ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತೀಯರಿಗೆ ‘ಮನೆ ಊಟ’

| Published : Apr 04 2024, 01:10 AM IST / Updated: Apr 04 2024, 04:47 AM IST

ಸಾರಾಂಶ

ಗೇಮ್ಸ್‌ ವಿಲೇಜ್‌ನಲ್ಲಿನ್ನು ಸಿಗಲಿದೆ ರೋಟಿ, ದಾಲ್‌, ಆಲೂ ಗೋಬಿ, ಚಿಕನ್‌. ಗೇಮ್ಸ್‌ ವಿಲೇಜ್‌ನಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾ ವಿಜ್ಞಾನ ಕೇಂದ್ರ ಕೂಡಾ ಸ್ಥಾಪನೆ.

ನವದೆಹಲಿ: ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಭಾರತೀಯ ಅಥ್ಲೀಟ್‌ಗಳು ಭಾರತೀಯ ಶೈಲಿಯ ಊಟ ಸಿಗದೆ ಪರದಾಡುವುದು ಸಾಮಾನ್ಯ. ಆದರೆ ಮುಂಬರುವ ಬಹುನಿರೀಕ್ಷಿತ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತೀಯರಿಗೆ ಈ ಸಮಸ್ಯೆ ಎದುರಾಗದು. ದೇಶದ ಕ್ರೀಡಾಪಟುಗಳಿಗೆ ‘ಮನೆ ಊಟ’ ನೀಡಲು ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ) ಉದ್ದೇಶಿಸಿದ್ದು, ಗೇಮ್ಸ್‌ ಆಯೋಜಕರೂ ಅದಕ್ಕೆ ಸಮ್ಮತಿಸಿದ್ದಾರೆ.

ಹೀಗಾಗಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಗೇಮ್ಸ್‌ ವಿಲೇಜ್‌ನಲ್ಲಿ ರೋಟಿ, ದಾಲ್‌, ಆಲೂ ಗೋಬಿ, ಭಾರತೀಯ ಶೈಲಿಯ ಚಿಕನ್‌ ಇತ್ಯಾದಿ ಭಾರತೀಯ ಖಾದ್ಯಗಳು ಸಿಗಲಿದೆ. ‘ಜಾಗತಿಕ ಕ್ರೀಡಾಕೂಟಗಳಲ್ಲಿ ನಮ್ಮ ಅಥ್ಲೀಟ್‌ಗಳಿಗೆ ಆಹಾರ ದೊಡ್ಡ ಸಮಸ್ಯೆ. ಈ ಬಾರಿ ದಕ್ಷಿಣ ಏಷ್ಯಾದ ಖಾದ್ಯಗಳನ್ನು ಸೇರಿಸಲು ನಾವು ಸಂಘಟಕರನ್ನು ಒತ್ತಾಯಿಸಿದ್ದೇವೆ. ನಮ್ಮ ಮನವಿಯಂತೆ ಭಾರತೀಯ ಖಾದ್ಯಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ’ ಎಂದು ಒಲಿಂಪಿಕ್ಸ್‌ನ ಭಾರತ ತಂಡ ಉಪ ಮುಖ್ಯಾಧಿಕಾರಿಯಾಗಿರುವ ಶಿವ ಕೇಶವನ್‌ ತಿಳಿಸಿದ್ದಾರೆ.

ಕ್ರೀಡಾ ವಿಜ್ಞಾನ ಕೇಂದ್ರ: ಇನ್ನು ಗೇಮ್ಸ್‌ ವಿಲೇಜ್‌ನಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾ ವಿಜ್ಞಾನ ಕೇಂದ್ರವನ್ನೂ ಐಒಎ ಸ್ಥಾಪಿಸುತ್ತಿದೆ. ಅಥ್ಲೀಟ್‌ಗಳಿಗೆ ಅಗತ್ಯವಿರುವ ವೈದ್ಯಕೀಯ ನೆರವು, ಔಷಧ ಒದಗಿಸಲು ಭಾರತದಿಂದಲೇ ವೈದ್ಯಕೀಯ ಉಪಕರಣಗಳನ್ನು ಕೂಡಾ ಐಒಎ ಪ್ಯಾರಿಸ್‌ಗ ಕೊಂಡೊಯ್ಯುತ್ತಿದೆ.