ್‌ಮನ್ ಗಿಲ್ ನಡುವೆ ಉತ್ತಮ ಜೊತೆಯಾಟ ಮೂಡಿಬರುತ್ತಿದೆ ಎನ್ನುವಷ್ಟರಲ್ಲಿ, ಸ್ಯಾಂಟ್ನರ್ ತಮ್ಮ ಜಾದೂ ಆರಂಭಿಸಿದರು. ಸತತವಾಗಿ 17.3 ಓವರ್ ಬೌಲ್ ಮಾಡಿದ ಎಡಗೈ ಸ್ಪಿನ್ನರ್, ಮೊದಲು 30 ರನ್ ಗಳಿಸಿದ್ದ ಗಿಲ್‌ರನ್ನು ಎಲ್‌ಬಿ ಬಲೆಗೆ ಕೆಡವುವ ಮೂಲಕ, ಭಾರತದ ಪತನಕ್ಕೆ ಚಾಲನೆ ನೀಡಿದರು.
ಸ್ಯಾಂಟ್ನರ್‌ರ ಲೋ ಫುಲ್‌ಟಾಸ್ ಎಸೆತವು ವಿರಾಟ್ ಕೊಹ್ಲಿ (01)ಯನ್ನು ಬೌಲ್ಡ್ ಮಾಡಿತು. ಜೈಸ್ವಾಲ್ (30)ರನ್ನು ಬಲಿ ಪಡೆಯುವ ಮೂಲಕ ಫಿಲಿಪ್ಸ್ ಕೂಡ ವಿಕೆಟ್ ಕಬಳಿಕೆ ಶುರು ಮಾಡಿದರು.
ತಂಡದ ಮೊತ್ತ 103 ರನ್ ಆಗುವಷ್ಟರಲ್ಲಿ ತಜ್ಞ ಬ್ಯಾಟರ್‌ಗಳಾದ ರಿಷಭ್ ಪಂತ್, ಸರ್ಫರಾಜ್ ಖಾನ್, ಆರ್.ಅಶ್ವಿನ್ ಪೆವಿಲಿಯನ್ ಸೇರಿದರು. ಭಾರತ ಇನ್ನೂ 150ಕ್ಕೂ ಹೆಚ್ಚು ರನ್ ಹಿನ್ನಡೆಯಲ್ಲಿದ್ದರೂ, 7 ವಿಕೆಟ್ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತು.
ರವೀಂದ್ರ ಜಡೇಜಾ (38)ರ ಹೋರಾಟ ಭಾರತ ದೊಡ್ಡ ಮುನ್ನಡೆ ಬಿಟ್ಟುಕೊಡುವುದನ್ನು ತಪ್ಪಿಸಲಿಲ್ಲ. ವಾಷಿಂಗ್ಟನ್ ಸುಂದರ್ 18 ರನ್ ಗಳಿಸಿ ಔಟಾಗದೆ ಉಳಿದರು. 45.3 ಓವರಲ್ಲಿ ಭಾರತದ ಮೊದಲ ಇನ್ನಿಂಗ್ಸ್‌ಗೆ ತೆರೆ ಬಿತ್ತು. ಸ್ಯಾಂಟ್ನರ್ 19.3 ಓವರಲ್ಲಿ 53 ರನ್‌ಗೆ 7 ವಿಕೆಟ್ ಕಬಳಿಸಿದರೆ, ಫಿಲಿಪ್ಸ್ 6 ಓವರಲ್ಲಿ 26 ರನ್ ನೀಡಿ 2 ವಿಕೆಟ್ ಕಿತ್ತರು. ಮೊದಲ ದಿನ ರೋಹಿತ್‌ರನ್ನು ಟಿಮ್ ಸೌಥಿ ಔಟ್ ಮಾಡಿದ್ದರು. ಸ್ಯಾಂಟ್ನರ್ ಪಡೆದ 7 ವಿಕೆಟ್‌ಗಳ ಪೈಕಿ 4 ಎಲ್‌ಬಿಡಬ್ಲ್ಯು, 2 ಬೌಲ್ಡ್ ಆಗಿತ್ತು.ಲೇಥಮ್ ನಾಯಕನ ಆಟ: 2ನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ಗೆ ನಾಯಕ ಟಾಮ್ ಲೇಥಮ್ ಆಸರೆಯಾದರು. ಬಹುತೇಕ ಸ್ಪಿನ್ನರ್‌ಗಳ ಮೇಲೆಯೇ ಅವಲಂಬಿತಗೊಂಡ ನಾಯಕ ರೋಹಿತ್ 53 ಓವರ್‌ಗಳ ಪೈಕಿ 47 ಓವರ್‌ಗಳನ್ನು ಸ್ಪಿನ್ನರ್‌ಗಳಿಂದಲೇ ಬೌಲ್ ಮಾಡಿದರು. ಅಶ್ವಿನ್ 17, ವಾಷಿಂಗ್ಟನ್ 19, ಜಡೇಜಾ 11 ಓವರ್ ಎಸೆದರು. ಭಾರತೀಯ ಸ್ಪಿನ್ನರ್‌ಗಳನ್ನು ದಿಟ್ಟವಾಗಿ ಎದುರಿಸಿದ ನಾಯಕ ಲೇಥಮ್, 133 ಎಸೆತದಲ್ಲಿ 10 ಬೌಂಡರಿಯೊಂದಿಗೆ 86 ರನ್ ಗಳಿಸಿ ತಂಡ ದೊಡ್ಡ ಮುನ್ನಡೆ ಸಂಪಾದಿಸಲು ನೆರವಾದರು.
