ಸಾರಾಂಶ
ನವದೆಹಲಿ: 2023ನೇ ಸಾಲಿನಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಹಲವು ಅಥ್ಲೀಟ್‌ಗಳಿಗೆ ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಇತ್ತೀಚೆಗಷ್ಟೇ ಕೇಂದ್ರ ಕ್ರೀಡಾ ಸಚಿವಾಲಯವು ಕ್ರೀಡಾ ಸಾಧಕರ ಹೆಸರನ್ನು ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಿತ್ತು.
ತಾರಾ ಕ್ರಿಕೆಟಿಗ, ವೇಗದ ಬೌಲರ್ ಮೊಹಮದ್ ಶಮಿ ಸೇರಿದಂತೆ 26 ಸಾಧಕರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಭಾರತ ತಂಡದ ಪ್ರಮುಖ ಆಟಗಾರರಾಗಿರುವ ಮೊಹಮದ್ ಶಮಿ, ಇತ್ತೀಚೆಗೆ ಮುಕ್ತಾಯಗೊಂಡ 2023ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 24 ವಿಕೆಟ್ ಪಡೆದು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಫೈನಲ್ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು.
ಅಜಯ್ ರೆಡ್ಡಿ (ಅಂಧರ ಕ್ರಿಕೆಟ್), ಓಜಸ್, ಅದಿತಿ ಸ್ವಾಮಿ (ಆರ್ಚರಿ), ಶೀತಲ್ ದೇವಿ(ಪ್ಯಾರಾ ಆರ್ಚರಿ), ಪಾರುಲ್ ಚೌಧರಿ, ಶ್ರೀಶಂಕರ್ ಮುರಳಿ (ಅಥ್ಲೆಟಿಕ್ಸ್), ಮೊಹಮದ್ ಹುಸ್ಮುದ್ದಿನ್ (ಬಾಕ್ಸಿಂಗ್), ಆರ್.ವೈಶಾಲಿ (ಚೆಸ್), ಅಂತಿಮ್ ಪಂಘಲ್ (ಕುಸ್ತಿ) ಕೂಡಾ ಮಂಗಳವಾರ ಅರ್ಜುನ ಪ್ರಶಸ್ತಿ ಪಡೆಯಲಿದ್ದಾರೆ.
ತಾರಾ ಬ್ಯಾಡ್ಮಿಂಟನ್ ಆಟಗಾರರಾದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ, ಶ್ರೇಷ್ಠ ಕೋಚ್‌ಗಳಿಗೆ ನೀಡುವ ದ್ರೋಣಾಚಾರ್ಯ ಪ್ರಶಸ್ತಿಯನ್ನು ಕಬಡ್ಡಿ ಕೋಚ್ ಬಾಸ್ಕರನ್ ಅವರು ರಾಷ್ಟ್ರಪತಿಯಿಂದ ಸ್ವೀಕರಿಸಲಿದ್ದಾರೆ.