ಒಲಿಂಪಿಕ್ಸ್‌ಗಳಲ್ಲಿ ಪದಕ ಪಟ್ಟಿಗೆ ಮತ್ತೆ ಅಮೆರಿಕವೇ ಬಾಸ್‌ : ಸತತ 8ನೇ ವರ್ಷ ಅಗ್ರಸ್ಥಾನ

| Published : Aug 12 2024, 12:46 AM IST / Updated: Aug 12 2024, 04:20 AM IST

ಸಾರಾಂಶ

ಎಲ್ಲಾ ಒಲಿಂಪಿಕ್ಸ್‌ಗಳಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ಅಗ್ರಸ್ಥಾನಕ್ಕಾಗಿ ಪೈಪೋಟಿ ಕಂಡುಬರುವುದು ಸಹಜ. ಆದರೆ 1996ರಿಂದ ಅಮೆರಿಕ ಸತತ 8ನೇ ಬಾರಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಪ್ಯಾರಿಸ್‌: ಈ ಬಾರಿ ಒಲಿಂಪಿಕ್ಸ್‌ನಲ್ಲಿ ಅಮೆರಿಕ ತಂಡ ಚೀನಾವನ್ನು ಹಿಂದಿಕ್ಕಿ ಪದಕ ಗಳಿಕೆಯಲ್ಲಿ ಅಗ್ರಸ್ಥಾನ ಪಡೆದಿದೆ. ಅತಿ ಹೆಚ್ಚು ಚಿನ್ನ ಗೆದ್ದ ಆಧಾರದ ಮೇಲೆ ಪದಕ ಪಟ್ಟಿಯಲ್ಲಿ ರ್‍ಯಾಂಕಿಂಗ್‌ ನೀಡಲಾಗುತ್ತದೆ. ಆದರೆ ಚೀನಾ ಹಾಗೂ ಅಮೆರಿಕ ತಲಾ 40 ಚಿನ್ನ ಪಡೆದರೂ, ಒಟ್ಟು ಪದಕ ಗಳಿಕೆಯಲ್ಲಿ ಅಮೆರಿಕ ಮುಂದಿದ್ದ ಕಾರಣ ನಂ.1 ಸ್ಥಾನಿಯಾಯಿತು.

ಅಮೆರಿಕ ಈ ಬಾರಿ 40 ಚಿನ್ನದ ಜೊತೆ 44 ಬೆಳ್ಳಿ, 42 ಕಂಚು ಸೇರಿದಂತೆ ಒಟ್ಟು 126 ಪದಕ ಜಯಿಸಿದೆ. ಚೀನಾ ಈ ಬಾರಿ 40 ಚಿನ್ನ ಸೇರಿದಂತೆ 91 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಬಹುತೇಕ ಎಲ್ಲಾ ಒಲಿಂಪಿಕ್ಸ್‌ಗಳಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ಅಗ್ರಸ್ಥಾನಕ್ಕಾಗಿ ಪೈಪೋಟಿ ಕಂಡುಬರುವುದು ಸಹಜ. ಆದರೆ 1996ರಿಂದ ಅಮೆರಿಕ ಸತತ 8ನೇ ಬಾರಿ ಅಗ್ರಸ್ಥಾನ ಕಾಯ್ದುಕೊಂಡಿದೆ. 

100+ ಪದಕ ಜಯಿಸಿದ ಏಕೈಕ ದೇಶ ಅಮೆರಿಕ

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅಮೆರಿಕ 126 ಪದಕ ಗೆದ್ದಿದೆ. ಕ್ರೀಡಾಕೂಟದಲ್ಲಿ 100ಕ್ಕಿಂತ ಹೆಚ್ಚು ಪದಕ ಗೆದ್ದ ಏಕೈಕ ರಾಷ್ಟ್ರ ಎನಿಸಿಕೊಂಡಿದೆ. ಅಮೆರಿಕ 2004ರಿಂದ ಎಲ್ಲಾ ಒಲಿಂಪಿಕ್ಸ್‌ಗಳಲ್ಲಿ 100+ ಪದಕ ತನ್ನದಾಗಿಸಿಕೊಂಡಿದೆ. 1904ರಲ್ಲಿ ಅಮೆರಿಕದ ಸೇಂಟ್‌ ಲೂಯಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ 232 ಪದಕ ಗೆದ್ದಿದ್ದು, ಅಮೆರಿಕ ಆವೃತ್ತಿಯೊಂದರಲ್ಲಿ ಗೆದ್ದ ಗರಿಷ್ಠ ಪದಕ.

ಅಥ್ಲೆಟಿಕ್ಸ್ , ಈಜಿನಲ್ಲೇ ಅಮೆರಿಕಕ್ಕೆ 62 ಪದಕ

ಅಮೆರಿಕ ಈ ಬಾರಿ 120+ ಪದಕ ಗೆದ್ದಿದೆ. ಇದರಲ್ಲಿ ಸುಮಾರು ಅರ್ಧದಷ್ಟು ಅಂದರೆ ಒಟ್ಟು 62 ಪದಕಗಳು ಕೇವಲ 2 ಕ್ರೀಡೆಗಳಲ್ಲೇ ಲಭಿಸಿವೆ. ಈಜಿನಲ್ಲಿ ಅಮೆರಿಕ ಕ್ರೀಡಾಪಟುಗಳು 28 ಪದಕ ಗೆದ್ದಿದ್ದರೆ, ಅಥ್ಲೆಟಿಕ್ಸ್‌ನಲ್ಲಿ 34 ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ. ಉಳಿದಂತೆ ಜಿಮ್ನಾಸ್ಟಿಕ್‌ನಲ್ಲಿ 10, ಕುಸ್ತಿಯಲ್ಲಿ 6 ಪದಕ ಗೆದ್ದಿದ್ದಾರೆ. ಅತ್ತ ಚೀನಾ ಈಜು, ಶೂಟಿಂಗ್‌, ಡೈವಿಂಗ್‌, ಜಿಮ್ನಾಸ್ಟಿಕ್‌ನಲ್ಲಿ ಹೆಚ್ಚಿನ ಪದಕಗಳನ್ನು ಗೆದ್ದಿದೆ. ಟೇಬಲ್‌ ಟೆನಿಸ್‌ನ ಎಲ್ಲಾ 5 ವಿಭಾಗಗಳಲ್ಲೂ ಚಿನ್ನ ಗೆದ್ದು ಕ್ಲೀನ್‌ಸ್ವೀಪ್‌ ಮಾಡಿದ್ದು ಚೀನಾದ ಮತ್ತೊಂದು ಸಾಧನೆ.