ಸಾರಾಂಶ
ಚೆನ್ನೈ: ಮನಮೋಹಕ ಬ್ಯಾಟಿಂಗ್ ಪ್ರದರ್ಶನದ ಬಳಿಕ ಸ್ಪಿನ್ ದಾಳಿ ಮೂಲಕ ಮೋಡಿ ಮಾಡಿದ ಮಾಂತ್ರಿಕ ಸ್ಪಿನ್ನರ್ ಆರ್.ಅಶ್ವಿನ್ ಭಾರತಕ್ಕೆ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿದೊಡ್ಡ ಗೆಲುವು ತಂದುಕೊಟ್ಟಿದ್ದಾರೆ. ಭಾನುವಾರ ಕೊನೆಗೊಂಡ ಪ್ರವಾಸಿ ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ 280 ರನ್ ಗೆಲುವು ಸಾಧಿಸಿತು.
ಇದು ರನ್ ಅಂತರದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ದೊಡ್ಡ ಗೆಲುವು. 2017ರಲ್ಲಿ 208 ರನ್ ಅಂತರದಲ್ಲಿ ಗೆದ್ದಿದ್ದು ಈ ವರೆಗಿನ ದಾಖಲೆಯಾಗಿತ್ತು. ಭಾನುವಾರದ ಗೆಲುವಿನೊಂದಿಗೆ ಭಾರತ 2 ಪಂದ್ಯಗಳ ಟೆಸ್ಟ್‌ನಲ್ಲಿ 1-0 ಮುನ್ನಡೆ ಸಾಧಿಸಿತು.ಗೆಲುವಿಗೆ 515 ರನ್‌ಗಳ ಬೃಹತ್ ಗುರಿ ಪಡೆದಿದ್ದ ನಜ್ಮುಲ್ ಹೊಸೈನ್ ನಾಯಕತ್ವದ ಬಾಂಗ್ಲಾದೇಶ ಶನಿವಾರ 4 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತ್ತು. ತಂಡಕ್ಕೂ ಇನ್ನೂ 357 ರನ್ ಅಗತ್ಯವಿತ್ತು. ಆದರೆ ಪಂದ್ಯದ 4ನೇ ದಿನವಾದ ಭಾನುವಾರ ಬಾಂಗ್ಲಾಕ್ಕೆ ‘ತವರಿನ ಹುಡುಗ’ ಅಶ್ವಿನ್ ಸಿಂಹಸ್ವಪ್ನವಾಗಿ ಪರಿಣಮಿಸಿದರು.
ಹಿಂದಿನ ದಿನ 51 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ನಜ್ಮುಲ್ ಹೊಸೈನ್ 82 ರನ್‌ಗೆ ವಿಕೆಟ್ ಒಪ್ಪಿಸಿದರು. ಉಳಿದಂತೆ ಬೇರೆ ಯಾವ ಬ್ಯಾಟರ್‌ಗೂ ಕೂಡಾ ಅಶ್ವಿನ್ ಹಾಗೂ ಜಡೇಜಾ ದಾಳಿಯನ್ನು ಹಿಮ್ಮೆಟ್ಟಿಸಿ ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. 194ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ತಂಡ ಬಳಿಕ 40 ರನ್ ಸೇರಿಸುವಷ್ಟರಲ್ಲಿ ಉಳಿದ 6 ವಿಕೆಟ್ ನಷ್ಟಕ್ಕೊಳಗಾಯಿತು. ಶಕೀಬ್ 25 ರನ್ ಕೊಡುಗೆ ನೀಡಿದರು.ಭಾರತದ ಪರ ಅಶ್ವಿನ್ 88 ರನ್‌ಗೆ 6 ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಾ 58 ರನ್ ನೀಡಿ 3 ವಿಕೆಟ್ ಕಿತ್ತರು.
ಮತ್ತೊಂದು ವಿಕೆಟ್ ಜಸ್‌ಪ್ರೀತ್ ಬೂಮ್ರಾ ಪಾಲಾಯಿತು.ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಘಾತದ ಹೊರತಾಗಿಯೂ ಭಾರತ ತಂಡ ಅಶ್ವಿನ್ ಶತಕ, ಜಡೇಜಾ ಹಾಗೂ ಜೈಸ್ವಾಲ್ ಅರ್ಧಶತಕದ ನೆರವಿನಿಂದ 376 ರನ್ ಗಳಿಸಿತ್ತು. ಆದರೆ ಲಂಕಾ ಕೇವಲ 149 ರನ್‌ಗೆ ಆಲೌಟಾಗಿ ದೊಡ್ಡ ಹಿನ್ನಡೆ ಅನುಭವಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ, ರಿಷಭ್ ಪಂತ್ ಹಾಗೂ ಶುಭ್‌ಮನ್ ಗಿಲ್ ಅಬ್ಬರದ ಶತಕದ ನೆರವಿನಿಂದ 4 ವಿಕೆಟ್‌ಗೆ 287 ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತ್ತು. ಪಂದ್ಯದಲ್ಲಿ 113 ರನ್ ಹಾಗೂ 6 ವಿಕೆಟ್ ಕಿತ್ತ ಅಶ್ವಿನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.ಸ್ಕೋರ್: ಸ್ಕೋರ್: ಭಾರತ ಮೊದಲ ಇನ್ನಿಂಗ್ಸ್ 376/10 ಮತ್ತು 2ನೇ ಇನ್ನಿಂಗ್ಸ್ 287/4 ಡಿಕ್ಲೇರ್, ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 149/10 ಮತ್ತು 2ನೇ ಇನ್ನಿಂಗ್ಸ್ 234/10 (ನಜ್ಮುಲ್ 82, ಅಶ್ವಿನ್ 6-88, ಜಡೇಜಾ 3-58)