ಸಾರಾಂಶ
ನವದೆಹಲಿ: ಭಾರತ ವಿರುದ್ಧ 4ನೇ ಟೆಸ್ಟ್‌ನ ಕೊನೆ ದಿನದಾಟ ಮುಗಿಯುವ ಮುನ್ನವೇ ಪಂದ್ಯ ಡ್ರಾ ಮಾಡಲು ಮುಂದಾಗಿದ್ದ ಹಾಗೂ ಇದಕ್ಕಾಗಿ ಭಾರತೀಯ ಬ್ಯಾಟರ್‌ಗಳ ಜೊತೆ ವಾಗ್ವಾದಕ್ಕಿಳಿದಿದ್ದ ಇಂಗ್ಲೆಂಡ್ ತಂಡದ ವಿರುದ್ಧ ಹಲವು ಮಾಜಿ ಕ್ರಿಕೆಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಪಂದ್ಯ ಡ್ರಾಗೊಳ್ಳುವುದು ಖಚಿತವಾಗಿದ್ದರಿಂದ 15 ಓವರ್‌ಗೂ ಮುನ್ನವೇ ಡ್ರಾ ಮಾಡಲು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮುಂದಾದರು. ಇತರರು ಕೂಡಾ ಕ್ರೀಸ್‌ನಲ್ಲಿದ್ದ ಜಡೇಜಾ, ವಾಷಿಂಗ್ಟನ್ ಸುಂದರ್‌ರನ್ನು ಒತ್ತಾಯಿಸಿದ್ದರು. ಆದರೆ ಶತಕದ ಅಂಚಿನಲ್ಲಿದ್ದ ಜಡೇಜಾ, ವಾಷಿಂಗ್ಟನ್ ಇದಕ್ಕೆ ಒಪ್ಪಿಲ್ಲ.
ಬಳಿಕ ಇಬ್ಬರ ಶತಕ ಪೂರ್ಣಗೊಂಡ ಬಳಿಕ ಡ್ರಾಗೊಳಿಸಲಾಯಿತು.ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಆರ್.ಅಶ್ವಿನ್, ‘ಎಂದಾದರೂ ದ್ವಿಮುಖ ನೀತಿ ಎಂಬುವನ್ನು ಕೇಳಿದ್ದೀರಾ? ಎದುರಾಳಿ ಬೌಲರ್‌ಗಳನ್ನು ದಿನವಿಡೀ ಆಡಿಸಿ, ಅವರ ಬ್ಯಾಟರ್‌ಗಳು ಶತಕದ ಅಂಚಿನಲ್ಲಿದ್ದಾಗ ನೀವು ಮೈದಾನ ತೊರೆಯಲು ಮುಂದಾಗುತ್ತಿರುವುದು ಎಷ್ಟು ಸರಿ. ನಾನು ನಾಯಕನಾಗಿದ್ದರೆ ಪೂರ್ಣ 15 ಓವರ್ ಆಡಿಸುತ್ತಿದ್ದೆ’ ಎಂದಿದ್ದಾರೆ.
ಸುನಿಲ್ ಗವಾಸ್ಕರ್ ಮಾತನಾಡಿ, ‘ನಾನಾಗಿದ್ದರೆ ಇಂಗ್ಲೆಂಡ್ ತಂಡವನ್ನು 15 ಓವರ್ ಪೂರ್ಣವಾಗಿ ಬೌಲ್ ಮಾಡಿಸುತ್ತಿದ್ದೆ. ಎಲ್ಲವೂ ಇಂಗ್ಲೆಂಡ್ ತಂಡ ಭಾವಿಸಿದಂತೆ ನಡೆಯಲ್ಲ’ ಎಂದು ಹೇಳಿದ್ದಾರೆ.ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ರಾಡ್ ಹ್ಯಾಡಿನ್, ಇಂಗ್ಲೆಂಡ್ ಮಾಜಿ ನಾಯಕರಾದ ಅಲೇಸ್ಟರ್ ಕುಕ್ ಹಾಗೂ ನಾಸರ್ ಹೊಸೈನ್ ಕೂಡಾ ಬೆನ್ ಸ್ಟೋಕ್ಸ್ ಹಾಗೂ ಇತರ ಆಟಗಾರರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.