ಏಷ್ಯಾಕಪ್‌ ಸೂಪರ್‌ 4 : ಫೈನಲ್‌ಗೆ ಲಗ್ಗೆಯಿಟ್ಟ ಟೀಂ ಇಂಡಿಯಾ

| N/A | Published : Sep 25 2025, 08:34 AM IST

Team India
ಏಷ್ಯಾಕಪ್‌ ಸೂಪರ್‌ 4 : ಫೈನಲ್‌ಗೆ ಲಗ್ಗೆಯಿಟ್ಟ ಟೀಂ ಇಂಡಿಯಾ
Share this Article
  • FB
  • TW
  • Linkdin
  • Email

ಸಾರಾಂಶ

: ಏಷ್ಯಾಕಪ್‌ ಟಿ20 ಟೂರ್ನಿಯ ಫೈನಲ್‌ಗೆ ನಿರೀಕ್ಷೆಯಂತೆಯೇ ಭಾರತ ಲಗ್ಗೆಯಿಟ್ಟಿದೆ. ಬುಧವಾರ ಇಲ್ಲಿ ನಡೆದ ಸೂಪರ್‌-4 ಹಂತದ ತನ್ನ 2ನೇ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶವನ್ನು 41 ರನ್‌ಗಳಿಂದ ಸೋಲಿಸಿ ನಿರಾಯಾಸವಾಗಿ ಪ್ರಶಸ್ತಿ ಸುತ್ತಿಗೇರಿತು.

 ದುಬೈ: ಏಷ್ಯಾಕಪ್‌ ಟಿ20 ಟೂರ್ನಿಯ ಫೈನಲ್‌ಗೆ ನಿರೀಕ್ಷೆಯಂತೆಯೇ ಭಾರತ ಲಗ್ಗೆಯಿಟ್ಟಿದೆ. ಬುಧವಾರ ಇಲ್ಲಿ ನಡೆದ ಸೂಪರ್‌-4 ಹಂತದ ತನ್ನ 2ನೇ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶವನ್ನು 41 ರನ್‌ಗಳಿಂದ ಸೋಲಿಸಿ ನಿರಾಯಾಸವಾಗಿ ಪ್ರಶಸ್ತಿ ಸುತ್ತಿಗೇರಿತು.

ಟಾಸ್‌ ಗೆದ್ದ ಬಾಂಗ್ಲಾ, ಭಾರತವನ್ನು ಮೊದಲು ಬ್ಯಾಟ್‌ ಮಾಡುವಂತೆ ಆಹ್ವಾನಿಸಿತು. ಟಾಸ್‌ ಗೆದ್ದಿದ್ದರೇ ಬ್ಯಾಟಿಂಗ್‌ ಅನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆವು ಎಂದು ಸೂರ್ಯಕುಮಾರ್‌ ಹೇಳಿದಾಗ, ಭಾರತದ ಉದ್ದೇಶ ಸ್ಪಷ್ಟವಾಯಿತು. ದೊಡ್ಡ ಮೊತ್ತ ದಾಖಲಿಸಿ ತನ್ನ ಸ್ಪಿನ್‌ ದಾಳಿಯಿಂದ ಬಾಂಗ್ಲನ್ನರ ಉಸಿರುಗಟ್ಟಿಸುವುದು ಭಾರತದ ಯೋಜನೆಯಾಗಿತ್ತು.

ಪವರ್‌-ಪ್ಲೇನ ಮೊದಲ 3 ಓವರಲ್ಲಿ ಅಭಿಷೇಕ್‌ ಶರ್ಮಾ ಹಾಗೂ ಶುಭ್‌ಮನ್‌ ಗಿಲ್‌ ಕೇವಲ 17 ರನ್‌ ಕಲೆಹಾಕಿದರು. ಆದರೆ ಮುಂದಿನ 3 ಓವರಲ್ಲಿ 55 ರನ್‌ ಚಚ್ಚಿ, 6 ಓವರ್‌ ಮುಕ್ತಾಯಕ್ಕೆ 72 ರನ್‌ ಸೇರಿಸಿದರು.

ಗಿಲ್‌ 29 ರನ್‌ ಗಳಿಸಿ ಔಟಾದರು. 25 ಎಸೆತದಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್‌, 37 ಎಸೆತದಲ್ಲಿ 75 ರನ್‌ ಚಚ್ಚಿ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಕಾರಣರಾದರು. ಹಾರ್ದಿಕ್‌ ಪಾಂಡ್ಯರ 38 ರನ್‌ ಕೊಡುಗೆ ತಂಡಕ್ಕೆ ನೆರವಾಯಿತು.

