ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ 16ನೇ ಸೋಲು

| Published : Dec 18 2024, 12:47 AM IST

ಸಾರಾಂಶ

ಸೋಲಿನ ಸುಳಿಯಿಂದ ಮೇಲೇಳದ ಬೆಂಗಳೂರು ಬುಲ್ಸ್‌. ಜೈಪುರ ಪಿಂಕ್‌ ಪ್ಯಾಂಥರ್ಸ್ ವಿರುದ್ಧ ಹೀನಾಯ ಸೋಲು. 19 ಪಂದ್ಯಗಳಲ್ಲಿ 16ನೇ ಸೋಲು.

ಪುಣೆ: 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೋಲನ್ನೇ ಹೊದ್ದು ಮಲಗಿರುವ ಬೆಂಗಳೂರು ಬುಲ್ಸ್‌, ಮೇಲೇಳುವ ಲಕ್ಷಣಗಳೇ ಕಾಣುತ್ತಿಲ್ಲ. ಮಂಗಳವಾರ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಬುಲ್ಸ್‌ಗೆ 26-35 ಅಂಕಗಳ ಅಂತರದಲ್ಲಿ ಸೋಲು ಎದುರಾಯಿತು. ಈ ಆವೃತ್ತಿಯಲ್ಲಿ 19 ಪಂದ್ಯಗಳನ್ನಾಡಿರುವ ಬುಲ್ಸ್‌, 16ರಲ್ಲಿ ಸೋಲು ಕಂಡಿದ್ದು ಕೇವಲ 2 ಜಯ, 1 ಟೈನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ.

ಜೈಪುರದ ಗೆಲುವಿಗೆ ತಂಡದ ನಾಯಕ ಅರ್ಜುನ್‌ ದೇಶ್ವಾಲ್‌ರ ಆಕರ್ಷಕ ಆಟ ನೆರವಾಯಿತು. ಅರ್ಜುನ್‌ 17 ಅಂಕ ಕಲೆಹಾಕಿದರು. ಬುಲ್ಸ್‌ ನಾಯಕ ಪ್ರದೀಪ್‌ ನರ್ವಾಲ್‌ ಕೇವಲ 5 ಅಂಕ ಗಳಿಸಿ ನಿರಾಸೆ ಮೂಡಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಅಗ್ರಸ್ಥಾನಿ ಹರ್ಯಾಣ ಸ್ಟೀಲರ್ಸ್‌ ವಿರುದ್ಧ ಯು.ಪಿ.ಯೋಧಾಸ್‌ 31-24ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.