ಟಾಮ್ ಬ್ಲಂಡೆಲ್ 30, ಫಿಲಿಪ್ಸ್ 9 ರನ್ ಗಳಿಸಿ ಔಟಾಗದೆ ಉಳಿದಿದ್ದು, 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವಾಷಿಂಗ್ಟನ್ 4, ಅಶ್ವಿನ್ 1 ವಿಕೆಟ್ ಕಿತ್ತಿದ್ದಾರೆ.ಸ್ಕೋರ್: ನ್ಯೂಜಿಲೆಂಡ್ 259 ಹಾಗೂ 198/5 (ಲೇಥಮ್ 86, ಬ್ಲಂಡೆಲ್ 30*, ವಾಷಿಂಗ್ಟನ್ 4-56), ಭಾರತ 156/10 (ಜಡೇಜಾ 38, ಯಶಸ್ವಿ 30, ಗಿಲ್ 30, ಸ್ಯಾಂಟ್ನರ್ 7-53, ಫಿಲಿಪ್ಸ್ 2-26)
ಚೊಚ್ಚಲ ಸರಣಿ ಗೆಲುವಿನ
ಕನಸಿನಲ್ಲಿ ನ್ಯೂಜಿಲೆಂಡ್!
1955-56ರಿಂದ ನ್ಯೂಜಿಲೆಂಡ್ ತಂಡ ಭಾರತದಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದು, ಈ ವರೆಗೂ ಒಂದೇ ಒಂದು ಸರಣಿಯನ್ನು ಗೆದ್ದಿಲ್ಲ. ಆಡಿರುವ 37 ಟೆಸ್ಟ್‌ಗಳಲ್ಲಿ ಕೇವಲ 3 ಪಂದ್ಯಗಳನ್ನಷ್ಟೇ ಗೆದ್ದಿರುವ ಕಿವೀಸ್, ಭಾರತೀಯ ನೆಲದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದು ಇತಿಹಾಸ ಬರೆಯಲು ಎದುರು ನೋಡುತ್ತಿದೆ.
2 ಬಾರಿ 100+ ರನ್ ಹಿನ್ನಡೆ
ಮೆಟ್ಟಿನಿಂತು ಟೆಸ್ಟ್ ಗೆದ್ದಿದೆ ಭಾರತ
ಭಾರತ ತಂಡ ತನ್ನ ಟೆಸ್ಟ್ ಇತಿಹಾಸದಲ್ಲಿ 2 ಬಾರಿ 100ಕ್ಕಿಂತ ಹೆಚ್ಚು ರನ್ ಹಿನ್ನಡೆಯನ್ನು ಮೆಟ್ಟಿನಿಂತು ಪಂದ್ಯ ಜಯಿಸಿದೆ. 2000-01ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೋಲ್ಕತಾದಲ್ಲಿ ಫಾಲೋ ಆನ್‌ಗೆ ಒಳಪಟ್ಟರೂ ಭಾರತ ಐತಿಹಾಸಿಕ ಗೆಲುವು ಸಾಧಿಸಿತ್ತು. ಇದಕ್ಕೂ ಮುನ್ನ 1976ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಇನ್ನಿಂಗ್ಸಲ್ಲಿ 131 ರನ್ ಹಿನ್ನಡೆ ಅನುಭವಿಸಿ, ಗೆಲ್ಲಲು 403 ರನ್ ಗುರಿ ಪಡೆದರೂ, ಭಾರತ 6 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತ್ತು. ಇದು ಟೆಸ್ಟ್‌ನಲ್ಲಿ ಭಾರತ ಅತಿಹೆಚ್ಚು ಮೊತ್ತ ಬೆನ್ನತ್ತಿ ಗೆದ್ದಿರುವ ದಾಖಲೆ ಎನಿಸಿದೆ.
23 ತುಂಬುವ ಮೊದಲೇ
ಕ್ಯಾಲೆಂಡರ್ ವರ್ಷದಲ್ಲಿ
ಯಶಸ್ವಿ 1000 ರನ್: ದಾಖಲೆ!
ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಮ್ಮ ವೃತ್ತಿಬದುಕಿನಲ್ಲಿ ಇದೇ ಮೊದಲ ಬಾರಿಗೆ ಕ್ಯಾಲೆಂಡರ್ ವರ್ಷದಲ್ಲಿ 1000 ಟೆಸ್ಟ್ ರನ್ ಪೂರೈಸಿದ್ದಾರೆ. 2023ರಲ್ಲಿ ಪಾದಾರ್ಪಣೆ ಮಾಡಿ 3 ಟೆಸ್ಟ್ ಆಡಿದ್ದ ಯಶಸ್ವಿ, 2024ರಲ್ಲಿ ಆಡಿರುವ 10 ಪಂದ್ಯಗಳಲ್ಲಿ 59.23ರ ಸರಾಸರಿಯಲ್ಲಿ 1007 ರನ್ ಕಲೆಹಾಕಿದ್ದಾರೆ. 23 ವರ್ಷ ತುಂಬುವ ಮೊದಲೇ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಗಳಿಸಿದ ವಿಶ್ವದ 5ನೇ ಹಾಗೂ ಭಾರತದ ಮೊದಲ ಬ್ಯಾಟರ್ ಎನ್ನುವ ದಾಖಲೆಯನ್ನು ಬರೆದಿದ್ದಾರೆ. ---