ಸಾರಾಂಶ
ನವದೆಹಲಿ: ಇಬ್ಬರು ಮಹಿಳಾ ಫುಟ್ಬಾಲ್ ಆಟಗಾರ್ತಿಯರ ಮೇಲೆ ದೈಹಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಫುಟ್ಬಾಲ್ ಫೆಡರೇಷನ್(ಎಐಎಫ್‌ಎಫ್) ಸದಸ್ಯ ದೀಪಕ್ ಶರ್ಮಾ ಎಂಬವರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಇಂಡಿಯನ್ ವುಮೆನ್ಸ್ ಫುಟ್ಬಾಲ್(ಐಡಬ್ಲ್ಯುಎಲ್)ನ ಖಾಡ್ ಎಫ್‌ಸಿ ತಂಡದ ಇಬ್ಬರು ಆಟಗಾರ್ತಿಯರು ತಂಡದ ಮಾಲಿಕರೂ ಆಗಿರುವ ದೀಪಕ್ ವಿರುದ್ಧ ಎಐಎಫ್‌ಎಫ್‌ಗೆ ದೂರು ನೀಡಿದ್ದು, ಬಳಿಕ ಮಪುಸಾ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಎಐಎಫ್‌ಎಫ್ ತನಿಖಾ ಸಮಿತಿಯನ್ನೂ ರಚಿಸಿದೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡಾ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಅಲ್ಲದೆ ತನಿಖೆ ಮುಗಿಯುವವರೆಗೆ ಫುಟ್ಬಾಲ್‌ಗೆ ಸಂಬಂಧಿಸಿದ ಚಟುವಟಿಕೆಗಳಿಂದ ದೂರವಿರುವಂತೆ ದೀಪಕ್‌ಗೆ ಎಐಎಫ್‌ಎಫ್‌ಗೆ ಸೂಚಿಸಲಾಗಿದೆ.
ಏಪ್ರಿಲ್ ಅಂತ್ಯಕ್ಕೆ ಭಾರತ ವಿಶ್ವಕಪ್ ತಂಡ ಪ್ರಕಟ?
ನವದೆಹಲಿ: ಜೂನ್‌ನಲ್ಲಿ ವೆಸ್ಟ್‌ಇಂಡೀಸ್, ಅಮೆರಿಕದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ 15 ಜನರ ಭಾರತ ತಂಡವನ್ನು ಏಪ್ರಿಲ್ ಕೊನೆ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಏಪ್ರಿಲ್ ಅಂತ್ಯಕ್ಕೆ ಐಪಿಎಲ್ ಮೊದಲಾರ್ಧ ಮುಕ್ತಾಯಗೊಳ್ಳಲಿದೆ. ಐಪಿಎಲ್‌ನ ಪ್ರದರ್ಶನ ನೋಡಿ ಆಯ್ಕೆ ಸಮಿತಿಯು ತಂಡ ಆಯ್ಕೆ ಮಾಡಿಕೊಳ್ಳಲಿದೆ. ತಂಡ ಪ್ರಕಟಿಸಲು ಐಸಿಸಿ ಮೇ 1ರ ವರೆಗೆ ಕಾಲಾವಕಾಶ ನೀಡಿದ್ದು, ಮೇ 25ರ ವರೆಗೂ ಸದಸ್ಯರ ಬದಲಾವಣೆಗೆ ಅವಕಾಶವಿದೆ.