ಸೈಫ್‌ ಏಕಾಂಗಿ ಹೋರಾಟ: ಬಾಂಗ್ಲಾ ಪರ ಆರಂಭಿಕ ಬ್ಯಾಟರ್‌ ಸೈಫ್‌ ಹಸನ್‌ ಏಕಾಂಗಿ ಹೋರಾಟ ನಡೆಸಿದರು. ‘ಬೆಕ್ಕಿಗೆ 9 ಜೀವ’ ಇರುತ್ತದೆ ಎನ್ನುವ ಮಾತಿದೆ. ಅದೇ ರೀತಿ ಒಂದಾದ ಮೇಲೆ ಒಂದು ಕ್ಯಾಚ್‌ ಬಿಟ್ಟು ಭಾರತೀಯರು ಸೈಫ್‌ಗೆ 5 ಜೀವದಾನ ನೀಡಿದರು. 51 ಎಸೆತದಲ್ಲಿ 3 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 69 ರನ್‌ ಸಿಡಿಸಿ ಸೈಫ್‌ ಔಟಾದರು. ಪರ್ವೇಜ್‌ ಎಮೊನ್‌ರ 21 ರನ್‌, ತಂಡದ ಪರ ದಾಖಲಾದ 2ನೇ ಗರಿಷ್ಠ ಮೊತ್ತ ಎನಿಸಿತು. ಉಳಿದ್ಯಾವ ಬ್ಯಾಟರ್‌ನಿಂದ ಎರಡಂಕಿ ಮೊತ್ತ ದಾಖಲಾಗಲಿಲ್ಲ. ಕುಲ್ದೀಪ್‌ 3, ವರುಣ್‌ ಹಾಗೂ ಬೂಮ್ರಾ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌: ಭಾರತ 20 ಓವರಲ್ಲಿ 168/6 (ಅಭಿಷೇಕ್‌ 75, ಹಾರ್ದಿಕ್‌ 38, ರಿಶಾದ್‌ 2-27), ಬಾಂಗ್ಲಾ 19.3 ಓವರಲ್ಲಿ 127/10 (ಸೈಫ್‌ 69, ಎಮೊನ್‌ 21, ಕುಲ್ದೀಪ್‌ 3-18) ಪಂದ್ಯಶ್ರೇಷ್ಠ: ಅಭಿಷೇಕ್‌

ಬ್ಯಾಟ್‌ ಮಾಡದ ಸಂಜು!

ಪಂದ್ಯದಲ್ಲಿ ಭಾರತ ತನ್ನ ಬ್ಯಾಟಿಂಗ್‌ ಕ್ರಮಾಂಕ ಬದಲಿಸಿತು. ಗಿಲ್‌ ಹಾಗೂ ಶರ್ಮಾ ಬಾಂಗ್ಲಾ ಸ್ಪಿನ್ನರ್‌ಗಳನ್ನು ಚೆಂಡಾಡಿದರು. ಸ್ಫೋಟಕ ಆಟ ಮುಂದುವರಿಸುವ ಉದ್ದೇಶದಿಂದ ಗಿಲ್‌ ಔಟಾದ ಬಳಿಕ 3ನೇ ಕ್ರಮಾಂಕದಲ್ಲಿ ಶಿವಂ ದುಬೆಯನ್ನು ಕಳುಹಿಸಲಾಯಿತು. ಆ ಬಳಿಕ ಸೂರ್ಯ, ಹಾರ್ದಿಕ್‌, ತಿಲಕ್‌, ಅಕ್ಷರ್‌ ಕಣಕ್ಕಿಳಿದರು. ಸಂಜು 8ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಸಿದ್ಧರಿದ್ದರು. ಆದರೆ ಅವಕಾಶ ಸಿಗಲಿಲ್ಲ.

ಲಂಕಾ ಔಟ್‌

ಭಾರತ ಗೆದ್ದು ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡರೆ, ಶ್ರೀಲಂಕಾ ಅಧಿಕೃತವಾಗಿ ಹೊರಬಿತ್ತು. ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಸೋತಿದ್ದ ಲಂಕಾ, 2ನೇ ಪಂದ್ಯದಲ್ಲಿ ಪಾಕ್‌ ವಿರುದ್ಧ ಪರಾಭವಗೊಂಡಿತ್ತು.

17ನೇ ಜಯ

ಬಾಂಗ್ಲಾದೇಶ ವಿರುದ್ಧ ಟಿ20ಯಲ್ಲಿ ಭಾರತಕ್ಕೆ ಇದು 17ನೇ ಜಯ. ಬಾಂಗ್ಲಾ ವಿರುದ್ಧ 18 ಪಂದ್ಯಗಳಲ್ಲಿ ಭಾರತ ಕೇವಲ ಒಂದರಲ್ಲಿ ಸೋತಿದೆ.

Read more Articles on