ಸಾರಾಂಶ
ರಾಜ್‌ಕೋಟ್: ಭಾರತದ ತಾರಾ ಸ್ಪಿನ್ನರ್ ಆರ್.ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಎಲೈಟ್ ಕ್ಲಬ್ ಸೇರ್ಪಡೆಗೊಂಡಿದ್ದಾರೆ. ಅವರು ಈ ಸಾಧನೆ ಮಾಡಿದ ಭಾರತದ 2ನೇ ಹಾಗೂ ವಿಶ್ವದ 9ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಶುಕ್ರವಾರ ಜ್ಯಾಕ್ ಕ್ರಾವ್ಲಿ ಅವರ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಈ ಮಹತ್ತರ ಮೈಲಿಗಲ್ಲು ಸಾಧಿಸಿದರು. ಇದಕ್ಕೂ ಮೊದಲು ಶ್ರೀಲಂಕಾದ ಮುತ್ತಯ್ಯ ಮುಳೀಧರನ್(800), ಆಸ್ಟ್ರೇಲಿಯಾದ ಶೇನ್ ವಾರ್ನ್(708), ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್‌ಸನ್(696), ಭಾರತದ ಅನಿಲ್ ಕುಂಬ್ಳೆ(619), ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್(604), ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾಥ್(563), ವೆಸ್ಟ್‌ಇಂಡೀಸ್‌ನ ವಾಲ್ಶ್(519) ಹಾಗೂ ಆಸ್ಟ್ರೇಲಿಯಾದ ನೇಥನ್ ಲಯನ್(517) ಈ ಸಾಧನೆ ಮಾಡಿದ್ದಾರೆ.ತಮ್ಮ 98ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ ಅಶ್ವಿನ್, ಅತಿ ವೇಗವಾಗಿ 500 ವಿಕೆಟ್ ಪಡೆದವರ ಪಟ್ಟಿಯಲ್ಲಿ 2ನೇ ಸ್ಥಾನಿಯಾದರು. ಪಂದ್ಯಗಳ ಅಧಾರದಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್(87 ಪಂದ್ಯ), ಎಸೆತಗಳ ಆಧಾರದಲ್ಲಿ ಆಸ್ಟ್ರೇಲಿಯಾದ ವೇಗಿ ಮೆಗ್ರಾಥ್(25528 ಎಸೆತ) ಮೊದಲ ಸ್ಥಾನದಲ್ಲಿದ್ದಾರೆ. ಅಶ್ವಿನ್ 500 ವಿಕೆಟ್ ಮೈಲಿಗಲ್ಲಿಗೆ 25714 ಎಸೆತಗಳನ್ನು ಬಳಸಿಕೊಂಡರು. ಇದೇ ವೇಳೆ ಅಶ್ವಿನ್ ಭಾರತದ ಪರ ವೇಗವಾಗಿ 50, 100, 150, 200, 250, 300, 350, 400, 450 ಹಾಗೂ 500 ವಿಕೆಟ್ ಪಡೆದ ದಾಖಲೆಯನ್ನೂ ಬರೆದಿದ್ದಾರೆ.
03ನೇ ಕ್ರಿಕೆಟಿಗ: ಟೆಸ್ಟ್‌ನಲ್ಲಿ 3000+ ರನ್ ಹಾಗೂ 500+ ವಿಕೆಟ್ ಕಿತ್ತ ವಿಶ್ವದ 3ನೇ ಕ್ರಿಕೆಟಿಗ ಅಶ್ವಿನ್. ಶೇನ್ ವಾರ್ನ್, ಸ್ಟುವರ್ಟ್ ಬ್ರಾಡ್ ಇತರ ಸಾಧಕರು.